
ರಾಜ್ಯ ವಿಧಾನಸಭೆ ಚುನಾವಣೆಗೆ ಎರಡು-ಮೂರು ತಿಂಗಳು ಬಾಕಿ ಉಳಿದಿದ್ದು ರಾಜಕೀಯ ಪಕ್ಷಗಳ ಪ್ರಚಾರದ ತಾಳ ಮೇಳ ಜೋರಾಗಿಯೇ ನಡೆಯುತ್ತಿದೆ. ಕಾಂಗ್ರೆಸ್ ಪ್ರಚಾರದ ಭರಾಟೆಯಲ್ಲಿ ಅಧಿಕಾರಕ್ಕೆ ಬಂದ ಮೇಲೆ ಕೆಲವೊಂದಿಷ್ಟು ಉಚಿತ ಸೌಲಭ್ಯಗಳನ್ನು ನೀಡುವುದಾಗಿ ಉಚಿತವಾಗಿಯೇ ಘೋಷಿಸಿದ್ದಾರೆ. ಕಾಂಗ್ರೆಸ್ ಬಸ್ ಯಾತ್ರೆ ಮೂಲಕ ರಾಜ್ಯ ಸುತ್ತಿದ್ದರೇ, ಜೆಡಿಎಸ್ ಪಂಚರತ್ನ ಯಾತ್ರೆ ಮೂಲಕ ಸುತ್ತುತ್ತಿದೆ ಪಂಚ ಯೋಜನೆಗಳನ್ನು ಮುಂದಿಟ್ಟುಕೊಂಡು. ಇನ್ನು ಬಿಜೆಪಿಯ ವರಸೆ ಸ್ವಲ್ಪ ಬಿನ್ನವಾಗಿದ್ದು ಕಾರ್ಯಕರ್ತ ಸಂಖ್ಯೆ ಹೆಚ್ಚಿಸಿಕೊಳ್ಳುವುದು, ಮನೆಮನೆಗೂ ಸರ್ಕಾರದ ಕಾರ್ಯಕ್ರಮವನ್ನು ಮುಟ್ಟಿಸುವುದರ ದೃಷ್ಟಿಯಿಂದ ವಿಜಯ ಸಂಕಲ್ಪ ಅಭಿಯಾನ ಪ್ರಾರಂಭಿಸಿದೆ. ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಬರಲಿದ್ದಾರೆ ಎಂದು ಸಚಿವ ಡಾ ಕೆ.ಸುಧಾಕರ ಹೇಳಿದ್ದಾರೆ. ನಿನ್ನೆ, ಮೊನ್ನೆ ರಾಜ್ಯದಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ವಿಷಯ ಹಾಸನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯರ ನಿವೃತ್ತಿ ಭಾಷಣ. ಕೊಟ್ಟ ಮಾತಿನಿನಂತೆ ನಡೆದುಕೊಳ್ಳದಿದ್ದರೇ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಣೆ ಮಾಡಿದ್ದಾರೆ. ಹಾಗೇ ಉಡುಪಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಉಡುಪಿಯಲ್ಲಿ ನಾನು ನಿಮ್ಮವನೇ ಎಂದಿದ್ದಾರೆ. ಇನ್ನು ಬಿಜೆಪಿ ಸರ್ಕಾರಿ ಕಾರ್ಯಕ್ರಮಗಳ ಉದ್ಘಾಟನೆಗೆ ಮತ್ತೆ ಬಂದೆ ಎನ್ನುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಕ್ಕೆ ಕರೆಸಿಕೊಳ್ಳುತ್ತಿದ್ದು ಒಂದು ಮುಖ 150 ಗುರಿ ಎಂದು ಹೇಳುತ್ತಿದೆ. ಇದರೊಂದಿಗೆ ಇಂದಿನ ಅಪ್ಡೇಟ್ಸ್
ಚಿಕ್ಕಬಳ್ಳಾಫುರ: ‘ಕಾಂಗ್ರೆಸ್ 130 ಸೀಟ್ ಪಡೆಯಲು ಏನು ಸಾಧನೆ ಮಾಡಿದೆ ಎಂಬ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆಗೆ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದರು. ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿಯವ್ರು ಏನು ಸಾಧನೆ ಮಾಡಿದ್ದಾರೆ. ಇದನ್ನು ಮೊದಲು ಹೇಳಲಿ ಎಂದರು.
ಚಿಕ್ಕಬಳ್ಳಾಪುರ: ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಲ್ಲ ಡ್ರಾಮಾ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ನಾನು ಕೋಲಾರದಲ್ಲಿ ಚುನಾವಣೆಗೆ ನಿಲ್ತೀನೋ ಇಲ್ವೋ, ಅವರಿಗ್ಯಾಕೆ. ಕೋಲಾರದಲ್ಲಿ ನನ್ನ ಸ್ಪರ್ಧೆಗೂ ಯಡಿಯೂರಪ್ಪಗೂ ಏನ್ ಸಂಬಂಧ. ನಾನು ಡ್ರಾಮಾ ಮಾಡುತ್ತಿದ್ದೇನೆ ಎಂದು BSY ಹೇಳಿದರೆ ಹೇಳಿಕೊಳ್ಳಲಿ. ಪಾಪ ಅವರಿಗೇನು ಎಂದು ಯಡಿಯೂರಪ್ಪಗೆ ಸಿದ್ದರಾಮಯ್ಯ ಟಾಂಗ್ ನೀಡಿದರು.
ಬೆಂಗಳೂರು: ಪ್ರಿಯಾಂಕಾ ಗಾಂಧಿ ಹೋದ ಕಡೆ ಕಾಂಗ್ರೆಸ್ ಸೋತಿದೆ ಎಂದು ನಗರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಪ್ರಿಯಾಂಕಾ ಹೋದ ಬಳಿಕ ಯುಪಿಯಲ್ಲಿ ಕಾಂಗ್ರೆಸ್ ಸೀಟು ಇಳಿಕೆ. ಪ್ರಿಯಾಂಕಾ ಗಾಂಧಿ ‘ನಾ ನಾಯಕಿ’ ಕಾರ್ಯಕ್ರಮಕ್ಕೆ ಬಂದಿದ್ದರು. ಬೆಂಗಳೂರಿನ ಬನ್ನೇರುಘಟ್ಟದ ಡಿಎಲ್ಎಫ್ನಲ್ಲಿ ಯಾರ ಪಾಲು ಎಷ್ಟಿದೆ ಎಂದು ಪ್ರಶ್ನಿಸಿದರು.
ಚಿಕ್ಕಬಳ್ಳಾಪುರ: ಚಾಮರಾಜ ನಗರದಲ್ಲಿ ಆಕ್ಸಿಜನ್ ಕೊಟ್ಟಿದ್ರೆ 36 ಜನ ಬದುಕುತ್ತಿದ್ರು. 36 ಜನ ಸತ್ತರೂ 3 ಜನ ಮಾತ್ರ ಸತ್ತರು ಎಂದರು. ಸುಧಾಕರ್ ಭ್ರಷ್ಟಚಾರದಿಂದಲ್ಲೆ 36 ಜನ ಸತ್ತರು ಎಂದು ಆರೋಪ ಮಾಡಿದ್ದಾರೆ. ನಾವು ಆಸ್ಪತ್ರೆಗೆ ಹೋದಾಗ ಅಲ್ಲಿಯ ಜಿಲ್ಲಾಧಿಕಾರಿ ಸತ್ಯ ಹೇಳಿದ್ರು ಎಂದು ಸಿದ್ಧರಾಮಯ್ಯ ಹೇಳಿದರು.
ಚಿಕ್ಕಬಳ್ಳಾಪುರ: ಕೆ.ಸುಧಾಕರ್ ಒಬ್ಬ ಫ್ರಾಡ್ ಎಂದು ವೀರಪ್ಪ ಮೊಯ್ಲಿ ಹೇಳಿದ್ದರು. ಕೆ.ಸುಧಾಕರ್ಗೆ ಟಿಕೆಟ್ ಕೊಡಬೇಡಿ ಎಂದು ಮೊಯ್ಲಿ ಹೇಳಿದ್ದರು. ಮಾಜಿ ಸಿಎಂ ಮೊಯ್ಲಿ ಹೇಳಿದ್ದರೂ ಸುಧಾಕರ್ಗೆ ಟಿಕೆಟ್ ನೀಡಿದ್ದೆವು. ಕೆ.ಸುಧಾಕರ್ಗೆ ಟಿಕೆಟ್ ನೀಡಿದ್ದಕ್ಕೆ ಇಂದು ಪಶ್ಚಾತ್ತಾಪ ಪಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಯಾವುದೇ ಭವಿಷ್ಯವಿಲ್ಲ. ಹೀಗಾಗಿ ಜೆಡಿಎಸ್‌ನ ಕೆಲವರು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು. ಜಿಲ್ಲೆಯ ಕೆ.ವಿ.ಕ್ಯಾಂಪಸ್ ಬಳಿ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಿ. ಕಾಂಗ್ರೆಸ್‌ಗೆ ಮತ ನೀಡಿ, ಎಲ್ಲರಿಗೂ ಅಧಿಕಾರ ಹಂಚುತ್ತೇವೆ. ನಾವು ನುಡಿದಂತೆ ನಡೆಯದಿದ್ರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯುತ್ತಿದ್ದು, ಕೈ ನಾಯಕರು ಭಾಗಿಯಾಗಿದ್ದಾರೆ. ಭಾಷಣದ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ನಾಲಿಗೆ ಸ್ಲೀಪ್ ಆಗಿದ್ದು, ಕರ್ನಾಟಕದ ಇತಿಹಾಸದಲ್ಲಿ ಭ್ರಷ್ಟ ಮುಖ್ಯಮಂತ್ರಿ ಇದ್ದರೆ ಅದು ಮುಖ್ಯಮಂತ್ರಿ ಸುಧಾಕರ್ ಎಂದು ಹೇಳಿದ್ದಾರೆ. ಬಾಯಿ ತಪ್ಪಿ ಮಂತ್ರಿ ಎನ್ನುವುದರ ಬದಲು ಮುಖ್ಯಮಂತ್ರಿ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
ಚಿಕ್ಕಬಳ್ಳಾಪುರ: ಪ್ರಜಾಧ್ವನಿ ಅಂದರೆ ರಾಜ್ಯದ 7 ಕೋಟಿ ಜನರ ಧ್ವನಿಯಾಗಿದೆ. ಸಂಕಷ್ಟದಲ್ಲಿರುವ ಜನರ ಧ್ವನಿಯಾಗುವುದು ನಮ್ಮ ಉದ್ದೇಶವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ 2013ರಲ್ಲಿ ರಮೇಶ್ ಕುಮಾರ್ ನೇತೃತ್ವ ಸಮಿತಿಯಿಂದ ಪ್ರಣಾಳಿಕೆ ಸಿದ್ಧಪಡಿಸಿದ್ದೆವು ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ: ದೀಪ ಬೆಳಗುವುದರ ಮೂಲಕ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. Kpcc ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ, ಮಾಜಿ ಸಿಎಂ ವೀರಪ್ಪ ಮೊಯಿಲಿ, ಎಂ.ಬಿ.ಪಾಟೀಲ, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಕೆ.ಪಿ.ಸಿ.ಸಿ ಕಾರ್ಯಾದ್ಯಕ್ಷ ರಾಮಲಿಂಗಾರೆಡ್ಡಿ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮುಖಂಡರುಗಳು ಭಾಗಿ ಆಗಿದ್ದಾರೆ.
ಬಳ್ಳಾರಿ: ಇಷ್ಟಾರ್ಥ ಸಿದ್ಧಿಗಾಗಿ ಅಜ್ಮೀರ್ ದರ್ಗಾದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಪತ್ನಿ ಲಕ್ಷ್ಮೀ ಅರುಣಾರಿಂದ ಚಾದರ್ ಸೇವೆ ಮಾಡಲಾಗುತ್ತಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಖಂಡರ ಜೊತೆ ದರ್ಗಾಗೆ ಭೇಟಿ ನೀಡಿದ ಗಾಲಿ ಜನಾರ್ದನ ರೆಡ್ಡಿ ದಂಪತಿ ಚಾದರ್ ಅರ್ಪಿಸಿದರು.
ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಕ್ರಾಸ್ಗೆ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಬಸ್ ತಲುಪಿದ್ದು, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ನೇತೃತ್ವದಲ್ಲಿ ಬೃಹತ್ ಸೇಬಿನ ಹಾರ ಹಾಕಿ ಅದ್ಧೂರಿ ಸ್ವಾಗತ ಕೋರಲಾಯಿತು. ಜಂಗಮಕೋಟೆ ಕ್ರಾಸ್ನಿಂದ ಚಿಕ್ಕಬಳ್ಳಾಪುರದವರೆಗೂ ಮೆರವಣಿಗೆ ಮಾಡಲಾಯಿತು. ರಸ್ತೆಯುದ್ದಕ್ಕೂ ಸೇಬಿನ ಹಾರ ಹಿಡಿದು ಕಾರ್ಯಕರ್ತರು ಕಾಯುತ್ತಿದ್ದಾರೆ.
ಚಿಕ್ಕಬಳ್ಳಾಪುರ: ಜನಧ್ವನಿ ಕಾರ್ಯಕ್ರಮಕ್ಕೆ ಬರುವ ಬೈಕ್ಗಳಿಗೆ ಉಚಿತ ಪೆಟ್ರೋಲ್ ನೀಡಲಾಗುತ್ತಿದ್ದು, ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಕ್ರಾಸ್ನ ಬಂಕ್ಗಳಿಗೆ ಕಾರ್ಯಕರ್ತರು ಮುಗಿಬಿದಿದ್ದಾರೆ. ಕಾಂಗ್ರೆಸ್ ಮುಖಂಡ ರಾಜೀವ್ಗೌಡನಿಂದ ಜನಧ್ವನಿ ಯಾತ್ರೆಗೆ ಬರುವವರಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ಆಫರ್ ನೀಡಲಾಗಿದೆ.
ಮಂಡ್ಯ: ಸುಮಲತಾ ಮಂಡ್ಯದಲ್ಲಿ ಸ್ಪರ್ಧಿಸ್ತಾರೋ ಬೆಂಗಳೂರಲ್ಲಿ ಸ್ಪರ್ಧಿಸ್ತಾರೋ ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಸಂಸದೆ ಸುಮಲತಾ ತಿರುಗೇಟು ನೀಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಓರ್ವ ಅಪ್ರಬುದ್ಧ ರಾಜಕಾರಣಿ. ಮೊನ್ನೆಯಷ್ಟೇ ಮಂಡ್ಯದಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದು ಹೇಳಿದ್ರು. ಈಗ ರಾಮನಗರ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ತಿರೋದು ಯಾರು? ಜೆಡಿಎಸ್ ನಾಯಕರು ಯಾವಾಗಲೂ ಮಾತಿನ ಮೇಲೆ ನಿಲ್ಲುವವರಲ್ಲ. ಜೆಡಿಎಸ್ನವರು ಪದೇಪದೆ ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಾರೆ ಎಂದು ಹೇಳಿದರು.
ಕೋಲಾರ: ನನ್ನ ಅವಧಿಯಲ್ಲಿ ಒಂದು ಪೈಸೆ ಲಂಚ ತೆಗೆದುಕೊಂಡಿದ್ದರೆ ತೋರಿಸಿದರೆ ರಾಜಕೀಯ ನಿವೃತ್ತಿ ಪಡೆಯುವೆ. ನಾನು ರಾಜಕೀಯ ನಿವೃತ್ತಿ ತೆಗೆದುಕೊಂಡು ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದು ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.
ಕೋಲಾರ: JDS ಬಗ್ಗೆ ಮಾತಾಡಲ್ಲ, ಜೆಡಿಎಸ್ನವರು ಗೆದ್ದ ಎತ್ತಿನ ಬಾಲಹಿಡಿತಾರೆ ಎಂದು ಜೆಡಿಎಸ್ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ಜೆಡಿಎಸ್ನವರಿಗೆ ಯಾವುದೇ ಸಿದ್ಧಾಂತ ಇಲ್ಲ. ಬಿಜೆಪಿ ಹೆಚ್ಚು ಸ್ಥಾನ ಗೆದ್ದರೆ ಬಿಜೆಪಿಯ ಬಾಲ ಹಿಡಿಯುತ್ತಾರೆ ಎಂದು ಹೇಳಿದರು.
ಕೋಲಾರ: ಪ್ರತಿಯೊಬ್ಬ ಭಾರತೀಯರಿಗೂ ದೇಶ ಮೊದಲು. ನಂತರ ನಾವು. ಕೋಲಾರ ಜಿಲ್ಲೆಗೆ ಹೊಸದಾಗಿ ಲಕ್ಷ್ಮಿ ನಾರಾಯಣ ಅಧ್ಯಕ್ಷರಾಗಿದ್ದಾರೆ. ಊರಬಾಗಿಲು ಶ್ರೀನಿವಾಸ ಕಾರ್ಯಾಧ್ಯಕ್ಷ ಆಗಿದ್ದಾರೆ. ಅವರ ಮುಖಂಡತ್ವದಲ್ಲಿ ಕೋಲಾರ ಜಿಲ್ಲೆಯಲ್ಲಿ ಜಿಲ್ಲೆಯ ಎಲ್ಲ ಮುಖಂಡರ ಸಹಕಾರದಿಂದ ಆರಕ್ಕೆ ಆರೂ ಕ್ಷೇತ್ರ ಗೆಲ್ಲುವ ವಾತಾವರಣ ನಿರ್ಮಾಣ ಆಗಲಿ ಎಂದು ಹೇಳಿದರು.
ಬೆಳಗಾವಿ: ಯಾವ ಕಾರಣಕ್ಕೂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ಕೋಲಾರದಲ್ಲಿ ನಿಂತರೆ ಸೋಲುವುದು ನಿಶ್ಚಿತ ಅಂತ ಗೊತ್ತಿದೆ. ಹೀಗಾಗಿ ಕೋಲಾರದಲ್ಲಿ ಯಾವ ಕಾರಣಕ್ಕೂ ಸಿದ್ದರಾಮಯ್ಯ ನಿಲ್ಲಲ್ಲ. ರಾಜ್ಯದಲ್ಲಿ 140ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲಲಿದೆ. ನೂರಕ್ಕೆ ನೂರು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ನಮ್ಮ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಎರಡ್ಮೂರು ದಿನಗಳಲ್ಲಿ ಪ್ರವಾಸ ಆರಂಭಿಸುತ್ತೇನೆ ಎಂದು ಹೇಳಿದರು.
ಗುಳೇದಗುಡ್ಡ: ನಗರದಲ್ಲಿ ಪಂಚರತ್ನ ರಥಯಾತ್ರೆ ಎಫೆಕ್ಟ್ ತಟ್ಟಿದ್ದು, ಗುಳೇದಗುಡ್ಡ ಪಟ್ಟಣದಲ್ಲಿ ಪೆಟ್ರೋಲ್ಗೆ ಜನರು ಪರದಾಡುವಂತ್ತಾಗಿದೆ. ಬೈಕ್ಗೆ ಪೆಟ್ರೋಲ್ ಹಾಕಿಸಲು ಸವಾರರು ಬಂಕ್ಗಳಿಗೆ ಮುಗಿಬಿದಿದ್ದಾರೆ. ಗುಳೇದಗುಡ್ಡ ಪಟ್ಟಣ ಸೇರಿ ಬಾದಾಮಿ ಕ್ಷೇತ್ರದ ವಿವಿಧೆಡೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಪಂಚರತ್ನ ರಥಯಾತ್ರೆ ನಡೆಯುತ್ತಿದ್ದು, ಮೆರವಣಿಗೆಯಲ್ಲಿ ಸಾವಿರಾರು ಬೈಕ್ ಸವಾರರು ಪಾಲ್ಗೊಳ್ಳಲು ಬೈಕ್ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಮುಗಿಬಿದ್ದರು.
ಮಂಡ್ಯ: ಮಂಡ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಮಂಡ್ಯ ತಾಲೂಕಿನ ಗೌಡಗೆರೆ ಗ್ರಾಮದಲ್ಲಿನ ಮಹದೇಶ್ವರ ದೇಗುಲ ಉದ್ಘಾಟನೆಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ನಾಯಕರು ಬ್ಯಾನರ್ನಲ್ಲಿ ಸುಮಲತಾ ಫೋಟೋ ಮಾತ್ರ ಹಾಕಿದ್ದಕ್ಕೆ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಕಾರ್ಯಕರ್ತರ ಕಿತ್ತಾಟ ನೋಡಿ ಸುಮಲತಾ ವೇದಿಕೆಯಿಂದ ಕೆಳಗಿಳಿದಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಸಕಾಲಕ್ಕೆ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ನಂತರ ಗ್ರಾಮಸ್ಥರು ಸುಮಲತಾರನ್ನು ಸಮಾಧಾನಗೊಳಿಸಿ ಮತ್ತೆ ವೇದಿಕೆಗೆ ಕರೆತಂದಿದ್ದಾರೆ.
ಬೆಂಗಳೂರು: ದೆಹಲಿಯ ಗಣರಾಜ್ಯೋತ್ಸವ ಪೆರೇಡ್ಗೆ 2009ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ನಾವು ಸ್ತಬ್ಧಚಿತ್ರ ಕಳಿಸಿದ್ವಿ. ಆಗ ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ನಮ್ಮ ಟ್ಯಾಬ್ಲೋ ನಿರಾಕರಿಸಿತ್ತು. ಆಗ ರಾಜ್ಯದ ‘ಕೈ’ ನಾಯಕರು ಯುಪಿಎ ಮೇಲೆ ಒತ್ತಡ ಹಾಕಲಿಲ್ಲ. 2009ರಲ್ಲಿ ನಮ್ಮ ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನ ಆಗಲೇ ಇಲ್ಲ. ಆ ಬಳಿಕ ಸತತವಾಗಿ 14 ವರ್ಷ ಟ್ಯಾಬ್ಲೋ ಪ್ರದರ್ಶನ ಆಯ್ತು ಎಂದು ಕರ್ನಾಟಕ ಟ್ಯಾಬ್ಲೋ ಅನುಮತಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ವರ್ಷವೂ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅನುಮತಿ ಸಿಕ್ಕಿದೆ. ರಕ್ಷಣಾ ಸಚಿವರ ಜೊತೆ ನಾನು, ಜೋಶಿಯವರು ಮಾತಾಡಿದ್ದೇವೆ. ಜ.26ರಂದು ‘ನಾರಿ ಶಕ್ತಿ’ ಪರಿಕಲ್ಪನೆ ಸ್ತಬ್ಧಚಿತ್ರ ಪ್ರದರ್ಶನ ಆಗುತ್ತಿದೆ. ಕೇವಲ 8-10 ದಿನದಲ್ಲಿ ಅದ್ಭುತವಾಗಿ ಟ್ಯಾಬ್ಲೋ ತಯಾರಿಸಲಾಗಿದೆ. ಕರ್ನಾಟಕದ ವಿಚಾರ ಬಂದಾಗ ನಾವು ಎಲ್ಲರೂ ಒಂದಾಗಬೇಕು. ಈಗಲಾದರೂ ಕಾಂಗ್ರೆಸ್ ಪಾಠ ಕಲಿಯಲಿ ವಾಗ್ದಾಳಿ ಮಾಡಿದರು.
ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಲಂಚ ಕೊಡದಿದ್ದರೆ ಯಾವ ಕೆಲಸ ಆಗಲ್ಲ. ಡಿಸಿಪಿ, SP ಪೋಸ್ಟಿಂಗ್ಗೂ ಲಂಚ ಕೊಡಬೇಕು. ಎಲ್ಲಾ ಕಡೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಹೀಗಾಗಿ ಬೆಂಗಳೂರಿನಾದ್ಯಂತ ಮೌನ ಪ್ರತಿಭಟನೆ ಮಾಡಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಾವು 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಬಿಜೆಪಿಗೆ ಭಯ ಇದೆ, ಹೀಗಾಗಿ ಬಿಬಿಎಂಪಿ ಚುನಾವಣೆ ಮಾಡುತ್ತಿಲ್ಲ ಎಂದು ಕಾಲೆಳೆದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ಸಚಿವ.ಕೆ.ಸುಧಾಕರ್ ಭ್ರಷ್ಟಾಚಾರ ಆರೋಪ ಹೊರಿಸಿದ ವಿಚಾರವಾಗಿ ಮಾತನಾಡಿದ ಅವರು ಸಚಿವ ಡಾ.ಕೆ.ಸುಧಾಕರ್ ಈ ಹಿಂದೆ ಯಾವ ಪಕ್ಷದಲ್ಲಿ ಇದ್ದರು? ಕೊರೊನಾ ಸಮಯದಲ್ಲಿ ಲೂಟಿ ಮಾಡಿದ್ದು ಸುಧಾಕರ್ ತಾನೆ? ನಮ್ಮ ಮುಖ ಚೆನ್ನಾಗಿದೆ, ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಳ್ಳಿ. 60 ವರ್ಷ ನಾವು ಲೂಟಿ ಮಾಡಿದ್ರೆ ತನಿಖೆ ಮಾಡಿಸಿ ಎಂದು ಹೇಳಿದರು.
ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಹೀಗಾಗಿ ಬೆಂಗಳೂರಿನಲ್ಲಿ ನಮ್ಮ ಹೋರಾಟ ಮುಂದುವರೆದಿದೆ. 40% ಅಲ್ಲ 50 ಪರ್ಸೆಂಟ್ ಬೆಂಗಳೂರಿನಲ್ಲಿ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ಆಗಿದೆ ಅಂತಾ ಹೇಳುತ್ತಿದ್ದಾರೆ. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದಾಗ ಏನು ಮಾಡುತ್ತಿದ್ದರು? ವಿಪಕ್ಷದ ಸ್ಥಾನದಲ್ಲಿ ಕುಳಿತು ಬಿಜೆಪಿಯವರು ಏನು ಮಾಡುತ್ತಿದ್ದರು? ಭ್ರಷ್ಟಾಚಾರ ಆಗದಿದ್ರೆ ಕೆಂಪಣ್ಣ ಯಾಕೆ ಮೋದಿಗೆ ಪತ್ರ ಬರೆಯುತ್ತಿದ್ದರು? ಎಂದು ಪ್ರಶ್ನೆ ಮಾಡಿದರು.
ಕೋಲಾರದಲ್ಲಿ ನನಗೆ ಆಶೀರ್ವಾದ ಮಾಡುತ್ತಾರೆ. ಸಂತೋಷ್ ಸ್ಟ್ಯಾಟರ್ಜಿ ಮಾಡೋದಲ್ಲ ಅವರೆ ಬಂದು ನಿಂತಿಕೊಳ್ಳಲಿ. ಬಾದಾಮಿಯಲ್ಲಿ ನನ್ನ ಸೋಲಿಸಲು ಪಿತೂರಿ ನಡೆಸಿದ್ದರು. ಈಗಲು ಕೂಡ ಅದನ್ನೇ ಮುಂದುವರೆಸಿದ್ದಾರೆ. ಆದರೆ ಕೋಲಾರ ಜನ ನಮಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರು: ಮಾಜಿ ಪ್ರಧಾನಿ ದೇವೆಗೌಡರು ಹೇಮಾವತಿ ನೀರು ಕೊಡದೆ ಮೋಸ ಮಾಡಿದರು. ದೇವೇಗೌಡರ ಹೇಳಿಕೆಯ ಹಳೆಯ ಪೇಪರ್ ಕಟಿಂಗ್ ಕಳೆದ ಲೋಕಸಭಾ ಚುನಾವಣೆಯಲ್ಲಿ ತೋರಿಸಿದ್ದೆ. ಹೀಗಾಗಿ ಜಿಲ್ಲೆಯ ಜನರು ಹೆಚ್.ಡಿ.ದೇವೇಗೌಡರನ್ನು ಸೋಲಿಸಿದರು ಎಂದು ಜೆಡಿಎಸ್ ವಿರುದ್ಧ ಸಚಿವ ಜೆ.ಸಿ.ಮಾಧುಸ್ವಾಮಿ ಗುಡುಗಿದ್ದಾರೆ. ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮತ್ತಿಘಟ್ಟ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇಷ್ಟೆಲ್ಲಾ ಆದರೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಚಿಕ್ಕನಾಯಕನಹಳ್ಳಿಗೆ ಟೂರ್ ಮಾಡುತ್ತಾರೆ. ಮಾನ ಮರ್ಯಾದೆ ಇದ್ದವರು ಚಿಕ್ಕನಾಯಕನಹಳ್ಳಿಗೆ ಬರಬಹುದಾ? ಎಂದು ವಾಗ್ದಾಳಿ ಮಾಡಿದ್ದಾರೆ.
ನಾವು ಕಾಂಗ್ರೆಸ್ ನಾಯಕರ ರೀತಿ ಅಗ್ರೆಸಿವ್ ಆಗಿ ಮಾತನಾಡುತ್ತಿಲ್ಲ. ನಾವೆಲ್ಲರೂ ಸೇರಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕು. ನಾವೆಲ್ಲರೂ ಮೂಕ ಪ್ರೇಕ್ಷಕರಾಗಿರುವುದು ನಮ್ಮ ದೌರ್ಭಾಗ್ಯ. ಸರ್ಕಾರದ ವಿರುದ್ಧ ಮಾತನಾಡಿದಾಗ ಜಿಜ್ಞಾಸೆಗೆ ಒಳಗಾಗುತ್ತಿದ್ದೇವೆ. ಸರ್ಕಾರದ ವಿರುದ್ಧ ಮಾತನಾಡಿದವರಿಗೆ ಮರುಪ್ರಶ್ನೆ ಹಾಕಲ್ಲ ನಾವು. ನಾವು ಗಟ್ಟಿ ಧ್ವನಿಯಲ್ಲಿ ನಮ್ಮ ಸಾಧನೆಯನ್ನು ಹೇಳಿಕೊಳ್ಳಬೇಕಾಗಿದೆ. ಆಗ ಅವರು ಬಾಯಿ ಮುಚ್ಚಿಕೊಳ್ತಾರೆ ಎಂದು ಹೇಳಿದರು.
ವಿರೋಧಿಗಳನ್ನು ಆಡೋಕೆ ಬಿಟ್ಟರೆ ಅವರು ಆಡುತ್ತಾನೆ ಇರುತ್ತಾರೆ. ಅಮಾಯಕ ಜನರಿಗೆ ವಿರೋಧಿಗಳು ಹೇಳುವುದೇ ಸತ್ಯ ಎನಿಸುತ್ತೆ. ಕೋರ್ಟ್ನಲ್ಲಿ ಎದುರು ಪಾರ್ಟಿ ವಿಚಾರಣೆಗೆ ಹಾಜರಾಗದೇ ಇದ್ದರೇ, ಇನ್ನೊಂದು ಪಕ್ಷದ ಪರ ಆದೇಶ ಬರುತ್ತದೆ. ಅಭಿವೃದ್ಧಿ ಪದದ ಕಾಗುಣಿತ ಗೊತ್ತಿಲ್ಲದ ವ್ಯಕ್ತಿ ನನ್ನ ಎದುರಾಳಿ. ಹೀಗಾಗಿ ನನ್ನ ವಿರುದ್ಧ ಸ್ಪರ್ಧಿಸಿ ಎಂದು ಸಿದ್ದರಾಮಯ್ಯಗೆ ಹೇಳಿದ್ದೇನೆ. ನೀವೇ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಎಂದಿದ್ದೇನೆ. ಆಗ ಸಮಬಲದ ಹೋರಾಟ ನಡೆಯುತ್ತದೆ, ಗೌರವ ಇರುತ್ತದೆ. ಇಬ್ಬರು ಸರಿಯಾಗಿ ಕುಸ್ತಿ ಆಡಬಹುದು ಎಂದು ಮಾತನಾಡಿದರು.
ಚಿಕ್ಕಮಗಳೂರು: ಕಾಂಗ್ರೆಸ್ ಕಾರ್ಯಕರ್ತ ಇಲಿಯಾಸ್ಗೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಇಲಿಯಾಸ್ ಯಾರು ಎಂಬುದು ನನಗೆ ಗೊತ್ತಿಲ್ಲ ಎಂದು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹೇಳಿದ್ದಾರೆ. ಟಿವಿ9 ನೊಂದಿಗೆ ಮಾತನಾಡಿದ ಅವರು ವೋಟ್ ಮಾಡಿ ಗೆಲ್ಲಿಸಿದ್ದೇವೆ, ನನ್ನ ಮಾತು ಕೇಳು ಎಂದು ಹೇಳುತ್ತಾನೆ. ರಾತ್ರಿ ಕುಡಿದು ಇವನು ನನಗೆ ಕರೆ ಮಾಡಿದ್ದಾನೆ. ಕುಡಿದು ಪಕ್ಷ ಸಂಘಟನೆ ಬಗ್ಗೆ ಯಾರಾದರೂ ಮಾತಾಡುತ್ತಾರಾ? ಈತನ ಜೊತೆ ಮಾತನಾಡುವ ಅವಶ್ಯಕತೆ ನನಗೆ ಇಲ್ಲ ಎಂದು ಹೇಳಿದ್ದಾರೆ. ಇಲಿಯಾಸ್ ಎಂಬಾತ ನಮ್ಮ ಪಕ್ಷದ ಕಾರ್ಯಕರ್ತನೇ ಅಲ್ಲ. ನಮ್ಮ ಹೆಸರು ಹಾಳು ಮಾಡುವುದಕ್ಕೆ ಇಂತಹವರು ಇರುತ್ತಾರೆ. ನಮ್ಮ ಪಕ್ಷದಲ್ಲಿ ಇಲಿಯಾಸ್ಗೆ ಯಾವುದೇ ಸ್ಥಾನಮಾನ ಇಲ್ಲ ಎಂದರು.
ಹಾಸನ : ಶನಿವಾರ (ಜ.21) ರಂದು ಹಾಸನದಲ್ಲಿ ಕಾಂಗ್ರೆಸ್ ನವರು ಸಮಾವೇಶ ಮಾಡಿದ್ದಾರೆ. ಜೆಡಿಎಸ್ ಬಿಜೆಪಿಯ ಬಿ ಟೀಂ ಅಂದಿದ್ದಾರೆ. ರಾಷ್ಟ್ರೀಯ ಪಕ್ಕಕ್ಕೆ ಪ್ರಾದೇಶಿಕ ಪಕ್ಷ ಕಂಡರೆ ಎಷ್ಟು ಭಯ ಇದೆ ಅನ್ನೋದು ಇಲ್ಲೆ ಗೊತ್ತಾಗುತ್ತೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ಮಾಡಿದ್ದಾರೆ. ಒಂದು ಕಡೆ ಕೋಮುವಾದಿ ಪಕ್ಷ ದೂರ ಇಡಬೇಕು ಅಂತಾರೆ, ಪ್ರಾದೇಶಿಕ ಪಕ್ಷವನ್ನು ಮುಗಿಸಬೇಕೆನ್ನುವುದು ಇನ್ನೊಂದು ಕಡೆ ಹೊಂಚು ಹಾಕುತ್ತಿದ್ದಾರೆ ಎಂದರು.
ಹಾಸನದಲ್ಲಿ ನಾಲ್ವರು ಜೆಡಿಎಸ್ ಶಾಸಕರೊಂದಿಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಸುದ್ದಿಗೋಷ್ಠಿ ನಡೆಸಿದ ಅವರು ಕಾಂಗ್ರೆಸ್‌ನವರು ಅಲ್ಪಸಂಖ್ಯಾತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ಎ ಟೀಂ, ಬಿ ಟೀಂ ಯಾರು ಸ್ವಾಮಿ ? ಎರಡು ರಾಷ್ಟ್ರೀಯ ಪಕ್ಷಗಳು ಪರಸ್ಪರ ಹೊಂದಾಣಿಕೆಯಲ್ಲಿವೆ. ಕಾಂಗ್ರೆಸ್ ನಾಯಕರಿಗೆ ಮಾನ, ಮರ್ಯಾದೆ ಇದ್ರೆ ಕೋಲಾರದಲ್ಲಿ ಮುನಿಯಪ್ಪ ಅವರನ್ನು ಸೋಲಿಸಿದ್ದು ಯಾರು ಎಂದು ಹೇಳಲಿ ? ಧರ್ಮಸ್ಥಳ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಲಿ ಎಂದು ಸವಾಲ್ ಹಾಕಿದ್ದಾರೆ.
ನಾವೇನು ಬಿಜೆಪಿಯವರ ಮನೆ ಬಾಗಿಲಿಗೆ ಹೋಗಿದ್ವಾ? ದೆಹಲಿಯಲ್ಲಿ ನರೇಂದ್ರ ಮೋದಿಯವರು ಕುಮಾರಸ್ವಾಮಿಗೆ ಮುಖ್ಯಮಂತ್ರಿ ಆಗು ಎಂದಿದ್ದರು. 17 ಜನರನ್ನು ಕಳುಹಿಸಿದ್ದು ಯಾರು ಸ್ವಾಮಿ? ನಾನು ಸಿದ್ದರಾಮಯ್ಯ ಅವರ ಮನೆಯಲ್ಲಿ ಕುಳಿತಿದ್ದೆ. ದೆಹಲಿಯಿಂದ ನನಗೆ ಫೋನ್ ಮಾಡಿದರು. ನಿನ್ನನ್ನು ಉಪಮುಖ್ಯಮಂತ್ರಿ ಮಾಡುತ್ತೇನೆ, ಐವರು ಶಾಸಕರು ವಾಪಾಸ್ ಬರ್ತಾರೆ ಅಂದರು. ನಾನು ದೇವಸ್ಥಾನಕ್ಕೆ ಹೋಗಿ ಬಂದಿದ್ದೇನೆ ಸುಳ್ಳು ಪೊಳ್ಳು ಹೇಳೋದಿಲ್ಲ. ಸಿದ್ದರಾಮಯ್ಯ ಅವರ ಬಗ್ಗೆ ಗೌರವವಿದೆ, ಆದರೆ ರಾಜಕೀಯವಾಗಿ ಬೇರೆ ಎಂದರು.
ಮಾಜಿ ಪ್ರಧಾನಿ ದೇವೆಗೌಡರನ್ನು ತುಮಕೂರಿನಲ್ಲಿ ನಿಲ್ಲಿಸಿ ಸೋಲಿಸಿದರು. ಯಾಕೆ ನಿಲ್ಲಿಸಬೇಕಿತ್ತು, ಬೇಡ ಅಂದಿದ್ದೆರೆ ನಿಲ್ಲಿಸುತ್ತಿರಲಿಲ್ಲ, ಸಿಂಗಲ್ ಫೈಟ್ ಮಾಡುತ್ತಿದ್ದೆವು. ತುಮಕೂರಿನ ಎಂಪಿ ಓಪನ್ ಆಗಿ ಹೇಳುತ್ತಿದ್ದಾರೆ, ಕಾಂಗ್ರೆಸ್‌ನವರು ನನಗೆ 82000 ಮತ ಕೊಡ್ಸಿದರು ಅಂತ. ದೇವೇಗೌಡರು, ಖರ್ಗೆ, ಮುನಿಯಪ್ಪ ಅವರನ್ನು ಸೋಲಿಸಿದ್ದು ಯಾರು ? ನಾನು ರಾಹುಲ್‌ಗಾಂಧಿ ಅವರಲ್ಲಿ ಮನವಿ ಮಾಡುತ್ತೇನೆ, ಕರ್ನಾಟಕ ಕಾಂಗ್ರೆಸ್‌ನ ವಿಸರ್ಜನೆ ಮಾಡುವುದು ಒಳ್ಳೆಯದು.ಈಗ ಇರುವುದು ಕೋಮುವಾದಿ ಕಾಂಗ್ರೆಸ್, ಮಹಾತ್ಮ ಗಾಂಧಿ ಕಾಂಗ್ರೆಸ್ ಅಲ್ಲ ಎಂದು ಹೇಳಿದರು.
ಮುನಿಯಪ್ಪ ಅವರನ್ನು ಸೋಲಿಸಿ ಈಗ ಅವರ ಮನೆಯ ಬಾಗಿಲಿಗೆ ಹೋಗಿದ್ದಾರೆ. ಮಂಡ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಸೇರಿ ಕುಮಾರಸ್ವಾಮಿ ಮಗನನ್ನು ಸೋಲಿಸಿದರು. ಕಾಂಗ್ರೆಸ್‌ಗೆ ಇರುವ ಅಲ್ಪ ಸ್ವಲ್ಪ ಗೌರವ ಉಳಿಯಬೇಕೆಂದರೆ ವಿಸರ್ಜನೆ ಮಾಡಿ. ಕೋಮುವಾದಿಗಳ ಜೊತೆ ಹಿಂದಗಡೆ ಅಡ್ಜಸ್ಟ್ ಮಾಡಿಕೊಳ್ಳದೆ ನೇರವಾಗಿ ಮಾಡಿ. ಕಾಂಗ್ರೆಸ್ ಅಂದರೆ ಬಿಜೆಪಿಯ ಬಿ ಟೀಂ. ಈಗಿರುವುದು ಕೆಲವು ಅನುಕೂಲ ಸಿಂಧುಗಳ ಕಾಂಗ್ರೆಸ್. ಅವರನ್ನು ಇವರು ಬೈಯ್ಯದು ಇವರು ಅವರನ್ನು ಬೈಯ್ಯದು. ಇಬ್ಬರು 40% ರಲ್ಲಿ ಕಮೀಷನರ್‌ನವರೆ. ಈ ಎರಡು ಪಕ್ಷಗಳನ್ನು ಸೋಲಿಸಿ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿ. ನಮ್ಮ ಹಣೆಬರಹದಲ್ಲಿ ಏನ್ ಬರೆದಿದೆ ಅದು ಆಗುತ್ತೆ. ಇವರ್ಯಾರು ಪಕ್ಷ ವಿಸರ್ಜನೆ ಮಾಡಿ ಎನ್ನಲು. ಹಾಸನಕ್ಕೆ ಬಂದರೆ ಸಾಕು ಎ ಟೀಂ ಬಿ ಟೀಂ ಅಂತಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ನೆಲೆ ಕಚ್ಚಿ ಹೋಗಿದೆ. 165 ಭಾಗ್ಯ ಮಾಡಿ 120 ಇದ್ದಿದ್ದು ಯಾಕೆ 80 ಕ್ಕೆ ಬಂತು. ಜೆಡಿಎಸ್ ಅಂದರೆ ಬಿಜೆಪಿ, ಕಾಂಗ್ರೆಸ್‌ಗೂ ಭಯ. ರಾಜ್ಯದ ಜನತೆಯಲ್ಲಿ ಮನವಿ ಮಾಡುತ್ತೇನೆ, ಈ ಎರಡು ರಾಷ್ಟ್ರೀಯ ಪಕ್ಷಗಳನ್ನು ದೂರವಿಡಿ ನಮ್ಮ ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ಕೊಡಿ ಎಂದು ಮನವಿ ಮಾಡಿದರು.
ಹುಬ್ಬಳ್ಳಿ-ಧಾರವಾಡ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರವ ಹಿನ್ನೆಲೆ ಕೇಂದ್ರ ಸಚಿವ ಅಮಿತ್ ಶಾ ಭರ್ಜರಿ ಯೋಜನೆ ರೂಪಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಜಿಲ್ಲೆಯ 7ಕ್ಷೇತ್ರಗಳಲ್ಲಿ 5 ಬಿಜೆಪಿಯ ಬತ್ತಳಿಕೆಯಲ್ಲಿದ್ದು, ಸೋತ ಕ್ಷೇತ್ರಗಳನ್ನು ಗೆಲ್ಲುವುದರ ಜೊತೆಗೆ ಗೆದ್ದ ಕ್ಷೇತ್ರಗಳನ್ನ ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಬಿಜೆಪಿ ಈಗ ಗೆದ್ದಿರುವ ಕ್ಷೇತ್ರಗಳಲ್ಲಿ ವಿಜಯಾತ್ರೆ ಮುಂದುವರೆಸುವುದರ ಜೊತೆಗೆ, ಸೋತ ಕ್ಷೇತ್ರಗಳಲ್ಲೂ ವಿಜಯ ಪತಾಕೆ ಹಾರಿಸಲು ಯೋಜನೆ ರೂಪಿಸಿದೆ. ಈ ಹಿನ್ನೆಲೆ ಜನೆವರಿ 12 ರಂದು ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಮಹತ್ವ ಪಡೆದಿತ್ತು. ಹುಬ್ಬಳ್ಳ-ಧಾರವಾಡ ಪೂರ್ವದಲ್ಲಿ ಹೆಚ್ಚು ದಲಿತ ಮತಗಳಿವೆ. ಹೀಗಾಗಿಯೇ ಎಸ್‌ಎಸಿ, ಎಸ್‌ಟಿ ಮೀಸಲಾತಿಯ ದಾಳ ಪ್ರಯೋಗಿಸಲು ಸಜ್ಜಾಗಿದೆ. ಈ ಬಾರಿ ಪ್ರಸಾದ್ ಅಬ್ಬಯ್ಯರನ್ನು ಸೋಲಿಸಲು ಮೆಗಾ ಪ್ಲ್ಯಾನ್ ಮಾಡಿಕೊಂಡಿದ್ದು,ದಲಿತ ವಿರೋಧಿ ಕಾಂಗ್ರೆಸ್ ಎಂದು ಬಿಂಬಸಲು ಬಿಜೆಪಿಗರು ಮುಂದಾಗಲಿದ್ದಾರೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕುಂದುಗೊಳದಲ್ಲಿ ಕೇವಲ 3 ಸಾವಿರ ಮತಗಳಿಂದ ಸೋಲು ಕಂಡಿತ್ತು. ಈ ಹಿನ್ನೆಲೆ ಕುಂದುಗೋಳದಲ್ಲಿ ಬಿಜೆಪಿ ನಾಯಕರು ಬೂತ್ ಮಟ್ಟದಿಂದ ಕೆಲಸ ಮಾಡುವಂತೆ ಅಮಿತ್ ಶಾ ಸೂಚಿಸಿದ್ದಾರೆ.
ಜ. 28ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಧಾರವಾಡಕ್ಕೆ
ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ 9ನೇ ಕ್ಯಾಂಪಸ್ನ್ನು ಧಾರವಾಡದಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆ ಜ. 28ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಧಾರವಾಡಕ್ಕೆ ಬರಲಿದ್ದು ಭೂಮಿ ಪೂಜೆ ನೆರವೇರಿಸಲಿದ್ದಾರೆ. ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಗುಜರಾತ್‌ನ ಗಾಂಧೀನಗರದಲ್ಲಿದ್ದು, ವಿವಿಧ ರಾಜ್ಯಗಳಲ್ಲಿ ಅದರ 8 ಕ್ಯಾಂಪಸ್‌ಗಳಿವೆ. 9ನೇ ಕ್ಯಾಂಪಸ್ ಆಗಿ ಧಾರವಾಡದಲ್ಲಿ ಸ್ಥಾಪನೆಯಾಗಲಿದ್ದು, ಈ ಮೂಲಕ ದಕ್ಷಿಣ ಭಾರತದಲ್ಲೇ ಮೊದಲನೆಯ ಕ್ಯಾಂಪಸ್ ಇದಾಗಲಿದೆ. ‘
ಈ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ಮಾಣಕ್ಕೆ ಸುಮಾರು 50 ಎಕರೆ ಜಾಗದ ಅಗತ್ಯವಿದ್ದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯದಲ್ಲಿ ಜಾಗ ಪರಿಶೀಲನೆ ನಡೆದಿದೆ. ಎರಡರಲ್ಲಿ ಒಂದು ಕಡೆ ಸ್ಥಾಪನೆಗೆ ಅಂತಿಮವಾಗಲಿದೆ. ಕ್ಯಾಂಪಸ್ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಪ್ರಯೋಗಾಲಯ, ಆಡಳಿತ ಭವನ, ತರಗತಿ ಕೊಠಡಿ, ವಿದ್ಯಾರ್ಥಿ ನಿಲಯ, ಸಿಬ್ಬಂದಿ ವಸತಿ ಸಮುಚ್ಚಯ ಹೊಂದಿರಲಿದೆ.
ಮಂಡ್ಯ: ರಾಜ್ಯದಲ್ಲಿ ಚುನಾವಣೆ ರಣ ತಂತ್ರ ಬಿರುಸುಗೊಂಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಬಿಜೆಪಿಯ ತ್ರೀಮೂರ್ತಿಗಳಿಂದ ರಾಜ್ಯದಲ್ಲಿ ಚುನಾವಣೆ ಗೆಲ್ಲಲ್ಲು ಮೆಗಾ ಪ್ಲ್ಯಾನ್ ಮಾಡಿದ್ದು, ಈಗಾಗಲೇ ಕೆಳದ 3 ತಿಂಗಳಿನಲ್ಲಿ ಪ್ರಧಾನಿ ಮೋದಿ ಹಲವು ಭಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ.
ಬಿಜೆಪಿ ವೀಕ್ ಇರುವ ಪ್ರದೇಶಗಳಲ್ಲಿ ನಾಯಕರು ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದ್ದು, ಹಳೆ ಮೈಸೂರು ಭಾಗದಲ್ಲಿ ಮತ್ತಷ್ಟು ಬಿಗಿ ಮಾಡಲು ಮುಂದಾಗಿದ್ದಾರೆ. ಈ ಹಿನ್ನೆಲೆ ಹಳೆ ಮೈಸೂರು ಅಮಿತ್ ಶಾ ಮತ್ತು ಪ್ರಧಾನಿ ಮೋದಿಗೆ ಟಾರ್ಗೆಟ್ ಆಗಿದ್ದು, ಹಳೆ ಮೈಸೂರು ಭಾಗಕ್ಕೆ ಹೆಚ್ಚು ಒತ್ತು ಕೊಡಲಾಗಿದೆ.
ಅಮಿತ್ ಷಾ ಬಳಿಕ ಹಳೆ ಮೈಸೂರು ಭಾಗಕ್ಕೆ ಪ್ರಧಾನಿ ಮೋದಿ ಎಂಟ್ರಿ
ಅಮಿತ್ ಷಾ ಬಳಿಕ ಹಳೆ ಮೈಸೂರು ಭಾಗಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಫೆಬ್ರವರಿ ತಿಂಗಳಿನಲ್ಲಿ ಮಂಡ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಮಂಡ್ಯಕ್ಕೆ ಪ್ರಧಾನಿ ಭೇಟಿ ಬಗ್ಗೆ ಬಿಜೆಪಿ ರಾಜ್ಯ ಘಟಕಕ್ಕೆ ಹೈಕಮಾಂಡ್ ಸೂಚನೆ ರವಾನಿಸಿದೆ. ಕಮಲ ಕಲಿಗಳು ಇನ್ನೊಂದು ವಾರದಲ್ಲಿ ಅಧಿಕೃತ ದಿನಾಂಕ ಘೋಷಣೆ ಮಾಡಲಿದ್ದಾರೆ. ಹಳೆ ಮೈಸೂರು ಭಾಗವನ್ನು ಕಬ್ಜಾ ಮಾಡಲು ಬ್ಲೂ ಪ್ರಿಂಟ್ ಸಿದ್ದವಾಗಿದ್ದು, ಸಂಘಟನಾ ಚತುರ ಬಿ.ಎಲ್ ಸಂತೋಷ್ ರಿಂದ ಹೈ ಕಮಾಂಡ್ ಗ್ರೌಂಡ್ ರಿಪೋರ್ಟ್ ಪಡೆಯುತ್ತಿದೆ.
ನಿನ್ನೆ (ಜ.22) ಶ್ರೀರಂಗಪಟ್ಟಣದಲ್ಲಿ ಕಾರ್ಯಕರ್ತರು ಹಾಗೂ ಟಿಕೆಟ್ ಆಕಾಂಕ್ಷಿಗಳ ಜತೆ ಗೌಪ್ಯ ಸಭೆ ನಡೆಸಿರುವ ಬಿ.ಎಲ್ ಸಂತೋಷ್, ಮಂಡ್ಯದ 7 ವಿಧಾನಸಭಾ ಕ್ಷೇತ್ರದ ಇಂಚಿಂಚು ಮಾಹಿತಿ ಕಲೆ ಹಾಕಿದ್ದಾರೆ. ಈಗಾಗಲೇ ಬಿಜೆಪಿ ಹಳೆ ಮೈಸೂರು ಭಾಗದಲ್ಲಿ ರಣ ಕಹಳೆ ಮೊಳಗಿಸಿದ್ದು, ಪದೇ ಪದೇ ಮಂಡ್ಯ ಜಿಲ್ಲೆಯಲ್ಲಿ ರಾಜ್ಯದ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಹಿಂದುತ್ವದ ಅಜೆಂಡಾದ ಮೇಲೆ ವರ್ಕ್ ಔಟ್ ಮಾಡಲು ಬಿಜೆಪಿಗರು ಮುಂದಾಗಿದ್ದು, ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದವೇ ಕಮಲಧಾರಿಗಳ ಅಸ್ತ್ರವಾಗಲಿದೆ.
ಬಿಜೆಪಿಗೆ ಸೇರಲಿದ್ದಾರೆ ಹಾಲಿ ಹಾಗೂ ಮಾಜಿ ಶಾಸಕರು..?
ಮಂಡ್ಯದಲ್ಲಿ ಚುನಾವಣೆಗೂ ಮುನ್ನವೆ ಪಕ್ಷಾಂತರ ಪರ್ವ ಶುರುವಾಗಲಿದೆ ಎಂಬ ವಂದತಿಗಳು ಕೇಳಿಬರುತ್ತಿವೆ. ಬಿಜೆಪಿಗೆ ಸೇರಲಿರುವ ಪ್ರಮುಖ ಕೈ ಮುಖಂಡರು ಹಾಗೂ ಜೆಡಿಎಸ್ ನಾಯಕರ ಬಗ್ಗೆ ಮಂಡ್ಯ ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿವಿ9ಗೆ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಎರಡು ಪಕ್ಷದ ಪ್ರಮುಖ ನಾಯಕರು ಈಗಾಗಲೆ ಬಿಜೆಪಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿಗೆ ಈ ಬಾರಿ ವರದಾನ ಆಗಲಿರೊ ಅಂಶಗಳು
ಜೆಡಿಎಸ್ನಲ್ಲಿ ಆಂತರಿಕ ಭಿನ್ನಮತ ಎದ್ದಿದೆ. ಬಿಲ್.ಎಲ್ ದೇವರಾಜ್ ಕೆ.ಆರ್ ಪೇಟೆಯಲ್ಲಿ ಬಹಿರಂಗವಾಗಿ ಭಿನ್ನಮತವನ್ನು ಹೊರ ಹಾಕಿದ್ದಾರೆ. ದೇವರಾಜ್ ಜೆಡಿಎಸ್ ಟಿಕೆಟ್ ಕೈ ತಪ್ಪಿದರೇ ಪಕ್ಷೇತರವಾಗಿ ಸ್ಪರ್ಧೆ ಮಾಡಲು ಚಿಂತನೆ ನಡೆಸಿದ್ದಾರೆ. ಹಾಗೇ ಜೆಡಿಎಸ್ನಿಂದ ಉಚ್ಚಾಟಿತರಾಗಿರುವ ಎಲ್.ಆರ್ಶಿ ವರಾಮೇಗೌಡ ನಾಗಮಂಗಲದಲ್ಲಿ ಪಕ್ಷೇತರವಾಗಿ ಕಣಕ್ಕಿಳಿಯಲಿದ್ದಾರೆ. ಎಲ್.ಆರ್.ಶಿವರಾಮೇಗೌಡ ಸ್ಪರ್ಧೆ ಮಾಡಿದರೆ ಜೆಡಿಎಸ್ ಮತಗಳು ಪಕ್ಕಾ ವಿಭಜನೆಯಾಗಲಿವೆ. ಮಂಡ್ಯ ಕ್ಷೇತ್ರದಲ್ಲಿ ಹಾಲಿ ಶಾಸಕರ ವಿರುದ್ದ ಅಸಮಧಾನ ಬುಗಿಲೆದ್ದು, ಅನಾರೋಗ್ಯದ ಸಮಸ್ಯೆಯಿಂದ ಜೆಡಿಎಸ್ ಶಾಸಕ ಶ್ರೀನಿವಾಸ್ ಜನರ ಸಂಪರ್ಕಕ್ಕೆ ಸಿಗುತ್ತಿಲ್ಲ.
ಹಿಂದುತ್ವ ಅಜೆಂಡಾ
ಮಂಡ್ಯ ಜಿಲ್ಲೆ ಹಿಜಾಬ್ ವಿಚಾರವಾಗಿ ದೇಶಾದ್ಯಂತ ಸುದ್ದಿಯಾಗಿತ್ತು. ಅಲ್ಲಾವೊ ಅಕ್ಬರ್ ಎಂದು ಘೋಷಣೆ ಕೂಗಿದ್ದ ಮುಸ್ಕಾನ್ರನ್ನ ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಅಲ್ ಝವಾಹಿರಿ ಹಾಡಿ ಹೊಗಳಿದ್ದನು. ಅಲ್ ಝವಾಹಿರಿ ಹೇಳಿಕೆ ದೇಶಾದ್ಯಂತ ಚರ್ಚಗೆ ಗ್ರಾಸವಾಗಿತ್ತು. ಆಜಾನ್ ಹಾಗೂ ಹನುಮಾನ್ ಚಾಲೀಸ ವಿಚಾರವಾಗಿ ಮಂಡ್ಯ ಸುದ್ದಿಯಾಗಿತ್ತು. ಜಾಮಿಯಾ ಮಸೀದಿ ವಿವಾದ ಹನುಮ ಮಾಲಾದಾರಿಗಳ ಯಾತ್ರೆ, ಶ್ರೀರಂಗಪಟ್ಟ ಹಾಗೂ ಮೇಲುಕೋಟೆಯಲ್ಲಿ ಟಿಪ್ಪು ಆಡಳಿತದ ವೇಳೆ ಹಿಂದೂ ದೇಗುಲ ಹಾಗೂ ಹಿಂದೂ ಜನರ ಮಾರಣ ಹೋಮದ ಕುರಿತು ಬಿಜೆಪಿ ಹೆಚ್ಚಿನ ಪ್ರಚಾರ ಮಾಡುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಬೋಮ್ಮಾಯಿ ಸರ್ಕಾರ ಮೈ ಶುಗರ್ ಸಕ್ಕರೆ ಕಾರ್ಖಾನೆ ರೀ ಓಪನ್ ಮಾಡಿದ ಕ್ರೆಡಿಟ್ ಪಡೆದಿದೆ.
ಜಾತಿವಾರು ಲೆಕ್ಕಾಚಾರ
ಒಕ್ಕಲಿಗ ಮತದಾರರೇ ಹೆಚ್ಚಿರುವ ಮಂಡ್ಯ ಜಿಲ್ಲೆಯಲ್ಲಿ ಒಕ್ಕಲಿಗ ನಾಯಕರನ್ನು ಕಣಕ್ಕಿಳಿಸಿರುವ ಬಿಜೆಪಿ ಅಶ್ವಥ್ ನಾರಾಯಣ, ಆರ್.ಅಶೋಕ್, ಸಿಟಿ ರವಿ, ಗೋಪಾಲಯ್ಯ, ನಾರಾಯಣಗೌಡರಿಗೆ ಮಂಡ್ಯದ ಹೊಣೆ ನೀಡಿದೆ. ಮಂಡ್ಯದಲ್ಲಿಯೂ ಕಾಂಗ್ರೆಸ್ ಬಣದ ರಾಜಕೀಯ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದ್ದು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ಮಂಡ್ಯದ ಕೈ ನಾಯಕರನ್ನು ಸೆಳೆಯುವ ಸಾಧ್ಯತೆ ಇದೆ. ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡರೇ ಇತ್ತ ರಮೇಶ್ ಬಾಬು, ಬಂಡಿಸಿದ್ದೇಗೌಡ, ಗಣಿಗ ರವಿ, ಡಿಕೆ ಶಿವಕುಮಾರ್ ಬಣದಲ್ಲಿ ಆಕ್ಟೀವ್ ಆಗಿದ್ದಾರೆ. ಕಾಂಗ್ರೆಸ್‌ನ ಬಣ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳು ಬಿಜೆಪಿ ಪ್ಯ್ಲಾನ್ ಮಾಡಿದೆ.
ಕೋಲಾರ: ಕಾಂಗ್ರೆಸ್ (Congress) ಪ್ರಜಾಧ್ವನಿ ಹೆಸರಿನಲ್ಲಿ ರಾಜ್ಯಾದ್ಯಂತ ಬಸ್ ಯಾತ್ರೆ (Bus Yatre) ಪ್ರಾರಂಭಿಸಿದ್ದು ಇಂದು (ಜ.23) ಕೋಲಾರ ತಲುಪಿದೆ. ಕೋಲಾರ (Kolar) ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸ್ಪರ್ಧಿಸುವ ಕ್ಷೇತ್ರವಾಗಿದ್ದು, ಸಿದ್ದರಾಮಯ್ಯ ಶಕ್ತಿ ಪ್ರದರ್ಶಿಸಲು ಸಿದ್ದವಾಗಿದ್ದಾರೆ. ಕೋಲಾರದಲ್ಲಿ ಪ್ರಜಾಧ್ವನಿ ಕಾರ್ಯಕ್ರಮದ ಮೂಲಕ ಸಿದ್ದರಾಮಯ್ಯ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ ನಂತರ ಮೊದಲ ಬಾರಿಗೆ ಕೋಲಾರಕ್ಕೆ ಭೇಟಿ ನೀಡುತ್ತಿದ್ದು, ಸಿದ್ದರಾಮಯ್ಯ ಶಕ್ತಿ ಅನಾವರಣವಾಗಲಿದೆ. ಇನ್ನು ಈ ಸಮಾವೇಶದ ಮೂಲಕ ಸ್ವಪಕ್ಷೀಯ ನಾಯಕರು, ಜೆಡಿಎಸ್ ಮತ್ತು ಬಿಜೆಪಿಗೆ ತಮ್ಮ ಪ್ರಭಾವದ ಬಗ್ಗೆ ತಿಳಿಸಲಿದ್ದಾರೆ.
ಸಿದ್ದರಾಮಯ್ಯ ವಿರುದ್ದ ದಲಿತ ಮುಖಂಡರ ಕರಪತ್ರ ಹಂಚಿಕೆ ವಿಚಾರದಲ್ಲಿ ಹೊಸ ಸ್ಟ್ಯಾಟರ್ಜಿ ರೂಪಿಸಲಾಗುತ್ತಿದೆ. ದಲಿತ ಮುಖಂಡರ ಕರಪತ್ರಕ್ಕೆ ಕೌಂಟರ್ ಕೊಡಲು ದಲಿತರಿಗಾಗಿ ಶ್ರಮಿಸಿದ ದಲಿತರಾಮಯ್ಯ ಎಂಬ ಹೆಸರಿನ ಕರಪತ್ರಗಳು ಸಿದ್ದು ಬತ್ತಳಿಕೆಯಲ್ಲಿ ಸಿದ್ದವಾಗಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದಲಿತರ ಪರವಾಗಿ ಮಾಡಿದ ಕಾರ್ಯಕ್ರಮಗಳ ಪಟ್ಟಿ, ಡಾ. ಬಿ. ಆರ್. ಅಂಬೇಡ್ಕರ್ ಅವರ 125 ಜಯಂತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಮಾಡಿದ್ದು, ದಲಿತ ವಿದ್ಯಾರ್ಥಿಗಳಿಗೆ ನೀಡಿದ ಮೀಸಲಾತಿ, ದಲಿತ ಗುತ್ತಿಗೆದಾರರಿಗೆ ನೀಡಿದ ಮೀಸಲಾತಿ ಸೇರಿ ಹಲವು ಕಾರ್ಯಕ್ರಮಗಳ ಪಟ್ಟಿ ಇರುವ ಕರಪತ್ರ ಬಿಡುಗಡೆ ಮಾಡಲಿದ್ದಾರೆ. ದಲಿತ ನಾಯಕರನ್ನು ಮುಗಿಸಿದ ಸಿದ್ದರಾಮಯ್ಯ ಅನ್ನುವ ಕರಪತ್ರ ಹಂಚಿಕೆ ಮಾಡಿದ್ದ ದಲಿತ ಮುಖಂಡರಿಗೆ ಈ ಮೂಲಕ ಕೌಂಟರ್ ನೀಡಲಿದ್ದಾರೆ.
ಸಿದ್ದರಾಮಯ್ಯ ಅವರನ್ನು ಹಣಿಯೋಕೆ ಬಿಜೆಪಿ, ಜೆಡಿಎಸ್ ಪ್ಲ್ಯಾನ್ ಏನು..? ಸಿದ್ದು ಹಣಿಯೋಕೆ ಕಾಂಗ್ರೆಸ್ ಒಳಗಿನ ಪ್ಲ್ಯಾನ್ ಏನು..? ಸಿದ್ದರಾಮಯ್ಯ ಅವರನ್ನು ಹಣಿಯಲು ಕಮಲ ಪಾಳಯ ಸಿದ್ದತೆಗಳನ್ನು ಆರಂಭಿಸಿದೆ. ಅಹಿಂದ ಮತಗಳನ್ನು ಒಡೆಯಲು ಬಿಜೆಪಿ ನಾಯಕರು ಅಖಾಡಕ್ಕೆ ಇಳಿದಿದ್ದಾರೆ. ಸ್ವತಃ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ರಿಂದಲೇ ಕೋಲಾರದಲ್ಲಿ ಸಭೆ ನಡೆದು ಅನೇಕ ಮಹತ್ವದ ವಿಷಯಗಳು ಚರ್ಚೆಯಾದವು.
ಅಹಿಂದ ಮತಗಳು ಕೇವಲ ಸಿದ್ದರಾಮಯ್ಯ ಪರ ವಾಲದಂತೆ ನೋಡಿಕೊಳ್ಳಲು ಪ್ರತಿಪಕ್ಷಗಳು ಪ್ಲ್ಯಾನ್ ರೂಪಸಿದ್ದು, ಈಗಾಗಲೇ ದಲಿತ ವಿರೋಧಿ ಸಿದ್ದರಾಮಯ್ಯ ಎಂದು ದಲಿತ ಕರಪತ್ರಗಳನ್ನು ಬಿಡುಗಡೆ ಮಾಡಿವೆ. ಸಿದ್ದರಾಮಯ್ಯರಿಂದ ದಲಿತ ನಾಯಕರು ಬೆಳೆಯಲು ಸಾಧ್ಯವಾಗಿಲ್ಲ. ಕೆ.ಹೆಚ್ ಮುನಿಯಪ್ಪ ಹಾಗೂ ಡಾ. ಜಿ ಪರಮೇಶ್ವರ್ ಸೋಲಿಗೆ ಸಿದ್ದರಾಮಯ್ಯ ಆಪ್ತರೇ ಕಾರಣ. ದಲಿತ ವಿರೋಧಿ ಸಿದ್ದರಾಮಯ್ಯ ಎಂಬ ಹಣೆಪಟ್ಟಿ ಅಂಟಿಸಿ ದಲಿತ ಮತಗಳ ಒಡೆಯುವ ಸ್ಟ್ಯಾಟರ್ಜಿ ರೂಪಿಸುತ್ತಿದ್ದಾರೆ.
ಗ್ರಾಮ ಪಂಚಾಯತಿ ಮಟ್ಟದಲ್ಲಿ ಬಿಜೆಪಿ ಕಡೆ ಮುಖಂಡರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದ್ದು, ವರ್ತೂರು ಪ್ರಕಾಶ್ ಮೂಲಕ ಕುರುಬ ಸಮುದಾಯದ ಮತಗಳು ಡಿವೈಡ್ ಆಗುವಂತೆ ನೋಡಿಕೊಳ್ಳಲಾಗುತ್ತಿದೆ.
ಒಕ್ಕಲಿಗ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಒಕ್ಕಲಿಗ ಹಾಗೂ ಅಲ್ಪಸಂಖ್ಯಾತ ಮತಗಳ ಮೇಲೆ ಜೆಡಿಎಸ್ ಕಣ್ಣು ಹಾಕಿದೆ. ಅಲ್ಪಸಂಖ್ಯಾತ ಮತಗಳನ್ನು ಜೆಡಿಎಸ್ನತ್ತ ಸೆಳೆಯಲು ಪ್ರಚಾರಕ್ಕೆ ಸಿಎಂ ಇಬ್ರಾಹಿಂ ಧುಮುಕಲಿದ್ದಾರೆ.
ಪ್ರಜಾಧ್ವನಿ ಸಮಾವೇಶದಲ್ಲಾದರು ಸ್ಥಳೀಯ ಕಾಂಗ್ರೆಸ್ ನಾಯಕರ ಭಿನ್ನಮತ ಶಮನವಾಗುತ್ತಾ ಎಂಬುವುದನ್ನು ಕಾದು ನೋಡಬೇಕಿದೆ. ಕೋಲಾರ ಜಿಲ್ಲಾ ಕಾಂಗ್ರೆಸ್ನಲ್ಲಿನ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕೆ.ಹೆಚ್ ಮುನಿಯಪ್ಪ ಬಣಗಳ ನಡುವೆ ಭಿನ್ನಮತ ಮುಂದುವರೆದಿದೆ. ಜನವರಿ 9 ರಂದು ವೇದಿಕೆ ಅಲಂಕಾರಕಷ್ಟೇ ಸೀಮಿತವಾಗಿದ್ದ ಮುಖಂಡರು, ವೇದಿಕೆಯಲ್ಲೂ ಒಬ್ಬರೊಗೊಬ್ಬರು ಹೆಸರೇಳದೆ ಮುಖ ಕೊಟ್ಟು ಮಾತನಾಡದೆ, ತೋರಿಕೆಗಷ್ಟೇ ಸೀಮಿತವಾಗಿದ್ದ ಭಿನ್ನಮತವನ್ನು ಶಮನ ಮಾಡುವ ಯತ್ನ ನಡೆದಿತ್ತು. ಕೆ. ಹೆಚ್ ಮುನಿಯಪ್ಪ ಅವರನ್ನು ಮನೆವರೆಗೂ ಹೋಗಿ ಸಿದ್ದರಾಮಯ್ಯ ಕರೆತಂದಿದ್ದರೂ ಕೂಡ, ಕಾರ್ಯಕ್ರಮ ಮುಗಿದ ನಂತರ ಕೆಹೆಚ್ ಮುನಿಯಪ್ಪ ಏಕಾಂಗಿಯಾಗಿ ಮನೆಗೆ ತೆರಳಿದ್ದರು. ರಮೇಶ್ ಕುಮಾರ್ ಗುಂಪು ಶ್ರೀನಿವಾಸಗೌಡ ಮನೆಯಲ್ಲಿ ಊಟಕ್ಕೂ ಆಹ್ವಾನ ನೀಡದೆ ಕೆ.ಹೆಚ್ ಮುನಿಯಪ್ಪರನ್ನು ದೂರವೇ ಇಟ್ಟಿದ್ದರು. ಇಂದಾದರೂ ರಾಜ್ಯ ನಾಯಕರ ಎದುರಲ್ಲಿ ಶಮನವಾಗಿ, ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ರವಾನೆಯಾಗುತ್ತಾ ಕಾದು ನೋಡಬೇಕಿದೆ.
ಚಿಕ್ಕಬಳ್ಳಾಪುರ: ವರ್ಷದ ಆರಂಭದಿಂದಲೂ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿಯಲ್ಲಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೆರೇಸಂದ್ರ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮೆಡಿಕಲ್ ಕಾಲೇಜು ಕಟ್ಟಡ ಉದ್ಘಾಟನೆಗೆ ಮೋದಿ ಆಗಮಿಸಲಿದ್ದಾರೆ. ಮೋದಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಕೋಲಾರ: ಕೋಲಾರದಲ್ಲಿ ಇಂದು (ಜ.23) ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಕೋಲಾರ ಹೊರವಲಯದ ಟಮಕ ಬಳಿ ಮಧ್ಯಾಹ್ನ 12 ಗಂಟೆಗೆ ಸಮಾವೇಶ ಪ್ರಾರಂಭವಾಗಲಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾಗಿ ಹೇಳಿರುವ ಹಿನ್ನೆಲೆ ಇಂದಿನ ಕೋಲಾರದ ಪ್ರಜಾಧ್ವನಿ ಸಮಾವೇಶ ಮಹತ್ವ ಪಡೆದುಕೊಂಡಿದೆ. ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಡಾ. ಜಿ.ಪರಮೇಶ್ವರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಶಾಸಕ ಕೃಷ್ಣಭೈರೇಗೌಡ ಸೇರಿ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. ಇಂದಿನ ಕಾಂಗ್ರೆಸ್ ಸಮಾವೇಶದಲ್ಲಿ 50 ಸಾವಿರ ಜನ ಸೇರುವ ನಿರೀಕ್ಷೆ ಇದೆ.
Published On - 9:56 am, Mon, 23 January 23