ಗುಲ್ಬರ್ಗ ವಿಶ್ವವಿದ್ಯಾಲಯ ಅಂತಿಮ ಸೆಮಿಸ್ಟರ್ ಫಲಿತಾಂಶ ವಿಳಂಬ; ಬಿ.ಇಡಿ ಪ್ರವೇಶದಿಂದ ವಂಚಿತರಾದ ವಿದ್ಯಾರ್ಥಿಗಳು
ಗುಲ್ಬರ್ಗ ವಿಶ್ವವಿದ್ಯಾಲಯ ಪ್ರಸಕ್ತ ಸಾಲಿನಲ್ಲಿ ಪದವಿ ಪರೀಕ್ಷಾ ಫಲಿತಾಂಶ ಸಕಾಲಕ್ಕೆ ಪ್ರಕಟಿಸದೆ ತಡಮಾಡಿದೆ. ಈ ಕಾರಣ ಸಾವಿರಾರು ವಿದ್ಯಾರ್ಥಿಗಳು ಬಿ.ಇಡಿ ಪ್ರವೇಶದ ಅವಕಾಶದಿಂದ ವಂಚಿತರಾಗಿದ್ದಾರೆ.

ರಾಯಚೂರು: ಗುಲ್ಬರ್ಗ ವಿಶ್ವವಿದ್ಯಾಲಯದ ಧೋರಣೆಯಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಈಗ ಅತಂತ್ರದಲ್ಲಿರೊ ಆರೋಪ ಕೇಳಿ ಬಂದಿದೆ. ಗುಲ್ಬರ್ಗ ವಿಶ್ವವಿದ್ಯಾಲಯದ ಎಡವಟ್ಟಿನ ವಿರುದ್ಧ ವಿದ್ಯಾರ್ಥಿಗಳು ಕಿಡಿಕಾರುತ್ತಿದ್ದಾರೆ. 2022ನೇ ಸಾಲಿನ ಪದವೀಧರರ 6 ನೇ ಸೆಮಿಸ್ಟರ್ ಫಲಿತಾಂಶವನ್ನ ವಿಳಂಬವಾಗಿ ಪ್ರಕಟಿಸಿರುವುದಕ್ಕೆ ಹಾಗೂ ಮೂಲ ಅಂಕಪಟ್ಟಿಯಿಲ್ಲದ ಕಾರಣಕ್ಕೆ ಈಗ ಬಿ.ಇಡಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.ಗುಲ್ಬರ್ಗ ವಿಶ್ವವಿದ್ಯಾಲಯದ ಎಡವಟ್ಟಿಗೆ ಬಿ ಇಡಿ ಪ್ರವೇಶಕ್ಕೆ ಮುಂದಾಗಿದ್ದ ವಿದ್ಯಾರ್ಥಿಗಳೀಗ ಮುಂದಿನ ಶೈಕ್ಷಣಿಕ ವರ್ಷದವರೆಗೂ ಕಾಯುವುದು ಅನಿವಾರ್ಯವಾಗಿದೆ.
ಈ ಸಾಲಿನಲ್ಲಿ ಬಿಎ, ಬಿಕಾಂ, ಬಿಎಸ್ಸಿ ಪರೀಕ್ಷೆಗಳ ಫಲಿತಾಂಶವನ್ನು ಸಕಾಲಕ್ಕೆ ಪ್ರಕಟಿಸದ ಕಾರಣ ಬಿ.ಇಡಿ ಪ್ರವೇಶದಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಬಿ.ಇಡಿ ಪ್ರವೇಶಕ್ಕೆ ದಾಖಲೆ ಪರಿಶೀಲನೆ ಹಾಗೂ ತಿದ್ದುಪಡಿಗೆ ಜನವರಿ 11 ಕೊನೆ ದಿನವಾಗಿತ್ತು. ಆದರೆ ಗುಲ್ಬರ್ಗ ವಿಶ್ವವಿದ್ಯಾಲಯ ಜನವರಿ 14 ರಂದು ಪದವಿ ವಿಭಾಗದ 6 ನೇ ಸೆಮಿಸ್ಟರ್ ಫಲಿತಾಂಶ ಬಿಡುಗಡೆಯಾಗಿತ್ತು. ಇದೇ ಕಾರಣಕ್ಕೆ ಜನವರಿ 11 ರಂದು ದಾಖಲಾತಿ ಪರಿಶೀಲನೆಯ ತಿದ್ದುಪಡಿಯ ಅವಕಾಶ ಕೊನೆಗೊಂಡಿತ್ತು. ಈ ಹಿನ್ನೆಲೆ ಆರನೇ ಸೆಮಿಸ್ಟರ್ ಫಲಿತಾಂಶ ವಿಳಂಬವಾಗಿದ್ದಕ್ಕೆ ಬಿಇಡಿ ಪ್ರವೇಶದ ಕನಸು ಕಂಡಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪದವಿ ಪರೀಕ್ಷೆಯ 6ನೇ ಸೆಮಿಸ್ಟರ್, ಫಲಿತಾಂಶ ವಿಳಂಬವಾಗಿ ಪ್ರಕಟವಾಗಿರೊ ಹಿನ್ನೆಲೆಯಲ್ಲಿ ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ಗುಲ್ಬರ್ಗ ವಿವಿಯಲ್ಲಿ ಪದವಿ ಮುಗಿಸಿ ರಾಜ್ಯದ ಬೇರೆ ವಿವಿಯಲ್ಲಿ ಸ್ನಾತಕೋತ್ತರ ಕೋರ್ಸ್ ಗೆ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು, ಪಲಿತಾಂಶ ಬಾರದೆ ಒಂದು ವರ್ಷ ವ್ಯರ್ಥವಾಗಿ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಗುಲ್ಬರ್ಗ ವಿವಿ ವ್ಯಾಪ್ತಿಯಲ್ಲಿದ್ದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಕಾಲೇಜುಗಳು ನೂತನ ರಾಯಚೂರು ವಿವಿಗೆ ಸೇರ್ಪಡೆಯಾಗಿದ್ದರೂ, ಅದಕ್ಕೂ ಮುನ್ನ ಗುಲ್ಬರ್ಗ ವಿವಿ ವ್ಯಾಪ್ತಿಯಲ್ಲಿದ್ದ ವಿದ್ಯಾರ್ಥಿಗಳ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ.
2 ಲಕ್ಷದ ವರೆಗೆ ಮ್ಯಾನೇಜೆಂಟ್ ಸೀಟ್?
ಜಿಲ್ಲೆಯಲ್ಲಿ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪದವಿ ಮುಗಿಸಿ ಬಿ.ಇಡಿ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರಿಗೆ 6ನೇ ಸೆಮ್‌ನ ಅಂಕಪಟ್ಟಿ ಬಂದಿಲ್ಲ. ಇದರಿಂದ ಸರ್ಕಾರಿ ಸೀಟು ಕೈತಪ್ಪುವ ಭೀತಿ ಎದುರಾಗಿದೆ. ಮ್ಯಾನೇಜೆಂಟ್ ಸೀಟ್ ಎರಡು ವರ್ಷಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:33 pm, Mon, 23 January 23




