ಕೋಲಾರದಲ್ಲಿ ರಾಜಕೀಯ ಮೇಲಾಟ, ಟಗರು ಲೆಕ್ಕಾಚಾರ ಉಲ್ಟಾಪಲ್ಟಾ: ಸಿದ್ದರಾಮಯ್ಯಗೆ ಶುರುವಾಯ್ತು ಮತ್ತೊಂದು ಆತಂಕ
ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಮಾಡುತ್ತಿದ್ದಂತೆಯೇ ಕೋಲಾರ ರಾಜಕೀಯದಲ್ಲಿ ಆಂತರಿಕ ಬೆಳವಣಿಗೆಗಳು ಶುರುವಾಗಿವೆ. ಇದರಿಂದ ಸಿದ್ದರಾಮಯ್ಯ ಹಾಕಿದ್ದ ಲೆಕ್ಕಾಚಾರ ಉಲ್ಟಾಪಲ್ಟಾವಾಗಿದೆ. ಇದರಿಂದ ಸಿದ್ದುಗೆ ಮತ್ತೊಂದು ಆತಂಕ ಶುರುವಾಗಿದೆ.
ಬೆಂಗಳೂರು/ಕೋಲಾರ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ರಾಜಕೀಯ ಮೇಲಾಟ ಜೋರಾಗಿದೆ. ಅದರಲ್ಲೂ ಈ ಬಾರಿ ಸಿದ್ದರಾಮಯ್ಯ (Siddaramaiah) ಸ್ಪರ್ಧೆಗೆ ಮುಂದಾಗಿರುವ ಕೋಲಾರ (Kolar)ಕಣ ದಿನದಿಂದ ದಿನಕ್ಕೆ ರಂಗೇರಿದ್ದು, ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಇದೊಂದು ಬಾರಿ ಸಿಎಂ ಆಗಲೇಬೇಕೆಂದು ಜಿದ್ದಿಗೆ ಬಿದ್ದಿರುವ ಸಿದ್ದರಾಮಯ್ಯ ಅವರನ್ನು ಹೇಗಾದರೂ ಮಾಡಿ ಸೋಲಿಸುಲು ಬಿಜೆಪಿ ಹಾಗೂ ಜೆಡಿಎಸ್ ರಣತಂತ್ರಗಳನ್ನು ಹೆಣೆಯುತ್ತಿವೆ. ಅಳೆದು ತೂಗಿ ಕೋಲಾರ ಕಣದಿಂದ ಸ್ಪರ್ಧಿಸಲು ನಿರ್ಧಾರ ಮಾಡಿರೋ ಸಿದ್ದುಗೆ ಈಗ ಮತ್ತೆ ಕೋಲಾರದ ಭಯ ಕಾಡ್ತಿದ್ಯಾ..? ಇಂಥದ್ದೊಂದು ಪ್ರಶ್ನೆ ಕೋಲಾರದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಸೋಲಿಸಲು ಅಖಾಡಕ್ಕಿಳಿದ ಸಂಘಟನಾ ಚತುರ, ಕೋಲಾರದಲ್ಲಿ ಬಿಜೆಪಿ ಗೆಲುವಿಗೆ ಸಂತೋಷ್ ‘ಸೂತ್ರ’
ಸಿದ್ದು ಕೋಲಾರ ಹಾದಿ ಚಿನ್ನವೋ..? ಮುಳ್ಳೋ..?
ಹೌದು…. ಸಿದ್ದರಾಮಯ್ಯ ಅಗ್ನಿ ಪರೀಕ್ಷೆ ಎದುರಿಸುವುದಕ್ಕೆ ಚಿನ್ನದ ನಾಡಿನತ್ತ ಮುಖ ಮಾಡಿದ್ದಾರೆ. ಆದ್ರೆ, ಕೋಲಾರದ ಚಿನ್ನದ ಮಣ್ಣು ಸಿದ್ದು ಸ್ಪರ್ಧೆಗೆ ಹದವಾಗಿದ್ಯಾ? ಇಲ್ಲ ಮುಳ್ಳಿನಂತೆ ಚುಚ್ಚುತ್ತಿದ್ಯಾ ಎನ್ನುವ ಅನುಮಾನ ಶುರುವಾಗಿದೆ. ಯಾಕಂದ್ರೆ, ಸುಲಭವಾಗಿ ಸಿಹಿ ಹೋಳಿಗೆ ಊಟ ಮಾಡಲು ಮಿಲ್ಕ್ ಆ್ಯಂಡ್ ಸಿಲ್ಕ್ ಸಿಟಿ ಕೋಲಾರಕ್ಕೆ ಬಂದ ಸಿದ್ದು, ತಮ್ಮ ಓಟಕ್ಕೆ ಬ್ರೇಕ್ ಹಾಕಿಕೊಳ್ಳಬೇಕಾ ಎನ್ನುವ ಚಿಂತನೆಗೆ ಬಿದ್ದಂತೆ ಕಾಣುತ್ತಿದೆ. ಇದಕ್ಕೆ ಕಾರಣ ಕೋಲಾರದಲ್ಲಿ ನಡೆಯುತ್ತಿರುವ ಆಂತರಿಕ ಬೆಳವಣಿಗೆಗಳು.
ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ದವೇ ರಾಜಕೀಯ ಮೇಲಾಟಗಳು ಶುರುವಾಗಿವೆಯಂತೆ. ಸಿದ್ದರಾಮಯ್ಯ ಗೆಲ್ಲಬೇಕು ಎಂದು ಐದು ಮಂದಿ ಹೆಗಲು ಕೊಟ್ಟು ನಿಂತರೆ, ದಿಕ್ಕು ದಿಕ್ಕುಗಳಿಂದಲೂ ಟಗರು ಹಣಿಯೋಕೆ ಬಿಗ್ ಸ್ಕೆಚ್ ರೆಡಿಯಾದಂತೆ ಕಾಣುತ್ತಿದೆ. ಹೀಗಾಗಿಯೇ ಸಿದ್ದರಾಮಯ್ಯಗೆ ಆತಂಕ ಶುರುವಾಗಿದೆಯಂತೆ.
ಇದನ್ನೂ ಓದಿ: ಕೋಲಾರದಲ್ಲಿ JDS ಅಭ್ಯರ್ಥಿ ಗೆಲ್ಲೋದು ಪಕ್ಕಾ, ಬರೆದಿಟ್ಟುಕೊಳ್ಳಿ ಎಂದ H.D.ಕುಮಾರಸ್ವಾಮಿ
ಸಿದ್ದುಗೆ ಕೋಲಾರ ಆತಂಕ!
ಸಿದ್ದುಗೆ ಕಾಡುತ್ತಿರುವ ಮೊದಲ ಆತಂಕವೆಂದರೆ ಅಹಿಂದ ಮತಗಳ ವಿಭಜನೆ. ಕುರುಬ, ದಲಿತ ಅಲ್ಪಸಂಖ್ಯಾತ ಮತಗಳು ಡಿವೈಡ್ ಆದ್ರೆ ಗೆಲುವು ಕಷ್ಟ ಎಂದು ಯೋಚಿಸುತ್ತಿದ್ದಾರೆ. ಯಾಕಂದ್ರೆ, ಕೋಲಾರದಲ್ಲಿ ಕುರುಬ ಸಮುದಾಯ ಸಿದ್ದುಗೆ ವಿರುದ್ಧವಾಗಿದೆ. ಸ್ಥಳೀಯವಾಗಿ ಕಾಂಗ್ರೆಸ್ ವಿರುದ್ಧ ದಲಿತರು, ಮುಸ್ಲಿಮರು ಬೇಸರ ಹೊರಹಾಕಿದ್ದಾರೆ. ಅಲ್ಲದೇ, ಕಾಂಗ್ರೆಸ್‌ನ ಒಳಬೇಗುದಿ ಇನ್ನೂ ಕುದಿಯುತ್ತಿದೆ. ಇದೆಲ್ಲವೂ ನಿನ್ನೆಯ ಸಮಾವೇಶದಲ್ಲಿ ಬಟಾ ಬಯಲಾಗಿದೆ. ನಿನ್ನೆಯ ಸಮಾವೇಶದಲ್ಲಿ ಸಿದ್ದು ಹಾಕಿದ್ದ ಲೆಕ್ಕಾಚಾರ ಉಲ್ಟಾಪಲ್ಟಾವಾಗಿದೆ. ಹೀಗಾಗೇ ಸಿದ್ದು ನಿನ್ನೆ ಸಮಾವೇಶದಲ್ಲಿ ಕ್ಷೇತ್ರ ಆಯ್ಕೆಯ ವಿಚಾರವನ್ನ ತುಂಬಾ ಗಟ್ಟಿಯಾಗಿ ಹೇಳದೇ, ಹೈಕಮಾಂಡ್ ತೀರ್ಮಾನ ಎಂದಿದ್ದಾರೆ ಅನ್ಸುತ್ತೆ.
ಕೋಲಾರದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಸಿದ್ದ ಸಿದ್ದರಾಮಯ್ಯ, 50 ಸಾವಿರ ಜನ ಸೇರಿಸಿ ಎದುರಾಳಿಗೆ ಟಕ್ಕರ್ ಕೊಡುವ ಪ್ಲ್ಯಾನ್‌ನಲ್ಲಿದ್ದರು. ಆದ್ರೆ, ನಿರೀಕ್ಷೆಯಂತೆ ಜನ ಸೇರಿಲ್ಲ. ಮುನಿಯಪ್ಪ ಬಣದ ಮುನಿಸು ಕೂಡಾ ಧಗಧಗಿಸುತ್ತಿದೆ. ಹೀಗಾಗಿ ಕೋಲಾರ ಸಿದ್ದುಗೆ ಕಷ್ಟ ಕಷ್ಟ ಎನಿಸತೊಡಗಿದೆಯಂತೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ