ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಈಗಾಗಲೇ ದಿನಾಂಕ ನಿಗದಿಯಾಗಿದೆ. ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (JDS) ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಆದ್ರೆ ಆಡಳಿತರೂಢ ಬಿಜೆಪಿ ಇನ್ನೂ ಕೂಡ ಪಟ್ಟಿ ಬಿಡುಗಡೆ ಮಾಡಿಲ್ಲ. ಸದ್ಯ ಬಿಜೆಪಿ ಕಮಿಟಿ ಸಭೆ ಮುಕ್ತಾಯವಾಗಿದ್ದು ಅಭ್ಯರ್ಥಿಗಳ ಬಗ್ಗೆ ಚರ್ಚೆ ಮುಗಿದಿದೆ. ಪಟ್ಟಿ ಕೂಡ ಬಹುತೇಕ ಸಿದ್ಧವಾಗಿದೆ. ಇನ್ನು ಇಂದು ಜೆಡಿಎಸ್ನ ಎರಡನೇ ಪಟ್ಟಿ ಬಿಡುಗಡೆಯಾಗುತ್ತಿದ್ದು ಹಾಸನ ಕ್ಷೇತ್ರದ ಬಗ್ಗೆ ಕುತೂಹಲ ಹೆಚ್ಚಿದೆ. ಪತ್ನಿ ಭವಾನಿಗೇ ಹಾಸನ ಟಿಕೆಟ್ (Hassan Ticket) ಕೊಡಿಸಬೇಕೆಂದು ರೇವಣ್ಣ ಹಠಕ್ಕೆ ಬಿದ್ದಿದ್ರೆ, ಕುಮಾರಸ್ವಾಮಿ ಮಾತ್ರ ಸ್ವರೂಪ್ ಪರವೇ ಬ್ಯಾಟ್ ಮಾಡಿದ್ದಾರೆ. ಹೀಗಾಗಿ ಈ ಟಿಕೆಟ್ ಯಾರಿಗೆ ಸೇರುತ್ತೆ ಎಂಬುವುದು ಕುತೂಹಲ ಕೆರಳಿಸಿದೆ. ಇಂದು ಸಂಜೆ ಕಾಂಗ್ರೆಸ್ ನಾಯಕರು ದೆಹಲಿಗೆ ಹಾರಲಿದ್ದು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದರಲ್ಲಿ ಎರಡನೇ ಪಟ್ಟಿಯ ಅಭ್ಯರ್ಥಿಗಳ ಬಗ್ಗೆ ಚರ್ಚೆ ಆಗಲಿದೆ. ಬನ್ನಿ ಟಿವಿ9 ಡಿಜಿಟಲ್ ಮೂಲಕ ರಾಜಕೀಯದ ಕ್ಷಣ ಕ್ಷಣದ ಮಾಹಿತಿ ಪಡೆಯಿರಿ.
ಕಾಂಗ್ರೆಸ್ನಲ್ಲಿ ಮೂಲ ವರ್ಸಸ್ ವಲಸಿಗರ ಟಿಕೆಟ್ ಫೈಟ್ ವಿಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಫುಲ್ ಸ್ಟಾಪ್ ಇಟ್ಟಿದ್ದಾರೆ. ಸಿ.ಟಿ.ರವಿ ವಿರುದ್ಧ ಮತ್ತೆ ಲಿಂಗಾಯತ ಅಸ್ತ್ರ ಪ್ರಯೋಗಕ್ಕೆ ಪ್ಲ್ಯಾನ್ ಮಾಡಲಾಗಿದೆ. ಸಿ.ಟಿ.ರವಿ ವಿರುದ್ಧ ಲಿಂಗಾಯತ ಅಭ್ಯರ್ಥಿ ಕಣಕ್ಕಿಳಿಸಲು ಪ್ಲ್ಯಾನ್ ಹಾಕಲಾಗಿದ್ದು, 6 ಟಿಕೆಟ್ ಆಕಾಂಕ್ಷಿಗಳ ತಂಡ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದೆ. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಂಶುಮಂತ್ ನೇತೃತ್ವದಲ್ಲಿ ಭೇಟಿಯಾಗಿ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಸಭೆ ನಡೆಸಲಾಗಿದೆ. ಈ ವೇಳೆ ಲಿಂಗಾಯತ ಟಿಕೆಟ್ ಆಕಾಂಕ್ಷಿಗಳಿಗೆ ಭರವಸೆ ನೀಡಲಾಗಿದ್ದು, ಬಿ.ಹೆಚ್.ಹರೀಶ್, ಮಹಡಿಮನೆ ಸತೀಶ್ ನಡುವೆ ಟಿಕೆಟ್ ಫೈಟ್ ಏರ್ಪಟ್ಟಿದೆ. ಇದೇ ವೇಳೆ ಬಂಡಾಯ ಸಭೆ, ಕಾರ್ಯಕರ್ತರ ಸಭೆ ನಡೆಸದಂತೆ ಹಾಗೂ ಇನ್ನೆರಡು ದಿನ ಕಾಯುವಂತೆ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. ತಮ್ಮಯ್ಯ ಹೊರತುಪಡಿಸಿ ಉಳಿದ 6 ಆಕಾಂಕ್ಷಿಗಳಲ್ಲಿ ಆಯ್ಕೆ ಸಾಧ್ಯತೆ ಇದೆ. ತಮ್ಮಯ್ಯ ವಿರುದ್ಧ ಬಿಜೆಪಿ ಏಜೆಂಟ್ ಎಂದು ಗಂಭೀರ ಆರೋಪವಿದೆ.
ಮಂಡ್ಯ: ಬಹಳ ವರ್ಷಗಳಿಂದ ಕಾಂಗ್ರೆಸ್-ಬಿಜೆಪಿ ನಡುವೆ ಒಳ ಒಪ್ಪಂದವಿದೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲ ಆದಾಗಿಂದಲೂ ಇದೆಲ್ಲ ನಡೆಯುತ್ತಲೇ ಇದೆ. ಯಾವ ರೀತಿಯ ಒಪ್ಪಂದ ಮಾಡಿಕೊಂಡಿದ್ದಾರೆಂದು ತಿಳಿಯುತ್ತಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಒಳಒಪ್ಪಂದ ಮಾಡಿಕೊಂಡರು. ಬಿಜೆಪಿ, ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡು JDS ಸೋಲಿಸಿದರು. ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಕುತಂತ್ರ ರಾಜಕಾರಣಕ್ಕೆ ಮುಂದಾಗಿದ್ದಾರೆ. ಜೆಡಿಎಸ್ ವಿರುದ್ಧ ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳಿಂದ ಕುತಂತ್ರ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ, ರೈತ ಸಂಘ ಒಗ್ಗೂಡಿ ಜಿಲ್ಲೆಯ ಜನತೆಗೆ ದ್ರೋಹ ಮಾಡುತ್ತಿದ್ದಾರೆ. ಈ ಕುರಿತು ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜನ ತೀರ್ಮಾನಿಸುತ್ತಾರೆ. ಮೇಲುಕೋಟೆ ಕ್ಷೇತ್ರದಲ್ಲಿ ಏನಾಗಿದೆ ಅಂತಾ ಈಗ ನೋಡುತ್ತಿದ್ದೀರಿ ಅಲ್ವಾ? ಎಲ್ಲಾ ಕ್ಷೇತ್ರದಲ್ಲೂ ಹೆಸರಿಗಾಗಿ ಬಹಿರಂಗವಾಗಿ ಜೆಡಿಎಸ್ ಬಗ್ಗೆ ಮಾತಾಡ್ತಾರೆ. ಲೋಕಸಭಾ ಚುನಾವಣೆ ಸೋಲಿನ ಸೇಡನ್ನು ನಾವು ತೀರಿಸಿಕೊಳ್ಳುತ್ತೇವೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕುತಂತ್ರದ ಫಲಿತಾಂಶವಾಗಿದೆ. ಈ ಬಾರಿ ಮಂಡ್ಯ ಜಿಲ್ಲೆಯ ಜನರು ಆ ಸೇಡನ್ನು ತೀರಿಸಿಕೊಳ್ಳುತ್ತಾರೆ ಎಂದರು.
ಗೃಹಸಚಿವ ಆರಗ ಜ್ಞಾನೇಂದ್ರ ಅಸಮರ್ಥ, ಅವಿವೇಕಿ ಎಂದು ನಿಂದನೆ ಮಾಡಿದ ಆರೋಪ ಸಂಬಂಧ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಮುಖ್ಯಮಂತ್ರಿ, ಗೃಹಸಚಿವರ ಬಗ್ಗೆ ವೈಯಕ್ತಿಕವಾಗಿ ನಿಂದನೆ ಮಾಡುತ್ತಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ವೈಯಕ್ತಿಕವಾಗಿ ನಿಂದನೆ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಯಿಂದ ದುರಾಡಳಿತವೆಂದು ಸರ್ಕಾರ ನಿಂದಿಸಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಕೂಡ ನಿಂದಿಸಿದ್ದಾರೆ. ಬಿಜೆಪಿ, ಆರ್ಎಸ್ಎಸ್ ಬಗ್ಗೆ ಕಾಂಗ್ರೆಸ್ ನಾಯಕರು ಮಾತಾಡುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ನೇತೃತ್ವದಲ್ಲಿ ದೂರು ಸಲ್ಲಿಕೆ ಮಾಡಲಾಗಿದೆ.
ಬೆಳಗಾವಿ: ಕಾರ್ಯಕರ್ತರ ಸಮಾವೇಶದಲ್ಲಿ ಮಹಿಳೆಯರಿಗೆ ಆಮಿಷವೊಡ್ಡುವ ಮೂಲಕ ಹಾರೂಗೇರಿ ಪಟ್ಟಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಐದು ಕೋಟಿ ವೆಚ್ಚದಲ್ಲಿ ಹೊಲಿಗೆ ಯಂತ್ರದ ಟ್ರೈನಿಂಗ್ ಸೆಂಟರ್ ಪ್ರಾರಂಭಿಸಲಾಗುವುದು. ಕ್ಷೇತ್ರದ ಪ್ರತಿಯೊಬ್ಬ ಮಹಿಳೆಗೂ ಹೊಲಿಗೆ ಯಂತ್ರ ಕೊಡಿಸಲಾಗುವುದು. ಜೊತೆಗೆ ತರಬೇತಿ ಕೇಂದ್ರ ಪ್ರಾರಂಭಿಸಿ ಸ್ವಾವಲಂಬಿಯಾಗಿ ಬದುಕಬಹುದು. ಪ್ರತಿ ತಿಂಗಳು 35-40 ಸಾವಿರ ಗಳಿಸಬಹುದೆಂದು ಹೇಳಿದ್ದಾರೆ. ಡಚಿ ಮತಕ್ಷೇತ್ರದ ಹಾರೂಗೇರಿ ಪಟ್ಟಣದ ಪುರಸಭೆ ಆವರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಇದಾಗಿದೆ.
ಶಿವಮೊಗ್ಗ: ಶಿಕಾರಿಪುರದಿಂದ ಸ್ಪರ್ಧೆಗೆ ತಂದೆ ಬಿಎಸ್ವೈ ಸೂಚನೆ ನೀಡಿದ್ದಾರೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಪುತ್ರನೂ ಆಗಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಶಿಕಾರಿಪುರ ಕ್ಷೇತ್ರದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಶಿಕಾರಿಪುರ ಮಾಜಿ ಸಿಎಂ ಯಡಿಯೂರಪ್ಪ ಸ್ಪರ್ಧಿಸುತ್ತಿದ್ದ ಕ್ಷೇತ್ರವಾಗಿದೆ. ಶಿಕಾರಿಪುರ ಕ್ಷೇತ್ರಕ್ಕೆ ಯಡಿಯೂರಪ್ಪ ದೊಡ್ಡ ಕೊಡುಗೆ ನೀಡಿದ್ದಾರೆ. ವರಿಷ್ಠರು ಟಿಕೆಟ್ ಘೋಷಣೆ ಮಾಡಬೇಕಿದೆ. ಶಿಕಾರಿಪುರದಲ್ಲಿ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ. ಶಿಕಾರಿಪುರ ಮಾತ್ರವಲ್ಲ ರಾಜ್ಯದಲ್ಲೂ ಪಕ್ಷ ಸಂಘಟನೆ ಮಾಡುತ್ತೇನೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಕೊಪ್ಪಳ: ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಅವರನ್ನು ತಾಲೂಕಿನ ಗುಡಗೇರಿ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಎಸ್ಸಿ ಕಾಲೋನಿಗೆ ಚುನಾವಣೆ ಪ್ರಚಾರಕ್ಕೆ ಹೋದಾಗ ಶಾಸಕ ಹಿಟ್ನಾಳ್ ಅವರನ್ನು ಗ್ರಾಮದಲ್ಲಿ ರಸ್ತೆ ದುರಸ್ತಿ ಮಾಡಿಸದಿದ್ದಕ್ಕೆ ನಿವಾಸಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊರೊನಾ ಸಮಯದಲ್ಲಿ ಕೇವಲ ನಿಮ್ಮ ಹಿಂಬಾಲಕರಿಗೆ ಏಕೆ ಕಳುಹಿಸಿದ್ದಿರಿ ಅಂತಾನೂ ಪ್ರಶ್ನಿಸಿದ್ದಾರೆ. ಮನೆ ಇಲ್ಲದವರಿಗೆ ಮನೆ ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಗ್ರಾಮಸ್ಥರ ಮಾತಿಗೆ ತಬ್ಬಿಬ್ಬಾದ ಶಾಸಕರು, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು ಎಂದಿದ್ದಾರೆ.
ಮಂಡ್ಯ: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಜೋರಾಗಿಯೇ ನಡೆಯುತ್ತಿದೆ. ನಾಯಕರು, ಮುಖಂಡರು ಶಾಸಕರು ಮಾಜಿ ಶಾಸಕರು ಮಾತ್ರವಲ್ಲದೆ, ಕಾರ್ಯಕರ್ತರೂ ಪಕ್ಷಾಂತರವಾಗುತ್ತಿದ್ದಾರೆ. ಇದೀಗ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ನ 100ಕ್ಕೂ ಹೆಚ್ಚು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ಹೇಮಂತ್, ಗಿರೀಶ್ ಸೇರಿದಂತೆ ಪುರಸಭೆ ಸದಸ್ಯರು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.
ಚಿಕ್ಕಬಳ್ಳಾಫುರ: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಮಾವ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ಬಿಜೆಪಿಗೆ ಬರದೆ ಕಾಂಗ್ರೇಸ್ಗೂ ಹೋಗದೆ ಗೌರಿಬಿದನೂರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಸಕಲ ಸಿದ್ದತೆ ನಡೆಸುತ್ತಿದ್ದಾರೆ. ಸ್ಥಳಿಯ ಕಾಂಗ್ರೇಸ್ ಶಾಸಕ ಎನ್.ಎಚ್ ಶಿವಶಂಕರ ರೆಡ್ಡಿಗೆ ಪ್ರಬಲ ಸ್ಪರ್ಧೆ ನೀಡಲು ಸಜ್ಜಾಗುತ್ತಿದ್ದಾರೆ. ಇದಕ್ಕಾಗಿ ಸ್ಥಳಿಯ ಕಾಂಗ್ರೇಸ್, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರನ್ನು ಸೆಳೆಯುತ್ತಿದ್ದಾರೆ. ರಿಯಲ್ ಎಸ್ಟೇಟ್ ಹಾಗೂ ಕೈಗಾರಿಕೋದ್ಯಮಿಯಾಗಿರುವ ಪುಟ್ಟಸ್ವಾಮಿಗೌಡ, ಬಿಜೆಪಿಗೆ ಆಹ್ವಾನ ನೀಡಿದರೂ ಕ್ಯಾರೆ ಎಂದಿಲ್ಲ. ಸದ್ಯ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಪುಟ್ಟಸ್ವಾಮಿಗೌಡ ಆರ್ಭಟದಿಂದ ಹಾಲಿ ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿಗೆ ನಡುಕ ಆರಂಭವಾಗಿದೆ.
ಬೆಳಗಾವಿ: ಅಥಣಿ ಕ್ಷೇತ್ರ ಟಿಕೆಟ್ ಗೊಂದಲ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಹೇಶ್ ಕುಮಟಳ್ಳಿ ಮತ್ತು ಲಕ್ಷ್ಮಣ ಸವದಿ ಜೊತೆಗೆ ಮಾತನಾಡಿದ್ದೇನೆ. ಟಿಕೆಟ್ ವಿಚಾರದಲ್ಲಿ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೆ ಅದಕ್ಕೆ ಬದ್ದ ಇರಬೇಕು ಅಂತಾ ಸೂಚಿಸಿದ್ದೇನೆ. ಬಹಿರಂಗವಾಗಿ ಯಾರೂ ಮಾತನಾಡಬೇಡಿ ಅಂತಾ ಹೇಳಿದ್ದೇನೆ. ಒಂದೇರಡು ಸಣ್ಣ ಪುಟ್ಟ ತೊಂದರೆಗಳಿವೆ ಅವು ಸರಿ ಮಾಡಿದ್ದೇನೆ. ನಾವು ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ ನಾವು ಒಗ್ಗಟ್ಟು ಇಲ್ಲ ಎನ್ನುವ ಪ್ರಶ್ನೆ ಇಲ್ಲಾ ಎಂದರು. ಜಾರಕಿಹೊಳಿ ಸಹೋದರರ ಕ್ಷೇತ್ರ ಬದಲಾವಣೆ ಮಾಡಬೇಕೆನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಗುಪ್ತ ವಿಚಾರ ಅದನ್ನು ಪಾರ್ಟಿಯಲ್ಲಿ ಚರ್ಚೆ ಮಾಡುತ್ತೇವೆ. ನಾವು ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ, ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದರು.
ಬೆಳಗಾವಿ: ಜಿಲ್ಲೆಯ 18 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲು ಚಿಂತಿಸಿದ್ದೇವೆ. ಜಿಲ್ಲೆಯ ಪ್ರತಿಯೊಬ್ಬರ ನಾಯಕರ ಜತೆ ಪ್ರತ್ಯೇಕವಾಗಿ ಚರ್ಚಿಸಿದ್ದೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಏ.8 ಅಥವಾ 9ರಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಸನ್ನದ್ಧರಾಗಿ ಎಂದು ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಸೂಚಿಸಿದ್ದೇನೆ. ಸಾಮಾನ್ಯವಾಗಿ 18 ಕ್ಷೇತ್ರಗಳ ಪೈಕಿ 16ರಲ್ಲಿ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದರು. ಆದರೆ ಜಿಲ್ಲಾ ಕೋರ್ ಕಮಿಟಿ ಸಭೆ ನಂತರ 18 ಕ್ಷೇತ್ರದಲ್ಲೂ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು: ಕೆಪಿಸಿಸಿ ಕಚೇರಿ ಬಳಿ ಚಿತ್ರದುರ್ಗ ಮೊಳಕಾಲ್ಮುರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಯೋಗೇಶ್ ಬಾಬು ಬೆಂಬಲಿಗರು ಪ್ರತಿಭಟನೆ ನಡೆಸಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ಗೆ ಜೈಕಾರ ಹಾಕಿ ಯೋಗೇಶ್ ಬಾಬುಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿವಕುಮಾರ್, ರಾಜ್ಯದ ಜನರ ಧ್ವನಿ ಕಾಂಗ್ರೆಸ್ ಕಡೆ ಆಗುತ್ತಿದೆ. ನಮ್ಮ ನಡೆ ಅಧಿಕಾರದ ಕಡೆಗೆ ಇದೆಎನ್ನೋದಕ್ಕೆ ಜನರುತೋರಿಸುತ್ತಿರುವ ಪ್ರೀತಿ, ಬಿಜೆಪಿ ತೊರೆದು ನಮ್ಮ ಪಕ್ಷದ ಬಾಗಿಲು ತಟ್ಟುತ್ತಿರುವ ಅನೇಕ ನಾಯಕರೇ ಇದಕ್ಕೆ ಸಾಕ್ಷಿ. ಎನ್ ವೈ ಗೋಪಾಲಕೃಷ್ಣ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಮ್ಮಲ್ಲಿಗೆ ಬಂದಿದ್ದಾರೆ. ಏ.9ರಂದು ತಾರೀಖು ಶಿವಲಿಂಗೇಗೌಡ ತಮ್ಮ ಕ್ಷೇತ್ರದಲ್ಲಿಯೇ ಕಾಂಗ್ರೆಸ್ ಸೇರುತ್ತಾರೆ. ದಲಿತ ಕವಿ ಸಿದ್ದಲಿಂಗಯ್ಯ ಮಾತು ನೆನಪಾಗ್ತದೆ: ಹೋರಾಟದ ಸಾಗರ ಸಾವಿರಾರು ನದಿಗಳು ಸಾಲು
ಎಲ್ಲ ನದಿಗಳು ಸಮುದ್ರಕ್ಕೆ ತಲುಪುತ್ತದೆ. ಕಾಂಗ್ರೆಸ್ ಅಂದರೆ ಹೋರಾಟದ ಸಾಗರ, ಇದಕ್ಕೆ ನಾಯಕರು ಬಂದು ನದಿಗಳಂತೆ ಸೇರುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ದ ಜನ ಕಾಂಗ್ರೆಸ್ಗೆ ಬೆಂಬಲ ನೀಡುತ್ತಿದ್ದಾರೆ. ನಾಲ್ಕು ಐದು ಬಾರಿ ಶಾಸಕರಾದವರೆಲ್ಲರೂ ಕಾಂಗ್ರೆಸ್ ಸೇರುತ್ತಿದ್ದಾರೆ. ಪುಟ್ಟಣ್ಣ, ಬಾಬೂರಾವ್ ಚಿಂಚನಸೂರ್, ಗೋಪಾಲಕೃಷ್ಣ ಕೂಡ ಹಿಂದೆ ನಮ್ಮಿಂದ ಗೆದಿದ್ದರು. ಬದಲಾವಣೆಗೆ ಜನ ತೀರ್ಮಾನ ಮಾಡಿದ್ದಾರೆ. ಡಬಲ್ ಇಂಜಿನ್ ಸರ್ಕಾರದಿಂದ ಯಾವುದೇ ಅನುಕೂಲ ಆಗಿಲ್ಲ. ಬೀದರ್ ನಿಂದ ಚಾಮರಾಜನಗರದ ತನಕ ಅನೇಕ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂದರು.
ಅರಸೀಕೆರೆ ಶಾಸಕರಾಗಿದ್ದ ಕೆ.ಎಂ. ಶಿವಲಿಂಗೇಗೌಡ ರಾಜೀನಾಮೆ ಅಂಗೀಕಾರವಾಗಿದೆ. ಇವರು ನಿನ್ನೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಟಿಕೆಟ್ ಹಂಚಿಕೆಯಲ್ಲಿ ನನ್ನ ಯಾವ ಪಾತ್ರವೂ ಇಲ್ಲ ಎಂದರು. ಟಿಕೆಟ್ ಹಂಚಿಕೆ ವಿಚಾರವಾಗಿ ಪಕ್ಷದಿಂದ ಒಂದು ಕಮಿಟಿ ಇರುತ್ತದೆ. ಸ್ವರೂಪ್ ಯುವಕರಿದ್ದಾರೆ, ನಿರಂತರವಾಗಿ ಕ್ಷೇತ್ರದಲ್ಲಿ ಇದ್ದಾರೆ. ಹಾಸನ ಟಿಕೆಟ್ ವಿಚಾರವಾಗಿ ದೇವೇಗೌಡರ ನಿರ್ಧಾರವೇ ಅಂತಿಮ. ಜೆಡಿಎಸ್ ಪಕ್ಷಕ್ಕೆ ಅವಕಾಶ ಕೊಡ್ತಾರೆ ಅನ್ನೋ ನಂಬಿಕೆ ನನಗೆ ಇದೆ ಎಂದರು.
ಏಪ್ರಿಲ್ 19ರಂದು ಚನ್ನಪಟ್ಟಣದಲ್ಲಿ ನಾನು ನಾಮಪತ್ರ ಸಲ್ಲಿಸುತ್ತೇನೆ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಏಪ್ರಿಲ್ 20, 21ರಂದು 2 ದಿನ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ನಂತರ ರಾಜ್ಯದ ಇತರೆ ಕ್ಷೇತ್ರಗಳಲ್ಲಿ ಪಕ್ಷದ ಪರ ಪ್ರಚಾರ ಮಾಡುವೆ ಎಂದು ಮಾಹಿತಿ ನೀಡಿದರು.
ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ ಬಿಜೆಪಿಯ ಭವಿಷ್ಯ ನಾಯಕ ಎಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಲೆಕ್ಕಾಚಾರದಂತೆ ನಾನು ಬಿಜೆಪಿ ಸೇರಿದೆ. BSY ಸಿಎಂ ಆಗಬೇಕೆಂದು 17 ಶಾಸಕರು ರಾಜೀನಾಮೆ ನೀಡಿದ್ದೆವು. ಯಡಿಯೂರಪ್ಪ ಸಂಪುಟದಲ್ಲಿ ನಾನು ಸಚಿವನಾಗಿದ್ದಕ್ಕೆ ಖುಷಿಯಾಗಿದೆ. ಎದುರಾಳಿ ಠೇವಣಿ ಕಳೆದುಕೊಳ್ಳುವ ರೀತಿ ವಿಜಯೇಂದ್ರ ಗೆಲ್ಲಬೇಕು ಎಂದರು.
ಕಾಂಗ್ರೆಸ್ನ ಎರಡನೇ ಪಟ್ಟಿ ಆಯ್ಕೆ ವೇಳೆ ಬಂಡಾಯದ ಬಿಸಿ ಎದ್ದಿದೆ. ಟಿಕೆಟ್ ಆಕಾಂಕ್ಷಿಗಳ ಪ್ರತಿಭಟನೆ ನಾಯಕರಿಗೆ ತಲೆನೋವಾಗಿದೆ. ಚಿಕ್ಕಮಗಳೂರು, ಕಡೂರು, ತರೀಕೆರೆ, ಮೊಳಕಾಲ್ಮೂರು ಹಾಗೂ ದಾಸರಹಳ್ಳಿ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಪ್ರತಿಭಟನೆ ಮುಂದುವರಿದಿದೆ. ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ಬಿಸಿ ಎದುರಿಸುತ್ತಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆ ಮೀಸಲಾತಿ ಪರಿಷ್ಕರಣೆ ಮಾಡಿದ್ದಾರೆ. ಮೀಸಲಾತಿ ಬಿಜೆಪಿ ಕುಲಗೆಡಿಸಿದಷ್ಟು ಬೇರೆ ಇನ್ಯಾರೂ ಕುಲಗೆಡಿಸಿಲ್ಲ. ತಮಿಳುನಾಡು ಹೊರತುಪಡಿಸಿ ಮೀಸಲಾತಿ ಪ್ರಮಾಣ 50% ದಾಟಿಲ್ಲ. ದೇಶದ ಯಾವುದೇ ರಾಜ್ಯದಲ್ಲೂ ಮೀಸಲಾತಿ ಪ್ರಮಾಣ 50% ದಾಟಿಲ್ಲ. ಇಲ್ಲೂ ಮೀಸಲಾತಿ ಪ್ರಮಾಣ 50%ಕ್ಕಿಂತ ಹೆಚ್ಚಾಗಿ ನೀಡಲು ಸಾಧ್ಯವಿಲ್ಲ ಎಂದು ಮೈಸೂರಿನಲ್ಲಿ ವಿಧಾನಪರಿಷತ್ನ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮತ್ತೊಮ್ಮೆ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗಲಿದೆ. ಈ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದೆ. ನಮ್ಮ ಗೆಲುವಿನ ರೂವಾರಿಗಳು ನಿರ್ವಹಣಾ ಸಮಿತಿಗಳದ್ದೇ ಆಗಿರುತ್ತೆ ಎಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 224 ಕ್ಷೇತ್ರಗಳ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ. 2 ದಿನ ಜಿಲ್ಲೆಯ ಪ್ರಮುಖರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಅಭ್ಯರ್ಥಿ ಯಾರೇ ಆದರೂ ಗೆಲುವಿಗೆ ಶ್ರಮಿಸಬೇಕು. ಮಂಡ್ಯದಲ್ಲಿ ಅಮಿತ್ ಶಾ ಕಾರ್ಯಕ್ರಮಕ್ಕೆ ಅತಿ ಹೆಚ್ಚು ಜನ ಸೇರಿದ್ರು. ಹಳ್ಳಿ ಹಳ್ಳಿಗಳಲ್ಲೂ ಬಿಜೆಪಿ ಪರವಾಗಿ ವಾತಾವರಣ ನಿರ್ಮಾಣ ಆಗಿದೆ ಎಂದರು.
ಬಿಎಸ್ ಯಡಿಯೂರಪ್ಪ ರಕ್ತ ಚೆಲ್ಲಿ ನೀರು ಹರಿಸಿದ ಭಗೀರಥ. ಹೋರಾಟದ ಮೂಲಕ ಬಿಎಸ್ವೈ ನಾಯಕರಾಗಿದ್ದಾರೆ ಎಂದು ಶಿಕಾರಿಪುರದಲ್ಲಿ ಶಾಸಕ ರಾಜೀವ್ ಕುಡಚಿ ಬಿಎಸ್ವೈರನ್ನು ಹೊಗಳಿದ್ದಾರೆ. ಶಿವಮೊಗ್ಗ ಶಿಕಾರಿಪುರ ಸಂಪೂರ್ಣ ಚಿತ್ರಣ ಬದಲಾಗಿದೆ. ಈ ಹಿಂದೆ ಇದ್ದ ಎರಡು ಮೂರು ಸಿಎಂ ಏನು ಅಭಿವೃದ್ಧಿ ಮಾಡಿಲ್ಲ ಎಂದು ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ ಮಾಡಿದರೆ. ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲು ಶಾಸಕ ರಾಜೀವ್ ಕರೆ ನೀಡಿದ್ದಾರೆ. ಶಿಕಾರಿಪುರ ಬಂಜಾರ ಡ್ಯಾಮೇಜ್ ಕಂಟ್ರೋಲ್ ಗೆ ರಾಜೀವ್ ಮುಂದಾಗಿದ್ದಾರೆ.
ಕೋರ್ ಕಮಿಟಿ ಸಭೆಗೂ ಮುನ್ನ ಸಭೆ ನಡೆಯುತ್ತಿರುವ ಹೋಟೆಲ್‌ನಲ್ಲೇ ರಮೇಶ್ ಜಾರಕಿಹೊಳಿ ಪ್ರತ್ಯೇಕ ಸಭೆ ನಡೆಸಿದ್ದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಜಿ.ಪಂ ಹಾಗೂ ತಾ.ಪಂ ಮಾಜಿ ಸದಸ್ಯರ ಜೊತೆ ಸಭೆ ನಡೆಸಿ ನಾಗೇಶ್ ಮನ್ನೋಳ್ಕರ್ ಪರ ಧ್ವನಿ ಎತ್ತುವಂತೆ ಸೂಚನೆ ನೀಡಿದ್ದರು.
ಹಿಂದೆ ಕೆಲವರು ನನ್ನನ್ನು ಫುಟ್ಬಾಲ್ನಂತೆ ಬಳಸಿಕೊಂಡರು.ನನ್ನವರು ಅಂತ ನಂಬಿ ನೇರ ನಡೆನುಡಿ ರಾಜಕಾರಣ ಮಾಡಿದ್ದೇನೆ. ಅದನ್ನೇ ಕೆಲವರು ದುರುಪಯೋಗ ಮಾಡಿಕೊಂಡರು ಎಂದು ಬಾಗಲಕೋಟೆ ತಾಲೂಕಿನ ಖಜ್ಜಿಡೋಣಿ ಗ್ರಾಮದಲ್ಲಿ ಕೆಆರ್ಪಿಪಿ ಅಧ್ಯಕ್ಷ ಜನಾರ್ದನ ರೆಡ್ಡಿ ಹೇಳಿದರು. ನನ್ನನ್ನು ಸಮಸ್ಯೆ ಸಿಲುಕಿಸಲು ಕೆಲ ನಾಯಕರು ಯತ್ನಿಸುತ್ತಿದ್ದಾರೆ. ನನ್ನನ್ನು ಸಮಸ್ಯೆಗೆ ಸಿಲುಕಿಸಲು ಬರುವವರಿಗೆ ಫುಟ್ಬಾಲ್ ಮಾದರಿಯಲ್ಲಿ ಆಡಿ ಮತದಾರರು ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಪಕ್ಷ ಯಾರನ್ನು ಅಭ್ಯರ್ಥಿ ಮಾಡುತ್ತೋ ಅವರೇ ನಮ್ಮ ನೇತಾರ ಎಂದು ಬಿಜೆಪಿ ಕಾರ್ಯಾಗಾರದಲ್ಲಿ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಬೂತ್ ಗೆದ್ದಾಗ ಮಾತ್ರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತೆ. 2013ರ ಸರ್ಕಾರ ನೆನಪಿಸಿಕೊಂಡರೆ ಈಗಲೂ ನಮಗೆ ಭಯ ಹುಟ್ಟಿಸುತ್ತೆ. ಕಾಂಗ್ರೆಸ್ ಸರ್ಕರದ ಅವಧಿಯಲ್ಲಿ ನಮ್ಮ ಕಾರ್ಯಕರ್ತರ ಹತ್ಯೆ ಆಯಿತು. ಸಿದ್ದರಾಮಯ್ಯ ಹಾಗೂ ಡಿಕೆಶಿ ಒಂದು ವರ್ಗವನ್ನು ಓಲೈಕೆ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರ ಬರಲು ಕಾರಣವಾಗಿದಕ್ಕೆ ಮೈಸೂರು ನ್ಯಾಯಾಲಯದ ಬಳಿಯ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ವಿನೂತನ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾಗಿ, ಜನವಿರೋಧಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟ ಕೊರಗು. ಈ ಹಿನ್ನೆಲೆಯಲ್ಲಿ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪ್ರಶ್ಚಾತ್ತಾಪ ಸತ್ಯಾಗ್ರಹ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಕ್ಷೇತ್ರದ ಟಿಕೆಟನ್ನು H.M.ಗೋಪಿಕೃಷ್ಣಗೆ ನೀಡುವಂತೆ ವಿಷದ ಬಾಟಲಿ ಹಿಡಿದು ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಮಡಿವಾಳ ಸಮುದಾಯದ H.M.ಗೋಪಿಕೃಷ್ಣಗೆ ಟಿಕೆಟ್ಗಾಗಿ ಆಗ್ರಹಿಸಿದ್ದಾರೆ. ಕೆಪಿಸಿಸಿ ಕಚೇರಿ ಮುಂಭಾಗ ಮಡಿವಾಳ ಸಮುದಾಯ ಪ್ರತಿಭಟನೆ ನಡೆಸಿದೆ. ಗೋಪಿಕೃಷ್ಣಗೆ ಟಿಕೆಟ್ ನೀಡದಿದ್ದರೆ ವಿಷ ಕುಡಿಯುವುದಾಗಿ ಬೆದರಿಕೆ ಹಾಕಲಾಗಿದೆ. ವಿಷದ ಬಾಟಲಿ ಕಿತ್ತುಕೊಳ್ಳಲು ಮುಂದಾದ ಪೊಲೀಸರ ಜತೆ ವಾಗ್ವಾದ ನಡೆದಿದ್ದು ಕೆಪಿಸಿಸಿ ಕಚೇರಿ ಮುಂದೆ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರ ಹೈಡ್ರಾಮಾ.
ಒಳಮೀಸಲಾತಿ ವಿರೋಧಿಸಿ BSY ಮನೆ ಮೇಲೆ ಕಲ್ಲು ತೂರಾಟ ವಿಚಾರಕ್ಕೆ ಸಂಬಂಧಿಸಿ ಒಳಮೀಸಲಾತಿ ಡ್ಯಾಮೇಜ್ ಕಂಟ್ರೋಲ್ಗೆ ಬಿಎಸ್ ಯಡಿಯೂರಪ್ಪ ಮುಂದಾಗಿದ್ದಾರೆ. ಇಂದು ಬಂಜಾರ ಸಮುದಾಯದ ಜೊತೆ ಬಿಎಸ್ವೈ, ವಿಜಯೇಂದ್ರ ಸಭೆ ನಡೆಸಲಿದ್ದಾರೆ. ಶಿಕಾರಿಪುರದ ಕುಮದ್ವತಿ ಬಿಎಡ್ ಕಾಲೇಜ್ ಆವರಣದಲ್ಲಿ ಸಭೆ ನಡೆಯಲಿದೆ.
ಶಿಕ್ಷಣ ಮತ್ತು ಆರೋಗ್ಯಕ್ಕೆ ನಮ್ಮ ಸರ್ಕಾರ ವಿಶೇಷ ಆದ್ಯತೆ ನೀಡಿದೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ದುಡ್ಡೇ ದೊಡ್ಡಪ್ಪ ಬದಲಾಗಿ, ದುಡಿಮೆಯೇ ದೊಡ್ಡಪ್ಪ ಆಗಿದೆ. ನನ್ನ ಸರ್ಕಾರದ ಆಡಳಿತಾತ್ಮಕ ನಿರ್ಧಾರದಿಂದ ರಾಜ್ಯ ಸದೃಢವಾಗಿದೆ. ರಾಜ್ಯದಲ್ಲಿ 8 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ ಮಾಡಲಾಗಿದೆ. ರಾಜ್ಯಾದ್ಯಂತ 463 ನಮ್ಮ ಕ್ಲಿನಿಕ್ಸ್ ಪ್ರಾರಂಭ ಮಾಡಿದ್ದೇವೆ. ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರಿಗೆ 10 ಸಾವಿರ ರೂ. ಕೊಡ್ತಿದ್ದೇವೆ. ಮಸಣ ಕಾಯುವವರಿಗೆ ಖಾಯಂ ಹುದ್ದೆ ನೀಡಲು ಅಗತ್ಯ ಕ್ರಮ ಎಂದರು.
ಅಪ್ಪ ಶಾಮನೂರ ಶಿವಶಂಕರಪ್ಪ, ಮಗ ಎಸ್ ಎಸ್ ಮಲ್ಲಿಕಾರ್ಜುನ ಇಬ್ಬರೂ ಐತಿಹಾಸಿಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಮನೂರ ಶಿವಶಂಕರಪ್ಪ, ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್ ಎಸ್ ಮಲ್ಲಿಕಾರ್ಜುನ್ ದಾವಣಗೆರೆ ನಗರದ ಆನೆಕೊಂಡದ ಐತಿಹಾಸಿಕ ಬಸವೇಶ್ವರ ದೇವಸ್ಥಾನಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದರು.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿರುವ ಹೊಸ ಬಿಜೆಪಿಯ ಚುನಾವಣಾ ಮಾಧ್ಯಮ ಕೇಂದ್ರವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.
ಮಾಜಿ ಸಂಸದ ಶಿವರಾಮೇಗೌಡ ಬಿಜೆಪಿ ಸೇರ್ಪಡೆಗೆ ಫೈಟರ್ ರವಿ ವಿರೋಧ ಹಿನ್ನೆಲೆ ಶಿವರಾಮೇಗೌಡ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಿದ್ದಾರೆ. ಆರ್.ಟಿ.ನಗರದ ನಿವಾಸಕ್ಕೆ ಪುತ್ರ ಚೇತನ್ ಜೊತೆ ಆಗಮಿಸಿ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
Krpp ಸಂಸ್ಥಾಪಕ, ಮಾಜಿ ಸಚಿವ ಜನಾರ್ದನ ರೆಡ್ಡಿ ಕೂಡಲಸಂಗಮದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿರುವ ಸಂಗಮನಾಥ ದೇವಾಲಯದಲ್ಲಿ ಪೂಜೆ ಪ್ರಾರ್ಥನೆ ಮಾಡಿ ಬಸವಣ್ಣನ ಐಕ್ಯಮಂಟಪ ದರ್ಶನ ಮಾಡಿದ್ದಾರೆ. ಪಕ್ಷದ ಬಲವರ್ಧನೆಗಾಗಿ ಬಸವಣ್ಣ ಹಾಗೂ ಸಂಗಮನಾಥನ ಮೊರೆ ಹೋಗಿದ್ದಾರೆ.
ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು, ಶಹಾಪುರ ಕ್ಷೇತ್ರದಲ್ಲಿ ಶರಣಬಸಪ್ಪಗೌಡ ದರ್ಶನಾಪುರ ಗೆದ್ದು ಮಂತ್ರಿ ಆಗಬೇಕೆಂದು ಶಾಸಕ ದರ್ಶನಾಪುರ ಅಭಿಮಾನಿಗಳು ಹರಕೆ ಹೊತ್ತುಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ನಿವಾಸಿಗಳಾದ ದರ್ಶನಾಪುರ ಅಭಿಮಾನಿಗಳು ಅಯ್ಯಪ್ಪ ಸ್ವಾಮಿಯಲ್ಲಿ ಹರಕೆ ಹೊತ್ತಿದ್ದಾರೆ. 10 ಕಿ.ಮೀ ಕಾಲ್ನಡಿಗೆ ಮೂಲಕ ಅಯ್ಯಪ್ಪನ ದರ್ಶನ ಮಾಡಿ ತುಪ್ಪದ ಕಾಯಿಯ ಹಿರುಮುಡಿ ಹೊತ್ತು ಹರಿಕೆ ತೀರಿಸಿದ್ದಾರೆ.
ನಾವು SC, ST ಸಮುದಾಯದ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಅಲ್ಲದೇ 9ನೇ ಶೆಡ್ಯೂಲ್ನಲ್ಲಿ ಸೇರಿಸಲು ಶಿಫಾರಸು ಸಹ ಮಾಡಿದ್ದೇವೆ. ಈ ಮೂಲಕ SC, ST ಸಮುದಾಯದ ಬೇಡಿಕೆ ಈಡೇರಿಸಿದ್ದೇವೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಾವು ಸಾಮಾಜಿಕ ನ್ಯಾಯ ಕೊಟ್ಟಿದ್ದಕ್ಕೆ ಕಾಂಗ್ರೆಸ್ ವಿರೋಧಿಸ್ತಿದೆ. ಕಾಂಗ್ರೆಸ್ ಎಸ್ಸಿ, ಎಸ್ಟಿ ವಿರೋಧಿ, ಒಕ್ಕಲಿಗರ ವಿರೋಧಿ. ಕಾಂಗ್ರೆಸ್ ಲಿಂಗಾಯತರ ವಿರೋಧಿ ಎಂಬುದು ಗೊತ್ತಾಗುತ್ತದೆ. ಕಾಂಗ್ರೆಸ್ನಿಂದ ಸಾಧ್ಯವಾಗದ್ದನ್ನು ನಾವು ಮಾಡಿ ತೋರಿಸಿದ್ದೇವೆ ಎಂದರು.
ಯಾದಗಿರಿ: ಸುರಪುರ ತಾಲೂಕಿನ ತಳ್ಳಳ್ಳಿ ಚೆಕ್ಪೋಸ್ಟ್ ಬಳಿ ದಾಖಲೆ ಇಲ್ಲದ 4 ಲಕ್ಷ ಹಣ ಜಪ್ತಿ ಮಾಡಲಾಗಿದೆ. ತಾಳಿಕೋಟೆಯ ನೀರಲಗಿ ಗ್ರಾಮದಿಂದ ಬಂದಿದ್ದ ಟಾಟಾ ಏಸ್ ವಾಹನ ತಪಾಸಣೆ ವೇಳೆ ಹಣ ಪತ್ತೆಯಾಗಿದೆ. ಈ ಬಗ್ಗೆ ಕೆಂಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಮಧ್ಯಾಹ್ನ 12.30 ಕ್ಕೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿ ನಡೆಸಲಿದ್ದಾರೆ.
ಹಾಸನ ಜೆಡಿಎಸ್ ಟಿಕೆಟ್ಗಾಗಿ ಹಗ್ಗಜಗ್ಗಾಟ ನಡೆಯುತ್ತಿದೆ. ಆದ್ರೆ ಬಗೆಹರಿಯದ ಹಾಸನ ಟಿಕೆಟ್ ಗೊಂದಲದ ನಡುವೆಯೇ ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಮ್ಮ ಕ್ಷೇತ್ರದಲ್ಲಿ ಇಂದಿನಿಂದ ಪ್ರಚಾರ ಆರಂಭಿಸಲಿದ್ದಾರೆ. ಹೊಳೆನರಸೀಪುರ ತಾಲ್ಲೂಕಿನ, ಮೂಡಲಹಿಪ್ಪೆ ಗ್ರಾಮದ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಲಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚುನಾವಣಾ ಅಧಿಕಾರಿ ಲಕ್ಷ್ಮಣ್ ನೀಡಿದ ದೂರಿನನ್ವಯ ಕೇಸ್ ದಾಖಲಾಗಿದೆ. ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಹೆಸರಿನಲ್ಲಿ ಬೆಂಗಳೂರಿನ ಗಾಂಧಿನಗರ ಕ್ಷೇತ್ರದಲ್ಲಿ ಫುಡ್ ಕಿಟ್ ಹಂಚಿಕೆ ಆರೋಪ ಕೇಳಿ ಬಂದಿದ್ದು ಕಿಟ್ ಹಂಚಿಕೆ ವೇಳೆ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು, ಪೊಲೀಸರು ದಾಳಿ ಮಾಡಿದ್ದು 7ಲಕ್ಷಕ್ಕೂ ಅಧಿಕ ಮೌಲ್ಯದ ಫುಡ್ ಕಿಟ್ಗಳನ್ನು ಜಪ್ತಿ ಮಾಡಿದ್ದಾರೆ.
ನಾರಾಯಣಗೌಡಗೆ ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದ್ದಾರೆ. ನಾರಾಯಣಗೌಡರನ್ನು ಜೆಡಿಎಸ್ ಪಕ್ಷ ಶಾಸಕರನ್ನಾಗಿ ಮಾಡಿತ್ತು. ಆದ್ರೆ ದೇವೇಗೌಡರು, ಹೆಚ್ಡಿಕೆಗೆ ಅನ್ಯಾಯ ಮಾಡಿ ಹೋದರು. ನೀವು ಪಕ್ಷ ಬಿಟ್ಟಿದ್ದು ಯಾಕೆ ಎಂದು ರಾಜ್ಯದ ಜನರಿಗೆ ಗೊತ್ತಿದೆ ಎಂದು ನಾರಾಯಣಗೌಡ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. JDSಗೆ ಕೈಕೊಟ್ಟು ರಮೇಶ್ ಬಂಡಿಸಿದ್ದೇಗೌಡ ಕಾಂಗ್ರೆಸ್ ಸೇರಿದ್ದಾರೆ. ಕಳೆದ ಬಾರಿ ನಿಖಿಲ್ಗೆ ಬೆಂಬಲಿಸಿ ಎಂದು ನಿಮ್ಮ ಪಕ್ಷದವರೇ ಹೇಳಿದ್ರು. ಆದ್ರೆ ನಿಮ್ಮ ಪಕ್ಷಕ್ಕೂ ನಿಷ್ಠೆಯಾಗಿರದೆ ಸುಮಲತಾರನ್ನು ಬೆಂಬಲಿಸಿದ್ರಿ. ಈ ಬಾರಿ ಚುನಾವಣೆಯಲ್ಲಿ ಕ್ಷೇತ್ರದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಮೇಶ್ ಬಂಡಿಸಿದ್ದೇಗೌಡ ವಿರುದ್ಧವೂ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದಾರೆ.
ಕಾರ್ಯಕ್ರಮದ ನೆಪದಲ್ಲಿ ಬಿಜೆಪಿ ಶಾಸಕನ ಆಪ್ತನಿಂದ ಬಾಡೂಟ ಆಯೋಜಿಸಲಾಗಿದೆ. ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ದೋತರದಟ್ಟಿ ಕಾರ್ಯಕ್ರಮ ಹೆಸರಲ್ಲಿ ಮತದಾರರನ್ನು ಸೆಳೆಯಲು ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ಹಾಲಿ ಶಾಸಕ ಬಸವರಾಜ ದಢೇಸೂಗೂರು ಆಪ್ತ, ಕಾಶಿವಿಶ್ವನಾಥ ಬಿಚ್ಚಾಲಿಯಿಂದ ಬಾಡೂಟ ಆಯೋಜನೆ ಮಾಡಲಾಗಿದ್ದು ಸಾವಿರಾರು ಜನರು ಬಾಡೂಟ ಸವಿದರು.
ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಶಾಸಕ ಎನ್.ವೈ.ಗೋಪಾಲಕೃಷ್ಣ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್ ಉಸ್ತುವಾರಿ, ಸುರ್ಜೇವಾಲ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಪಕ್ಷ ಸೇರಲಿದ್ದಾರೆ. ಕೂಡ್ಲಿಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆಗೆ ನಿರ್ಧರಿಸಿದ್ದಾರೆ.
ದೆಹಲಿಯಲ್ಲಿ ನಾಳೆ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ಹಿನ್ನೆಲೆ ಇಂದು ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ ಹಾರಲಿದ್ದಾರೆ. ಸಂಜೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಿ ನಾಳೆ ಮಧ್ಯಾಹ್ನ 12.30ಕ್ಕೆ ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಬಾಕಿ ಉಳಿದಿರುವ 100 ಕ್ಷೇತ್ರಗಳ ಅಭ್ಯರ್ಥಿ ಬಗ್ಗೆ ಚರ್ಚೆ ನಡೆಯಲಿದೆ.
ಇಂದು ಮಧ್ಯಾಹ್ನ ಜೆಡಿಎಸ್ ಪಕ್ಷದ ಎರಡನೇ ಪಟ್ಟಿಯನ್ನು ಮಾಜಿ ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಲಿದ್ದಾರೆ. ಹಾಸನ ಬಿಟ್ಟು ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ ಇದ್ದು ಹಾಸನ ಅಭ್ಯರ್ಥಿ ಘೋಷಣೆ ಮಾಡದಂತೆ ದೇವೇಗೌಡರಿಂದ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಹಾಸನ ಟಿಕೆಟ್ ಬಿಟ್ಟು ಉಳಿದ ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತೆ.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿ ಇಂದು ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಶಿವಮೊಗ್ಗದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿರುವ ಶಾಸಕ ಕೆ.ಎಸ್.ಈಶ್ವರಪ್ಪ, ಬಿಜೆಪಿ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸುದ್ದಿಗೋಷ್ಠಿ ನಡೆಸಲಿದ್ದಾರೆ.
Published On - 9:21 am, Mon, 3 April 23