ಪ್ರತಿದಿನವೂ ಭಗವಂತ ಶ್ರೀಕೃಷ್ಣ ನನ್ನ ಕನಸಲ್ಲಿ ಬರುತ್ತಿದ್ದಾನೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್(SP Chief Akhilesh Yadav) ಹೇಳಿದ್ದಾರೆ. ಬಹ್ರೈಚ್ನ ಬಿಜೆಪಿ ಶಾಸಕಿ ಮಾಧುರಿ ವರ್ಮಾ ಸೋಮವಾರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡರು. ತನ್ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅಖಿಲೇಶ್ ಯಾದವ್, ಮುಂದಿನ ಚುನಾವಣೆಯಲ್ಲಿ ನನ್ನ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಖಂಡಿತ ರಾಮರಾಜ್ಯ ಸ್ಥಾಪಿಸುತ್ತೇವೆ. ಈಗಂತೂ ಪ್ರತಿದಿನ ಭಗವಂತ ಶ್ರೀಕೃಷ್ಣ ನನ್ನ ಕನಸಲ್ಲಿ ಬರುತ್ತಿದ್ದಾನೆ, ಹೀಗೆ ಬಂದು, ಮುಂದಿನ ಚುನಾವಣೆಯಲ್ಲಿ ನಿಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ. ನೀವು ರಾಮರಾಜ್ಯ ಸ್ಥಾಪನೆ ಮಾಡುತ್ತೀರಿ ಎಂದು ಹೇಳುತ್ತಿದ್ದಾನೆ ಎಂದಿದ್ದಾರೆ.
ಮಾಧುರಿ ವರ್ಮಾ ಅವರು ಎರಡನೇ ಬಾರಿಗೆ ಶಾಸಕಿಯಾದವರು. 2010ರಿಂದ 2012ರವರೆಗೆ ಯುಪಿ ವಿಧಾನಪರಿಷತ್ ಸದಸ್ಯೆಯಾಗಿದ್ದರು. ಬಹ್ರೈಚ್ ಜಿಲ್ಲೆಯ ನಾನ್ಪಾರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿಯಾಗಿದ್ದು, ಇದೀಗ ಅಖಿಲೇಶ್ ಯಾದವ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಈ ಸಮಾರಂಭದಲ್ಲಿ ಮಾತನಾಡಿದ ಅಖಿಲೇಶ್ ಯಾದವ್, ರಾಮರಾಜ್ಯ ಸ್ಥಾಪನೆಗೆ ಸಮಾಜವಾದ ಮಾರ್ಗದಲ್ಲೇ ಹೋಗಬೇಕು. ಯಾವಾಗ ಸಮಾಜವಾದ ಸ್ಥಾಪನೆಯಾಗುತ್ತದೆಯೋ, ಆಗ ರಾಮರಾಜ್ಯವೂ ಸ್ಥಾಪಿತಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಅಖಿಲೇಶ್ ಯಾದವ್ ಪಕ್ಷದಲ್ಲಿ ಹಲವು ಕ್ರಿಮಿನಲ್ಗಳು, ಗ್ಯಾಂಗ್ಸ್ಟರ್ಗಳೆಲ್ಲ ಇದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಯಾದವ್, ಹಲವು ಘೋರ ಕ್ರಿಮಿನಲ್ ಕೇಸ್ಗಳನ್ನು ಎದುರಿಸುತ್ತಿದ್ದ ವ್ಯಕ್ತಿಯನ್ನು ಉತ್ತರಪ್ರದೇಶ ಮುಖ್ಯಮಂತ್ರಿಯನ್ನಾಗಿ ಮಾಡಿದ ಬಿಜೆಪಿ ಪಕ್ಷ ಮಾಡಿರುವ ಇಂಥ ಆರೋಪಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಈ ಬಿಜೆಪಿ ತನ್ನ ಅಪರಾಧಗಳು, ಮಾಫಿಯಾಗಳನ್ನೆಲ್ಲ ಶುದ್ಧೀಕರಿಸಿಕೊಳ್ಳಲು ವಾಷಿಂಗ್ಮಶಿನ್ ಏನಾದರೂ ಇಟ್ಟುಕೊಂಡಿದೆಯೇ ಎಂಬ ಪ್ರಶ್ನೆ ನನಗೆ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು. ಅಷ್ಟೇ ಅಲ್ಲ, ಯೋಗಿ ಆದಿತ್ಯನಾಥ್ ರಾಜ್ಯದ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಅದೆಷ್ಟೋ ಬಿಜೆಪಿ ನಾಯಕರು ತಮ್ಮ ರಕ್ತ ಮತ್ತು ಬೆವರು ಸುರಿಸಿ ಬಿಜೆಪಿ ಪಕ್ಷವನ್ನು ಕಟ್ಟಿದ್ದಾರೆ. ಆದರೆ ಅಧಿಕಾರ ಸಿಕ್ಕಿದ್ದು ಯೋಗಿ ಆದಿತ್ಯನಾಥ್ಗೆ. ಈ ಯೋಗಿ ಆದಿತ್ಯನಾಥ್ ಎಲ್ಲಿಂದ ಬಂದರು ಎಂಬುದಾಗಿ ಹಿಂದೆ ಇಲ್ಲಿನ ಬಿಜೆಪಿ ಮುಖಂಡರೇ ಪ್ರಶ್ನಿಸದ್ದರು ಎಂದೂ ಅಖಿಲೇಶ್ ಯಾದವ್ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಇನ್ನೆರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಸದ್ಯ ಬಿಜೆಪಿಗೆ ಎರಡನೇ ಅವಧಿಗೂ ತಾವೇ ಅಧಿಕಾರಕ್ಕೆ ಏರುವ ಕಾತರವಾದರೆ, ಸಮಾಜವಾದಿ ಪಕ್ಷಕ್ಕೆ ಮತ್ತೊಮ್ಮೆ ತಾವು ಸರ್ಕಾರ ರಚಿಸುವ ಹೆಬ್ಬಯಕೆ. ಉತ್ತರಪ್ರದೇಶ ಚುನಾವಣೆಯನ್ನು ಈ ಎರಡು ಪಕ್ಷಗಳು ಅತ್ಯಂತ ಗಂಭೀರವಾಗಿ ಪರಿಗಣಿಸಿವೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಕೇವಲ 47 ಕ್ಷೇತ್ರ ಗೆದ್ದಿತ್ತು. ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಸೇರಿ 325 ಕ್ಷೇತ್ರ ಗೆದ್ದುಕೊಂಡಿದ್ದವು. ಉತ್ತರಪ್ರದೇಶದಲ್ಲಿ ಒಟ್ಟಾರೆ 403 ವಿಧಾನಸಭಾ ಕ್ಷೇತ್ರಗಳಿವೆ. ಇನ್ನು ಕೆಲವೇ ದಿನಗಳಲ್ಲಿ ಇಲ್ಲಿನ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಲಿದೆ.
Published On - 10:34 am, Tue, 4 January 22