ನವದೆಹಲಿ, ಮೇ 28: ಹದಿನೆಂಟನೇ ಲೋಕಸಭೆಗೆ ನಡೆಯುತ್ತಿರುವ ಚುನಾವಣೆ (Lok Sabha elections 2024) ಮುಕ್ತಾಯ ಹಂತದಲ್ಲಿದೆ. ಏಳು ಹಂತದಲ್ಲಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ಈಗಾಗಲೇ ಆರು ಹಂತದ ಮತದಾನ ಮುಗಿದಿದ್ದು ಜೂನ್ 1ಕ್ಕೆ ಕೊನೆಯ ಹಂತದ ಮತದಾನ ಇದೆ. 97 ಕೋಟಿ ಅರ್ಹ ಮತದಾರರು ಇರುವ ಈ ಚುನಾವಣೆ ಅತೀ ದೊಡ್ಡದೆನಿಸಿದೆ. 44 ದಿನಗಳ ಕಾಲ ನಡೆಯುವ ಈ ಚುನಾವಣೆಯಲ್ಲಿ ಜೂನ್ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಮತದಾರರು ಯಾರ ಪರ ಒಲವು ತೋರಿದ್ದಾರೆ ಎಂಬುದು ಅಂದು ಗೊತ್ತಾಗಲಿದೆ. ಆಡಳಿತಾರೂಢ ಎನ್ಡಿಎ ಮೈತ್ರಿಕೂಟ ಸತತ ಮೂರನೇ ಬಾರಿ ಅಧಿಕಾರಕ್ಕೆ ಬರಲು ಯತ್ನಿಸಿದೆ. 2004ರಿಂದ 2014ರವರೆಗೆ ಎರಡು ಬಾರಿ ಅಧಿಕಾರ ಹೊಂದಿದ್ದ ಯುಪಿಎ ಮೈತ್ರಿಕೂಟ ಈಗ ಇಂಡಿಯಾ ಕೂಟವಾಗಿ ಬದಲಾಗಿದ್ದು, ಮರಳಿ ಅಧಿಕಾರ ಪಡೆಯಲು ಯತ್ನಿಸಿದೆ. ಇದೇ ವೇಳೆ ಚುನಾವಣಾ ಫಲಿತಾಂಶಕ್ಕೂ ಮುನ್ನ ಬಹಳ ಜನರ ಚಿತ್ತ ಮತಗಟ್ಟೆ ಸಮೀಕ್ಷೆಯತ್ತ (exit polls) ಹೊರಳಿದೆ.
ಮತದಾನ ಪೂರ್ಣವಾಗಿ ಮುಗಿಯುವವರೆಗೂ ಮತಗಟ್ಟೆ ಸಮೀಕ್ಷೆಗಳನ್ನು ಪ್ರಕಟಿಸುವಂತಿಲ್ಲ ಎಂಬ ಚುನಾವಣಾ ಆಯೋಗದ ಆದೇಶ ಇದೆ. ಹೀಗಾಗಿ, ಪ್ರತೀ ಹಂತದ ಮತದಾನದ ವೇಳೆ ಏಜೆನ್ಸಿಗಳು ಮತಗಟ್ಟೆ ಸಮೀಕ್ಷೆ ಮಾಡಿದ್ದರೂ ಅದರ ವಿವರವನ್ನು ಎಲ್ಲಿಯೂ ಬಹಿರಂಗಪಡಿಸುವುದಿಲ್ಲ. ಜೂನ್ 1ಕ್ಕೆ ಕೊನೆಯ ಹಂತದ ಮತದಾನ ಇದೆ. ಸಂಜೆ 7ರವರೆಗೂ ಮತದಾನದ ವಿಸ್ತರಿತ ಅವಧಿ ಇದೆ. ಅದಾದ ಬಳಿಕ ಮತಗಟ್ಟೆ ಸಮೀಕ್ಷೆ ಪ್ರಕಟಿಸಬಹುದು.
ಇದನ್ನೂ ಓದಿ: Lok Sabha Election 2024 Result date:ಲೋಕಸಭೆ ಚುನಾವಣೆ 2024: ಮತ ಎಣಿಕೆ, ಫಲಿತಾಂಶ ಯಾವಾಗ?
ಹೀಗಾಗಿ, ಜೂನ್ 1, ಸಂಜೆ 7 ಗಂಟೆ ಬಳಿಕ ಬಹುತೇಕ ಟಿವಿ ವಾಹಿನಿಗಳಲ್ಲಿ ಮತಗಟ್ಟೆ ಸಮೀಕ್ಷೆಯ ವಿವರಗಳನ್ನು ವೀಕ್ಷಿಸಬಹುದು. ಟಿವಿ9 ವಾಹಿನಿಯಲ್ಲೂ ಎಕ್ಸಿಟ್ ಪೋಲ್ಗಳ ಮಾಹಿತಿ ವೀಕ್ಷಿಸಬಹುದು.
ಚುನಾವಣೆಗೆ ಮುನ್ನ ನಡೆಯುವ ಸಮೀಕ್ಷೆಯು ಚುನಾವಣಾ ಪೂರ್ವ ಸಮೀಕ್ಷೆಯಾಗಿರುತ್ತದೆ. ಒಂದು ಹಂತದಲ್ಲಿ ಜನರ ಭಾವನೆ ಹೇಗಿದೆ ಎನ್ನುವುದರ ಸ್ಥೂಲ ನೋಟ ಸಿಗುತ್ತದೆ. ಮತಗಟ್ಟೆ ಸಮೀಕ್ಷೆಯು ಆಗಷ್ಟೇ ಮತದಾನ ಮಾಡಿ ಬಂದ ಕೆಲ ವ್ಯಕ್ತಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿರುತ್ತದೆ. ಹೀಗಾಗಿ, ಮತಗಟ್ಟೆ ಸಮೀಕ್ಷೆಗಳು ಹೆಚ್ಚು ನಿಖರವಾಗಿರುತ್ತವೆ.
ಇದನ್ನೂ ಓದಿ: PM Narendra Modi: ಚುನಾವಣಾ ಫಲಿತಾಂಶಕ್ಕೂ ಮುನ್ನ ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿಯಿಂದ ಧ್ಯಾನ
ಹಾಗಂತ, ಎಕ್ಸಿಟ್ ಪೋಲ್ಗಳು ತಿಳಿಸಿದ ಸಂಖ್ಯೆಯಲ್ಲೇ ಫಲಿತಾಂಶ ಬರುತ್ತದೆನ್ನುವ ಖಾತ್ರಿ ಇಲ್ಲ. ಸ್ಪಷ್ಟ ಅಥವಾ ಅಸ್ಪಷ್ಟವೋ ಒಂದು ಟ್ರೆಂಡ್ ಸಿಕ್ಕುತ್ತದೆ. ಹಿಂದೆ ನಡೆದ ಎಕ್ಸಿಟ್ ಪೋಲ್ಗಳಲ್ಲಿ ಹೆಚ್ಚಿನವು ಒಂದು ಮಟ್ಟಕ್ಕೆ ನಿಜವಾಗಿವೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.
ಉದಾಹರಣೆಗೆ, 2019ರ ಚುನಾವಣೆಯಲ್ಲಿ ನಡೆದ ಎಕ್ಸಿಟ್ ಪೋಲ್ನಲ್ಲಿ ಬಹುತೇಕ ಎಲ್ಲಾ ಏಜೆನ್ಸಿಗಳೂ ಸರಿಯಾಗಿ ಅಂದಾಜು ಮಾಡಿದ್ದವು. ನೇತಾ ಎಂಬ ಸಂಸ್ಥೆ ಮಾತ್ರವೇ ಎನ್ಡಿಎಗೆ 242 ಸ್ಥಾನ ಸಿಗಬಹುದು ಎಂದು ಹೇಳಿದ್ದು. ಅದು ಬಿಟ್ಟರೆ 10-12 ಏಜೆನ್ಸಿಗಳು ಅಥವಾ ಮಾಧ್ಯಮ ಸಂಸ್ಥೆಗಳು ಎನ್ಡಿಎಗೆ ನಿಚ್ಚಳ ಬಹುಮತ ಬರುತ್ತೆ ಎಂದಿದ್ದವು. ಅಂತಿಮವಾಗಿ ಎನ್ಡಿಎಗೆ 303 ಸ್ಥಾನಗಳು ಸಿಕ್ಕು ಸತತ ಎರಡನೇ ಬಾರಿ ಅಧಿಕಾರ ರಚಿಸಿತು.\
ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ