ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪ್ರಕ್ರಿಯೆಯೂ ಚುರುಕಾಗಿ ನಡೆಯುತ್ತಿದೆ. ಅದರಲ್ಲೂ ಉತ್ತರಪ್ರದೇಶ ರಾಜ್ಯದಲ್ಲಿ ತುಸು ಹೆಚ್ಚೇ ನಡೆಯುತ್ತಿದೆ. ಇದೀಗ ಸಮಾಜವಾದಿ ಪಕ್ಷದ ಇನ್ನೊಬ್ಬ ಮುಖಂಡ, ಅದರಲ್ಲೂ ಮುಲಾಯಂ ಸಿಂಗ್ ಯಾದವ್ ಹತ್ತಿರದ ಸಂಬಂಧಿಯಾಗಿರುವ ಪ್ರಮೋದ್ ಗುಪ್ತಾ ಇಂದು ಬಿಜೆಪಿ ಸೇರಿದ್ದಾರೆ. ಹಾಗೇ ಇನ್ನೊಂದೆಡೆ ಕಾಂಗ್ರೆಸ್ ನಾಯಕಿಯಾಗಿದ್ದ ಪ್ರಿಯಾಂಕ ಮೌರ್ಯ ಕೂಡ ಕಮಲ ಮುಡಿದಿದ್ದಾರೆ. ಈ ಪ್ರಿಯಾಂಕ ಮೌರ್ಯ ಇತ್ತೀಚೆಗೆ ಭರ್ಜರಿ ಸುದ್ದಿಯಾಗಿದ್ದರು. ನಾನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕಾರ್ಯದರ್ಶಿಗೆ ಹಣ ನೀಡದೆ ಇರುವುದಕ್ಕೆ ನನಗೆ ವಿಧಾನಸಭೆ ಚುನಾವಣೆ ಟಿಕೆಟ್ ಸಿಗಲಿಲ್ಲ. ಕಾಂಗ್ರೆಸ್ ಮಹಿಳಾ ವಿರೋಧಿ ಪಕ್ಷ ಎಂದು ಆರೋಪ ಮಾಡಿದ್ದರು. ಈಕೆ ಉತ್ತರಪ್ರದೇಶ ಕಾಂಗ್ರೆಸ್ನ ಉಪಾಧ್ಯಕ್ಷೆಯೂ ಆಗಿದ್ದರು. ಇದೀಗ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಕಿರಿಯ ಪುತ್ರ ಪ್ರತೀಕ್ ಯಾದವ್ ಪತ್ನಿ ಅಪರ್ಣಾ ಯಾದವ್ (ಮುಲಾಯಂ ಸಿಂಗ್ ಯಾದವ್ ಸೊಸೆ) ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅದರ ಬೆನ್ನಲ್ಲೇ ಮುಲಾಯಂ ಸಿಂಗ್ ಯಾದವ್ ಮೈದುನ ಪ್ರಮೋದ್ ಗುಪ್ತಾ ಕೂಡ ಅದೇ ಹಾದಿ ಹಿಡಿದಿದ್ದಾರೆ. ಅಷ್ಟೇ ಅಲ್ಲ, ಮುಲಾಯಂ ಸಿಂಗ್ ಯಾದವ್ ಅವರನ್ನು ಅಖಿಲೇಶ್ ಯಾದವ್ ಎಲ್ಲ ವಿಧದಲ್ಲೂ ಕಟ್ಟಿಹಾಕಿದದಾರೆ. ಆ ಪಕ್ಷದಲ್ಲೀಗ ಕ್ರಿಮಿನಲ್ಗಳು, ಜೂಜೂಕೋರರು ತುಂಬಿಹೋಗಿದ್ದಾರೆ ಎಂದು ಹೇಳಿದ್ದಾರೆ. ಹಾಗೇ, ಕಾಂಗ್ರೆಸ್ನಿಂದ ಬಂದ ಪ್ರಿಯಾಂಕ ಮೌರ್ಯ ಕೂಡ ಪ್ರತಿಕ್ರಿಯೆ ನೀಡಿ, ಸಮಾಜಸೇವೆ ಮಾಡುವವರಿಗೆ ಬಿಜೆಪಿ ಅತ್ಯುತ್ತಮ ವೇದಿಕೆ ಕಲ್ಪಿಸಿಕೊಡುತ್ತದೆ. ಇದೇ ಕಾರಣಕ್ಕೆ ಇಲ್ಲಿಗೆ ಬಂದಿದ್ದೇನೆ. ನಾನೊಬ್ಬಳು ಹುಡುಗಿ, ನಾನು ಹೋರಾಡಬಲ್ಲೆ ಎಂಬ ಘೋಷಣೆಯನ್ನ ಕಾಂಗ್ರೆಸ್ ಅಳವಡಿಸಿಕೊಂಡಿದೆ. ಆದರೆ ಅದರ ವರ್ತನೆ ಘೋಷಣೆಗೆ ವಿರುದ್ಧವಾಗಿದೆ. ಆ ಪಕ್ಷ ನನಗೆ ಹೋರಾಟಕ್ಕೆ ಅವಕಾಶ ಮಾಡಿಕೊಡಲಿಲ್ಲ. ಹಾಗಾಗಿ ಬಿಜೆಪಿಗೆ ಸೇರಿದ್ದೇನೆ ಎಂದಿದ್ದಾರೆ. ಇವರಿಬ್ಬರೂ ಇಂದು ಪಕ್ಷ ಸೇರ್ಪಡೆಯಾದ ಬಗ್ಗೆ ವಿಡಿಯೋ ಶೇರ್ ಮಾಡಿಕೊಂಡಿರುವ ಉತ್ತರಪ್ರದೇಶ ಬಿಜೆಪಿ, ನಮ್ಮ ಸರ್ಕಾರದ ಕಲ್ಯಾಣ ನೀತಿಗಳಿಂದ ಪ್ರಭಾವಿತರಾಗಿ, ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಬಿಜೆಪಿ ಸದಸ್ಯತ್ವ ಪಡೆಯುತ್ತಿದ್ದಾರೆ ಎಂದು ಹೇಳಿದೆ.
भाजपा सरकार की जनकल्याणकारी नीतियों से प्रभावित होकर विभिन्न दलों के लोग पार्टी की सदस्यता ग्रहण करते हुए…#सबका_साथ_सबका_विकास
https://t.co/MAVRW4nHau— BJP Uttar Pradesh (@BJP4UP) January 20, 2022
ಉತ್ತರಪ್ರದೇಶದಲ್ಲಿ ಫೆ.10ರಿಂದ ವಿಧಾನಸಭೆ ಚುನಾವಣೆ ನಡೆಯಲಿದೆ. ಇಲ್ಲಿ ಬಿಜೆಪಿಯಿಂದ ಈಗಾಗಲೇ ಮೂರು ಸಚಿವರು ಸೇರಿ ಹಲವು ಶಾಸಕರು ಸಮಾಜವಾದಿ ಪಕ್ಷಕ್ಕೆ ಹೋಗಿದ್ದಾರೆ. ಅದರಲ್ಲೂ ಮೊದಲು ಪಕ್ಷ ತೊರೆದಿದ್ದು ಹಿಂದುಳಿದ ವರ್ಗದ ಪ್ರಭಾವಿ ನಾಯಕ, ಸಂಪುಟದಲ್ಲಿ ಕಾರ್ಮಿಕ ಇಲಾಖೆ ಸಚಿವರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ. ಅವರ ಬೆನ್ನಲ್ಲೇ ಹಲವರು ಅಖಿಲೇಶ್ ಯಾದವ್ ಪಕ್ಷಕ್ಕೆ ಹೋಗಿದ್ದಾರೆ. ಬಿಜೆಪಿ ದಲಿತರು, ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಅವರನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಇವರೆಲ್ಲ ಪಕ್ಷವನ್ನು ಬಿಟ್ಟಿದ್ದಾರೆ. ಅದರ ಬೆನ್ನಲ್ಲೇ ಸಮಾಜವಾದಿ ಪಕ್ಷದಿಂದಲೂ ಇಬ್ಬರು ಶಾಸಕರು ಬಿಜೆಪಿಗೆ ಆಗಮಿಸಿದ್ದರು. ಅದೆಲ್ಲಕ್ಕಿಂತ ಮುಖ್ಯವಾಗಿ ನಿನ್ನೆ ಮುಲಾಯ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್ ಬಂದಿದ್ದು, ಸಮಾಜವಾದಿ ಪಕ್ಷಕ್ಕೆ ದೊಡ್ಡ ಹೊಡೆತ ಎಂದೇ ವಿಶ್ಲೇಷಿಸಲಾಗಿತ್ತು.
ಇದನ್ನೂ ಓದಿ: ಸರ್ಕಾರಿ, ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಉದ್ಯೋಗಳಿಗಿರುವ ಸಾಮಾನ್ಯ ಅರ್ಹತಾ ಪರೀಕ್ಷೆ ಮತ್ತೆ ವಿಳಂಬ
Published On - 4:11 pm, Thu, 20 January 22