ಫೆ.14, 16 ಮತ್ತು 17ಕ್ಕೆ ಪಂಜಾಬ್​ಗೆ ಪ್ರಧಾನಿ ಮೋದಿ ಭೇಟಿ; ಬಹಿಷ್ಕರಿಸಲು ಸಿದ್ಧತೆ ನಡೆಸಿರುವ ರಾಜ್ಯದ ರೈತರು

| Updated By: Lakshmi Hegde

Updated on: Feb 12, 2022 | 1:34 PM

ಪ್ರಧಾನಿ ಮೋದಿ ರಾಜ್ಯದ ಯಾವುದೇ ಪ್ರದೇಶಕ್ಕೆ ಭೇಟಿ ಕೊಡಬೇಕು ಎಂದರೂ ಅವರು ವಾಯುಮಾರ್ಗದಲ್ಲಿಯೇ ಬರಬೇಕು. ರಸ್ತೆ ಮಾರ್ಗ ಆಯ್ಕೆ ಮಾಡಿಕೊಂಡರೆ ಖಂಡಿತ ಮತ್ತೆ ಸಮಸ್ಯೆ ಎದುರಿಸುತ್ತಾರೆ. ಪ್ರಧಾನಿ ಮೋದಿಯವರು ಕಳೆದ ಒಂದು ವರ್ಷ ಪಂಜಾಬಿಗಳನ್ನು ರಸ್ತೆ ಮೇಲೆ ನಿಲ್ಲಿಸಿದ್ದಾರೆ ಎಂದು ಕಾಂಗ್ರೆಸ್​ ಸಂಸದ ಹೇಳಿದ್ದಾರೆ.

ಫೆ.14, 16 ಮತ್ತು 17ಕ್ಕೆ ಪಂಜಾಬ್​ಗೆ ಪ್ರಧಾನಿ ಮೋದಿ ಭೇಟಿ; ಬಹಿಷ್ಕರಿಸಲು ಸಿದ್ಧತೆ ನಡೆಸಿರುವ ರಾಜ್ಯದ ರೈತರು
ಪ್ರಧಾನಿ ನರೇಂದ್ರ ಮೋದಿ
Follow us on

ಪಂಜಾಬ್​ನಲ್ಲಿ ಫೆ.20ರಂದು ವಿಧಾನಸಭೆ ಚುನಾವಣೆ (Punjab Assembly Election 2022) ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಫೆ.14, 16 ಮತ್ತು 17ರಂದು ಪಂಜಾಬ್​​ನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಫೆ.14 ಜಲಂಧರ್​​, 16ರಂದು ಪಠಾಣ್​ಕೋಟ್​ ಮತ್ತು 17ಕ್ಕೆ ಅಬೋಹಾರಕ್ಕೆ ಭೇಟಿ ನೀಡಿ, ಅಲ್ಲಿ ಚುನಾವಣಾ ರ್ಯಾಲಿ ನಡೆಸಲಿದ್ದಾರೆ. ಆದರೆ ಪಂಜಾಬ್​ ರೈತರು ಪ್ರಧಾನಿ ನರೇಂದ್ರ ಮೋದಿ ಭೇಟಿಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

ಪಂಜಾಬ್​ಗೆ ಪ್ರಧಾನಿ ಭೇಟಿ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್​ ಸಂಸದ ರಣವೀತ್ ಸಿಂಗ್ ಬಿಟ್ಟು, ಪ್ರಧಾನಿ ಮೋದಿಯವರಿಗೆ ಪಂಜಾಬ್​ಗೆ ಸ್ವಾಗತ. ಆದರೆ ಅವರು ಈ ರಾಜ್ಯದ ಯಾವುದೇ ಪ್ರದೇಶಕ್ಕೆ ಭೇಟಿ ಕೊಡಬೇಕು ಎಂದರೂ ಅವರು ವಾಯುಮಾರ್ಗದಲ್ಲಿಯೇ ಬರಬೇಕು. ರಸ್ತೆ ಮಾರ್ಗ ಆಯ್ಕೆ ಮಾಡಿಕೊಂಡರೆ ಖಂಡಿತ ಮತ್ತೆ ಸಮಸ್ಯೆ ಎದುರಿಸುತ್ತಾರೆ. ಪ್ರಧಾನಿ ಮೋದಿಯವರು ಕಳೆದ ಒಂದು ವರ್ಷ ಪಂಜಾಬಿಗಳನ್ನು ರಸ್ತೆ ಮೇಲೆ ನಿಲ್ಲಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ಸಮಯದಲ್ಲಿ ಸುಮಾರು 700 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಅದನ್ನು ನಾವು ಮರೆಯುವುದಾದರೂ ಹೇಗೆ?  ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ ನೆನಪಿಸಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿ ರಸ್ತೆ ಮಾರ್ಗದಲ್ಲಿ ಬಂದರೆ ಖಂಡಿತ ಹಿಂದಿನ ಭೇಟಿಯಂತೆ ಆಗುತ್ತದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಜನವರಿ 5ರಂದು ಪಂಜಾಬ್​ನ ಫಿರೋಜ್​ಪುರಕ್ಕೆ ಭೇಟಿ ನಿಡಲು ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಭದ್ರತಾ ವೈಫಲ್ಯದ ಕಾರಣಕ್ಕೆ ವಾಪಸ್​ ದೆಹಲಿಗೆ ತೆರಳಿದ್ದರು. ಅಂದು ಪಂಜಾಬ್​ ಏರ್​ಪೋರ್ಟ್​ನಲ್ಲಿ ಇಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೆಟ್ಟ ವಾತಾವರಣದ ಕಾರಣದಿಂದ ರಸ್ತೆ ಮಾರ್ಗದ ಮೂಲಕ ಫಿರೋಜ್​ಪುರಕ್ಕೆ ತೆರಳುತ್ತಿದ್ದರು. ಆದರೆ ಆ ಫಿರೋಜ್​ಪುರ-ಮೊಗಾ ರಸ್ತೆಯನ್ನು ರೈತರು ಬ್ಲಾಕ್​ ಮಾಡಿದ್ದರಿಂದ ಪ್ರಧಾನಿ ಮೋದಿ ಮತ್ತು ಅವರ ಬೆಂಗಾವಲು ಪಡೆಗಳು, ಪಿಯಾರಿಯಾನಾ ಗ್ರಾಮದ ಬಳಿಯ ಫ್ಲೈಓವರ್​​ನಲ್ಲಿ ಸುಮಾರು 20 ನಿಮಿಷ ನಿಲ್ಲುವಂತಾಗಿತ್ತು. ಬಳಿಕ ಅಲ್ಲಿಂದ ವಾಪಸ್​ ಏರ್​​ಪೋರ್ಟ್​​ಗೆ ಹೋಗಿ, ಅಲ್ಲಿಂದ ದೆಹಲಿಗೆ ತೆರಳಿದ್ದರು. ಇದು ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದ ಘಟನೆಯಾಗಿದೆ.

ಭದ್ರತಾ ವೈಫಲ್ಯಕ್ಕೆ ಪಂಜಾಬ್​ ರಾಜ್ಯ ಸರ್ಕಾರವೇ ಕಾರಣವೆಂದು ಆರೋಪಿಸಿದ ಕೇಂದ್ರ ಗೃಹ ಇಲಾಖೆ ವರದಿ ಕೇಳಿತ್ತು. ಅದಾದ ಮೇಲೆ ತನಿಖೆಗಾಗಿ ಎರಡೂ ಸರ್ಕಾರಗಳು ಪ್ರತ್ಯೇಕವಾಗಿ ತಂಡ ರಚಿಸಿದ್ದವು. ಆದರೆ ಸುಪ್ರೀಂಕೋರ್ಟ್​ ಎಲ್ಲ ತನಿಖೆಗಳನ್ನೂ ನಿಲ್ಲಿಸುವಂತೆ ಆದೇಶ ನೀಡಿದ್ದಲ್ಲದೆ, ನಿವೃತ್ತ  ನ್ಯಾಯಮೂರ್ತಿ ನೇತೃತ್ವದಲ್ಲಿ ಐವರು ಸದಸ್ಯರ ಕಮಿಟಿ ರಚನೆ ಮಾಡಿದೆ. ಸದ್ಯ ಅಂದಿನ ಭದ್ರತಾ ವೈಫಲ್ಯದ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಮುಸ್ಕಾನ್​ಗೆ ಸನ್ಮಾನ ಮಾಡಲು ಮುಂದಾದ ಕಾಂಗ್ರೆಸ್ ಅಲ್ಪ ಸಂಖ್ಯಾತ ನಾಯಕರು; ಪಕ್ಷದಲ್ಲೇ ವಿರೋಧ- ಕಾರಣವೇನು?

Published On - 12:21 pm, Sat, 12 February 22