ಮಧ್ಯಪ್ರದೇಶ ಚುನಾವಣೆ: ಬಹಿರಂಗ ಪ್ರಚಾರ ಅಂತ್ಯ, ಎಲ್ಲಾ 230ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನಾಳೆ ಮತದಾನ

| Updated By: ನಯನಾ ರಾಜೀವ್

Updated on: Nov 16, 2023 | 10:47 AM

Madhya Pradesh Assembly Elections 2023: ಮಧ್ಯಪ್ರದೇಶ(Madhya Pradesh)ಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಶುಕ್ರವಾರ ಮತದಾನ ನಡೆಯಲಿದೆ. ಫಲಿತಾಂಶ ಡಿಸೆಂಬರ್ 3 ರಂದು ಪ್ರಕಟವಾಗಲಿದೆ. ಮತದಾನಕ್ಕೂ ಒಂದು ದಿನ ಮುಂಚಿತವಾಗಿ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಅಭ್ಯರ್ಥಿಗಳು ಮನೆ ಮನೆ ತಿರುಗಿ ಪ್ರಚಾರ ಮಾಡುತ್ತಿದ್ದಾರೆ. ಚುನಾವಣಾ ರ್ಯಾಲಿ, ಮೆರವಣಿಗೆ, ಧ್ವನಿವರ್ಧಕ ಬಳಕೆ, ಸಭೆಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಮಧ್ಯಪ್ರದೇಶ ಚುನಾವಣೆ: ಬಹಿರಂಗ ಪ್ರಚಾರ ಅಂತ್ಯ, ಎಲ್ಲಾ 230ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನಾಳೆ ಮತದಾನ
ರಾಹುಲ್ ಗಾಂಧಿ-ನರೇಂದ್ರ ಮೋದಿ
Image Credit source: News 18
Follow us on

ಮಧ್ಯಪ್ರದೇಶ(Madhya Pradesh)ಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಶುಕ್ರವಾರ ಮತದಾನ ನಡೆಯಲಿದೆ. ಫಲಿತಾಂಶ ಡಿಸೆಂಬರ್ 3 ರಂದು ಪ್ರಕಟವಾಗಲಿದೆ. ಮತದಾನಕ್ಕೂ ಒಂದು ದಿನ ಮುಂಚಿತವಾಗಿ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಅಭ್ಯರ್ಥಿಗಳು ಮನೆ ಮನೆ ತಿರುಗಿ ಪ್ರಚಾರ ಮಾಡುತ್ತಿದ್ದಾರೆ. ಚುನಾವಣಾ ರ್ಯಾಲಿ, ಮೆರವಣಿಗೆ, ಧ್ವನಿವರ್ಧಕ ಬಳಕೆ, ಸಭೆಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಪ್ರಚಾರದ ಕೊನೆಯ ದಿನವಾದ ಬುಧವಾರ ರಾಜಕೀಯ ಪಕ್ಷಗಳ ಮುಖಂಡರು ಬೃಹತ್ ಸಭೆಗಳನ್ನು ನಡೆಸಿದ್ದಾರೆ. ಎಲ್ಲಾ 230 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಧ್ಯಪ್ರದೇಶದ ಎಲ್ಲಾ 230 ವಿಧಾನಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದೆ. ಮಧ್ಯಪ್ರದೇಶದಲ್ಲಿ 5.6 ಕೋಟಿ ಮತದಾರರಿದ್ದಾರೆ. ಇವರಲ್ಲಿ 2.88 ಕೋಟಿ ಪುರುಷ ಮತದಾರರು ಮತ್ತು 2.72 ಕೋಟಿ ಮಹಿಳಾ ಮತದಾರರಿದ್ದಾರೆ. ಒಟ್ಟು 22.36 ಲಕ್ಷ ಯುವಕರು ಪ್ರಥಮ ಬಾರಿಗೆ ಮತದಾನ ಮಾಡಲಿದ್ದಾರೆ.

ಚುನಾವಣೆ ಘೋಷಣೆಯಾದ ದಿನದಿಂದ ಕಳೆದ 30 ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರು ಭರ್ಜರಿ ಪ್ರಚಾರ ನಡೆಸಿದ್ದಾರೆ‌‌‌. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದಲ್ಲಿ 15 ಸಾರ್ವಜನಿಕ ಸಭೆಗಳನ್ನು ನಡೆಸಿದ್ದಾರೆ‌. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಜ್ಯದಲ್ಲಿ ಅತಿ ಹೆಚ್ಚು 160 ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ 14 ಸಾರ್ವಜನಿಕ ಸಭೆಗಳನ್ನು ನಡೆಸಿದ್ದಾರೆ‌. ರಾಜ್ಯ ಬಿಜೆಪಿ ಅಧ್ಯಕ್ಷ ವಿ.ಡಿ ಶರ್ಮಾ 55 ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ‌.

ಮತ್ತಷ್ಟು ಓದಿ: ಮಧ್ಯಪ್ರದೇಶ ಚುನಾವಣೆ: ಅಮಿತ್​ ಶಾರಿಂದ ಭರವಸೆಗಳ ಸುರಿಮಳೆ, ಡಬಲ್​ ಇಂಜಿನ್ ಸರ್ಕಾರ ರಚನೆಗೆ ಅವಕಾಶ ನೀಡಲು ಮನವಿ

ಬಿಜೆಪಿಯಿಂದ ಘಟನಾನುಘಟಿ ನಾಯಕರಾದ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ರಾಜನಾಥ್ ಸಿಂಗ್, ಜ್ಯೋತಿರಾದಿತ್ಯ ಸಿಂಧಿಯಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್, ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ದೊಡ್ಡ ನಾಯಕರು ಪ್ರಚಾರ ನಡೆಸಿದ್ದಾರೆ. ಇದಲ್ಲದೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಎಸ್ಪಿ ವರಿಷ್ಠೆ ಮಾಯಾವತಿ ಕೂಡ ಪ್ರಚಾರ ನಡೆಸಿದ್ದಾರೆ.

ಚುನಾವಣಾ ಆಯೋಗವು 64523 ಮತಗಟ್ಟೆಗಳಲ್ಲಿ ಮತದಾನಕ್ಕೆ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಮತಗಟ್ಟೆಗಳು ಮತ್ತು ಮತಯಂತ್ರಗಳನ್ನು ಜಿಪಿಎಸ್ ಅಳವಡಿಸಿದ ವಾಹನಗಳಲ್ಲಿ ಕಳುಹಿಸಲಾಗುತ್ತಿದೆ. ಈ ವಾಹನಗಳನ್ನು ಜಿಪಿಎಸ್ ಮೂಲಕ ಭೋಪಾಲ್‌ನಲ್ಲಿರುವ ಕೇಂದ್ರದಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ. ವಾಹನಗಳ ಮಾರ್ಗಗಳನ್ನು ನಿಗದಿಪಡಿಸಲಾಗುತ್ತಿದೆ. ಮತಯಂತ್ರ ಹೊತ್ತ ವಾಹನಗಳು ಮಾರ್ಗ ಬದಲಿಸಿದ್ದಲ್ಲಿ ತಕ್ಷಣವೇ ಮುಖ್ಯ ಕೇಂದ್ರಕ್ಕೆ ಸಂದೇಶ ರವಾನೆಯಾಗಲಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ