ಲಖನೌ: ಉತ್ತರ ಪ್ರದೇಶದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಚುನಾವಣೆ (Uttar Pradesh Assembly Election) ದೇಶದ ಮುಂದಿನ ಶತಮಾನವನ್ನು ನಿರ್ಧರಿಸುತ್ತದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಹೇಳಿದರು. ಹಾಗೇ, ದೇಶದಲ್ಲಿರುವ ನಕಾರಾತ್ಮಕ ರಾಜಕೀಯವನ್ನು ತೊಡೆದುಹಾಕುವಂತೆ ಜನರಿಗೆ ಕರೆ ನೀಡಿದರು. ನಂತರ ಕರ್ಹಾಲ್ ವಿಧಾನಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಈ ವೇಳೆ ಅಪಾರ ಬೆಂಬಲಿಗರು ಸ್ಥಳದಲ್ಲಿದ್ದು, ಅಖಿಲೇಶ್ ಯಾದವ್ ಪರ ಘೋಷಣೆ ಕೂಗಿದರು. ಇಂದು ಅಖಿಲೇಶ್ ಯಾದವ್ ಸೈಫಾಯ್ ಮನೆಯಿಂದ ನಾಮಪತ್ರ ಸಲ್ಲಿಸಲು ಸಮಾಜವಾದಿ ಪಕ್ಷದ ರಥ (ಅಖಿಲೇಶ್ ಯಾದವ್ ಸೈಕಲ್ ಮೇಲೆ ಕುಳಿತ ಫೋಟೋ ಇರುವ ಬಸ್)ದಲ್ಲಿ ತೆರಳಿದರು. ಅವರು ಕರ್ಹಾಲ್ ತಲುಪುವಷ್ಟರಲ್ಲಿ ಅಲ್ಲಿ ಜನಸಂದಣಿ ಜಾಸ್ತಿಯಾಯಿತು. ಅಖಿಲೇಶ್ ಬೆಂಬಲಿಗರನ್ನು ನಿಯಂತ್ರಿಸಲು ಸ್ಥಳೀಯ ಜಿಲ್ಲಾಡಳಿತ ಹರಸಾಹಸ ಪಡುವಂತಾಯ್ತು. ಅದಕ್ಕಾಗಿ ಬ್ಯಾರಿಕೇಡ್ಗಳನ್ನು ಕೂಡ ಹಾಕಲಾಯಿತು.
ನಾಮಪತ್ರ ಸಲ್ಲಿಸಿದ ಬಳಿಕ ಟ್ವೀಟ್ ಮಾಡಿದ ಅಖಿಲೇಶ್ ಯಾದವ್, ನನ್ನ ನಾಮಪತ್ರ ಸಲ್ಲಿಕೆ ಒಂದು ಮಿಷನ್ ಎಂದು ಹೇಳಿದ್ದಾರೆ. ನಾನು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನನ್ನ ಸ್ಪರ್ಧೆಯ ಬಗ್ಗೆ ಜನರೂ ಕೂಡ ಉತ್ಸುಕರಾಗಿದ್ದಾರೆ. ಯಾಕೆಂದರೆ ಅವರು ರಾಜ್ಯದಲ್ಲಿ ಬದಲಾವಣೆ ತರಲು ಕಾಯುತ್ತಿದ್ದಾರೆ ಎಂದು ಹೇಳಿದರು. ಹಾಗೇ, ತಾವು ಇಟಾವಾದಲ್ಲಿರುವ ಸೈಫಾಯ್ ಮನೆಯಿಂದ ನಾಮಪತ್ರ ಸಲ್ಲಿಸಲು ಬಸ್ನಲ್ಲಿ ಹೋಗುತ್ತಿರುವ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದಾರೆ.
ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಒಟ್ಟು 7ಹಂತದಲ್ಲಿ ನಡೆಯಲಿದ್ದು, ಅದರಲ್ಲಿ ಕರ್ಹಾಲ್ನಲ್ಲಿ ಫೆ.20ಕ್ಕೆ ಅಂದರೆ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿರುವ ಅಖಿಲೇಶ್ ಯಾದವ್ ಸಿಕ್ಕಾಪಟೆ ಉತ್ಸಾಹದಲ್ಲಿದ್ದಾರೆ. ಸಕಾರಾತ್ಮಕ ರಾಜಕೀಯ ದೇಶವನ್ನು ಮುನ್ನಡೆಸುತ್ತದೆ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ಒಂದು ಅವಕಾಶ ಕೊಡಿ. ಕೇವಲ ನನ್ನ ಕ್ಷೇತ್ರ ಕರ್ಹಾಲ್ನಲ್ಲಿ ಅಷ್ಟೇ ಅಲ್ಲ, ಪ್ರತಿ ಕ್ಷೇತ್ರದಲ್ಲೂ ಸಮಾಜವಾದಿ ಪಕ್ಷವನ್ನು ಗೆಲ್ಲಿಸಿ. ಉತ್ತರಪ್ರದೇಶ ರಾಜ್ಯವನ್ನು ನಮ್ಮ ಪಕ್ಷ ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತದೆ ಎಂದು ಹೇಳಿದರು.
ಕರ್ಹಾಲ್ ವಿಧಾನಸಭೆ ಕ್ಷೇತ್ರದಲ್ಲಿ 1993ರಿಂದಲೂ ಸಮಾಜವಾದಿ ಪಕ್ಷದ ಹಿಡಿತದಲ್ಲೇ ಇದೆ. ಆದರೆ 2002ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸೋಬರನ್ ಸಿಂಗ್ ಇಲ್ಲಿ ಗೆಲುವು ಸಾಧಿಸಿದ್ದರು. ಆದರೆ ನಂತರ ಅವರೂ ಕೂಡ ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ. ನಂತರ ಅಲ್ಲಿ ಮೂರು ಅವಧಿಗೆ ಗೆದ್ದಿದ್ದಾರೆ. ಕರ್ಹಾಲ್ನಲ್ಲಿ ಒಟ್ಟು 3.7 ಲಕ್ಷ ಮತದಾರರು ಇದ್ದಾರೆ. ಅದರಲ್ಲೂ ಶೇ.37ರಷ್ಟು ಅಂದರೆ 1.4 ಲಕ್ಷ ಮಂದಿ ಯಾದವ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ.
ಇದನ್ನೂ ಓದಿ: ಎಲ್ಆರ್ ಶಿವರಾಮೇಗೌಡ ಆಡಿಯೋ ವೈರಲ್ ವಿಚಾರಕ್ಕೆ ಹೆಚ್ಡಿ ಕುಮಾರಸ್ವಾಮಿ ಗರಂ; ಪಕ್ಷದಿಂದ ಹೊರಹಾಕಲು ಸೂಚನೆ