ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು 2024ರ ಲೋಕಸಭೆ ಚುನಾವಣೆಗಾಗಿ ಬೃಹತ್ ರ‍್ಯಾಲಿಗಳನ್ನು (Lok Sabha Election Rally) ನಡೆಸಿದ್ದಾರೆ. ಅವರು ತಮ್ಮ ಸರ್ಕಾರದ 10 ವರ್ಷಗಳ ಅಧಿಕಾರಾವಧಿಯ ರಿಪೋರ್ಟ್ ಕಾರ್ಡ್ ಅನ್ನು ಸಾರ್ವಜನಿಕರ ಮುಂದೆ ಪ್ರಸ್ತುತಪಡಿಸಿದ್ದಾರೆ. ಈ ಬಾರಿಯ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಒಟ್ಟು 206 ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇದಲ್ಲದೇ 3ನೇ ಅವಧಿಯಲ್ಲಿ ಅಧಿಕಾರಕ್ಕೆ ಬಂದರೆ ತಮ್ಮ ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದನ್ನೂ ಪ್ರಸ್ತಾಪಿಸಿದ್ದಾರೆ.
2024ರ ಲೋಕಸಭಾ ಚುನಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ತಮ್ಮ ಕೊನೆಯ ರ‍್ಯಾಲಿಯನ್ನು ಇಂದು (ಗುರುವಾರ) ನಡೆಸಿದರು. ಇದಾದ ನಂತರ ಧ್ಯಾನ ಮಾಡಲು ಕನ್ಯಾಕುಮಾರಿಗೆ ತೆರಳಿದ್ದಾರೆ. ಈ ಕೊನೆಯ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲೂ ಮತದಾನ ನಡೆಯಲಿದೆ. ಅಲ್ಲಿ ಅವರ ಪ್ರತಿಸ್ಪರ್ಧಿಯಾಗಿ ಇಂಡಿಯ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್‌ನ ಅಭ್ಯರ್ಥಿ ಅಜಯ್ ರೈ ಕಣಕ್ಕಿಳಿದಿದ್ದಾರೆ. ಅಜಯ್ ರೈ ವಾರಾಣಸಿಯಿಂದ ಮೋದಿ ವಿರುದ್ಧ ಸತತ 3 ಬಾರಿ ಸೋತಿದ್ದಾರೆ. ಅಂದಹಾಗೆ, ಈ ಬಾರಿಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರಮ ವಹಿಸಿ ರ‍್ಯಾಲಿ ನಡೆಸಿ ಇತಿಹಾಸ ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಯಾವ ಪ್ರಧಾನಿಯೂ ಇಂತಹ ದ್ವೇಷದ ಮಾತುಗಳನ್ನಾಡಿಲ್ಲ; ಮೋದಿ ವಿರುದ್ಧ ಮನಮೋಹನ್ ಸಿಂಗ್ ಅಸಮಾಧಾನ
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಚುನಾವಣಾ ಪ್ರಚಾರದ ಉಸ್ತುವಾರಿ ವಹಿಸಿದ್ದರು. ಒಂದೇ ದಿನದಲ್ಲಿ ಹಲವು ರ‍್ಯಾಲಿಗಳನ್ನು ಉದ್ದೇಶಿಸಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನ ಸಾಮಾನ್ಯರಿಗೆ ತಿಳಿಸಿದ್ದರು. ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ 206 ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಪ್ರಧಾನಮಂತ್ರಿಯವರು ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ ಮೇಲೆ ಹೆಚ್ಚಾಗಿ ಗಮನಹರಿಸಿದ್ದಾರೆ. ಅಲ್ಲಿ ಅವರು ಕ್ರಮವಾಗಿ 31, 20, 19 ಮತ್ತು 18 ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಈ 10 ವರ್ಷಗಳಲ್ಲಿ ಪತ್ರಕರ್ತರೊಂದಿಗೆ ಹೆಚ್ಚು ಮುಖಾಮುಖಿಯಾಗಿಲ್ಲ ಎಂಬ ಆರೋಪವಿತ್ತು. ಆದರೆ, ಈ ಬಾರಿ ಪ್ರಧಾನಿ ಮೋದಿ ಅವರು 80 ಸಂದರ್ಶನಗಳನ್ನು ನೀಡಿದ್ದಾರೆ. ರ‍್ಯಾಲಿಗಳ ಹೊರತಾಗಿ, ಪ್ರಧಾನಿ ನರೇಂದ್ರ ಮೋದಿ ಅನೇಕ ಕಾರ್ಯಕ್ರಮಗಳು ಮತ್ತು ರೋಡ್ ಶೋಗಳನ್ನು ಸಹ ನಡೆಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳಿಗೆ ದಾಖಲೆಯ 80 ಸಂದರ್ಶನಗಳನ್ನು ನೀಡಿರುವ ಅವರು ಈ ವೇಳೆ ಪ್ರತಿಪಕ್ಷಗಳ ಆರೋಪಗಳಿಗೆ ಒಂದೊಂದಾಗಿ ಉತ್ತರ ನೀಡಿದ್ದಾರೆ. ಇದರೊಂದಿಗೆ ಎನ್ಡಿಎ ಸರ್ಕಾರದ 10 ವರ್ಷಗಳ ಕಾರ್ಯದ ವಿವರ ನೀಡಿದ್ದಾರೆ.
ಇದನ್ನೂ ಓದಿ: ಕೇಂದ್ರದಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧನೆ ಮಾಡಲಿದೆ; ಚುನಾವಣಾ ಪ್ರಚಾರ ಮುಕ್ತಾಯಗೊಳಿಸಿದ ಮೋದಿ
ಪ್ರಧಾನಿ ಮೋದಿ ತಮ್ಮ ಮೂರನೇ ಅವಧಿಯ ಮೊದಲ 125 ದಿನಗಳ ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದಾರೆ. ಸರ್ಕಾರ ರಚನೆಯಾದ ತಕ್ಷಣ ಮೂರನೇ ಅವಧಿಯ 125 ದಿನಗಳಲ್ಲಿ ಏನಾಗುತ್ತದೆ, ಸರ್ಕಾರ ಏನು ಮಾಡುತ್ತದೆ, ಸರ್ಕಾರ ಹೇಗೆ ಕೆಲಸ ಮಾಡುತ್ತದೆ, ಯಾರಿಗಾಗಿ ಸರ್ಕಾರ ಕೆಲಸ ಮಾಡುತ್ತದೆ ಎಂಬುದನ್ನು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದರಲ್ಲಿಯೂ 25 ದಿನ ವಿಶೇಷವಾಗಿ ಯುವಕರಿಗೆ ಒತ್ತು ನೀಡಲಾಗಿದ್ದು, ಮುಂದಿನ 5 ವರ್ಷಗಳಲ್ಲಿ ಯಾವ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂಬ ರೂಪುರೇಷೆಯನ್ನೂ ರೂಪಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ