ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಘೋಷಣೆಯಾಗಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಕಣಕ್ಕಳಿಯುವ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್ಗೆ ಉಳಿದ ಕ್ಷೇತ್ರದ ಟಿಕೆಟ್ ಹಂಚಿಕೆ ತಲೆನೋವಾಗಿ ಪರಿಣಮಿಸಿದೆ. ಹಾಸನ, ಬೆಳಗಾವಿ, ಕಲಬುರಗಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೈ ನಾಯಕರು ನಡುವೆಯೇ ಭಾರೀ ಪೈಪೋಟಿ (Congress Ticket Fight) ಏರ್ಪಟ್ಟಿದೆ. ಹಾಸನ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಹೊಳೆನರಸೀಪುರಕ್ಕೆ ಶ್ರೇಯಸ್ ಪಟೇಲ್, ಸಕಲೇಶಪುರ ಮೀಸಲು ಕ್ಷೇತ್ರಕ್ಕೆ ಮುರಳಿ ಮೋಹನ್ ಹೆಸರು ಘೋಷಣೆ ಆಗಿದೆ. ಆದರೆ ಅರಕಲಗೂಡು ಕ್ಷೇತ್ರದಲ್ಲಿ ಟಿಕೇಟ್ಗಾಗಿ ಭಾರೀ ಪೈಪೋಟಿ ಇದೆ. ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಆಪ್ತ ಕೃಷ್ಣೇಗೌಡ ಟಿಕೇಟ್ ನಿರೀಕ್ಷೆಯಲ್ಲಿದ್ದರೆ, ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಆಪ್ತ ಮಾಜಿ ಪೊಲೀಸ್ ಅಧಿಕಾರಿ ಶ್ರೀಧರ್ ಗೌಡ ಕೂಡ ಟಿಕೇಟ್ ಸಿಗುವ ನಿರೀಕ್ಷೆ ಹೊಂದಿದ್ದಾರೆ. ಇವರಿಬ್ಬ ನಡುವೆ ಜೆಡಿಎಸ್ ಶಾಸಕ ಎಟಿ ರಾಮಸ್ವಾಮಿ ಕೂಡ ಕಾಂಗ್ರೆಸ್ ಟಿಕೇಟ್ಗಾಗಿ ಕಾಯುತ್ತಿದ್ದಾರೆ.
ಶ್ರವಣಬೆಳಗೊಳ ಕ್ಷೇತ್ರದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ, ಮಾಜಿ ಸಚಿವ ದಿವಂಗತ ಎಚ್.ಸಿ.ಶ್ರೀಕಂಠಯ್ಯ ಮೊಮ್ಮಗ ದೀಪು, ಜತ್ತೇನಹಳ್ಳಿ ರಾಮಚಂದ್ರ ನಡುವೆ ಪೈಪೋಟಿ ಇದೆ. ಬೇಲೂರು ಕ್ಷೇತ್ರದಲ್ಲೂ ಕೂಡ ಕಾಂಗ್ರೆಸ್ ಟಿಕೇಟ್ಗಾಗಿ ಭಾರೀ ಪೈಪೋಟಿ ನಡೆಯುತ್ತಿದ್ದು, ಮಾಜಿ ಸಚಿವ ಬಿ ಶಿವರಾಂ, ಮಾಜಿ ಶಾಸಕ ದಿವಂಗತ ರುದ್ರೇಶ್ ಗೌಡರ ಸಹೋದರ ಕೃಷ್ಣೇಗೌಡ, ಉದ್ಯಮಿ ರಾಜಶೇಖರ್ ನಡುವೆ ಯಾರಿಗೆ ಟಿಕೇಟ್ ಸಿಗಲಿದೆ ಎಂಬ ಕುತೂಹಲ ಇದೆ.
ಹಾಸನ ಕ್ಷೇತ್ರದಲ್ಲಿ ಬನವಾಸೆ ರಂಗಸ್ವಾಮಿ, ಬಾಗೂರು ಮಂಜೇಗೌಡ ಟಿಕೇಟ್ಗಾಗಿ ಅರ್ಜಿ ಹಾಕಿದ್ದು, ಇಲ್ಲಿನ ಜೆಡಿಎಸ್ ಟಿಕೇಟ್ ಆಕಾಂಕ್ಷಿ ಸ್ವರೂಪ್ಗೆ ಜೆಡಿಎಸ್ ಟಿಕೇಟ್ ಸಿಗದಿದ್ದರೆ ಅವರು ಕಾಂಗ್ರೆಸ್ ಸೇರಬಹುದು ಎಂಬ ಸಾಧ್ಯತೆ ಹಿನ್ನೆಲೆಯಲ್ಲಿ ಕೈ ನಾಯಕರು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ. ಅರಸೀಕೆರೆ ಕ್ಷೇತ್ರದಿಂದ ಬಹುತೇಕ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅಭ್ಯರ್ಥಿ ಆಗಲಿದ್ದು, ಈ ವಿದಾನಸಭೆ ಅವಧಿ ಮುಗಿದ ಬಳಿಕ ಅವರು ರಾಜಿನಾಮೆ ನೀಡಿ ಕಾಂಗ್ರೆಸ್ ಸೆರುತ್ತಾರೆ. ನಂತರ ಅವರ ಹೆಸರು ಘೋಷಣೆ ಆಗುವ ಸಾಧ್ಯತೆ ಇದೆ.
ಮೈಸೂರು ಜಿಲ್ಲೆಯಲ್ಲಿ ಸಿದ್ದರಾಮಯ್ಯ ಅವರು ಸೋಲುಂಡ ಚಾಮುಂಡೇಶ್ವರಿ ಕ್ಷೇತ್ರ, ಚಾಮರಾಜನಗರ ಕ್ಷೇತ್ರ, ಕೃಷ್ಣರಾಜ ಕ್ಷೇತ್ರಕ್ಕೆ ಅಭ್ಯರ್ಥಿ ಪ್ರಕಟಿಸದ ಕಾಂಗ್ರೆಸ್ ಪಕ್ಷಕ್ಕೆ 13 ಜನ ಆಕಾಂಕ್ಷಿಗಳನ್ನು ಸಂಭಾಳಿಸುವುದು ತಲೆನೋವಾಗಿದೆ. ಚಾಮರಾಜ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬೆಂಬಲಿಗ ಮತ್ತು ಡಿಕೆ ಶಿವಕುಮಾರ್ ಬೆಂಬಲಿಗರ ನಡುವೆ ಪೈಪೋಟಿ ಏರ್ಪಟ್ಟಿದೆ. ಮಾಜಿ ಶಾಸಕ ವಾಸು ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್ ಮಾಡಿದರೆ, ಬೆಂಬಲಿಗ ಹರೀಶ್ ಗೌಡಗೆ ಟಿಕೆಟ್ ಕೊಡಿಸಲು ಸಿದ್ದರಾಮಯ್ಯ ಒಲವು ತೋರಿದ್ದಾರೆ. ಕೃಷ್ಣರಾಜ ಕ್ಷೇತ್ರದಲ್ಲಿ ಕಾದು ನೋಡುವ ತಂತ್ರ ಅನುಸರಿಸಲಾಗಿದೆ.
ಕಲಬುರಗಿ ಜಿಲ್ಲೆಯ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಅಫಜಲಪುರ, ಕಲಬುರಗಿ ದಕ್ಷಿಣ, ಕಲಬುರಗಿ ಗ್ರಾಮೀಣ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆಯಾಗಿಲ್ಲ. ಅಫಜಲಪುರದಲ್ಲಿ ಹಾಲಿ ಶಾಸಕ ಎಂವೈ ಪಾಟೀಲ್ ಚುನಾವಣೆ ನಿವೃತ್ತಿ ಹಿನ್ನೆಲೆ ಅವರು ತನ್ನ ಪುತ್ರನಿಗೆ ಟಿಕೆಟ್ ಕೇಳಿದ್ದಾರೆ. ಮತ್ತೊಂದಡೆ ಜೆ.ಎಂ ಕೊರಬು ಸೇರಿದಂತೆ ಎಂಟು ಜನರಿಂದ ಟಿಕೆಟ್ಗಾಗಿ ಅರ್ಜಿ ಸಲ್ಲಿಕೆಯಾಗಿದೆ. ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಮಾಜಿ ಸಚಿವ ರೇವುನಾಯಕ್ ಬೆಳಮಗಿ ಮತ್ತು ವಿಜಯ್ ಕುಮಾರ್ ನಡುವೆ ಟಿಕೆಟ್ ಪೈಟ್ ನಡೆಯುತ್ತಿದ್ದರೆ, ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಆರು ಮಂದಿ ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದು, ಸಂತೋಷ ಬಿಲಗುಂದಿ, ಅಲ್ಲಪ್ರಭು ಪಾಟೀಲ್, ಶರಣು ಮೋದಿ ನಡುವೆ ಟಿಕೆಟ್ ಪೈಟ್ ಏರ್ಪಟ್ಟಿದೆ.
ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಿಗೆ ಮಾತ್ರ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆಯಾಗಿದೆ. ಉಳಿದ 9 ಕ್ಷೇತ್ರಗಳಿಗಾಗಿ ಟಿಕೆಟ್ ಫೈಟ್ ನಡೆಯುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಬಣ ಮತ್ತು ಡಿಕೆ ಶಿವಕುಮಾರ್ ಬಣದ ಬೆಂಬಲಿಗರ ನಡುವೆ ತೀವ್ರ ಪೈಪೋಟಿ ಇದೆ. ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಗಜಾನನ ಮಂಗಸೂಳಿ, ಧರೇಪ್ಪ ಠಕ್ಕನ್ನವರ, ರಾಯಬಾಗ ಮತಕ್ಷೇತ್ರದಲ್ಲಿ ಮಹಾವೀರ ಮೋಹಿತೆ ಮತ್ತು ಶಂಭು ಕಲ್ಲೋಳಕರ್, ನಿಪ್ಪಾಣಿ ಮತಕ್ಷೇತ್ರದಲ್ಲಿ ಕಾಕಾಸಾಬ್ ಪಾಟೀಲ್, ಉತ್ತಮ ಪಾಟೀಲ್ ನಡುವೆ ಟಿಕೆಟ್ ಪೈಪೋಟಿ ನಡೆಯುತ್ತಿದೆ.
ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಡಿ.ಬಿ ಇನಾಮದಾರ್, ಬಾಳಾಸಾಹೇಬ್ ಪಾಟೀಲ್, ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ವಿಶ್ವಾಸ ವೈದ್ಯ, ಸೌರಭ ಚೋಪ್ರಾ, ಬೆಳಗಾವಿ ಉತ್ತರದಲ್ಲಿ ಫೀರೋಜ್ ಸೇಠ್, ಆಸೀಫ್ ಸೇಠ್, ಅಜೀಂ ಪಟ್ವೆಗರ್, ಕಿರಣ್ ಸಾಧುನವರ್, ಬೆಳಗಾವಿ ದಕ್ಷಿಣದಲ್ಲಿ ಪ್ರಭಾವತಿ ಚಾವಡಿ, ರಮೇಶ್ ಗೋರಲ್, ಅರಬಾವಿ ಕ್ಷೇತ್ರದಲ್ಲಿ ಭೀಮಪ್ಪ ಗಡಾದ್, ಲಖನ್ ಸವಸುದ್ದಿ, ಅರವಿಂದ್ ದಳವಾಯಿ, ಗೋಕಾಕ್ ಕ್ಷೇತ್ರದಲ್ಲಿ ಅಶೋಕ ಪೂಜಾರಿ, ಡಾ.ಮಹಾಂತೇಶ್ ಕಡಾಡಿ, ಚಂದ್ರಶೇಖರ ಕೊಣ್ಣೂರ, ಪ್ರಕಾಶ್ ಬಾಗೋಜಿ ನಡುವೆ ಟಿಕೆಟ್ ಫೈಟ್ ಏರ್ಪಟ್ಟಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:44 am, Mon, 27 March 23