ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡ್ತಾರಾ? ಮೌನ ಮುರಿದ ಸಂಸದೆ
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿತ್ತು. ಆದ್ರೆ, ಇದೀಗ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇನ್ನು ಈ ವಿಚಾರವಾಗಿ ಸ್ವತಃ ಸುಮಲತಾ ಅಂಬರೀಶ್ ಅವರು ಮೌನ ಮುರಿದಿದ್ದಾರೆ.
ಮೈಸೂರು: 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್(Sumalatha Ambareesh) ಅವರು ಜೆಡಿಎಸ್ ಭದ್ರಕೋಟೆಯನ್ನೇ ಭೇದಿಸಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಅದರಲ್ಲೂ ಅಂದು ಕುಮಾರಸ್ವಾಮಿ ಮುಖ್ಯಮಂತ್ರಿ ಕುರ್ಚಿಯಲ್ಲಿರುವಾಗಲೇ ಅವರ ಪುತ್ರ ನಿಖಿಕ್ ಕುಮಾರಸ್ವಾಮಿಯನ್ನು ಮಂಡ್ಯದಲ್ಲಿ (Mandya) ಮಣಿಸಿ ಲೋಕಸಭೆಗೆ ಪ್ರವೇಶಿಸಿದ್ದಾರೆ. ಇದೀಗ ವಿಧಾನಸಭೆ ಚುನಾವಣೆ (Karnataka Assembly Election 2023) ಕಾವು ರಂಗೇರಿದೆ. ಈ ಎಲೆಕ್ಷನ್ನಲ್ಲಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಬಗ್ಗೆ ಖುದ್ದು ಸಂಸದೆ ಸುಮಲತಾ ಮೌನ ಮುರಿದಿದ್ದಾರೆ.
ಮೈಸೂರಿನಲ್ಲಿ ಇಂದು(ಜನವರಿ 21) ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್, ವಿಧಾನಸಭೆ ಚುನಾವಣೆಗೆ ನಿಲ್ಲುವಂತೆ ಎಲ್ಲರೂ ನನ್ನನ್ನು ಕೇಳುತ್ತಿದ್ದಾರೆ. ಅಂಬರೀಶ್ ಬೆಂಬಲಿಗರು ಸಭೆ ನಡೆಸಿರುವ ಬಗ್ಗೆ ನನಗೆ ಗೊತ್ತಿಲ್ಲ. ನಾನು ಚುನಾವಣೆಗೆ ಬಂದಿದ್ದೆ ಆಕಸ್ಮಿಕ. ಮಂಡ್ಯದ ಎಲ್ಲಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಒಲವು ಇದೆ. ನಾನು ಈವರೆಗೂ ತಟಸ್ಥಳಾಗಿ ಇದ್ದೆ, ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನಿಸುತ್ತೇನೆ ಎಂದು ಹೇಳಿದರು.
ಇನ್ನು ಇದೇ ವೇಳೆ ತಮ್ಮ ಪುತ್ರ ಅಭಿಷೇಕ್ ಚುನಾವಣೆಗೆ ಸ್ಪರ್ಧೆ ಮಾಡುತ್ತಾರಾಯೇ ಎನ್ನುವ ಮಾಧ್ಯಮಗಳ ಪ್ರಶ್ನಿಗೆ ಪ್ರತಿಕ್ರಿಯಿಸಿದ ಸುಮಲತಾ ಅಂಬರೀಶ್, ಚುನಾವಣೆಗೆ ಸ್ಪರ್ಧೆ ಮಾಡುವುದು ಅವನಿಗೆ ಬಿಟ್ಟದ್ದು. ಹಣೆಯ ಬರಹ ಯಾವ ರೀತಿ ಇರುತ್ತದೆಯೋ ಆ ರೀತಿ ಆಗುತ್ತೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಕೇಸರಿ ಪಾಳಯದಲ್ಲಿ ಸುಮಲತಾ ಅಂಬರೀಶ್: ಸಂಚಲನ ಮೂಡಿಸಿದ ‘ಸ್ವಾಭಿಮಾನಿ’ ಸಂಸದೆಯ ರಾಜಕೀಯ ನಡೆ
ಸುಮಲತಾ ಅಂಬರೀಶ್ ಅವರನ್ನು ಬಿಜೆಪಿಗೆ ಸೆಳೆಯಲು ಈಗಾಗಲೇ ರಾಜ್ಯ ನಾಯಕರು ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಸಮುಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರನ್ನ ಈ ಬಾರಿ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆ ಒಂದು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಚರ್ಚೆಯಾಗಿದೆ ಎನ್ನಲಾಗಿದೆ. ಈ ಮೂಲಕ ಜೆಡಿಎಸ್ ಭದ್ರಕೋಟೆಗೆ ದಿಟ್ಟವಾಗಿ ನಿಂತಿರುವ ಸುಮಲತಾ ಅಂಬರೀಶ್ ಮೂಲಕವೇ ಕೇಸರಿ ಬಾವುಟ ಹಾರಿಸುವ ಪ್ಲಾನ್ ಬಿಜೆಪಿಯದ್ದಾಗಿದೆ.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಳೇ ಮೈಸೂರು ಭಾಗವನ್ನೇ ಟಾರ್ಗೆಟ್ ಮಾಡಿದ್ದು, ಆ ಭಾಗದ ಕಾಂಗ್ರೆಸ್, ಜೆಡಿಎಸ್ನ ಕೆಲ ಮುಖಂಡರಿಗೆ ಗಾಳ ಹಾಕುತ್ತಿದೆ. ಈ ಪಟ್ಟಿಯಲ್ಲಿ ಸುಮಲತಾ ಅಂಬರೀಶ್ ಸಹ ಇದ್ದಾರೆ ಎನ್ನಲಾಗಿದೆ. ಇನ್ನು ಸುಮಲತಾ ಅಂಬರೀಶ್ ಅವರು ಬಿಜೆಪಿ ಬಾಗಿಲಲ್ಲಿ ಇದ್ದಾರೆ ಎನ್ನುವುದಕ್ಕೆ ಸ್ವತಃ ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸುಳಿವು ಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.
Published On - 9:00 pm, Sat, 21 January 23