ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ (Uttar Pradesh Assembly Election) ಸ್ಪರ್ಧಿಸಲು ಮೈತ್ರಿ ಮಾಡಿಕೊಂಡಿರುವ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕ ದಳ್ (RLD) ಪಕ್ಷಗಳನ್ನು ಬಿಜೆಪಿ ನಾಯಕ, ಗೃಹ ಸಚಿವ ಅಮಿತ್ ಶಾ (Amit Shah) ಟೀಕಿಸಿದ್ದಾರೆ. ಅವರಿಬ್ಬರ ಮೈತ್ರಿ ಮತ ಎಣಿಕೆಯವರೆಗೆ ಮಾತ್ರ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ರೈತರೇ ಹೆಚ್ಚಾಗಿರುವ ಮುಜಾಫರ್ನಗರದಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಒಂದೊಮ್ಮೆ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ, ಅಜಂ ಖಾನ್ ಸಂಪುಟದಲ್ಲಿ ಸಚಿವರಾಗುತ್ತಾರೆ. ಆದರೆ ಎಸ್ಪಿ ಜತೆ ಈಗ ಮೈತ್ರಿ ಮಾಡಿಕೊಂಡಿರುವ ಆರ್ಎಲ್ಡಿ ಅಧ್ಯಕ್ಷ ಜಯಂತ್ ಚೌಧರಿ ಹೊರಬೀಳಬೇಕಾಗುತ್ತದೆ ಎಂದು ಹೇಳಿದರು. ಜಯಂತ್ ಚೌಧರಿಯವರನ್ನು ಉಲ್ಲೇಖಿಸುವಾಗ ಅಮಿತ್ ಶಾ, ಭಾಯ್ (ಸಹೋದರ) ಎಂದು ಕರೆದರು.
ಬಿಜೆಪಿ ಉತ್ತರಪ್ರದೇಶದಲ್ಲಿ ಜಾಟ್ ಸಮುದಾಯದ ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿದೆ. ಅದರ ಒಂದು ಭಾಗವಾಗಿ ಆರ್ಎಲ್ಡಿ ಜತೆ ಮೈತ್ರಿಯ ಇಂಗಿತವನ್ನೂ ವ್ಯಕ್ತಪಡಿಸಿತ್ತು. ಆದರೆ ಜಯಂತ್ ಚೌಧರಿ ಎಸ್ಪಿ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಅಮಿತ್ ಶಾ ಮಾತನಾಡಿ, ನಿನ್ನೆ ಅಖಿಲೇಶ್ ಯಾದವ್ ಮತ್ತು ಜಯಂತ್ ಚೌಧರಿ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ, ತಾವಿಬ್ಬರೂ ಒಂದಾಗಿರುವುದನ್ನು ಹೇಳಿದರು. ಆದರೆ ಈ ಮೈತ್ರಿ ಇನ್ನೆಷ್ಟು ಕಾಲ ಉಳಿಯುತ್ತದೆ. ಹಾಗೊಮ್ಮೆ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ, ಆಜಮ್ ಖಾನ್ ವಾಪಸ್ ಬರುತ್ತಾರೆ, ಜಯಂತ್ ಭಾಯ್ರನ್ನು ತೆಗೆಯಲಾಗುತ್ತದೆ. ಇಲ್ಲಿಯೇ ಇದ್ದವರು ಇವೆಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಅಂದಹಾಗೆ, ಈ ಆಜಮ್ ಖಾನ್ ಸಮಾಜವಾದಿ ಪಕ್ಷದ ಮುಖಂಡರಾಗಿದ್ದು, ಭೂಕಬಳಿಕೆ ಸೇರಿ ಇನ್ನಿತರ ಆರೋಪ ಹೊತ್ತು 2020ರಿಂದಲೂ ಸೀತಾಪುರ ಜೈಲಿನಲ್ಲಿದ್ದಾರೆ. ಹಾಗಿದ್ದಾಗ್ಯೂ ಅವರಿಗೆ ರಾಮಪುರ ಕ್ಷೇತ್ರದಿಂದಲೇ ಅಖಿಲೇಶ್ ಯಾದವ್ ಟಿಕೆಟ್ ನೀಡಿದ್ದು, ಜೈಲಿನಲ್ಲಿದ್ದುಕೊಂಡೇ ನಾಮಪತ್ರವನ್ನೂ ಸಲ್ಲಿಸಿದ್ದಾರೆ. ಇನ್ನೊಂದೆಡೆ ಜಾಟ್ ಸಮುದಾಯದ ಮತ ಬೇಕೆಂದರೆ ಆರ್ಎಲ್ಡಿ ಜತೆ ಮೈತ್ರಿ ಮಾಡಿಕೊಳ್ಳಬೇಕು ಎಂದು ಪ್ರಯತ್ನಿಸಿದ್ದ ಬಿಜೆಪಿಗೆ ಜಯಂತ್ ಚೌಧರಿ ನಡೆಯಿಂದ ನಿರಾಸೆಯಾಗಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯ್ದೆಗಳನ್ನು ತೀವ್ರವಾಗಿ ವಿರೋಧಿಸಿದವರಲ್ಲಿ ಈ ಜಯಂತ್ ಚೌಧರಿ ಕೂಡ ಒಬ್ಬರಾಗಿದ್ದರು. ಇದೀಗ ಅಮಿತ್ ಶಾ ಪರೋಕ್ಷವಾಗಿ ಎಸ್ಪಿಯೊಂದಿಗೆ ಮೈತ್ರಿ ಬೇಡ ಎಂಬ ಸಲಹೆ ನೀಡುವುದರ ಜತೆ, ತಮ್ಮ ಪಕ್ಷಕ್ಕೆ ಮತ್ತೊಮ್ಮೆ ಆಹ್ವಾನಿಸಿದ್ದಾರೆ. ಅದಕ್ಕೂ ಮೊದಲು ಅಮಿತ್ ಶಾ ಉತ್ತರ ಪ್ರದೇಶದ ಜಾಟ್ ಸಮುದಾಯದ ಮುಖಂಡರೊಂದಿಗೆ ಜನವರಿ 26ರಂದು ಸಭೆಯನ್ನೂ ನಡೆಸಿದ್ದಾರೆ.
ಹಾಗೆ ಇಂದು ಮುಜಾಫರ್ನಗರದಲ್ಲಿ ಮಾತನಾಡಿದ ಅಮಿತ್ ಶಾ, ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಲ್ಲಿನ ಮಾಫಿಯಾ ಎಂಬುದು ನಿರ್ಮೂಲನವಾಗಿದೆ. ಮತ್ತೇನಾದರೂ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಬಹುಜನ ಸಮಾಜದಂಥ ಪಕ್ಷಗಳು ಅಧಿಕಾರಕ್ಕೆ ಬಂದರೆ, ಇಲ್ಲಿ ಯಥಾಪ್ರಕಾರ ಮಾಫಿಯಾ ಆಡಳಿತ ಹೆಚ್ಚುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Bank Of India: ಸಿಸ್ಟಮ್ ಅಪ್ಡೇಟ್ ನಂತರ ಬ್ಯಾಂಕ್ ಆಫ್ ಇಂಡಿಯಾದ ನೆಟ್ ಬ್ಯಾಂಕಿಂಗ್ ಸೇರಿ ಇತರ ಯಾವುದೂ ನೆಟ್ಟಗಿಲ್ಲ