ಟಿಎಂಸಿ ಬದಲು ಬಿಜೆಪಿಗೆ ಮತ ಹಾಕುವುದು ಉತ್ತಮ; ವಿವಾದಕ್ಕೀಡಾಯ್ತು ಕಾಂಗ್ರೆಸ್ ನಾಯಕನ ಹೇಳಿಕೆ

|

Updated on: May 01, 2024 | 10:09 PM

ಲೋಕಸಭಾ ಚುನಾವಣೆಯ ಪ್ರಚಾರದ ಭರದಲ್ಲಿ ಅನೇಕ ಪಕ್ಷಗಳ ನಾಯಕರು ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಾಗುತ್ತಿದ್ದಾರೆ. ಅವರಲ್ಲಿ ಪಶ್ಚಿಮ ಬಂಗಾಳದ ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಕೂಡ ಒಬ್ಬರು. ಅವರು ನೀಡಿರುವ ಹೇಳಿಕೆ ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ.

ಟಿಎಂಸಿ ಬದಲು ಬಿಜೆಪಿಗೆ ಮತ ಹಾಕುವುದು ಉತ್ತಮ; ವಿವಾದಕ್ಕೀಡಾಯ್ತು ಕಾಂಗ್ರೆಸ್ ನಾಯಕನ ಹೇಳಿಕೆ
ಅಧೀರ್ ರಂಜನ್ ಚೌಧರಿ
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಚುನಾವಣಾ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ (Adhir Ranjan Chowdhury) ನೀಡಿರುವ ಹೇಳಿಕೆ ವಿವಾದವನ್ನು ಹುಟ್ಟುಹಾಕಿದೆ. ಅವರ ಹೇಳಿಕೆಗೆ ಸ್ವಪಕ್ಷೀಯರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಮಂಗಳವಾರ ಪಶ್ಚಿಮ ಬಂಗಾಳದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧೀರ್ ರಂಜನ್ ಚೌಧರಿ, ತೃಣಮೂಲ ಕಾಂಗ್ರೆಸ್ (TMC)ಗೆ ಮತ ಹಾಕುವುದಕ್ಕಿಂತ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ ಹಾಕುವುದು ಉತ್ತಮ ಎಂದು ಹೇಳಿದ್ದಾರೆ. ಅವರ ಹೇಳಿಕೆಯನ್ನು ಬಿಜೆಪಿ ನಾಯಕ ಶೆಹಜಾದ್ ಪೂನವಾಲಾ ಶೇರ್ ಮಾಡಿಕೊಂಡಿದ್ದಾರೆ.

ನಿನ್ನೆ ನಡೆದ ಸಭೆಯಲ್ಲಿ ಚೌಧರಿ ಅವರು ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುವಲ್ಲಿ ಈ ಚುನಾವಣೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ. ಜಾತ್ಯತೀತ ಶಕ್ತಿಗಳಿಗೆ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸಿದ್ದಾರೆ. ಟಿಎಂಸಿಗೆ ಮತ ಹಾಕುವುದು ಪರೋಕ್ಷವಾಗಿ ಬಿಜೆಪಿಗೆ ಲಾಭವಾಗಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Lok Sabha Polls 2024: ಚುನಾವಣಾ ಪ್ರಚಾರದಲ್ಲಿ ಭಾಗವಹಿಸದಂತೆ ಮಾಜಿ ಸಿಎಂ ಕೆಸಿಆರ್​ಗೆ ನಿಷೇಧ

ಕಾಂಗ್ರೆಸ್ ಮತ್ತು ಎಡಪಕ್ಷಗಳು ಗೆಲ್ಲುವುದು ಅತ್ಯಗತ್ಯ. ಇಲ್ಲದೇ ಹೋದರೆ ಜಾತ್ಯತೀತತೆಗೆ ಧಕ್ಕೆಯಾಗುತ್ತದೆ. ಟಿಎಂಸಿಗೆ ಮತ ಹಾಕುವುದು ಎಂದರೆ ಬಿಜೆಪಿಗೆ ಮತ ಹಾಕುವುದು ಎಂದರ್ಥ. ಅದರ ಬದಲು ಬಿಜೆಪಿಗೆ ಮಾತ್ರ ಮತ ಹಾಕುವುದು ಒಳ್ಳೆಯದು. ಬಿಜೆಪಿಗೆ ಮತ ಹಾಕಬೇಡಿ, ಟಿಎಂಸಿಗೆ ಮತ ಹಾಕಬೇಡಿ ಎಂದು ಚೌಧರಿ ಬಂಗಾಳಿ ಭಾಷಣದಲ್ಲಿ ಹೇಳಿದ್ದಾರೆ.

ಚೌಧರಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸ್ಥಾನಗಳ ಸಂಖ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವುದು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಗುರಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Mallikarjun Kharge: ಶಿವ ವರ್ಸಸ್ ರಾಮ; ಚುನಾವಣೆ ಪ್ರಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ 

ತೃಣಮೂಲ ಕಾಂಗ್ರೆಸ್ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಚೌಧರಿ ಅವರು ಬಂಗಾಳದಲ್ಲಿ ಬಿಜೆಪಿಯ ಧ್ವನಿ ಎತ್ತಿದ್ದಾರೆ. ಅವರು ಬಿಜೆಪಿಯ “ಬಿ-ಟೀಮ್” ಎಂದು ಲೇಬಲ್ ಮಾಡಿದೆ. ಚೌಧರಿ ಬಿಜೆಪಿಗೆ ಬೆಂಬಲ ನೀಡಿದ್ದಕ್ಕಾಗಿ ಟಿಎಂಸಿ ಟೀಕಿಸಿದೆ. ಪ್ರತಿಪಾದಿಸಿದ್ದಕ್ಕಾಗಿ ಟೀಕಿಸಿದೆ. ಇಂತಹ ಕ್ರಮಗಳು ಪಶ್ಚಿಮ ಬಂಗಾಳದ ಹಿತಾಸಕ್ತಿಗಳಿಗೆ ದ್ರೋಹ ಬಗೆದಂತಿದೆ ಎಂದು ಹೇಳಿದೆ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಕಾಂಗ್ರೆಸ್-ಎಡ ಮೈತ್ರಿಕೂಟ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಲೋಕಸಭೆ ಚುನಾವಣೆಯ ಕಾವೇರಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ