‘ಸೂರ್ಯನ ಕೆಳಗೂ ಕತ್ತಲೆಯಿದೆ’; ಹೆದ್ದಾರಿಯ ಕುರಿತು ತಪ್ಪು ಮಾಹಿತಿ ಹಂಚಿಕೊಂಡ ತೇಜಸ್ವಿ ಸೂರ್ಯ ವಿರುದ್ಧ ಅಖಿಲೇಶ್ ಯಾದವ್ ವ್ಯಂಗ್ಯ

| Updated By: shivaprasad.hs

Updated on: Feb 18, 2022 | 9:25 AM

Tejasvi Surya | Akhilesh Yadav: ಆಗ್ರಾ- ಲಕ್ನೋ ಹೆದ್ದಾರಿಯನ್ನು ನಿರ್ಮಿಸಿದ ಕ್ರೆಡಿಟ್​ಅನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಅವರಿಗೆ ನೀಡಿದ್ದ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಚರ್ಚೆ ಹುಟ್ಟುಹಾಕಿದೆ. ಇದಕ್ಕೆ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಗಿ ಟೀಕೆ ಮಾಡಿದ್ದಾರೆ.

‘ಸೂರ್ಯನ ಕೆಳಗೂ ಕತ್ತಲೆಯಿದೆ’; ಹೆದ್ದಾರಿಯ ಕುರಿತು ತಪ್ಪು ಮಾಹಿತಿ ಹಂಚಿಕೊಂಡ ತೇಜಸ್ವಿ ಸೂರ್ಯ ವಿರುದ್ಧ ಅಖಿಲೇಶ್ ಯಾದವ್ ವ್ಯಂಗ್ಯ
ಅಖಿಲೇಶ್ ಯಾದವ್, ತೇಜಸ್ವಿ ಸೂರ್ಯ
Follow us on

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಹೆದ್ದಾರಿ ಕುರಿತ ಟ್ವೀಟ್ ಒಂದನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ. ತೇಜಸ್ವಿ ಸೂರ್ಯ (Tejasvi Surya) ತಮ್ಮ ಟ್ವಿಟರ್ ಖಾತೆಯಲ್ಲಿ ಆಗ್ರಾ- ಲಕ್ನೋ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ಅದಕ್ಕೆ ಕ್ಯಾಪ್ಶನ್ ನೀಡಿದ್ದ ಅವರು, ‘ಲಕ್ನೋದಿಂದ ಕನೋಜ್​, ಯೋಗಿಜಿಯವರ ಎಕ್ಸ್​ಪ್ರೆಸ್​​ವೇಪ್ರದೇಶ್’ ಎಂದು ಟ್ವೀಟ್ ಮಾಡಿದ್ದರು. ಈ ಮೂಲಕ ಹೆದ್ದಾರಿ ನಿರ್ಮಿಸಿದ ಕ್ರೆಡಿಟ್​ಅನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ನೀಡಿದ್ದರು. ತೇಜಸ್ವಿ ಸೂರ್ಯ ಟ್ವೀಟ್ ಹಂಚಿಕೊಂಡ ಬೆನ್ನಲ್ಲೇ ಅದು ಚರ್ಚೆಗೆ ಕಾರಣವಾಗಿತ್ತು. 302 ಕಿ.ಮೀ ಉದ್ದದ ಈ ಹೆದ್ದಾರಿ ನಿರ್ಮಾಣವಾಗಿದ್ದು ಅಖಿಲೇಶ್ ಯಾದವ್ ಕಾಲದಲ್ಲಿ ಎಂದು ಹಲವರು ಸ್ಪಷ್ಟನೆ ನೀಡಿದ್ದರು. ಇದೀಗ ತೇಜಸ್ವಿ ಸೂರ್ಯ ಟ್ವೀಟ್​ಗೆ ಅಖಿಲೇಶ್ ಯಾದವ್ ಸ್ವತಃ ಪ್ರತಿಕ್ರಿಯಿಸಿ ತಪ್ಪು ಮಾಹಿತಿ ಹಂಚಿಕೊಂಡಿದ್ದಕ್ಕೆ ವ್ಯಂಗ್ಯವಾಗಿ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತೇಜಸ್ವಿ ಸೂರ್ಯ ಹಂಚಿಕೊಂಡಿದ್ದ ಹೆದ್ದಾರಿಯ ಕುರಿತ ಟ್ವೀಟ್:

ಅಖಿಲೇಶ್ ಯಾದವ್ ಪ್ರತಿಕ್ರಿಯೆ ಏನು?

ಅಖಿಲೇಶ್ ಯಾದವ್ ತಮ್ಮ ಟ್ವಿಟರ್ ಖಾತೆಯಿಂದ ತೇಜಸ್ವಿ ಸೂರ್ಯ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಅವರು ವ್ಯಂಗ್ಯವಾಗಿ ‘ಸೂರ್ಯನ ಕೆಳಗೂ ಕತ್ತಲೆಯಿದೆ’ ಎಂದು ಹೇಳಿದ್ದಾರೆ. ‘ದೀಪದ ಕೆಳಗೆ ಕತ್ತಲಿರುತ್ತದೆ’ ಎನ್ನುವ ಮಾತನ್ನು ಉಲ್ಲೇಖಿಸಿ, ‘ಬಿಜೆಪಿ ನಾಯಕರ ನಿರ್ಲಕ್ಷ್ಯವನ್ನು ನೋಡಿದರೆ, ಅದನ್ನು ‘ಸೂರ್ಯನ ಕೆಳಗೂ ಕತ್ತಲೆಯಿದೆ’ ಎನ್ನಬೇಕಾಗುತ್ತದೆ’ ಎಂದು ತೇಜಸ್ವಿ ಸೂರ್ಯ ಹೆಸರಿನ ಕುರಿತು ಅಖಿಲೇಶ್ ವ್ಯಂಗ್ಯವಾಗಿ ಹೇಳಿದ್ದಾರೆ.

ಆಗ್ರಾ- ಲಕ್ನೋ ಹೆದ್ದಾರಿಯನ್ನು ನಿರ್ಮಿಸಿರುವುದು ತಮ್ಮ ಆಡಳಿತಾವಧಿಯಲ್ಲಿ ಎಂದು ಅಖಿಲೇಶ್ ಯಾದವ್ ಸ್ಪಷ್ಟನೆಯನ್ನೂ ನೀಡಿದ್ದಾರೆ. ಆಗ್ರಾ- ಲಕ್ನೋ ಹೆದ್ದಾರಿಯನ್ನು 2016ರಲ್ಲಿ ಅಖಿಲೇಶ್ ಯಾದವ್ ಉದ್ಘಾಟಿಸಿದ್ದರು. 2017ರ ಫೆಬ್ರವರಿಯಿಂದ ಇದು ಸಾರ್ವಜನಿಕರಿಗೆ ಲಭ್ಯವಾಗಿತ್ತು.

ಅಖಿಲೇಶ್ ಯಾದವ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಮತ್ತೊಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ ಸಂಸದ ತೇಜಸ್ವಿ ಸೂರ್ಯ:

ಆಗ್ರಾ- ಲಕ್ನೋ ಹೆದ್ದಾರಿಯ ಟ್ವೀಟ್ ವೈರಲ್ ಆಗುತ್ತಿದ್ದಂತೆ, ಸಂಸದ ತೇಜಸ್ವಿ ಸೂರ್ಯ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವರು ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಆದ ಹೆದ್ದಾರಿಯ ಕುರಿತು ಪ್ರಸ್ತಾಪಿಸಿದ್ದಾರೆ. ಉತ್ತರ ಪ್ರದೇಶದಲ್ಲಿ 1947 ಮತ್ತು 2017 ರ ನಡುವೆ 467 ಕಿಮೀ ಎಕ್ಸ್‌ಪ್ರೆಸ್‌ವೇ ನಿರ್ಮಿಸಲಾಗಿದೆ. ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬಂದ ನಂತರ ಇದು 1,321 ಕಿಮೀಗೆ ಏರಿದೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.

ಏಳು ಹಂತದ ವಿಧಾನಸಭಾ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಮಾರ್ಚ್ 7 ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಮೊದಲ ಎರಡು ಹಂತದ ಮತದಾನ ಮುಗಿದಿದ್ದು, ಮುಂದಿನ ಹಂತದ ಮತದಾನ ಫೆಬ್ರವರಿ 20 ರಂದು ನಡೆಯಲಿದೆ. 16 ಜಿಲ್ಲೆಗಳ ಒಟ್ಟು 59 ವಿಧಾನಸಭಾ ಕ್ಷೇತ್ರಗಳಿಗೆ ಭಾನುವಾರ ಮತದಾನ ನಡೆಯುತ್ತಿದೆ. ಮಾರ್ಚ್​​ 10ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ:

PM Modi: ಥಾಣೆ-ದಿವಾ ಸಂಪರ್ಕಿಸುವ, ₹ 620 ಕೋಟಿ ವೆಚ್ಚದ ಎರಡು ರೈಲು ಮಾರ್ಗಗಳನ್ನು ಇಂದು ಉದ್ಘಾಟಿಸಲಿರುವ ಪ್ರಧಾನಿ

Hijab row: ಉತ್ತರ ಪ್ರದೇಶದ ಅಲಿಗಢ ಧರ್ಮ ಸಮಾಜ ಕಾಲೇಜು ಸಹ ಸಮವಸ್ತ್ರ ಶಿಷ್ಟಾಚಾರ ವಿಧಿಸಿತು

Published On - 9:12 am, Fri, 18 February 22