ಜೈಪುರ್, ಡಿಸೆಂಬರ್ 3: ರಾಜಸ್ಥಾನ ರಾಜ್ಯದಲ್ಲಿ ಎಕ್ಸಿಟ್ ಪೋಲ್ ಅಂದಾಜಿನ ಪ್ರಕಾರವೇ ಬಿಜೆಪಿ ಗೆಲುವು ಪಡೆಯುತ್ತಿದೆ. ಸತತ ಎರಡನೇ ಬಾರಿ ಅಧಿಕಾರ ಪಡೆಯುವ ಕಾಂಗ್ರೆಸ್ನ ಪ್ರಯತ್ನ ನಿಷ್ಫಲವಾಗುವಂತಿದೆ. ಬಿಜೆಪಿ ಬಹುಮತದತ್ತ (Rajasthan Assembly Election Results 2023) ಮುನ್ನುಗ್ಗುತ್ತಿದೆ. ಮೊನ್ನೆ ಮತಗಟ್ಟೆ ಸಮೀಕ್ಷೆಗಳು (exit polls) ಬಿಜೆಪಿ ಗೆಲುವನ್ನು ಸೂಚಿಸುತ್ತಿರುವಂತೆಯೇ ಬಿಜೆಪಿಯಲ್ಲಿ ಮುಂದಿನ ಸಿಎಂ ಯಾರು ಎಂಬ ಸುದ್ದಿಗಳು ಹುಟ್ಟಿಕೊಂಡಿದ್ದವು. ಬಿಜೆಪಿಯಲ್ಲಿ ಸಿಎಂ ಸಾಧ್ಯತೆ ಇರುವ ಹಲವು ಪ್ರಮುಖ ನಾಯಕರ ಹೆಸರು ಕೇಳಿಬಂದಿವೆ. ಅದರಲ್ಲಿ ಮಾಜಿ ಸಿಎಂ ವಸುಂಧರಾ ರಾಜೆ ಸಿಂದ್ಯ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಇದರ ಜೊತೆಗೆ ಆಲ್ವಾರ್ನ ಸಂಸದ ಹಾಗೂ ಫೈರ್ಬ್ರ್ಯಾಂಡ್ ಲೀಡರ್ ಎಂದು ಖ್ಯಾತಿ ಪಡೆಯುತ್ತಿರುವ ಮಹಂತ್ ಬಾಲಕನಾಥ್ (Mahant Balakanath) ಹೆಸರು ಕೂಡ ಪ್ರಧಾನವಾಗಿ ಕೇಳಿಬರುತ್ತಿದೆ.
ವಸುಂಧರಾ ರಾಜೆ ಮತ್ತು ಮಹಂತ್ ಬಾಲಕನಾಥ್ ಜೊತೆಗೆ ರಾಜಕುಮಾರಿ ಹಾಗೂ ರಾಜಸಮಂದ್ ಕ್ಷೇತ್ರದ ಸಂಸದೆ ದಿಯಾ ಕುಮಾರಿ, ಕೇಂದ್ರ ಸಚಿವರಾದ ಭೂಪೇಂದರ್ ಯಾದವ್ ಮತ್ತು ಅಶ್ವಿನಿ ವೈಷ್ಣವ್ ಹಾಗು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೆಸರುಗಳು ಸಿಎಂ ಸ್ಥಾನಕ್ಕೆ ಕೇಳಿಬರುತ್ತಿವೆ.
ಇದನ್ನೂ ಓದಿ: Rajasthan Election Result 2023: ರಾಜಸ್ಥಾನದಲ್ಲಿ ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್, ವಸುಂಧರಾ ರಾಜೆಗೆ ಆರಂಭಿಕ ಮುನ್ನಡೆ
ರಾಜಸ್ಥಾನದ ಬಿಜೆಪಿ ಮೂಲಗಳಿಂದ ಬಂದಿರುವ ವರ್ತಮಾನದ ಪ್ರಕಾರ ರಾಜಸ್ಥಾನದಲ್ಲಿ ಒಂದು ವೇಳೆ ಅತಂತ್ರ ವಿಧಾನಸಭೆ ನಿರ್ಮಾಣವಾಗಿ ಬಿಜೆಪಿ ಅತಿಹೆಚ್ಚು ಸ್ಥಾನ ಗಳಿಸಿದಲ್ಲಿ, ಅಂದರೆ ಬಹುಮತಕ್ಕೆ ಕೆಲ ಸ್ಥಾನಗಳ ಕೊರತೆಯಾಗಿರುವ ಸ್ಥಿತಿ ನಿರ್ಮಾಣವಾದಲ್ಲಿ ವಸುಂಧರಾ ರಾಜೇ ಸಿಂದ್ಯಾ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಮುಂದೆ ನಿಲ್ಲಿಸುವ ಸಾಧ್ಯತೆ ಇದೆ. ಪಕ್ಷೇತರ ಶಾಸಕರನ್ನು ವಸುಂಧರಾ ಸೆಳೆಯಬಲ್ಲರೆಂಬುದು ಈ ಲೆಕ್ಕಾಚಾರ.
ರಾಜಸ್ಥಾನದಲ್ಲಿ ಒಂದು ವೇಳೆ ಬಿಜೆಪಿ ಸಂಪೂರ್ಣ ಬಹುಮತ ಗಳಿಸಿದಲ್ಲಿ ಆಲ್ವಾರ್ ಕ್ಷೇತ್ರದ ಸಂಸದ ಮಹಂತ್ ಬಾಲಕನಾಥ್ ಅವರನ್ನೇ ಸಿಎಂ ಆಗಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಉತ್ತರಪ್ರದೇಶದಲ್ಲಿ ಯೋಗಿ ಅದಿತ್ಯನಾಥ್ ಅವರನ್ನು ಸಿಎಂ ಆಗಿ ಮಾಡಿದ ಪ್ರಯೋಗ ಭರ್ಜರಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲೂ ಅದೇ ರೀತಿಯ ಪ್ರಯೋಗಕ್ಕೆ ಬಿಜೆಪಿ ಮುಂದಾಗಬಹುದು. ಯೋಗಿ ಆದಿತ್ಯನಾಥ್ ಅವರಂತೆ ಮಹಂತ್ ಬಾಲಕನಾಥ್ ಕೂಡ ಸಿಎಂ ಆಗಲು ಸಮರ್ಥರಿದ್ದಾರೆ ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ.
ಇದನ್ನೂ ಓದಿ: ಛತ್ತೀಸ್ಗಢ: ಸರ್ಕಾರ ರಚನೆಯಾದ್ರೆ ಸಿಎಂ ಸ್ಥಾನ ಖಚಿತ ಎಂದು ಅಮಿತ್ ಶಾ ಭರವಸೆ ನೀಡಿದ್ದ ಅಭ್ಯರ್ಥಿ ಭವಿಷ್ಯ ಇಂದು ನಿರ್ಧಾರ
ಅಲ್ಲದೇ ಬಿಜೆಪಿಯ ಕೇಂದ್ರೀಯ ನಾಯಕರು ವಸುಂಧರಾ ರಾಜೇ ಅವರನ್ನು ಕೆಲವಾರು ವರ್ಷಗಳಿಂದ ಕಡೆಗಳಿಸುತ್ತಾ ಬರುತ್ತಿರುವುದು ಬಹಳ ಸ್ಪಷ್ಟವಾಗಿ ವೇದ್ಯವಾಗಿದೆ. ಈಗ ಬಿಜೆಪಿ ರಾಜಸ್ಥಾನದಲ್ಲಿ ಸ್ಪಷ್ಟಬಹುಮತ ಗಳಿಸುವತ್ತ ಸಾಗುತ್ತಿದೆ. 199 ಸ್ಥಾನಗಳ ಪೈಕಿ ಬಿಜೆಪಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಿರುವುದು ಮತ ಎಣಿಕೆ ಆರಂಭಿಕ ಟ್ರೆಂಡ್ಗಳಿಂದ ಗೊತ್ತಾಗುತ್ತಿದೆ.
ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:28 am, Sun, 3 December 23