ಇಂದು ಮಿಜೋರಾಂ ವಿಧಾನಸಭಾ ಚುನಾವಣೆ(Mizoram Assembly Election)ಯ ಮತ ಎಣಿಕೆ ಕೆಲವೇ ಕ್ಷಣಗಳಲ್ಲಿ ಆರಂಭಗೊಳ್ಳಲಿದೆ. ನಾಲ್ಕು ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ನಂತರ ಈಗ ಮಿಜೋರಾಂ ವಿಧಾನಸಭೆ ಚುನಾವಣೆಯ ಮತ ಎಣಿಕೆಯ ಸರದಿಯಾಗಿದೆ. ಮಿಜೋರಾಂನಲ್ಲಿ ಮತ ಎಣಿಕೆಗೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈ ಬಾರಿ ಮಿಜೋ ನ್ಯಾಷನಲ್ ಫ್ರಂಟ್ (MNF), ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ.
18 ಮಹಿಳೆಯರು ಸೇರಿದಂತೆ ಒಟ್ಟು 174 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಮಿಜೋರಾಂ ವಿಧಾನಸಭೆಗೆ ನವೆಂಬರ್ 7 ರಂದು ಮತದಾನ ನಡೆದಿತ್ತು. ರಾಜ್ಯದ 8.57 ಲಕ್ಷ ಮತದಾರರಲ್ಲಿ 80 ಪ್ರತಿಶತಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮಿಜೋರಾಂನಲ್ಲಿ MNF, ZPM ಮತ್ತು ಕಾಂಗ್ರೆಸ್ ತಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಬಿಜೆಪಿ 13 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಮಿಜೋರಾಂನಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷ (ಎಎಪಿ) ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಇದಲ್ಲದೇ 17 ಸ್ವತಂತ್ರ ಅಭ್ಯರ್ಥಿಗಳ ಭವಿಷ್ಯ ಕೂಡ ನಿರ್ಧಾರವಾಗಲಿದೆ.
ಬಿಗಿ ಭದ್ರತೆಯ ನಡುವೆ ಎಲ್ಲಾ 13 ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ ಎಂದು ಮಿಜೋರಾಂನ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ಎಚ್ ಲಿಯಾಂಜೆಲ್ಲಾ ತಿಳಿಸಿದ್ದಾರೆ. 40 ವಿಧಾನಸಭಾ ಸ್ಥಾನಗಳಿಗೆ 13 ಕೇಂದ್ರಗಳಲ್ಲಿ ತಲಾ ಒಂದು ಮತ ಎಣಿಕೆ ಸಭಾಂಗಣ ನಿರ್ಮಿಸಲಾಗಿದೆ. ಮೊದಲಿಗೆ ಅಂಚೆ ಮತಪತ್ರಗಳ ಎಣಿಕೆ ನಡೆಯಲಿದ್ದು, ಬೆಳಗ್ಗೆ 8.30ರಿಂದ ಇವಿಎಂಗಳಲ್ಲಿ ಚಲಾವಣೆಯಾದ ಮತಗಳ ಎಣಿಕೆ ಕಾರ್ಯ ಆರಂಭವಾಗಲಿದೆ.
ಮತ್ತಷ್ಟು ಓದಿ: ಇಂದಿನ 3 ರಾಜ್ಯಗಳ ಗೆಲುವು 2024ರ ಹ್ಯಾಟ್ರಿಕ್ ಗೆಲುವಿನ ದಿಕ್ಸೂಚಿ: ಪ್ರಧಾನಿ ಮೋದಿ
12 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಐಜ್ವಾಲ್ ಜಿಲ್ಲೆಯಲ್ಲಿ ಮೂರು ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 10 ಜಿಲ್ಲೆಗಳಲ್ಲಿ ತಲಾ ಒಂದು ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮತದಾರರ ಸಂಖ್ಯೆ ಕಡಿಮೆ ಇರುವ ಕೆಲವು ಕ್ಷೇತ್ರಗಳಲ್ಲಿ ಕೇವಲ ಎರಡು ಸುತ್ತಿನ ಮತ ಎಣಿಕೆ ನಡೆಯಲಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಐದು ಸುತ್ತಿನ ಮತ ಎಣಿಕೆ ನಡೆಯಲಿದೆ.
ಮತ ಎಣಿಕೆ ಪ್ರಕ್ರಿಯೆಯಲ್ಲಿ 4 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಲಿದ್ದಾರೆ. ಇವಿಎಂಗಳಿಗಾಗಿ ಒಟ್ಟು 399 ಟೇಬಲ್‌ಗಳು ಮತ್ತು ಅಂಚೆ ಮತಗಳ ಎಣಿಕೆಗೆ 56 ಟೇಬಲ್‌ಗಳು ಇರುತ್ತವೆ ಎಂದು ಎಚ್ ಲಿಯಾಂಜಲಾ ಹೇಳಿದರು.
ಎಕ್ಸಿಟ್ ಪೋಲ್ ಡೇಟಾ ಪ್ರಕಾರ, ಮಿಜೋರಾಂನ 40 ವಿಧಾನಸಭಾ ಸ್ಥಾನಗಳಲ್ಲಿ, ಎಂಎನ್‌ಎಫ್ 15 ರಿಂದ 21 ಸ್ಥಾನಗಳನ್ನು, ಕಾಂಗ್ರೆಸ್ 2 ರಿಂದ 8 ಸ್ಥಾನಗಳನ್ನು, ZPM 12 ರಿಂದ 18 ಸ್ಥಾನಗಳನ್ನು ಮತ್ತು ಇತರರು 0 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.
5 ಸ್ಥಾನಗಳಿಗೆ ಅಂದಾಜು ಮಾಡಲಾಗಿದೆ. ಈ ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ, ಮತ ಹಂಚಿಕೆಗೆ ಸಂಬಂಧಿಸಿದಂತೆ, MNF ಶೇಕಡಾ 32, ಕಾಂಗ್ರೆಸ್ 25 ಶೇಕಡಾ, ZPM ಶೇಕಡಾ 29 ಮತ್ತು ಇತರರು 14 ಶೇಕಡಾ ಮತಗಳನ್ನು ಪಡೆಯಬಹುದು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ