ರಾಜಸ್ಥಾನದಲ್ಲಿ ಮಧ್ಯಪ್ರದೇಶದ ಕಾರ್ಯತಂತ್ರ ಪ್ರಯೋಗಕ್ಕೆ ಮುಂದಾದ ಬಿಜೆಪಿ, ಮುಂದಿನ ನಡೆ ಏನು?

|

Updated on: Sep 27, 2023 | 5:36 PM

ರಾಜಕೀಯ ವಿಶ್ಲೇಷಕರ ಪ್ರಕಾರ, ರಾಜಸ್ಥಾನದಲ್ಲಿ ವಸುಂಧರಾ ರಾಜೇಗೆ ಪರ್ಯಾಯವಾಗಿ ಶೇಖಾವತ್ ತಮ್ಮನ್ನು ತಾವು ತೋರಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿಯ ಉನ್ನತ ನಾಯಕತ್ವವೂ ಅರ್ಜುನ್ ರಾಮ್ ಮೇಘವಾಲ್ ಅವರನ್ನು ಸಾಕಷ್ಟು ಪ್ರಚಾರ ಮಾಡುತ್ತಿದ್ದು, ಈಗ ಅವರನ್ನು ಚುನಾವಣೆಯಲ್ಲಿ ಕಣಕ್ಕಿಳಿಸಿದರೆ, ಅದು ಖಂಡಿತವಾಗಿಯೂ ದೊಡ್ಡ ರಾಜಕೀಯ ಸಂದೇಶವನ್ನು ರವಾನಿಸುತ್ತದೆ.

ರಾಜಸ್ಥಾನದಲ್ಲಿ ಮಧ್ಯಪ್ರದೇಶದ ಕಾರ್ಯತಂತ್ರ ಪ್ರಯೋಗಕ್ಕೆ ಮುಂದಾದ ಬಿಜೆಪಿ, ಮುಂದಿನ ನಡೆ ಏನು?
ರಾಜಸ್ಥಾನ ಚುನಾವಣೆ
Follow us on

ದೆಹಲಿ ಸೆಪ್ಟೆಂಬರ್ 27: ರಾಜಸ್ಥಾನದಲ್ಲಿ (Rajasthan) ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ (BJP) ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ. ಮಧ್ಯಪ್ರದೇಶದಂತೆ (Madhya Pradesh) ರಾಜಸ್ಥಾನದಲ್ಲೂ ಬಿಜೆಪಿ ತನ್ನ ಕೇಂದ್ರ ಸಚಿವರು ಮತ್ತು ಸಂಸದರನ್ನು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ರೂಪುರೇಷೆ ಸಿದ್ಧಪಡಿಸಿದೆ. ಬಿಜೆಪಿ ಮೊದಲು ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಈ ಸೂತ್ರವನ್ನು ಪ್ರಯೋಗಿಸಿತ್ತು. ಈಗ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ಚುನಾವಣೆಗಳಲ್ಲಿ ಇದನ್ನು ಪ್ರಯೋಗಿಸಲು ತಂತ್ರ ರೂಪಿಸಿದೆ. ರಾಜಸ್ಥಾನದ ಚುನಾವಣಾ ರಣಾಂಗಣದಲ್ಲಿ ಕಣಕ್ಕಿಳಿಯಲಿರುವ ದಿಗ್ಗಜರ ಹೆಸರು ಬಹುತೇಕ ನಿರ್ಧಾರವಾಗಿದ್ದು, ರಾಜ್ಯ ರಾಜಕಾರಣದಲ್ಲಿ ಕ್ರಿಯಾಶೀಲರಾಗಿದ್ದಾರೆ.

ಮೂಲಗಳ ಪ್ರಕಾರ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್, ಸಂಸದರe ರಾಜವರ್ಧನ್ ಸಿಂಗ್ ರಾಥೋಡ್ ಮತ್ತು ದಿಯಾ ಕುಮಾರಿ ಅವರನ್ನು ಬಿಜೆಪಿ ಕಣಕ್ಕಿಳಿಸುವ ಸಾಧ್ಯತೆ ಇದೆ . ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರು ಬುಧವಾರ ಜೈಪುರದಲ್ಲಿ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಬಹುದು ಎಂದು ನಂಬಲಾಗಿದೆ. ಇದಾದ ನಂತರ ಬಿಜೆಪಿ ರಾಜಸ್ಥಾನ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಬಹುದು.

ರಾಜಸ್ಥಾನಕ್ಕೆ ವಿಶೇಷ ತಂತ್ರ ರೂಪಿಸಿದ ಬಿಜೆಪಿ

ರಾಜಸ್ಥಾನದಲ್ಲಿ ಸಿಎಂ ಅಭ್ಯರ್ಥಿಯನ್ನು ಘೋಷಿಸದೆಯೇ ಚುನಾವಣಾ ಕಣಕ್ಕೆ ಇಳಿಯಲು ಬಿಜೆಪಿ ರಣತಂತ್ರ ರೂಪಿಸಿದೆ. ಜೈಪುರದಲ್ಲಿ ಸೋಮವಾರ ನಡೆದ ರ್ಯಾಲಿಯಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಯಾರ ಹೆಸರಿನಲ್ಲಿ ಸ್ಪರ್ಧಿಸಲಿದೆ ಎಂಬುದನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ. ನಮ್ಮ ಹೆಮ್ಮೆ ಮತ್ತು ಅಸ್ಮಿತೆ ಕೇವಲ ಕಮಲದ ಹೂವು ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಪ್ರತಿ ಬೂತ್‌ಗೆ ತೆರಳಿ ಕಮಲದ ಹೂವುಗಳನ್ನು ಅರ್ಪಿಸಲು ಪ್ರಯತ್ನಿಸಬೇಕು. ಇದಲ್ಲದೇ ರಾಜ್ಯದ ಯಾವುದೇ ಒಬ್ಬ ನಾಯಕನಿಗೆ ಪ್ರಾಮುಖ್ಯತೆ ನೀಡುವ ಬದಲು ಎಲ್ಲರೂ ಒಟ್ಟಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಪಕ್ಷದ ರಾಷ್ಟ್ರೀಯ ನಾಯಕತ್ವ ಕರೆ ನೀಡಿದೆ.

ವಸುಂಧರಾ ರಾಜೇ ಅವರ ಆಸೆ ಈಡೇರಬಹುದು

ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಮೂರು ಬಾರಿ ತಮ್ಮ ಹೆಸರನ್ನು ಹೇಳಿದ್ದು,ಇದು ಮೋದಿಯವರ ಗ್ಯಾರಂಟಿ ಎಂದು ಹೇಳಿದರು. ಗ್ಯಾರಂಟಿ ನೀಡುವ ಭರದಲ್ಲಿ ಮೋದಿ ಎಂದರೆ ಗ್ಯಾರಂಟಿ ಎಂದು ಘೋಷಣೆ ಕೂಗಿದರು. ಬಿಜೆಪಿಯು ರಾಜಸ್ಥಾನದ ಚುನಾವಣಾ ಕದನವನ್ನು ಪ್ರವೇಶಿಸುವ ಸ್ಕ್ರಿಪ್ಟ್ ಅನ್ನು ಪ್ರಧಾನಿ ಮೋದಿಯವರ ಹೆಸರು ಮತ್ತು ಕೆಲಸದ ಮೇಲೆ ಬರೆದಿದೆ ಎಂಬುದು ಇದರಿಂದ ಒಂದು ವಿಷಯ ಸ್ಪಷ್ಟವಾಗಿದೆ. ಈ ಮೂಲಕ ವಸುಂಧರಾ ರಾಜೇ ಅವರ ಸಿಎಂ ಹುದ್ದೆಯ ಮುಖ ಆಗುವ ಕನಸುಗಳು ನುಚ್ಚುನೂರಾಗಬಹುದು. ಇಷ್ಟೇ ಅಲ್ಲ, ಗಜೇಂದ್ರ ಸಿಂಗ್ ಶೇಖಾವತ್, ಅರ್ಜುನ್‌ರಾಮ್ ಮೇಘವಾಲ್ ಮತ್ತು ದಿಯಾ ಕುಮಾರಿ ಅವರು ರಾಜಸ್ಥಾನದಲ್ಲಿ ಗೆಹ್ಲೋಟ್ ಸರ್ಕಾರದ ವಿರುದ್ಧ ವಾತಾವರಣವನ್ನು ಸೃಷ್ಟಿಸಲು ಬಿಜೆಪಿಯ ಪರಿವರ್ತನ್ ಯಾತ್ರೆಯನ್ನು ಮುನ್ನಡೆಸಿದ್ದಾರೆ.

ಈ ಸಚಿವರು ಮತ್ತು ಸಂಸದರಿಗೆ ಟಿಕೆಟ್?

ವಿಧಾನಸಭಾ ಚುನಾವಣೆಯಲ್ಲಿ ಗಜೇಂದ್ರ ಸಿಂಗ್ ಶೆಖಾವತ್, ಅರ್ಜುನ್ ರಾಮ್ ಮೇಘವಾಲ್, ರಾಜವರ್ಧನ್ ಸಿಂಗ್ ರಾಥೋಡ್ ಮತ್ತು ದಿಯಾ ಕುಮಾರಿ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಸಿದ್ಧತೆ ನಡೆಸಿದ್ದು, ಅದರ ರಾಜಕೀಯ ಪರಿಣಾಮಗಳೂ ಇವೆ. ವಸುಂಧರಾ ರಾಜೆ ಅವರೊಂದಿಗಿನ ಶೇಖಾವತ್ ಮತ್ತು ಮೇಘವಾಲ್ ಅವರ ಸಂಬಂಧ ಎಲ್ಲರಿಗೂ ತಿಳಿದಿದೆ. ಇದಲ್ಲದೇ ವಸುಂಧರಾ ರಾಜೇ ಅವರೇ ದಿಯಾ ಕುಮಾರಿ ಹಾಗೂ ರಾಜವರ್ಧನ್ ಸಿಂಗ್ ಅವರನ್ನು ರಾಜಕೀಯಕ್ಕೆ ಕರೆತಂದಿದ್ದರು. 2019 ರಲ್ಲಿ, ಸಿಎಂ ಗೆಹ್ಲೋಟ್ ಅವರ ಪುತ್ರ ವೈಭವ್ ವಿರುದ್ಧ ಜೋಧ್‌ಪುರ ಲೋಕಸಭಾ ಸ್ಥಾನವನ್ನು ಗೆಲ್ಲಲು ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ವಸುಂಧರ ರಾಜೇ ಸಹಾಯ ಮಾಡಿದರು, ಆದರೆ ರಾಜಕೀಯದಲ್ಲಿ ಶಾಶ್ವತ ಸ್ನೇಹಿತರು ಅಥವಾ ಶತ್ರುಗಳಿಲ್ಲ.

ಗಜೇಂದ್ರ ಸಿಂಗ್ ಶೇಖಾವತ್ ಪ್ರಧಾನಿ ಮೋದಿಗೆ ಆಪ್ತರು

ಕೇಂದ್ರದಲ್ಲಿ ಸಚಿವರಾದ ನಂತರ ಗಜೇಂದ್ರ ಸಿಂಗ್ ಶೇಖಾವತ್ ಅವರು ಬಿಜೆಪಿಯ ಉನ್ನತ ನಾಯಕತ್ವದೊಂದಿಗೆ ಸಂಬಂಧವನ್ನು ಬಲಪಡಿಸಿದ್ದಾರೆ. ಅವರು ಅಮಿತ್ ಶಾ ಮತ್ತು ಪ್ರಧಾನಿ ಮೋದಿಗೆ ನಿಕಟ ನಾಯಕ ಎಂದು ಪರಿಗಣಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಗಜೇಂದ್ರ ಸಿಂಗ್ ಶೇಖಾವತ್ ಅವರು ಗೆಹ್ಲೋಟ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಸಿಎಂ ಗೆಹ್ಲೋಟ್ ಅವರು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುತ್ತಿದ್ದಾರೆ ಎಂದು ಹಲವಾರು ಬಾರಿ ಸಾರ್ವಜನಿಕವಾಗಿ ಆರೋಪಿಸಿದ್ದಾರೆ.

ಠಾಕೂರ್-ದಲಿತ ಮತಗಳನ್ನೂ ಸೆಳೆಯುವ ಪ್ರಯತ್ನ

ರಾಜಕೀಯ ವಿಶ್ಲೇಷಕರ ಪ್ರಕಾರ, ರಾಜಸ್ಥಾನದಲ್ಲಿ ವಸುಂಧರಾ ರಾಜೇಗೆ ಪರ್ಯಾಯವಾಗಿ ಶೇಖಾವತ್ ತಮ್ಮನ್ನು ತಾವು ತೋರಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿಯ ಉನ್ನತ ನಾಯಕತ್ವವೂ ಅರ್ಜುನ್ ರಾಮ್ ಮೇಘವಾಲ್ ಅವರನ್ನು ಸಾಕಷ್ಟು ಪ್ರಚಾರ ಮಾಡುತ್ತಿದ್ದು, ಈಗ ಅವರನ್ನು ಚುನಾವಣೆಯಲ್ಲಿ ಕಣಕ್ಕಿಳಿಸಿದರೆ, ಅದು ಖಂಡಿತವಾಗಿಯೂ ದೊಡ್ಡ ರಾಜಕೀಯ ಸಂದೇಶವನ್ನು ರವಾನಿಸುತ್ತದೆ. ಇದರೊಂದಿಗೆ ರಾಜ್ಯದ ಠಾಕೂರ್ ಮತ್ತು ದಲಿತ ಮತಗಳನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸಬಹುದು. ಬಿಜೆಪಿಯ ಉನ್ನತ ನಾಯಕತ್ವವು ರಾಜಸ್ಥಾನದಲ್ಲಿ ಹೊಸ ನಾಯಕತ್ವವನ್ನು ಸ್ಥಾಪಿಸಲು ಬಯಸಿದೆ, ಅದಕ್ಕಾಗಿ ಅದು ಪಕ್ಷದ ಹೊಸ ನಾಯಕರನ್ನು ಉತ್ತೇಜಿಸುತ್ತಿದೆ.

ಇದನ್ನೂ ಓದಿ: ಮಧ್ಯಪ್ರದೇಶ: ಮುಖ್ಯಮಂತ್ರಿ ಚೌಹಾಣ್​ರನ್ನು ಬಿಜೆಪಿ ಕಡೆಗಣಿಸುತ್ತಿದೆಯೇ? ಅಚ್ಚರಿ ಮೂಡಿಸಿದ ಸಿಎಂ ನಡೆ

ಸಂಸದರಲ್ಲಿ 3 ಕೇಂದ್ರ ಸಚಿವರು ಸೇರಿದಂತೆ 7 ಸಂಸದರಿಗೆ ಟಿಕೆಟ್

ಮಧ್ಯಪ್ರದೇಶದಲ್ಲಿ ಸೋಮವಾರ ಬಿಜೆಪಿ 39 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೂವರು ಕೇಂದ್ರ ಸಚಿವರು ಸೇರಿದಂತೆ ಏಳು ಸಂಸದರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಲಾಗಿದೆ. ಇದಲ್ಲದೇ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರಿಗೆ ಹತ್ತು ವರ್ಷಗಳ ನಂತರ ಶಾಸಕ ಟಿಕೆಟ್ ಸಿಕ್ಕಿದೆ. ಇದೇ ಸೂತ್ರದಲ್ಲಿ ರಾಜಸ್ಥಾನದಲ್ಲೂ ಬಿಜೆಪಿ ತನ್ನ ಕೇಂದ್ರ ಸಚಿವರು ಮತ್ತು ಸಂಸದರನ್ನು ಕಣಕ್ಕಿಳಿಸಲು ತಂತ್ರ ರೂಪಿಸಿದೆ.

ರಾಜಸ್ಥಾನದಲ್ಲಿದ್ದಾರೆ 26 ಬಿಜೆಪಿ ಸಂಸದರು

ಬಿಜೆಪಿ ರಾಜಸ್ಥಾನದಿಂದ 26 ಸಂಸದರನ್ನು ಹೊಂದಿದ್ದು, ನಾಲ್ವರು ಕೇಂದ್ರ ಸಚಿವರಾಗಿದ್ದಾರೆ. ಗಜೇಂದ್ರ ಸಿಂಗ್ ಶೇಖಾವತ್, ಅರ್ಜುನ್‌ರಾಮ್ ಮೇಘವಾಲ್, ಕೈಲಾಶ್ ಚೌಧರಿ ಮತ್ತು ಭೂಪೇಂದ್ರ ಯಾದವ್ ರಾಜಸ್ಥಾನ ಕೋಟಾದಿಂದ ಕೇಂದ್ರ ಸಚಿವರಾಗಿದ್ದು, ಈ ಪೈಕಿ ಶೇಖಾವತ್ ಮತ್ತು ಮೇಘವಾಲ್ ಅವರನ್ನು ಚುನಾವಣೆಯಲ್ಲಿ ಕಣಕ್ಕಿಳಿಸಲು ಸಿದ್ಧತೆ ನಡೆಸಲಾಗುತ್ತಿದ್ದೆ. ಸಂಸದರಾದ ಕಿರೋಡಿ ಲಾಲಾ ಮೀನಾ, ದಿಯಾ ಕುಮಾರಿ ಮತ್ತು ರಾಜವರ್ಧನ್ ಸಿಂಗ್ ಅವರು ಸ್ಪರ್ಧಿಸಬಹುದು.. ಇಂತಹ ಪರಿಸ್ಥಿತಿಯಲ್ಲಿ ಬುಧವಾರ ಜೈಪುರದಲ್ಲಿ ನಡೆಯಲಿರುವ ಬಿಜೆಪಿ ಉನ್ನತ ನಾಯಕರ ಸಭೆಯಲ್ಲಿ ಯಾವ ಹಿರಿಯ ನಾಯಕರ ಹೆಸರುಗಳನ್ನು ಅನುಮೋದಿಸಲಾಗುತ್ತದೆ ಎಂದು ಕಾದು ನೋಡಬೇಕಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ