ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದು, ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿವೆ. ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ಗೆ ಭಯೋತ್ಪಾದನೆ ಜೊತೆ ನಂಟು ಇದೆ ಎಂದಿದೆ. ಇದರ ಜೊತೆಗೆನೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲರಿಂದ ವೀರಶೈವ-ಲಿಂಗಾಯತರ ನಡುವೆ ಒಡಕು ಉಂಟುಮಾಡುವ ಯತ್ನ ನಡೆದಿತ್ತು ಎಂದು ಆರೋಪ ಮಾಡಿತು. ಇದಕ್ಕೆ ಪ್ರತ್ಯುತ್ತರ ನೀಡಿದ ಎಂ.ಬಿ ಪಾಟೀಲ್ ಬಳಸಿ ಬಿಸಾಡುವ ನಿಮ್ಮ ತಂತ್ರಕ್ಕೆ ಬಲಿಯಾಗದೇ ಉಳಿದವರುಂಟೇ ಸರ್ವಜ್ಞ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದರು. ಇದರ ಮಧ್ಯೆ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗಲು ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಬಿಎಸ್ ಯಡಿಯೂರಪ್ಪ ಬೆಂಬಲಿಗ ಶಾಸಕರು ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇನ್ನು ಕಾಂಗ್ರೆಸ್ನ ಪ್ರಜಾಧ್ವನಿ ಬಸ್ ಯಾತ್ರೆ ತುಮಕೂರು ತಲುಪಿಸಿದರೇ, ಜೆಡಿಎಸ್ನ ಪಂಚರತ್ನ ಯಾತ್ರೆ ರಾಯಚೂರು ಮುಟ್ಟಿದೆ. ಇದರೊಟ್ಟಿಗೆ ಇಂದಿನ ಅಪ್ಡೇಟ್ಸ್
ಬೆಂಗಳೂರು: ಕೋಲಾರದಲ್ಲಿ ಸಿದ್ದರಾಮಯ್ಯ 50 ಸಾವಿರ ಕುರ್ಚಿಗಳನ್ನು ಹಾಕಿಸಿದ್ರು. ನಿಮ್ಮ ಯೋಗ್ಯತೆಗೆ ಅಷ್ಟು ಜನ ಸೇರಲಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು. ಕಾಂಗ್ರೆಸ್ ಅಂದ್ರೆ ಹುಚ್ಚರ ಸಂತೆ, ನಿತ್ಯ ಸಂಜೆವರೆಗೂ ಬರೀ ಸುಳ್ಳು. ರಮೇಶ್ ಜಾರಕಿಹೊಳಿ ಈ ಹಿಂದೆ ಸಿದ್ದರಾಮಯ್ಯ ಜೊತೆ ಇದ್ದರು. ಕುಮಟಳ್ಳಿ, ಉಮೇಶ್ ಜಾಧವ್ ಕೂಡ ಅವರ ಜೊತೆಯಲ್ಲೇ ಇದ್ರು. ಸರ್ಕಾರ ಬೀಳಬೇಕು ಅಂತ ನೀವು ಈ ಹಿಂದೆ ಷಡ್ಯಂತ್ರ ಮಾಡಿದ್ರಿ. ಹೆಚ್ಡಿಕೆ ಸಿಎಂ ಆಗಿರಬಾರದೆಂದು ಸರ್ಕಾರ ಬೀಳಿಸಲು ಯತ್ನಿಸಿದ್ರಿ. ನಿಮ್ಮ ಚಟಕ್ಕೆ ಚುನಾವಣೆ ಹತ್ತಿರ ಬಂತು ಅಂತ ದೂರು ಕೊಡ್ತಿದ್ದೀರಾ ಎಂದು ಪಶ್ನಿಸಿದರು.
ಮಂಡ್ಯ: ಕ್ಷೇತ್ರದಿಂದ ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧಿಸಿದರೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎಂದು ಶಾಸಕ ಶ್ರೀನಿವಾಸ್ ಹೇಳಿದರು. ಮಂಡ್ಯದಿಂದ ಗೆದ್ದು ಹೆಚ್ಡಿಕೆ ಮುಖ್ಯಮಂತ್ರಿಯಾದರೆ ಸಂತೋಷ. ಹೆಚ್ಡಿಕೆ ಮಂಡ್ಯದಿಂದ ಸ್ಪರ್ಧೆ ಮಾಡಿದರೆ ಕ್ಷೇತ್ರ ಬಿಟ್ಟುಕೊಡುವೆ ಎಂದು ಹೇಳಿದರು.
ಬೆಂಗಳೂರು: ಸಿದ್ದರಾಮಯ್ಯ ಕಾಂಗ್ರೆಸ್ಗೆ ಬಂದ ಮೇಲೆ ದಲಿತರನ್ನು ತುಳಿದಿದ್ದಾರೆ ಎಂದು ಬಿಜೆಪಿ MLC ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ಮಾಡಿದರು. ಇದನ್ನು ಸ್ವತಃ ಕಾಂಗ್ರೆಸ್ ನಾಯಕಿ ಮೋಟಮ್ಮನವರೇ ಹೇಳಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ಗೆ ಬಂದ ಮೇಲೆ ಕಡೆಗಣಿಸಲ್ಪಟ್ಟೆ ಅಂದಿದ್ದಾರೆ. ಮೋದಿಗೆ ನನ್ನ ಕಂಡ್ರೆ ಭಯ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ. ಬೆಟ್ಟದ ಮೇಲೆ ಹುಲಿಯೊಂದು ಹೋಗ್ತಿತ್ತು, ಕುನ್ನಿ ಕೆಳಗೆ ಕೂತಿತ್ತು. ಬೆಟ್ಟದ ಮೇಲೆ ಹೋಗುತ್ತಿರುವ ಹುಲಿ ಈ ಕುನ್ನಿ ಕಡೆ ನೋಡಲಿಲ್ಲ. ಹಾಗಾಗಿ ಕುನ್ನಿ ನನ್ನ ನೋಡಿ ಹುಲಿ ಹೆದರಿಕೊಂಡಿತು ಅಂತ ಹೇಳಿತು. ರಾಜ್ಯದಲ್ಲಿ ಸಿದ್ದರಾಮಯ್ಯ ನೋಡಿ ಒಂದು ಮಗು ಕೂಡ ಹೆದರಲ್ಲ. ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಯ ಬೀಳ್ತಾರಾ ಎಂದು ಪ್ರಶ್ನಿಸಿದರು.
ಯಾದಗಿರಿ: ಜ.28ರಂದು ಯಾದಗಿರಿಯಲ್ಲಿ ಕಾಂಗ್ರೆಸ್ನ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ‘ಕೈ’ ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ಬಿ.ಕೆ.ಹರಿಪ್ರಸಾದ್ ಸೇರಿ ಹಲವರು ಭಾಗಿಯಾಗುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಸರೆಡ್ಡಿ ಅನಪುರ ಹೇಳಿದರು.
ಮಂಗಳೂರು: ಫೆಬ್ರವರಿ 5ರಿಂದ ಫೆ.9ರವರೆಗೆ ಮೊದಲ ಸುತ್ತಿನ ಯಾತ್ರೆ ಮಾಡುತ್ತೇವೆ. ಫೆಬ್ರವರಿ 16ರಿಂದ ಮಾ.10ರವರೆಗೆ 2ನೇ ಸುತ್ತು, ಈ ಬಗ್ಗೆ ಎಲ್ಲಾ ನಾಯಕರು ಅಂತಿಮ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಮಂಗಳೂರಿನಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು. 6 ಜಿಲ್ಲೆಗಳ 26 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯಾತ್ರೆ ನಡೆಯಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಯಲ್ಲಿ ಈ ಯಾತ್ರೆ ಮಾಡುತ್ತೇವೆ ಎಂದರು.
ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಿಕ್ಸರ್ ಹಂಚುತ್ತಿರುವ ವಿಡಿಯೋವನ್ನು ಬಿಜೆಪಿ ನಾಯಕರು ಬಿಡುಗಡೆ ಮಾಡಿದ್ದಾರೆ.
ಈಗಾಗಲೇ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದ ವಿಡಿಯೋ ಬಿಡುಗಡೆ ಮಾಡಿದ್ದು, ನಾಳೆ ಬೆಂಗಳೂರಿನಲ್ಲಿ ಶಾಸಕಿ ಲಕ್ಷ್ಮೀ ವಿರುದ್ಧ ದೂರು ನೀಡುತ್ತೇವೆ ಎಂದು ಬಿಜೆಪಿ ಎಂಎಲ್‌ಸಿ ರವಿಕುಮಾರ್ ಹೇಳಿದರು. ಚುನಾವಣಾ ಆಯೋಗಕ್ಕೆ ವಿಡಿಯೋ ಸಮೇತ ದೂರು ನೀಡುತ್ತೇವೆ. ರಾಜ್ಯಮಟ್ಟದ ನಾಯಕರು ನಾಳೆ ದೂರು ನೀಡಲಿದ್ದಾರೆ. ರಮೇಶ್ ದುಡ್ಡು ಹಂಚಿಲ್ಲ ಬರೀ ಹೇಳಿದ್ದಾರಷ್ಟೇ. ಆದರೆ ಲಕ್ಷ್ಮೀ ಗ್ರಾಮೀಣ ಕ್ಷೇತ್ರದ ಮತದಾರರಿಗೆ ಕುಕ್ಕರ್ ಹಂಚುತ್ತಿದ್ದಾರೆ ಎಂದು ಹೇಳಿದರು.
ರಾಯಚೂರು: ಅಲಿಬಾಬಾ ಮತ್ತು 40 ಕಳ್ಳರು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ JDS ಬಗ್ಗೆ ಮಾತನಾಡದಿದ್ರೆ ಸಿದ್ದರಾಮಯ್ಯಗೆ ತಿಂದ ಅನ್ನ ಅರಗಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ನಮ್ಮದು ಅಲಿಬಾಬಾ ಗ್ಯಾಂಗ್ ಆದರೆ ಕಾಂಗ್ರೆಸ್ ಯಾವ ಗ್ಯಾಂಗ್. ಬೆಳೆದು ಬಂದ ಪಕ್ಷದ ಬಗ್ಗೆ ಟೀಕೆ ಮಾಡಬಾರದು ಅಂತಾ ಹೇಳ್ತಾರೆ. ಈ ಮನುಷ್ಯ ಸಿದ್ದರಾಮಯ್ಯ ಯಾವ ಪಕ್ಷದಿಂದ ಬೆಳೆದು ಬಂದಿದ್ದು, ರಾಮಲಿಂಗಾರೆಡ್ಡಿ ಮೊದಲು ಸಿದ್ದರಾಮಯ್ಯಗೆ ಹೇಳಬೇಕು. ರಾಜ್ಯದಲ್ಲಿ ನಾವು ದರೋಡೆ ಕೆಲಸ ಮಾಡಿಲ್ಲ ಎಂದು ಹೇಳಿದರು.
ರಾಯಚೂರು: ನಮ್ಮ ಕುಟುಂಬದಲ್ಲಿ ಯಾವುದೇ ಸಂಘರ್ಷ ಇಲ್ಲ ಎಂದು ಜಿಲ್ಲೆಯ ದೇವದುರ್ಗ ತಾಲೂಕಿನ ಗಾಣದಾಳದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಪಕ್ಷದ ಲಕ್ಷಾಂತರ ಜನರಿಗೆ ತಲೆ ಕೊಡುವ ಜವಾಬ್ದಾರಿ ನನ್ನದು. ಚನ್ನಪಟ್ಟಣ ಕ್ಷೇತ್ರದಲ್ಲಿ 20 ವರ್ಷದಿಂದ ಗೆಲ್ಲಲು ಆಗಿರಲಿಲ್ಲ. ಆದರೆ ಮಧುಗಿರಿಯಲ್ಲಿ ಅನಿತಾ ಕುಮಾರಸ್ವಾಮಿ ಬೇಡ ಎಂದಿದ್ದೆ. ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಇಲ್ಲವೆಂದು ಒತ್ತಡ ಹಾಕಿದರು ಎಂದು ಹೇಳಿದರು.
ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯನವರಷ್ಟು ನಾವು ಬುದ್ಧಿವಂತರಲ್ಲ. ಆದರೆ ಅಷ್ಟೋ ಇಷ್ಟು ವಿದ್ಯಾವಂತರಾಗಿದ್ದೇವೆ.
ಇಡೀ ಜೀವನ ಕಾಂಗ್ರೆಸ್ ಪಕ್ಷದವರಿಗೆ ಬೈದುಕೊಂಡು ಬಂದರು. ಈ ಹಿಂದೆ ಜೆಡಿಎಸ್ನಲ್ಲಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ. ಹಾಗಿದ್ರೆ ಸಿದ್ದರಾಮಯ್ಯ ಯಾಕೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು ಎಂದು ಕೋಲಾರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಾಗ್ದಾಳಿ ಮಾಡಿದರು.
ಕೋಲಾರ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಳ್ಳೇ ಅಭ್ಯರ್ಥಿ ಹಾಕಿ ಸುಧಾಕರ್ ಸೋಲಿಸ್ತೇವೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಡಾ.ಸುಧಾಕರ್ ತಿರುಗೇಟು ನೀಡಿದ್ದಾರೆ. ನಾನು ಒಳ್ಳೆಯ ಬ್ಯಾಟ್ಸ್ಮನ್. ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ ಯಾರು, ಬೌಲರ್ ಯಾರು ಅಂತಾ ನೋಡಲ್ಲ. ಚೆಂಡಿನ ಗುಣಮಟ್ಟ ನೋಡಿ ಹೊಡೆಯುತ್ತಾರೆ. ನಾನೇನು ಸಣ್ಣ ಮಗು ಅಲ್ಲ. ಹೇಗೆ ಬೌಲಿಂಗ್ ಎದುರಿಸಬೇಕೆಂದು ಗೊತ್ತಿದೆ. ಮೂರು ಬಾರಿ ಗೆದ್ದಿದ್ದೇನೆ, ನನ್ನ ಕ್ಷೇತ್ರದ ಜನರ ಮೇಲೆ ನಂಬಿಕೆ ಇಟ್ಟಿದ್ದೇನೆ. ನಮ್ಮ ಮೇಲೆ ಸಿದ್ದರಾಮಯ್ಯಗೆ ಸ್ವಲ್ಪ ಪ್ರೀತಿ ಇತ್ತು ಎಂದುಕೊಂಡಿದ್ದೆ ಎಂದು ಹೇಳಿದರು.
ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡಲು ಇಚ್ಚಿಸಿದರೇ ನಾನು ಕ್ಷೇತ್ರ ಬಿಟ್ಟುಕೊಡುಲು ಸಿದ್ದ ಎಂದು ಮಂಡ್ಯ ಜೆಡಿಎಸ್ ಶಾಸಕ ಎಂ ಶ್ರೀನಿವಾಸ್ ಹೇಳಿದ್ದಾರೆ. ಮಂಡ್ಯ ತಾಲೂಕಿನ ಶಿವಾರ ಗ್ರಾಮದಲ್ಲಿ ಮಾತನಾಡಿದ ಅವರು ಮಂಡ್ಯದಿಂದ ಗೆದ್ದು ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಸಂತೋಷ. ಕುಮಾರಸ್ವಾಮಿಯಿಂದಲೇ ನಾನು ಬೆಳೆದಿರುವುದು. ಅವರು ಬಂದರೆ ಖಂಡಿತ ಸ್ಥಾನ ಬಿಟ್ಟು ಕೊಡುವೆ. ಕುಮಾರಸ್ವಾಮಿಯವರು ಸ್ಪರ್ಧೆ ಮಾಡಿದರೆ ಖಂಡಿವಾಗಿಯೂ ಸ್ವಾಗತಿಸುವೆ ಎಂದು ಹೇಳಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್ ಪಕ್ಷ ಕಾರಣ. 2006ರಲ್ಲಿ ಬಿಜೆಪಿ ಜೊತೆಗೆ ಹೋಗಿ ಸಿಎಂ ಆದವರು ಯಾರು? ಯಡಿಯೂರಪ್ಪಗೆ ಸಿಎಂ ಸ್ಥಾನ ಕೊಡದೇ ಮೋಸ ಮಾಡಿದ್ಯಾರು? ಅವತ್ತು ಜೆಡಿಎಸ್ ಕೋಮುವಾದಿಗಳಿಗೆ ಬೆಂಬಲಿಸದೇ ಹೋಗಿದ್ದರೆ, ಬಿಜೆಪಿ ಇವತ್ತು ಅಧಿಕಾರದಲ್ಲೇ ಇರುತ್ತಿರಲಿಲ್ಲ ವಿಪಕ್ಷನಾಯಕ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ. ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ಬೆಳೆಯುವುದಕ್ಕೆ JDS ಹಾಗೂ ಹೆಚ್ಡಿ. ಕುಮಾರಸ್ವಾಮಿ ನೇರ ಕಾರಣ ಎಂದರು.
ಬೆಂಗಳೂರು: ಬಿಜೆಪಿ ನಾಯಕರು ಚುನಾವಣಾ ಅಕ್ರಮವೆಸಗಿದ್ದಾರೆಂದು ಆರೋಪಿಸಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಕಾಂಗ್ರೆಸ್ ನಾಯಕರು ದೂರು ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಾಗಿದೆ. ಶಾಸಕ ರಮೇಶ್ ಜಾರಕಿಹೋಳಿ ಒಬ್ಬ ಮತದಾರರಿಗೆ 6 ಸಾವಿರ ರೂಪಾಯಿ ನೀಡುತ್ತೇವೆ ಎಂದಿದ್ದಾರೆ. ಅಂದರೆ 5 ಕೋಟಿ ಮತದಾರರಿಗೆ 30 ಸಾವಿರ ಕೋಟಿ ಹಣ ನೀಡುವ ಆಮಿಷ ನೀಡಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಸವಾರಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದೇವೆ. ಸಿಎಂ ಬೊಮ್ಮಾಯಿ ಮತ್ತು ಅವರ ತಂಡ ಭ್ರಷ್ಟಾಚಾರದ ಪಿತಾಮಹ ಎಂದು ದೂರು ನೀಡಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ನಾಯಕರು ಮತದಾರರಿಗೆ ಆಮಿಷವೊಡ್ಡಲು ಹೊರಟಿದ್ದಾರೆ. ಶೇ 40 ಪ್ರತಿಷತದಷ್ಟು ಕಮಿಷನ್ ಮೂಲಕ ಸಾವಿರಾರು ಕೋಟಿ ಸಂಗ್ರಹ ಮಾಡಿದ್ದಾರೆ. ಒಂದು ಮತಕ್ಕೆ 6 ಸಾವಿರ ರೂ. ಕೊಡುತ್ತೇವೆ ಎಂದು ಜಾರಕಿಹೊಳಿ ಹೇಳಿದ್ದಾರೆ.
ಈ ಸಂಬಂಧ ದಾಖಲೆ ಸಮೇತ ಪೊಲೀಸರಿಗೆ ದೂರು ನೀಡಿದ್ದೇವೆ. ಐಪಿಸಿ ಸೆಕ್ಷನ್ 171(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಪೊಲೀಸರು ಎಫ್ಐಆರ್ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸುತ್ತೇವೆ ಎಂದು ಆಗ್ರಹಿಸಿದರು.
ಹಾಸನ: ಹಾಸನದಿಂದ ಸ್ಪರ್ಧಿಸೋಕೆ ಭವಾನಿ ರೇವಣ್ಣ ಇಚ್ಚಿಸಿದ್ದು, ಆದರೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ನಿರಾಕರಿಸಿದ್ದಾರೆ. ನಿನ್ನೆ (ಜ.24) ಹಾಸನ ಕ್ಷೇತ್ರದಿಂದ ಟಿಕೇಟ್ ನನಗೆ ನೀಡುತ್ತಾರೆ ಎಂದು ಬಹಿರಂಗವಾಗಿಯೇ ಘೋಷಿಸಿದ್ದರು. ಆದರೆ ಕುಮಾರಸ್ವಾಮಿ ಟಿಕೇಟ್ ನೀಡುವುದು ಬೇಡ್ವೇ ಬೇಡ ಅಂತಿದ್ದಾರೆ. ಇನ್ನು ಭವಾನಿ ರೇವಣ್ಣ ಟಿಕೆಟ್ ಬೇಕೇ ಬೇಕು ಅಂತ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆ ಭವಾನಿ ರೇವಣ್ಣ ಸ್ವಯಂ ಟಿಕೆಟ್ ಘೋಷಿಸಿಕೊಂಡಿದ್ದಾರಾ? ಅಲ್ಲದೇ ಮಾಜಿ ಸಚಿವ, ಪತಿ ರೇವಣ್ಣ ಮೂಲಕ ಒತ್ತಡ ಹಾಕಿಸುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮನವೊಲಿಸಲು ರೇವಣ್ಣ ಮೂಲಕ ಕಸರತ್ತು ನಡೆಯುತ್ತಿದೆ.
ದೇವೇಗೌಡರ ಮತ್ತು ಕುಮಾರಸ್ವಾಮಿ ಅವರ ಜೊತೆ ಮಾತಾಡಿ ಟಿಕೆಟ್ ಕೊಡಿಸುವಂತೆ ಭವಾನಿ ರೇವಣ್ಣ ಹಠ ಹಿಡಿದಿದ್ದಾರೆ. ಇನ್ನು ರೇವಣ್ಣ, ಪತ್ನಿಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಮಾತ್ರ ಭವಾನಿ ರೇವಣ್ಣಗೆ ಟಿಕೆಟ್ ನೀಡಲು ಒಪ್ಪುತ್ತಿಲ್ಲ.
ಭವಾನಿ ರೇವಣ್ಣಗೆ ಟಿಕೇಟ್ ಕೊಟ್ಟರೆ ಕುಟುಂಬ ರಾಜಕಾರಣಕ್ಕೆ ಮನ್ನಣೆ ನೀಡಿದ ಆರೋಪಕ್ಕೆ ಗುರಿಯಾಗುವ ಆತಂಕ ಇದೆ. 4 ಭಾರಿ ಶಾಸಕರಾಗಿ ಪಕ್ಷಕ್ಕೆ ದುಡಿದಿದ್ದ ದಿವಂಗತ ಹೆಚ್.ಎಸ್. ಪ್ರಕಾಶ್ ಕುಟುಂಬಕ್ಕೆ ದ್ರೋಹ ಮಾಡಿದರು ಎಂಬ ಕಳಂಕ ಬರುತ್ತದೆ. ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣನೆ ಮಾಡಿದಂತಾಗುತ್ತದೆ ಎಂದು ಜನರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಈ ಹಿನ್ನೆಲೆ ಕುಮಾರಸ್ವಾಮಿ ಹೆಚ್.ಪಿ. ಸ್ವರೂಪ್ಗೆ ಟಿಕೆಟ್ ನೀಡುವ ಮನಸ್ಸು ಮಾಡಿದ್ದಾರೆ. ಇನ್ನು ಹೆಚ್.ಪಿ. ಸ್ವರೂಪ್, ದಿವಂಗತ ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್ ಅವರ ಪುತ್ರ.
ಬೆಂಗಳೂರು: ಬಿಜೆಪಿ ಪಿಎಸ್ಐ ನೇಮಕಾತಿ ಹಗರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 1 ಲಕ್ಷ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿದ್ದರು. Pwd, ಪೊಲೀಸ್ ಸಬ್ಇನ್ಸ್ಪೆಕ್ಟರ್ ಸೇರಿ ಎಲ್ಲಾ ಉದ್ಯೋಗಗಳು ಮಾರಾಟಕ್ಕಿವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈಗಾಗಲೇ ಪಿಎಸ್ಐ ಹಗರಣ ರಾಜ್ಯದ ಜನರಿಗೆ ತಿಳಿಸಿದೆ. ಬಿಜೆಪಿಯವರು ವಿಧಾನಸೌಧವನ್ನು ದುಡ್ದು ಸ್ವೀಕರಿಸಲು ಇಟ್ಟುಕೊಂಡಿದ್ದಾರೆ. 3 ಕೋಟಿಗೆ ಬೇಡಿಕೆ ಇಟ್ಟಿದ್ದಾರೆಂದು ಆರ್.ಡಿ.ಪಾಟಿಲ್ ಆರೋಪಿಸಿದ್ದಾರೆ. ಈ ಬಾರಿ ಚುನಾವಣೆಗೂ ಆರೋಪಿ ಆರ್.ಡಿ.ಪಾಟೀಲ್ ಸ್ಪರ್ಧಿಸಬಹುದು. ನ್ಯಾಯಾಧೀಶರ ನೇತೃತ್ವದಲ್ಲಿ ಪಿಎಸ್ಐ ಹಗರಣ ತನಿಖೆ ಆಗಬೇಕು. ಇಲ್ಲಿದಿದ್ದರೆ ಸಿಎಂ, ಗೃಹ ಸಚಿವರು ಕೇಸ್ ಮುಚ್ಚಿಹಾಕಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು.
ಚಿಕ್ಕಮಗಳೂರು: ದತ್ತಪೀಠ ಮತ್ತು ದತ್ತಮಾಲೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಕ್ಷಮೆಯಾಚಿಸಿದ್ದಾರೆ. ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳಿರುವ ಟಿ.ಡಿ ರಾಜೇಗೌಡ ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾರೆ. ವಿಡಿಯೋದಲ್ಲಿ ಹಳ್ಳಿಗಳಲ್ಲಿ ರೂಡಿಯಿರುವ ಶಬ್ದವನ್ನು ಬಳಸಿದ್ದೇನೆ. ಆ ಶಬ್ದ ಬಳಕೆ ಯಾರ ಸಂಸ್ಕೃತಿಯೂ ಆಗಬಾರದು. ಆ ಶಬ್ದ ಬಳಸಬಾರದಿತ್ತು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕ್ಷಮೆಯಾಚಿಸಿದ್ದಾರೆ.
ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದಾರೆ ಆದ್ದರಿಂದ ಆಕ್ರೋಶವಾಗಿ ಮಾತನಾಡಿದೆ. ದತ್ತಮಾಲೆ ಹಾಕಲಿಲ್ಲ ಎಂದು ದಲಿತ ವಿದ್ಯಾರ್ಥಿಗೆ ಹಲ್ಲೆ ಮಾಡಿದರು. ಹಲ್ಲೆ ವಿಷಯವಾಗಿ ಬುದ್ದಿಹೇಳುವ ಕೆಲಸವನ್ನು ಮಾಡಿದ್ದೇನೆ.
ಶಾಸಕ ಟಿ.ಡಿ.ರಾಜೇಗೌಡ ಅವರ ಮಾತಿಗೆ ಹಿಂದೂ ಸಂಘಟನೆಗಳು ಆಕ್ರೋಶ ಹೊರ ಹಾಕಿದ್ದು, 24 ಗಂಟೆಯೊಳಗೆ ಕ್ಷಮೆ ಕೇಳಬೇಕು ಇಲ್ಲವಾದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಕರೆ ನೀಡಿದ್ದವು.
ಹಾಸನ: ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ವಾಸು ಎಂಬವರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಣಕ್ಕಾಗಿ ಧಮ್ಕಿ ಹಾಕಿರುವ ಆಡಿಯೋ ವೈರಲ್ ಆಗಿದ್ದು, ಇದಕ್ಕೆ ಶಿವಲಿಂಗೇಗೌಡ ಸ್ಪಷ್ಟನೆ ನೀಡಿದ್ದಾರೆ. ನನಗೆ ಸಹಕಾರ ಕೊಡಬೇಕು ಅಂತ ವಾಸುಗೆ ಫೋನ್ ಮಾಡಿದ್ದೆ. ಆದರೆ ಅವನು ರೆಕಾರ್ಡ್ ಮಾಡಿಕೊಳ್ಳುತ್ತಾನೆ ಅಂತ ನನಗೆ ಗೊತ್ತಿರಲಿಲ್ಲ. ಮೊದಲು ಆತ ಮಾತನಾಡಿದ್ದನ್ನು ಬಿಟ್ಟಿದ್ದಾನೆ ಎಂದು ಹೇಳಿದರು.
ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹ್ಯಾಂಡ್ಪೋಸ್ಟ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಏನೋ ಸ್ವಲ್ಪ ಕಷ್ಟದಲ್ಲಿ ಇದ್ದಾನೆ ಸಹಾಯ ಮಾಡಿ ಎಂದು ವಾಸು ಹೇಳಿದ್ದರು. ಕಷ್ಟ, ಸುಖಕ್ಕೆ ಇರುತ್ತಾನೆ ಅಂತ ನಾನೇ ಅವನಿಗೆ 50 ಸಾವಿರ ರೂ. ಕೊಟ್ಟೆ. ಹಣ ಕೊಟ್ಟ ಮರುದಿನ ಚುನಾವಣೆಯಲ್ಲಿ ಬೆಂಬಲ ಕೊಡುತ್ತೇನೆ ಎಂದ್ದಿದ್ದ. ವಿಧಾನಸಭೆಯ ಚುನಾವಣೆಯಲ್ಲಿ ನಿನಗೆ ಬೆಂಬಲ ನೀಡುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ಬೇರೆಯವರಿಗೆ ಬೆಂಬಲ ನೀಡುತ್ತೇನೆ ಎಂದಿದ್ದ. ಪಕ್ಷಕ್ಕೆ ದ್ರೋಹ ಮಾಡಬಾರದು, ಆಮೇಲೆ ನೋಡೋಣ ನಡಿ ಎಂದಿದ್ದೆ. ಆತನಿಗೆ ಯಾರೋ ಪಕ್ಕದಲ್ಲಿ ಹೇಳಿ ಕೊಡುತ್ತಿದ್ದಾರೆ ಎಂದರು.
ಇವನು (ವಾಸು) ಮೂರು ದಿವಸ ಬಂದು ನಮ್ಮ ತೋಟದಲ್ಲಿ ಕೂತ. ರಾಮಚಂದ್ರು ಇವರೆಲ್ಲಾ ಹೇಳಿದರು ಇವನಿಗೆ ಉಪಾಧ್ಯಕ್ಷ ತಪ್ಪಿದೆ, ಏನೋ ಸ್ವಲ್ಪ ಕಷ್ಟದಲ್ಲಿ ಇದ್ದಾನೆ ಸಹಾಯ ಮಾಡಿ ಅಂದರು. ನಾನು ಮೂರು ದಿವಸ ಗಮನಕ್ಕೆ ಹಾಕಿಕೊಂಡಿರಲಿಲ್ಲ. ಆಮೇಲೆ ಕರೆದು ಕಷ್ಟ, ಸುಖ ಇರುತ್ತೇವೆ ಅಂತ ಹೇಳಿ ತಗಳಪ್ಪಾ, ಎಲ್ಲಾ ಹೇಳ್ತಾ ಇದ್ದಾರೆ ಅಂತ ಹೇಳಿ ನಾನೇ ಅವನಿಗೆ 50 ಸಾವಿರ ದುಡ್ಡು ಕೊಟ್ಟೆ ಎಂದು ಹೇಳಿದರು.
ದುಡ್ಡು ಕೊಟ್ಟ ಮಾರನೇ ದಿನ ಬೆಳಿಗ್ಗೆ ಬಂದು ಅಣ್ಣಾ ಎಂಎಲ್‌ಎಗೆ ನಿನಗೆ ಹಾಕುತ್ತೇವೆ, ಎಂಪಿಗೆ ಬೇರೆಯವರಿಗೆ ಹಾಕುತ್ತೇವೆ ಅಂದ. ನಾನು ಹೇಳಿದೆ ಹಂಗೆಲ್ಲ ಪಾರ್ಟಿಗೆ ದ್ರೋಹ ಮಾಡಬಾರದು ಕಣಯ್ಯ. ಒಂದು ಪಾರ್ಟಿ ಅಂದ ಮೇಲೆ ಒಂದೆ ಕಡೆ ಇರಬೇಕು ಅಂತ. ಈಗ ಯಾಕೆ ಮೊದಲು ಎಂಎಲ್‌ಎ ಮುಗ್ಸಣ ನಡಿ ಆಮೇಲೆ ಇವೆಲ್ಲಾ ನೋಡೋಣ ನಡಿ ಅಂತ ಹೇಳ್ದೆ. ಹೇಳಿ ಆದ್ಮೇಲೆ ಅವರ ಮನೆಗೆ ಕರ್ಕಂಡು ಹೋಗಿ ಊಟನು ಹಾಕ್ದಾ, ಚೆನ್ನಾಗೇ ಇದ್ದ. ಈಗ್ಲೂ ಏನು ಆಗಿಲ್ಲ. ಚೆನ್ನಾಗಿದ್ದಾನೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಹಳ್ಳಿಹಕ್ಕಿ, ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಫೆಬ್ರವರಿ 1ರಂದು ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ. ವಿಶ್ವನಾಥ್ ಜೊತೆ ಮಾಜಿ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಕಾಂಗ್ರೆಸ್ ಸೇರಲಿದ್ದಾರೆ.
ಚಿಕ್ಕಮಗಳೂರು: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಶಾಸಕ ವೈ. ಎಸ್. ವಿ ದತ್ತಾಗೆ ಜೆಡಿಎಸ್ ಬಿಗ್ ಶಾಕ್ ನೀಡಿದೆ. ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಉಪಸಭಾಪತಿ ದಿ S.L ಧರ್ಮೇಗೌಡರ ಮಗನಿಗೆ ಟಿಕೆಟ್ ಬಹುತೇಕ ಫೈನಲ್ ಆಗಿದೆ. ಸೋನಲ್ ಗೌಡ ಜೊತೆ ಮಾಜಿ ಮುಖ್ಯಮಂತ್ರಿ H.D ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಮಾಜಿ ಉಪಸಭಾಪತಿ SL ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಧರ್ಮೇಗೌಡರ ಸಾವಿನ ಅನುಕಂಪ, H.D ದೇವೇಗೌಡರ ವರ್ಚಸ್ಸುನ್ನ ಬಳಸಿಕೊಳ್ಳಲು ಜೆಡಿಎಸ್ ಪ್ಲಾನ್ ರೂಪಿಸಿದೆ.
ಬೆಂಗಳೂರು: ಕಾಂಗ್ರೆಸ್ ಇಂದು (ಜ.25) ಹೊಸ ಅಸ್ತ್ರದ ಮೂಲಕ ಫೀಲ್ಡ್ಗಿಳಿಯಲು ಸಿದ್ದವಾಗಿದೆ. ಬಿಜೆಪಿ ನಾಯಕರ ವಿರುದ್ಧ ಚುನಾವಣಾ ಅಕ್ರಮ ನಡೆಸಿದೆ ಎಂದು ಬೆಂಗಳೂರಿನಲ್ಲಿಂದು ಕಾಂಗ್ರೆಸ್ ನಾಯಕರು ದೂರು ದಾಖಲಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಹೈಗ್ರೌಂಡ್ಸ್ ಠಾಣೆಯಲ್ಲಿ ವಿಪಕ್ಷನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಡಿ.ಕೆ.ಶಿವಕುಮಾರ್ ಹಾಗೂ ಇತರ ನಾಯಕರು ದೂರು ನೀಡಲು ಮುಂದಾಗಿದ್ದಾರೆ.
Published On - 9:46 am, Wed, 25 January 23