Siddaramaiah: ಬಿಜೆಪಿಯವರು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ: ಸಿದ್ದರಾಮಯ್ಯ
ಅಧಿಕಾರಕ್ಕೆ ಬಂದಾಗ ಏನು ಜಾರಿ ಮಾಡುತ್ತೇವೆಯೋ ಅದನ್ನೇ ಹೇಳುತ್ತಿದ್ದೇವೆ. ಸಿ.ಟಿ.ರವಿ ಅಧಿಕಾರಕ್ಕೆ ಬರ್ತೀವಿ ಅಂತಾ ಹಗಲುಗನಸು ಕಾಣುತ್ತಿದ್ದಾರೆ. ಬಿಜೆಪಿಯವರು (BJP) ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದಾರೆ ಸಿದ್ದರಾಮಯ್ಯ.
ಈ ಬಾರಿ ನಾವು ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು ನಾವು ಉಚಿತ ಭಾಗ್ಯಗಳನ್ನು ಘೋಷಣೆ ಮಾಡುತ್ತಿಲ್ಲ. ಅಧಿಕಾರಕ್ಕೆ ಬಂದಾಗ ಏನು ಜಾರಿ ಮಾಡುತ್ತೇವೆಯೋ ಅದನ್ನೇ ಹೇಳುತ್ತಿದ್ದೇವೆ. ಸಿ.ಟಿ.ರವಿ ಅಧಿಕಾರಕ್ಕೆ ಬರ್ತೀವಿ ಅಂತಾ ಹಗಲುಗನಸು ಕಾಣುತ್ತಿದ್ದಾರೆ. ಬಿಜೆಪಿಯವರು (BJP) ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರೆ.
ಸುಧಾಕರ್ ನೇಣು ಹಾಕಿಕೊಳ್ಳುವುದು ಬೇಡ
ಚಾಮರಾಜನಗರದಲ್ಲಿ 2020ರಲ್ಲಿ ಆಕ್ಸಿಜನ್ ಕೊರತೆಯಿಂದ 36 ಮಂದಿ ಬಲಿಯಾಗಿದ್ದರೆನ್ನಲಾದ ಘಟನೆಯಲ್ಲಿ ಸರ್ಕಾರದ ನಿರ್ಲಕ್ಷ್ಯತೆ ಇದೆ ಎಂಬುದು ಕಾಂಗ್ರೆಸ್ ಆರೋಪ. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆ ವ್ಯಾಪಕ ಭ್ರಷ್ಟಾಚಾರ ನಡೆಸಿತು ಎಂದೂ ಕೈ ಪಾಳಯ ಪದೇ ಪದೇ ಆರೋಪ ಮಾಡುತ್ತಾ ಬಂದಿದೆ. ಈ ಬಗ್ಗೆ ನಿನ್ನೆ ಪ್ರತಿಕ್ರಿಯಿಸಿದ್ದ ಆರೋಗ್ಯ ಸಚಿವ ಡಾ. ಸುಧಾಕರ್, “ಹಗರಣ ಮಾಡಿರುವುದು ಸಾಬೀತಾದರೆ ಪಬ್ಲಿಕ್ನಲ್ಲಿ ನೇಣಿಗೆ ಹಾಕಿ” ಎಂದು ಸವಾಲು ಹಾಕಿದ್ದರು. ಈ ಹೇಳಿಕೆಗೆ ಸಿದ್ದರಾಮಯ್ಯ ಟಾಂಟ್ ನೀಡಿದ್ದಾರೆ. “ಸುಧಾಕರ್ ನೇಣು ಹಾಕಿಕೊಳ್ಳುವುದು ಬೇಡ. ಆತ ಬದುಕಿರಲಿ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ 36 ಜನರು ಮೃತಪಟ್ಟರು. ಆದರೆ, ಮೂವರು ಮಾತ್ರ ಸತ್ತಿದ್ದು ಎಂದು ಸುಧಾಕರ್ ಸುಳ್ಳು ಹೇಳುತ್ತಿದ್ದ. ಆತ ಸಚಿನಾಗಲು ಲಾಯಕ್ಕಿಲ್ಲ. ಮೊದಲು ಆರೋಗ್ಯ ಇಲಾಖೆಯಲ್ಲಿನ ಹಗರಣದ ಬಗ್ಗೆ ತನಿಖೆ ಆಗಲಿ. ಆಗ ಸುಧಾಕರ್ ವಿರುದ್ಧದ ಎಲ್ಲಾ ಆರೋಪಗಳು ಸಾಬೀತಾಗುತ್ತದೆ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಆ ಸಾಕ್ಷ್ಯ ಚಿತ್ರದ ಬಗ್ಗೆ ನನಗೆ ಗೊತ್ತಿಲ್ಲ
2022ರ ಗುಜರಾತ್ ಗಲಭೆ ಘಟನೆಗಳಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ನೇರ ಪಾತ್ರ ಇದೆ ಎಂಬಂತೆ ಬಿಂಬಿಸಿ ಬಿಬಿಸಿ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಆ ಸಾಕ್ಷ್ಯ ಚಿತ್ರದಲ್ಲಿ ಮೋದಿ ಮೋಸ ಮಾಡಿರುವುದನ್ನು ತೋರಿಸಿರಬಹುದು ಎಂದು ಕುಟುಕಿದ್ದಾರೆ.
“ಆ ಸಾಕ್ಷ್ಯ ಚಿತ್ರದ ಬಗ್ಗೆ ನನಗೆ ಗೊತ್ತಿಲ್ಲ. ನರೇಂದ್ರ ಮೋದಿ ಸುಳ್ಳು ಹೇಳಿರುವುದನ್ನು, ಮೋಸ ಮಾಡಿರುವುದನ್ನು ಡಾಕ್ಯುಮೆಂಟರಿಯಲ್ಲಿ ತೋರಿಸಿರಬಹುದು. ಅದಕ್ಕಾಗಿಯೇ ಅದರ ಪ್ರದರ್ಶನಕ್ಕೆ ತಡೆಹಿಡಿದಿರಬಹುದು” ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.
2002ರಲ್ಲಿ ಗೋಧ್ರಾ ರೈಲು ದುರಂತದ ಬಳಿಕ ಗುಜರಾತ್ ರಾಜ್ಯಾದ್ಯಂತ ಸಂಭವಿಸಿದ್ದ ಭೀಕರ ಗಲಭೆ ಘಟನೆಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಅವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದು, ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿ ನಡೆದ ಗಲಭೆ ಘಟನೆಗಳಿಗೆ ಅಂದಿನ ರಾಜ್ಯ ಸರ್ಕಾರ ಕುಮ್ಮಕ್ಕು ಕೊಟ್ಟಿತ್ತು ಎಂಬ ಆರೋಪ ಇದೆ. ಇದೇ ಆಧಾರದಲ್ಲಿ ಬಿಬಿಸಿ ಸಾಕ್ಷ್ಯ ಚಿತ್ರ ತಯಾರಿಸಿ ಬಿಡುಗಡೆ ಮಾಡಿದೆ. ಈ ಡಾಕ್ಯುಮೆಂಟರಿಯ ಪ್ರಸಾರವನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ. ಅಕ್ರಮವಾಗಿ ಈ ಸಾಕ್ಷ್ಯ ಚಿತ್ರ ಪ್ರಸಾರ ಮಾಡಿದವರನ್ನು ಬಂಧಿಸಲಾಗುತ್ತಿದೆ.
ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ