ರಾಜಸ್ಥಾನದ ಸಿಎಂ ಸ್ಥಾನದ ರೇಸ್​ನ ಮುಂಚೂಣಿಯಲ್ಲಿ ಮಹಂತ್ ಬಾಲಕನಾಥ್; ಯುಪಿ ಯೋಗಿಗೂ ಇವರಿಗೂ ಏನು ಸಂಬಂಧ?

|

Updated on: Dec 03, 2023 | 11:42 AM

Know Who Is Mahant Balak Nath: ರಾಜಸ್ಥಾನದಲ್ಲಿ ಬಿಜೆಪಿ ಬಹುಮತದತ್ತ ಸಾಗುತ್ತಿದ್ದು ಮಹಂತ್ ಬಾಲಕ್ ನಾಥ್ ಮುಂದಿನ ಮುಖ್ಯಮಂತ್ರಿ ಅಗಬಹುದು ಎನ್ನಲಾಗುತ್ತಿದೆ. 39 ವರ್ಷದ ಮಹಂತ್ ಬಾಲಕನಾಥ್ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮಧ್ಯೆ ಸಾಕಷ್ಟು ಹೋಲಿಕೆಗಳು ಮತ್ತು ಸಾಮ್ಯತೆಗಳಿವೆ. ಬಾಲಕನಾಥ್ ಮತ್ತು ಆದಿತ್ಯನಾಥ್ ಇಬ್ಬರೂ ನಾಥ ಪರಂಪರೆಯ ಮಠಗಳಿಗೆ ಸೇರಿದವರು. ಇಬ್ಬರೂ ಕೂಡ ಪ್ರಖರ ವಾಗ್ಮಿಗಳೆಂದು ಗುರುತಿಸಿಕೊಂಡಿದ್ದಾರೆ.

ರಾಜಸ್ಥಾನದ ಸಿಎಂ ಸ್ಥಾನದ ರೇಸ್​ನ ಮುಂಚೂಣಿಯಲ್ಲಿ ಮಹಂತ್ ಬಾಲಕನಾಥ್; ಯುಪಿ ಯೋಗಿಗೂ ಇವರಿಗೂ ಏನು ಸಂಬಂಧ?
ಮಹಂತ್ ಬಾಲಕನಾಥ್
Follow us on

ಜೈಪುರ್, ಡಿಸೆಂಬರ್ 3: ದೇಶದ ಪಂಜರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜಸ್ಥಾನದ ಫಲಿತಾಂಶ (Rajasthan Assembly Election Results) ಬಹಳ ಮಂದಿಯ ಗಮನ ಸೆಳೆದಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿ ಬಿಜೆಪಿ ಬಹುಮತದತ್ತ ಸಾಗುತ್ತಿದೆ. ಈಗಾಗಲೇ ರಾಜಸ್ಥಾನದಲ್ಲಿ ಸಿಎಂ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಕೇಳಿಬರುತ್ತಿದೆ. ಸಾಕಷ್ಟು ಮಂದಿ ಹೆಸರು ಕೇಳಿಬರುತ್ತಿದೆ. ಇದರಲ್ಲಿ ಪ್ರಮುಖವಾದ ಹೆಸರು ಮಹಂತ್ ಬಾಲಕನಾಥ್ (Mahant Balak Nath) ಅವರದ್ದು. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಸಿಎಂ ಆಗಿ ಮಾಡುವ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಅಂತಹದ್ದೇ ಒಂದು ಪ್ರಯೋಗವನ್ನು ರಾಜಸ್ಥಾನದಲ್ಲಿ ಮಾಡಲು ಬಿಜೆಪಿಗೆ ಅವಕಾಶ ಸಿಕ್ಕಿದೆ. ಅದಕ್ಕೆ ಸೂಕ್ತವಾದವರು ಆಲ್ವಾರ್ ಕ್ಷೇತ್ರದ ಸಂಸದ ಮಹಂತ್ ಬಾಲಕನಾಥ್.

ಯೋಗಿ ಆದಿತ್ಯನಾಥ್ ಮತ್ತು ಮಹಂತ್ ಬಾಲಕನಾಥ್ ಮಧ್ಯೆ ಕೆಲವೊಂದಿಷ್ಟು ಪ್ರಮುಖ ಸಾಮ್ಯತೆಗಳಿವೆ. ಇಬ್ಬರೂ ಕೂಡ ಮಠದ ಮುಖ್ಯಸ್ಥರಾಗಿ ರಾಜಕೀಯ ಸೇರಿಕೊಂಡವರು. ಇಬ್ಬರೂ ಕೂಡ ಪ್ರಖರ ವಾಗ್ಮಿಗಳು, ಫೈರ್​ಬ್ರ್ಯಾಂಡ್ ಲೀಡರ್ ಎಂದು ಹೆಸರಾದವರು. ಯೋಗಿ ಆದಿತ್ಯನಾಥ್ ಸಿಎಂ ಆಗುವ ಮುನ್ನ ಐದಾರು ಬಾರಿ ಸಂಸದರಾಗಿದ್ದವರು. ಈಗ ಬಾಲಕನಾಥ್ ಕೂಡ ಸಂಸದರಾಗಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಬಹುಮತದತ್ತ ಬಿಜೆಪಿ; ಯಾರಾಗ್ತಾರೆ ಸಿಎಂ? ಅತಂತ್ರವಾದರೆ ವಸುಂಧರಾ, ಬಹುಮತ ಬಂದರೆ ಬಾಲಕನಾಥ್ ಸಿಎಂ?

ಯೋಗಿ ಆದಿತ್ಯನಾಥ್ ಅವರು ನಾಥ ಪರಂಪರೆಯ ಮಠದ ಮುಖ್ಯಸ್ಥರೂ ಹೌದು. ಮಹಂತ್ ಬಾಲಕನಾಥ್ ಅವರೂ ಕೂಡ ನಾಥ ಪರಂಪರೆಯ ಮಠಕ್ಕೆ ಸೇರಿದವರು. ಕರ್ನಾಟಕದಲ್ಲಿರುವ ಆದಿಚುಂಚನಗಿರಿ ಮಠವೂ ಕೂಡ ಈ ನಾಥ ಪರಂಪರೆಗೆ ಸೇರಿದ್ದಾಗಿದೆ.

ಆದಿತ್ಯನಾಥ್ ಅವರ ಗೋರಖಪುರದ ಮಠವು ನಾಥ ಪರಂಪರೆಯ ಮೂಲ ಮಠ. ಮಹಂತ್ ಬಾಲಕನಾಥ್ ಅವರು ಮಸ್ತ್ ನಾಥ್ ಯೂನಿವರ್ಸಿಟಿಯ ಕುಲಪತಿ. ಮಸ್ತ್ ನಾಥ್ ಪಂಥದ ಎಂಟನೇ ಮುಖ್ಯ ಮಹಂತ್ ಅವರು.

ಈ ಮಠದ ಹಿಂದಿನ ಸ್ವಾಮೀಜಿಗಳಾದ ಮಹಂತ್ ಚಂದನಾಥ್ ಕೂಡ ಆಲ್ವಾರ್ ಸಂಸದರಾಗಿದ್ದರು. 2016ರಲ್ಲಿ ಚಂದನಾಥ್ ಅವರು ಬಾಲಕನಾಥ್ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದರು. 2019ರಲ್ಲಿ ಬಾಲಕನಾಥ್ ಆಲ್ವಾರ್ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್​ನಲ್ಲಿ ಸ್ಪರ್ಧಿಸಿ ಕಾಂಗ್ರೆಸ್​ನ ಜಿತೇಂತ್ರ ಸಿಂಗ್ ಅವರನ್ನು ಸೋಲಿಸಿದರು. ಆ ಬಳಿಕ ಮಹಂತ್ ಬಾಲಕನಾಥ್ ಬಾಬಾ ಬಾಲಕನಾಥ್ ಆಗಿ ಖ್ಯಾತರಾಗತೊಡಗಿದರು.

ಇದನ್ನೂ ಓದಿ: Five State Election Results: ಚುನಾವಣಾ ಫಲಿತಾಂಶ: ಮತಗಟ್ಟೆ ಸಮೀಕ್ಷೆಯನ್ನು ನಿಜವಾಗಿಸಿತೇ ಆರಂಭಿಕ ಟ್ರೆಂಡ್​​? ಇಲ್ಲಿದೆ ವಿವರ

ಈ ವಿಧಾನಸಭಾ ಚುನಾವಣೆಯಲ್ಲಿ ಬಾಲಕನಾಥ್ ಅವರಿಗೆ ಟಿಕೆಟ್ ಕೊಟ್ಟಾಗಲೇ ಬಿಜೆಪಿಯ ಸಿಎಂ ಸ್ಥಾನ ಯಾರಿಗೆ ಹೋಗಬಹುದು ಎಂಬ ಸುಳಿವು ಸಿಕ್ಕಿತ್ತು. ಅವರನ್ನು ಸಿಎಂ ಮಾಡಲೆಂದೇ ವಿಧಾನಸಭಾ ಅಖಾಡಕ್ಕೆ ಇಳಿಸಲಾಗಿದೆ ಎಂಬ ಮಾತು ಕೇಳಿಬಂದಿತ್ತು. ಇದೀಗ ಈ ಮಾತು ನಿಜವಾಗಬಹುದು ಎಂದು ನಂಬಲಾಗಿದೆ.

ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:11 am, Sun, 3 December 23