ಬೆಂಗಳೂರು, (ಜೂನ್ 04): ದಿಲ್ಲಿ ಗದ್ದುಗೆಯ ಮೇಲೆ ಪುನಃ ಎನ್ಡಿಎ ಹತ್ತಿ ಕುಳಿತರೆ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಕೇಂದ್ರ ಮಂತ್ರಿಯಾಗುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಅಂದ ಹಾಗೆ ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣದ ಕಾವು ತಾರಕಕ್ಕೇರಿದಾಗ, ಇನ್ನು ಕುಮಾರಸ್ವಾಮಿ ಅವರನ್ನು ಕೇಂದ್ರ ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಬಿಜೆಪಿ ವರಿಷ್ಟರು ಕೈ ಹಾಕುವುದಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಕುಮಾರಸ್ವಾಮಿ ಗೆದ್ದರೆ ಅವರು ಕೇಂದ್ತ ಮಂತ್ತಿಯಾಗುವುದು ಖಚಿತ ಎಂಬ ಮಾತು ಈ ಹಿಂದೆ ಹೇಳಿಬಂದಿತ್ತು. ಈ ವಿಷಯದಲ್ಲಿ ಮೋದಿ-ಅಮಿತ್ ಶಾ ತುಂಬಾ ಫರ್ಮ್ ಆಗಿದ್ದಾರಂತೆ. ಕಾರಣ ಈ ಸಲ ಕರ್ನಾಟಕದ ನೆಲೆಯಲ್ಲಿ ಬಿಜೆಪಿಗೆ ನಿಜವಾದ ಶಕ್ತಿ ತುಂಬಿದ್ದು ಜೆಡಿಎಸ್.
ಅದರಲ್ಲೂ ಮುಖ್ಯವಾಗಿ ಹಳೆ ಮೈಸೂರು ಭಾಗದ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಜತೆಗಿನ ಮೈತ್ರಿ ಕಾರಷಕ್ಕಾಗಿಯೇ ಬಿಜೆಪಿ ದಡ ಸೇರಿದೆ ಎಂಬುದು ಮೋದಿ-ಅಮಿತ್ ಷಾ ಅವರಿಗಿರುವ ರಿಪೋರ್ಟ್. ಮೈಸೂರು-ಕೊಡಗು ಕ್ಷೇತ್ರದಲ್ಲಿ ಜೆಡಿಎಸ್ ನ ಸಾಲಿಡ್ಡು ಸಪೋರ್ಟು ಯದುವೀರ್ ಒಡೆಯರ್ ಪಾಲಿಗೆ ಪ್ಲಸ್ ಆಗಿದೆ. ಒಂದು ವೇಳೆ ಮೈತ್ರಿ ಇಲ್ಲದೆ ಹೋಗಿದ್ದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಟೀಮಿನ ಹೊಡೆತಕ್ಕೆ ಯದುವೀರ್ ಸೋಲುವ ಅಪಾಯವಿತ್ತು.
ಇದೇ ರೀತಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ವಿ.ಸೋಮಣ್ಣ ಅವರ ಗೆಲುವಿಗಾಗಿ ಬಿಜೆಪಿಗಿಂತ ಜೆಡಿಎಸ್ ನಾಯಕರು ಹೆಚ್ಚಾಗಿ ಶ್ರಮಿಸಿದ್ದಾರೆ. ವಸ್ತುಸ್ಥಿತಿ ಎಂದರೆ ಸೋಮಣ್ಣ ಪರ ಹೋರಾಡಲು ತುಮಕೂರಿನ ಬಿಜೆಪಿ ಸೈನ್ಯ ತುಂಬ ಉತ್ಸುಕತೆ ತೋರಿಸಲಿಲ್ಲ.ಇಂತಹ ಹೊತ್ತಿನಲ್ಲಿ ಸೋಮಣ್ಣ ತಮಗಿರುವ ತಂತ್ರಗಾರಿಕೆ ಮತ್ತು ಜೆಡಿಎಸ್ ಪಡೆಯ ವೀರಾವೇಶದ ಕಾರಣಕ್ಕಾಗಿ ಗೆಲುವು ಸಾಧಿಸಿದ್ದಾರೆ ಎನ್ನಬಹುದು.
ಇನ್ನು ತುಮಕೂರಿನಲ್ಲಿರುವ ಒಕ್ಕಲಿಗ ಮತಗಳು ಸೋಮಣ್ಣನ ಕೈಹಿಡಿದಿವೆ. ಯಾಕಂದ್ರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಳೇಟಿನಿಂದ ಎಚ್ಡಿ ದೇವೇಗೌಡ ಅವರು ಸೋತಿದ್ದಾರೆ ಎನ್ನುವ ಸಿಟ್ಟು ತುಮಕೂರು ಒಕ್ಕಲಿಗರಲ್ಲಿತ್ತು. ಹೀಗಾಗಿ ಈ ಬಾರಿ ಖುದ್ದು ಕುಮಾರಸ್ವಾಮಿ ಹಾಗೂ ದೇವೇಗೌಡ್ರೇ ಸೋಮಣ್ಣ ಪರವಾಗಿ ಪ್ರಚಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸೋಮಣ್ಣ ತುಮಕೂರಿನಲ್ಲಿ ರಾಜಕೀಯ ಪುನರ್ಜನ್ಮ ಪಡೆಯುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಚಿಕ್ಕಬಳ್ಳಾಪುರದಲ್ಲಿ ಡಾ.ಸುಧಾಕರ್ ಗೆಲುವಿಗೆ ಜೆಡಿಎಸ್ ಕಾರಣ ಎಂದು ಹೇಳಬಹುದು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಸಿಎಂ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಅವರ ಪವರ್ ಫುಲ್ ಹೊಡೆತಕ್ಕೆ ಬಿಜೆಪಿ ಸಾಟಿಯೇ ಅಲ್ಲ. ಆದರೂ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಅಲ್ಲಿ ಗೆಲುವವು ಸಾಧಿಸಿದ್ದಾರೆ. ಅದಕ್ಕೆ ಒಂದು ರೀತಿಯಾಗಿ ಜೆಡಿಎಸ್ ಕಾರಣ. ಇದೇ ರೀತಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಜೆಡಿಎಸ್ ಬಲ ಸೇರದಿದ್ದರೆ ತೇಜಸ್ವಿಸೂರ್ಯ ಅವರಿಗೆ ಕಷ್ಟವಾಗುತ್ತಿತ್ತು. ಹಾಗೆಯೇ ಚಿತ್ರದುರ್ಗದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಕ್ಯಾಂಡಿಡೇಟ್ ಗೋವಿಂದ ಕಾರಜೋಳ ಜಯಭೇರಿಗೆ ಜೆಡಿಎಸ್ ಬಲ ಸೇರಿದ್ದೇ ಕಾರಣ. ಹೇಗೆಂದರೆ ಮುಸ್ಲಿಂ ಮತಗಳು ಹೊರತುಪಡಿಸಿದರೆ ಜೆಡಿಎಸ್ನ ಸಾಂಪ್ರದಾಯಿಕ ಮತಗಳು ಛಿದ್ರವಾಗಿಲ್ಲ. ತಳಪಟ್ಟದಲ್ಲಿ ಜೆಡಿಎಸ್ ಬಿಜೆಪಿ ಹೊಂದಾಣಿಕೆ ಗಟ್ಟಿಯಾಗಿದ್ದರಿಂದ ಜೆಡಿಎಸ್ನ ಮತಗಳು ಸಾಲಿಡ್ ಆಗಿ ಬಿಜೆಪಿ ಅಭ್ಯರ್ಥಿಗೆ ಬಿದ್ದಿವೆ.
ಉಳಿದಂತೆ ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಗೆಲುವು ನಿರೀಕ್ಷಿತವಾಗಿದ್ದರೂ ಅದರಲ್ಲಿ ಜೆಡಿಎಸ್ ಪಾಲಿದೆ. ಹೀಗೆ ನೋಡುತ್ತಾ ಹೋದರೆ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವಿನ ಕನಸು ಮೂಡಲು ಜೆಡಿಎಸ್ ಕಾರಣವಾಗಿರುವುದರಿಂದ ಮೋದಿ-ಅಮಿತ್ ಶಾ ಜೋಡಿ ಖುಷಿಯಾಗಿದೆ. ಹೀಗಾಗಿ ದಿಲ್ಲಿ ಗದ್ದುಗೆಯ ಮೇಲೆ ಎನ್ಡಿಎ ಪುನಃ ಹತ್ತಿ ಕುಳಿತರೆ ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗುವುದು ಪಕ್ಕಾ ಎಂಬುದು ರಾಜ್ಯ ಬಿಜೆಪಿ ಪಾಳಯಕ್ಕಿರುವ ಮಾಹಿತಿ.
ಇನ್ನು ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿಗೆ ದೂರವಾಣಿ ಕರೆ ಮಾಡಿ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ. ಬುಧವಾರ ಎನ್ಡಿಎ ಸಭೆ ನಡೆಯಲಿದ್ದು, ಅದರಲ್ಲಿ ಹಾಜರಾಗುವಂತೆ ಕುಮಾರಸ್ವಾಮಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಕರ್ನಾಟಕದಲ್ಲಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ನೊಮದಿಗಿನ ಮೈತ್ರಿ ಬಿಜೆಪಿ ಭಾರೀ ಪ್ಲಸ್ ಆಗಿದ್ದು, ಇದು ಬಿಜೆಪಿ ಹೈಕಮಾಂಡ್ಗೆ ಖುಷಿ ತಂದಿದೆ. ಹೀಗಾಗಿ ಕುಮಾರಸ್ವಾಮಿ ಅವರನ್ನು ಸ್ಪೆಷಲ್ ಟ್ರೀಟ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ