Telangana Results: ತೆಲಂಗಾಣ ಕಾಂಗ್ರೆಸ್ ಶಾಸಕರ ರಕ್ಷಣೆಗೆ ಹೈದರಾಬಾದ್​​ ತಲುಪಿದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್

|

Updated on: Dec 03, 2023 | 10:23 AM

DK Shivakumar in Hyderabad: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳನ್ನು ವಿಶೇಷ ಬಸ್‌ಗಳಲ್ಲಿ ಕರ್ನಾಟಕಕ್ಕೆ ಕರೆದೊಯ್ಯುವ ಸಾಧ್ಯತೆ ಬಲವಾಗಿದೆ. ಅದಕ್ಕಾಗಿಯೇ ಮೂರು ಬಸ್‌ಗಳನ್ನು ಸಿದ್ಧಪಡಿಸಲಾಗಿದೆ. ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್​​ಗೆ ನೂತನ ಶಾಸಕರ ರಕ್ಷಣೆಯ ಹೊಣೆಯನ್ನು ಕಾಂಗ್ರೆಸ್ ಹೈಕಮಾಂಡ್ ವಹಿಸಿದೆ.

Telangana Results: ತೆಲಂಗಾಣ ಕಾಂಗ್ರೆಸ್ ಶಾಸಕರ ರಕ್ಷಣೆಗೆ ಹೈದರಾಬಾದ್​​ ತಲುಪಿದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್
ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್​ನಲ್ಲಿನ ಡಿಕೆ ಶಿವಕುಮಾರ್
Follow us on

ಹೈದರಾಬಾದ್, ಡಿಸೆಂಬರ್ 3: ತೆಲಂಗಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ (Telangana Assembly Election Result 2023) ಪ್ರಗತಿಯಲ್ಲಿದ್ದು, ಸರಳ ಬಹುಮತಕ್ಕೆ ಬೇಕಿರುವ ಸ್ಥಾನಗಳಲ್ಲಿ ಕಾಂಗ್ರೆಸ್​ (Congress) ಮುನ್ನಡೆ ಕಾಯ್ದುಕೊಂಡಿದೆ. ಈ ಮಧ್ಯೆ, ಆಡಳಿತಾರೂಢ ಬಿಆರ್​ಎಸ್ ಕೂಡ ‘ಕೈ’ ಪಡೆಗೆ ತೀವ್ರ ಪೈಪೋಟಿ ನೀಡುತ್ತಿದೆ. ಪಕ್ಷದ ಶಾಸಕರನ್ನು ಇತರ ಪಕ್ಷಗಳು ಸೆಳೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಇದೀಗ ಕಾಂಗ್ರೆಸ್​ನ ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿರುವ ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಅಖಾಡಕ್ಕಿಳಿದಿದ್ದಾರೆ. ಶಿವಕುಮಾರ್ ಅವರು ಈಗಾಗಲೇ ಹೈದರಾಬಾದ್​ ತಲುಪಿದ್ದಾರೆ. ಅವರ ಜತೆ ಕರ್ನಾಟಕದ ಇತರ ಕೆಲವು ಸಚಿವರೂ ಇದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನ ಹೊರಗೆ ಬಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಕಾಂಗ್ರೆಸ್​ನ ನೂತನ ಶಾಸಕರಾಗಿ ಆಯ್ಕೆಯಾಗುವವರನ್ನು ಕರೆದೊಯ್ಯಲೆಂದೇ ಈ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಮತ ಎಣಿಕೆಯ ನಂತರ ಪಕ್ಷದ ಶಾಸಕರನ್ನು ಬೆಂಗಳೂರು ಅಥವಾ ಯಾವುದೇ ಕಾಂಗ್ರೆಸ್ ಆಡಳಿತ ಇರುವ ರಾಜ್ಯಕ್ಕೆ ಸ್ಥಳಾಂತರಿಸುವ ಬಗ್ಗೆ ತೀರ್ಮಾನಿಸಲಾಗುವುದು. ಕಾಂಗ್ರೆಸ್‌ಗೆ 70 ಸ್ಥಾನಗಳಿಗಿಂತ ಕಡಿಮೆಯಾದರೆ, ಶಾಸಕರನ್ನು ಬೆಂಗಳೂರು ಅಥವಾ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಶುಕ್ರವಾರವೇ ವರದಿಯಾಗಿತ್ತು. ಕಾಂಗ್ರೆಸ್​ನ ಹಿರಿಯ ನಾಯಕರೊಬ್ಬರೂ ಈ ಕುರಿತು ಸುಳಿವು ನೀಡಿದ್ದರು.

ಅಭ್ಯರ್ಥಿಗಳಿಗೆ ದಿಗ್ಬಂಧನ!

ಗೆಲ್ಲುವ ಶಾಸಕರು ‘ಕೈ’ ತಪ್ಪದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರದಿಂದ ಆಚೆ ಬರದಂತೆ ಸೂಚನೆ ನೀಡಲಾಗಿದೆ. ಎಐಸಿಸಿ ವೀಕ್ಷಕರು ಮತ ಎಣಿಕೆ ಬಳಿ ಹಾಜರಿರುತ್ತಾರೆ. ಶೀಘ್ರವೇ ಹಲವು ಎಐಸಿಸಿ ನಾಯಕರು ತೆಲಂಗಾಣಕ್ಕೆ ಬರಲಿದ್ದಾರೆ.

ಗೆದ್ದ ಅಭ್ಯರ್ಥಿಗಳು ಕರ್ನಾಟಕಕ್ಕೆ

ಕರ್ನಾಟಕದ ಕೆಲವು ಶಾಸಕರನ್ನು ಕಾಂಗ್ರೆಸ್ ಕೂಡ ಕರೆಸಿಕೊಂಡಿದೆ. ಪ್ರತಿ ಕ್ಷೇತ್ರಕ್ಕೆ ಒಬ್ಬ ಶಾಸಕರನ್ನು ಕಳುಹಿಸಲಾಗುವುದು ಎಂದು ವರದಿಯಾಗಿದೆ. ವಿಜೇತರನ್ನು ಹೈದರಾಬಾದ್‌ಗೆ ಕರೆತರುವ ಜವಾಬ್ದಾರಿಯನ್ನು ಪಕ್ಷದ ಅಧ್ಯಕ್ಷರು ಕರ್ನಾಟಕದ ಶಾಸಕರಿಗೆ ವಹಿಸಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳನ್ನು ವಿಶೇಷ ಬಸ್‌ಗಳಲ್ಲಿ ಕರ್ನಾಟಕಕ್ಕೆ ಕರೆದೊಯ್ಯುವ ಸಾಧ್ಯತೆ ಬಲವಾಗಿದೆ. ಅದಕ್ಕಾಗಿಯೇ ಮೂರು ಬಸ್‌ಗಳನ್ನು ಸಿದ್ಧಪಡಿಸಲಾಗಿದೆ.

ಫಲಿತಾಂಶದ ಕ್ಷಣಕ್ಷಣದ ಅಪ್​ಡೇಟ್​ಗಳಿಗೆ ಓದಿ: Assembly Election Results 2023 LIVE: ಎಂಪಿ ಮತ್ತು ರಾಜಸ್ಥಾನದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಕಾಂಗ್ರೆಸ್ ಮುನ್ನಡೆ

ತೆಲಂಗಾಣದಲ್ಲಿ ರೆಸಾರ್ಟ್​ ರಾಜಕಾರಣ: ಅಶೋಕ್

ತೆಲಂಗಾಣದಲ್ಲಿ ಕಾಂಗ್ರೆಸ್​​​ನವರು ರೆಸಾರ್ಟ್ ರಾಜಕಾರಣದ ಮೊರೆ ಹೋಗಿದ್ದಾರೆ. ತೆಲಂಗಾಣದಲ್ಲಿನ ಶಾಸಕರಿಗೆ ಸರ್ವೀಸ್ ಕೊಡಲು ನಮ್ಮ ರಾಜ್ಯದ ಕಾಂಗ್ರೆಸ್ ನಾಯಕರು ಹೋಗಿದ್ದಾರೆ, ಗ್ಯಾರಂಟಿಗಳೆಲ್ಲಾ ಠುಸ್ ಪಟಾಕಿ ಆಗಿವೆ‌ ಎಂದು ಕರ್ನಾಟಕದ ಪ್ರತಿಪಕ್ಷ ನಾಯಕ ಆರ್ ಅಶೋಕ್ ಬೆಂಗಳೂರಿನಲ್ಲಿ ವ್ಯಂಗ್ಯವಾಡಿದ್ದಾರೆ. ಮಧ್ಯ ಪ್ರದೇಶ ಬಿಜೆಪಿ ಗೆಲುವಿನತ್ತ ಸಾಗುತ್ತಿದೆ. ತೆಲಂಗಾಣದಲ್ಲಿ ಬಿಜೆಪಿ ಈಗ 11 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಎಲ್ಲಾ ಕಡೆ ಬಿಜೆಪಿ ತನ್ನ ‌ಅಸ್ವಿತ್ವವನ್ನು ಜಾಸ್ತಿ ಮಾಡಿಕೊಳ್ಳುತ್ತಿದೆ. ಎರಡು ರಾಜ್ಯಗಳಲ್ಲಿ ಪೂರ್ಣ ಬಹುಮತ ಸಿಗಲಿದೆ. ಛತ್ತೀಸ್​ಗಢದಲ್ಲಿ ನಾವು ಪ್ರಯತ್ನ ಮಾಡಬಹುದು ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ