ಲಖನೌ: ಉತ್ತರಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ 17 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ 17 ಕ್ಷೇತ್ರಗಳಲ್ಲಿ ಲಖನೌ ವಿಭಾಗದ ಒಟ್ಟು 9 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರೂ ಇದೆ. ಆದರೆ ಈ ಪಟ್ಟಿಯಲ್ಲಿ ಅಪರ್ಣಾ ಯಾದವ್ (ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿರುವ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಸೊಸೆ) ಹೆಸರಿಲ್ಲದೆ ಇರುವುದು ಅಚ್ಚರಿ ತಂದಿದೆ. ಅಷ್ಟೇ ಅಲ್ಲ, ಬಿಜೆಪಿ ಸಂಸದೆ ರಿತಾ ಬಹುಗುಣಾ ಜೋಶಿ ಪುತ್ರ ಮಯಾಂಕ್ ಜೋಶಿಯವರ ಹೆಸರೂ ಇಲ್ಲ. ಲಖನೌ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರ ಹೈಪ್ರೊಫೈಲ್ ಕ್ಷೇತ್ರವಾಗಿದೆ. ಈ ಕ್ಷೇತ್ರದಿಂದ ಮಯಾಂಕ್ ಜೋಶಿ ಅಥವಾ ಅಪರ್ಣಾ ಯಾದವ್ರನ್ನು ಬಿಜೆಪಿ ಕಣಕ್ಕಿಳಿಸಲಿದೆ ಎಂದೇ ಹೇಳಲಾಗಿತ್ತು. ಅದರಲ್ಲಿ ಮಯಾಂಕ್ ಜೋಶಿ, ಲಖನೌ ಕಂಟೋನ್ಮೆಂಟ್ ವಿಧಾನಸಭೆ ಕ್ಷೇತ್ರದಿಂದ ತಮಗೆ ಟಿಕೆಟ್ ಖಚಿತ ಎಂಬ ಬಲವಾದ ನಂಬಿಕೆಯಲ್ಲೇ ಇದ್ದರು. ಆದರೆ ಲಖನೌ ಕಂಟೋನ್ಮೆಂಟ್ ಕ್ಷೇತ್ರದಿಂದ ಬ್ರಿಜೇಶ್ ಪಾಠಕ್ರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ.
ಇನ್ನುಳಿದಂತೆ ಜಾರಿ ನಿರ್ದೇಶನಾಲಯದಿಂದ ಸ್ವಯಂ ನಿವೃತ್ತಿ ಪಡೆದಿರುವ ರಾಜೇಶ್ವರ್ ಸಿಂಗ್ ಅವರಿಗೆ ಸರೋಜಿನಿ ನಗರದಿಂದ ಟಿಕೆಟ್ ನೀಡಲಾಗಿದೆ. ಇದೂ ಕೂಡ ರಾಜಕೀಯ ವಲಯದಲ್ಲಿ ಅಚ್ಚರಿಯ ನಡೆಯಾಗಿದೆ. ಇವರು ತಮ್ಮ ಸ್ವಜಿಲ್ಲೆ ಸುಲ್ತಾನ್ಪುರದಿಂದ ಸ್ಪರ್ಧಿಸಬಹುದು ಎಂದೂ ಹೇಳಲಾಗಿತ್ತು. ಹಾಗೇ, ಸರೋಜಿನಿ ನಗರದ ಮೇಲೆ ಕೇಂದ್ರ ಮಹಿಳಾ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಸ್ವಾತಿ ಸಿಂಗ್ ಮತ್ತು ಅವರ ಪತಿ ದಯಾ ಶಂಕರ್ ಕಣ್ಣಿಟ್ಟಿದ್ದಾರೆ. ಅಂದರೆ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಎಲ್ಲ ಲೆಕ್ಕಾಚಾರ ಉಲ್ಟಾ ಆಗಿ, ಸರೋಜಿನಿ ನಗರ ರಾಜೇಶ್ವರ್ ಸಿಂಗ್ ಪಾಲಿಗೆ ದಕ್ಕಿದೆ. ರಾಜ್ಯ ಸಚಿವ ಆಶುತೋಶ್ ಟಂಡನ್ ಅವರು ಲಖನೌ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಮಯಾಂಕ್ ಜೋಶಿ ಸಮಾಜವಾದಿ ಪಕ್ಷಕ್ಕೆ?
ಲಖನೌ ಕಂಟೋನ್ಮೆಂಟ್ ಕ್ಷೇತ್ರದಿಂದ ಟಿಕೆಟ್ ಸಿಕ್ಕೇಸಿಗಲಿದೆ ಎಂದು ಭರವಸೆ ಹೊಂದಿದ್ದ ಮಯಾಂಕ್ ಜೋಶಿ ನಿರಾಸೆಗೊಂಡಿದ್ದು, ಅವರು ಮುಂದಿನ ಸೋಮವಾರ ಸಮಾಜವಾದಿ ಪಕ್ಷ ಸೇರಲಿದ್ದಾರೆ ಎಂದು ಬಲವಾದ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಹಾಗೊಮ್ಮೆ ಮಯಾಂಕ್ ಜೋಶಿ ಎಸ್ಪಿಗೆ ಸೇರಿದರೆ, ಅದು ಬಿಜೆಪಿ ಪಾಲಿಗೆ ಮತ್ತೊಂದು ಕಹಿತುತ್ತಾಗುವುದರಲ್ಲಿ ಎರಡು ಮಾತಿಲ್ಲ. ಯುಪಿ ಸರ್ಕಾರದಲ್ಲಿ ಸಚಿವರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ, ದಾರಾ ಸಿಂಗ್ ಚೌಹಾಣ್ ಮತ್ತು ಧರಮ್ ಸಿಂಗ್ ಸೈನಿ ಸಮಾಜವಾದಿ ಪಾರ್ಟಿ ಸೇರಿದ್ದಾರೆ. ಈ ಮೂವರು ಸಚಿವರೊಂದಿಗೆ 6-7 ಶಾಸಕರೂ ಹೋಗಿದ್ದಾರೆ. ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ಪಕ್ಷಾಂತರ ಮಾಡಿದ್ದಾರೆ. ಮಯಾಂಕ್ ಜೋಶಿ ಬ್ರಾಹ್ಮಣ ಸಮುದಾಯದವರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಬ್ರಾಹ್ಮಣ ವಿರೋಧಿ ಎಂಬ ಪಟ್ಟವನ್ನು ಈಗಾಗಲೇ ಕಟ್ಟಿಕೊಂಡಿದ್ದು, ಒಮ್ಮೆ ಮಯಾಂಕ್ ಕೂಡ ಎಸ್ಪಿಗೆ ಸೇರಿದರೆ ಈ ಹಣೆಪಟ್ಟಿ ಶಾಶ್ವತವಾಗುತ್ತದೆ. ಯುಪಿ ಬ್ರಾಹ್ಮಣ ಸಮುದಾಯವನ್ನು ಓಲೈಸಲು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ನಡೆಸಿದ್ದ ಸಭೆಗಳು, ಬ್ರಾಹ್ಮಣ ಮುಖಂಡರೊಟ್ಟಿಗಿನ ಸಂವಾದಗಳೆಲ್ಲ ವ್ಯರ್ಥವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
2017ರಲ್ಲಿ ಏನಾಗಿತ್ತು?
ಇನ್ನು ಅಪರ್ಣಾ ಯಾದವ್ ವಿಚಾರಕ್ಕೆ ಬಂದರೆ, ನನಗೆ ಟಿಕೆಟ್ ನೀಡುವ ಬಗ್ಗೆ ಬಿಜೆಪಿ ವರಿಷ್ಠರು ಯಾವುದೇ ನಿರ್ಧಾರ ಕೈಗೊಂಡರೂ ನಾನು ಬದ್ಧನಾಗಿದ್ದೇನೆ ಎಂದಿದ್ದರು. 2017ರ ಉತ್ತರ ವಿಧಾನಸಭೆ ಚುನಾವಣೆಯಲ್ಲಿ ಅಪರ್ಣಾ ಯಾದವ್ ಸಮಾಜವಾದಿ ಪಕ್ಷದಿಂದ ಲಖನೌ ಕಂಟೋನ್ಮೆಂಟ್ ಕ್ಷೇತ್ರದಿಂದಲೇ ಸ್ಪರ್ಧಿಸಿದ್ದರು. ಬಿಜೆಪಿಯಿಂದ ಮಯಾಂಕ್ ಜೋಶಿ ತಾಯಿ ರಿತಾ ಬಹುಗುಣಾ ಜೋಶಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ರಿತಾ ವಿರುದ್ಧ ಅಪರ್ಣಾ ಸೋತಿದ್ದರು. ರಿತಾ ಜೋಶಿ 95,402 ಮತಗಳನ್ನು ಪಡೆದಿದ್ದರೆ, ಅಪರ್ಣಾ ಯಾದವ್ 61,606 ವೋಟುಗಳನ್ನು ಗಳಿಸಿದ್ದರು. ಈ ಲಖನೌ ಕಂಟೋನ್ಮೆಂಟ್ ಕ್ಷೇತ್ರ 1991ರಿಂದಲೂ ಬಿಜೆಪಿ ಭದ್ರಕೋಟೆ ಎಂಬುದು ವಿಶೇಷ. 1991ರಲ್ಲಿ ಬಿಜೆಪಿಯ ಸತೀಶ್ ಭಾಟಿಯಾ ಅವರು, ಕಾಂಗ್ರೆಸ್ನ ಪ್ರೇಮವಾರಿ ತಿವಾರಿಯವರನ್ನು ಸೋಲಿಸುವ ಮೂಲಕ ಗೆಲುವಿನ ಮೊದಲ ಹೆಜ್ಜೆ ಇಟ್ಟಿದ್ದರು. ಆಗಿನಿಂದಲೂ ಇಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಉಳಿಸಿಕೊಂಡಿದೆ.
ಇದನ್ನೂ ಓದಿ: ಮಡಿಕೇರಿಯಲ್ಲಿ ವೃದ್ಧೆಯರನ್ನು ಕಟ್ಟಿ ಹಾಕಿ ಮನೆ ದರೋಡೆ! 2.5 ಲಕ್ಷ ರೂ. ನಗದು, 83 ಗ್ರಾಂ ಚಿನ್ನಾಭರಣ ಕದ್ದು ಪರಾರಿ