ವೃತ್ತಿಪರ ಕುಸ್ತಿಪಟು ಮತ್ತು ಮಾಜಿ ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE) ಸ್ಟಾರ್, ದಿ ಗ್ರೇಟ್ ಖಲಿ (The Great Khali) ಎಂದೇ ಖ್ಯಾತರಾಗಿದ್ದ ದಲೀಪ್ ಸಿಂಗ್ ರಾಣಾ(Wrestler Dalip Singh Rana) ಅವರು ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ದಲೀಪ್ ಸಿಂಗ್ ಅವರು ಇಂದು ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಧ್ಯಾಹ್ನ 1ಗಂಟೆ ಹೊತ್ತಿಗೆ ಕಮಲ ಪಾಳೆಯ ಸೇರಿದ್ದಾರೆ. ಈ ವೇಳೆ ಉಪಸ್ಥಿತರಿದ್ದ ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾತನಾಡಿ, ದಿ ಗ್ರೇಟ್ ಖಲಿಯವರು ಈ ದೇಶದ ಯುವಕರು ಮತ್ತು ಜನರಿಗೆ ಸ್ಫೂರ್ತಿಯಾಗಿದ್ದಾರೆ. ಈ ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುವ ಪ್ರಧಾನಿ ಮೋದಿಯವರ ಪ್ರಯಾಣಕ್ಕೆ ಅವರೂ ಜೊತೆಯಾಗಿದ್ದಕ್ಕೆ ನಾನು ಖಲಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ. ದೇಶದ ಎಲ್ಲ ಕ್ಷೇತ್ರಗಳ ಜನರೂ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದು ಖುಷಿ ಸಂಗತಿ ಎಂದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಎಂಪಿ ಸುನಿತಾ ದುಗ್ಗಲ್ ಇತರರು ಇದ್ದರು.
ಬಿಜೆಪಿ ಸೇರಿದ ಬಳಿಕ ಮಾತನಾಡಿದ ಖಲಿ, ರಾಷ್ಟ್ರದ ಏಳ್ಗೆಗೆ ಆದ್ಯತೆ ನೀಡುವ ಬಿಜೆಪಿಯ ನೀತಿ-ನಿಯಮಗಳಿಂದ ಸ್ಫೂರ್ತಿ ಪಡೆದು, ಪ್ರಭಾವಿತನಾಗಿ ಈ ಪಕ್ಷಕ್ಕೆ ಸೇರಿದ್ದೇನೆ. ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಕೆಲಸಗಳು ನನಗೆ ತುಂಬ ಇಷ್ಟವಾಗಿವೆ. ಅದನ್ನೆಲ್ಲ ನೋಡಿದ ಮೇಲೆ, ಈ ರಾಷ್ಟ್ರದ ಅಭಿವೃದ್ಧಿಯಲ್ಲಿ ನಾನೂ ಕೈಜೋಡಿಸಬೇಕು ಎಂಬ ಬಯಕೆ ಹೆಚ್ಚಾಯಿತು. ಪಕ್ಷದಲ್ಲಿ ನನಗೆ ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ. 7 ಅಡಿ ಎತ್ತರವಿರುವ, ದೃಢಾಕಾಯ ಹೊಂದಿರುವ ದಿ ಗ್ರೇಟ್ ಖಲಿಗೆ 49 ವರ್ಷ. ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಧಿರೈನಾ ಎಂಬ ಸಣ್ಣ ಪಟ್ಟಣದವರು.WWE ಯಿಂದ ನಿವೃತ್ತರಾದ ಬಳಿಕ ಭಾರತೀಯ ವೃತ್ತಿಪರ ಕುಸ್ತಿ ಪ್ರಚಾರ ಮತ್ತು ತರಬೇತಿ ಸಂಸ್ಥೆಯಾದ ಕಾಂಟಿನೆಂಟಲ್ ವ್ರೆಸ್ಲಿಂಗ್ ಎಂಟರ್ಟೈನ್ಮೆಂಟ್ನ್ನು ಸ್ಥಾಪಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯ್ದೆಗಳನ್ನು ವಿರೋಧಿಸಿದ್ದವರಲ್ಲಿ ದಿ ಗ್ರೇಟ್ ಖಲಿ ಕೂಡ ಒಬ್ಬರಾಗಿದ್ದರು. 2020ರಲ್ಲಿ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪಂಜಾಬ್, ಹರ್ಯಾಣ ರೈತರಿಗೆ ಬೆಂಬಲ ಸೂಚಿಸಿ ಮಾತನಾಡಿದ್ದ ಅವರು, ಈ ಕೃಷಿ ಕಾಯ್ದೆಗಳಿಂದ ರೈತರು ಸಂಕಷ್ಟಕ್ಕೀಡಾಗುತ್ತಾರೆ. ಕೂಡಲೇ ಕೇಂದ್ರ ಸರ್ಕಾರ ರೈತರ ಬೇಡಿಕೆಯನ್ನು ಈಡೇರಿಸಬೇಕು ಎಂದು ಹೇಳಿದ್ದರು.
2017ರಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆ ನಡೆದ ಸಂದರ್ಭದಲ್ಲಿ ದಿ ಗ್ರೇಟ್ ಖಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆ ಚುನಾವಣೆಯಲ್ಲಿ ಆಪ್ ಪರ ಪ್ರಚಾರವನ್ನೂ ನಡೆಸಿದ್ದರು. ಹಾಗೇ, ಈ ಬಾರಿಯ ಪಂಜಾಬ್ ವಿಧಾನಸಭೆ ಚುನಾವಣೆಗೂ ಪೂರ್ವ ದಲೀಪ್ ಸಿಂಗ್ ರಾಣಾ ಮೊದಲು ಭೇಟಿಯಾಗಿದ್ದು ಅರವಿಂದ್ ಕೇಜ್ರಿವಾಲ್ರನ್ನು. 2021ರ ನವೆಂಬರ್ 18ರಂದು ಅರವಿಂದ್ ಕೇಜ್ರಿವಾಲ್ರನ್ನು ಭೇಟಿಯಾಗಿ ತಾವು, ದೆಹಲಿಯಲ್ಲಿ ಆಪ್ ಸರ್ಕಾರ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿಕೊಂಡಿದ್ದೇನೆ. ಪಂಜಾಬ್ನಲ್ಲಿ ನಾನು ಆಪ್ಗೆ ಸಹಕಾರ ನೀಡುತ್ತೇನೆ ಎಂದಿದ್ದರು.
Published On - 5:49 pm, Thu, 10 February 22