ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ರಾಜಕೀಯ ಪಕ್ಷಗಳ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ತಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಈ ಮಧ್ಯೆ ಹೈದರಬಾದ್ ಮೂಲದ ಖಾಸಗಿ ಸಂಸ್ಥೆಯೊಂದು ರಾಜ್ಯದಲ್ಲಿ ನವೆಂಬರ್ನಿಂದ ಜನವರಿವರೆಗೆ ಸಮೀಕ್ಷೆ ನಡೆಸಿದ್ದು, ಈ ಬಾರಿ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿಯಬಹುದು ಎಂದು ಹೇಳಿದೆ. ಕಾಂಗ್ರೆಸ್ 108 ರಿಂದ 114, ಬಿಜೆಪಿ 65 ರಿಂದ 75 ಮತ್ತು ಜೆಡಿಎಸ್ 24 ರಿಂದ 34 ಸ್ಥಾನಗಳಲ್ಲಿ ಗೆಲವು ಸಾಧಿಸಬಹುದು ಎಂದು ಸಮೀಕ್ಷಾ ವರದಿಯಲ್ಲಿ ಹೇಳಿದೆ ಎಂದು ನ್ಯೂಸ್ ನೈನ್ ವರದಿ ಮಾಡಿದೆ.
ಖಾಸಗಿ ಸಹಭಾಗಿತ್ವದ ಎಸ್ಎಎಸ್ ಮತ್ತು ಐಪಿಎಸ್ಎಸ್ ಸಂಸ್ಥೆಗಳು ಜಂಟಿಯಾಗಿ ಸಮೀಕ್ಷೆ ನಡೆಸಿದ್ದು, ನವೆಂಬರ್ 20 ರಿಂದ ಜನವರಿ12ರ ವರೆಗೆ ಸಮೀಕ್ಷೆ ನಡೆಸಿ ಮುಂಬರುವ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು, ಕಾಂಗ್ರೆಸ್ ಸೋಲಿಸಬಹುದು ಎಂದಿದೆ. ಸಮೀಕ್ಷೆ ವರದಿ ಪ್ರಕಾರ ಕಾಂಗ್ರೆಸ್ನ ಮತಗಳು ಶೇ 38.14 ರಿಂದ 40 ಪ್ರತಿಶತದಷ್ಟು ಹೆಚ್ಚಾಗಬಹುದು. ಇನ್ನು ಬೆಂಗಳೂರಿನಲ್ಲಿ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 13-14 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದರೇ, ಬಿಜೆಪಿಯ 9-10 ಮತ್ತು ಜೆಡಿಎಸ್ನ 1-2 ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಎಂದು ಹೇಳಿದೆ.
ಒಕ್ಕಲಿಗರ ಭದ್ರಕೋಟೆಯಾದ ಹಳೇ ಮೈಸೂರು ಭಾಗದ 66 ಕ್ಷೇತ್ರಗಳಲ್ಲಿ ಕಾಂಗ್ರೆಸ್ 24 ರಿಂದ 25 ಕ್ಷೇತ್ರಗಳಲ್ಲಿ, ಬಿಜೆಪಿ 10-14, ಜೆಡಿಎಸ್ 20 ರಿಂದ 21 ಕ್ಷೇತ್ರಗಳಲ್ಲಿ ವಿಜಯಪತಾಕೆ ಹಾರಿಸಲಿದೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ಬಿಜೆಪಿ ಪ್ರಾಭಲ್ಯ ಹೆಚ್ಚಿದ್ದು 44 ಕ್ಷೇತ್ರಗಳಲ್ಲಿ ಕಾಂಗ್ರೆಸ್ 27-28 ಕ್ಷೇತ್ರ, ಬಿಜೆಪಿ 14-16 ಕ್ಷೇತ್ರ, ಜೆಡಿಎಸ್ 1-2 ಕ್ಷೇತ್ರಗಳಲ್ಲಿ ಗೆಲ್ಲಬಹುದು. ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ 21-22, ಬಿಜೆಪಿ 12-14 ಮತ್ತು ಜೆಡಿಎಸ್ 1-3 ಕ್ಷೇತ್ರಗಳಲ್ಲಿ ಜಯಬೇರಿ ಬಾರಿಸಲಿದೆ.
ಕರಾವಳಿ ಕರ್ನಾಟಕದಲ್ಲಿ ಬಿಜೆಪಿಯ ಅಲೆ ಚೆನ್ನಾಗಿದ್ದು, 19 ಕ್ಷೇತ್ರಗಳಲ್ಲಿ 12-13, ಕಾಂಗ್ರೆಸ್ 7-8 ಮತ್ತು ಜೆಡಿಎಸ್ ಖಾತೆ ತೆರಯುವುದಿಲ್ಲ ಎಂದು ವರದಿಯಲ್ಲಿ ಹೇಳಿದೆ. ಹಾಗೇ ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ 16-17 ಕ್ಷೇತ್ರಗಳಲ್ಲಿ, ಬಿಜೆಪಿ 8-9 ಮತ್ತು ಜೆಡಿಎಸ್ 0-1 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ.
ಬಿಜೆಪಿಯಿಂದ ಹೊರ ಬಂದು “ಕಲ್ಯಾಣ ರಾಜ್ಯ ಪ್ರಗತಿ ಪಕ್ಷ” ಹೊಸ ಪಕ್ಷ ಸ್ಥಾಪಿಸಿರುವ ಜನಾರ್ದನ ರೆಡ್ಡಿ ಕೊಪ್ಪಳ, ಗಣಗಾವತಿ, ಬಳ್ಳಾರಿ, ದಾವಣಗೆರೆ ಮತ್ತು ರಾಯಚೂರು 5 ಕ್ಷೇತ್ರಗಳಲ್ಲಿ ನಿರ್ಣಾಯಕವಾಗಲಿದೆ. ಎಐಎಂಐಎಂ ಸ್ಪರ್ಧಿಸಿದರೇ ರಾಜ್ಯದಾದ್ಯಂತ 6 ರಿಂದ 7 ಸ್ಥಾನಗಳಲ್ಲಿ ಗೆಲವು ಸಾಧಿಸುವ ಸಾಧ್ಯತೆ ಇದೆ.
ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ ಕಾಂಗ್ರೆಸ್ ಗರಿಷ್ಠ ಮತಗಳನ್ನು ಪಡೆಯಲಿದೆ. ಈ ನಡುವೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಕ್ಕಲಿಗರು ಒಡೆದು ಹೋಗಲಿದ್ದು, ಕೇವಲ 10 ಪ್ರತಿಶತದಷ್ಟು ಜನರು ಬಿಜೆಪಿಗೆ ಮತ ಹಾಕುವ ನಿರೀಕ್ಷೆಯಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:35 pm, Sat, 21 January 23