ಜನಪ್ರಿಯ ಸಿನಿಮಾ ಕಲಾವಿದ ಕಂಚನ್ ಮಲಿಕ್ ಈ ಬಾರಿಯ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯೊಂದಿಗೆ ತಮ್ಮ ರಾಜಕೀಯ ಜೀವನವನ್ನೂ ಆರಂಭಿಸುತ್ತಿದ್ದಾರೆ. ಚುನಾವಣೆ ಘೋಷಣೆಗೂ ಮೊದಲೇ ಅವರು ಟಿಎಂಸಿಗೆ ಸೇರಿದ್ದರು. ಚುನಾವಣೆ ಉಮೇದುವಾರರ ಪಟ್ಟಿ ಬಿಡುಗಡೆ ಮಾಡುವ ವೇಳೆ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಕಂಚನ್ ಮಲಿಕ್ ಈ ಬಾರಿ ಹೂಗ್ಲಿ ಜಿಲ್ಲೆಯ ಉತ್ತರಪಾಡಾ ಕ್ಷೇತ್ರದಿಂದ ಟಿಎಂಸಿ ಟಿಕೆಟ್ ಮೇಲೆ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದರು. ಬಹುಕಾಲದಿಂದ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ಕಂಚನ್ ಮಲಿಕ್ ಈಚಿನ ದಿನಗಳಲ್ಲಿ ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಮಲಿಕ್ ಅವರ ಟಿವಿ ಶೋ ‘ಜನತಾ ಎಕ್ಸ್ಪ್ರೆಸ್’ ಜನಪ್ರಿಯ ಕಾರ್ಯಕ್ರಮಗಳ ಪೈಕಿ ಒಂದು. ಫಿಲಂ ಮತ್ತು ಟಿವಿ ಕಾರ್ಯಕ್ರಮಗಳ ಜೊತೆಗೆ ರಂಗಭೂಮಿಯಲ್ಲಿಯೂ ಕಂಚನ್ ಮಲಿಕ್ ಸಕ್ರಿಯರಾಗಿದ್ದಾರೆ. ಈ ಬಾರಿ ಮಲಿಕ್ ಸ್ಪರ್ಧಿಸಲಿರುವ ಉತ್ತರಪಾಡಾದಲ್ಲಿ ಈವರೆಗೆ ಟಿಎಂಸಿಯ ಪ್ರಬೀರ್ ಘೋಷಾಲ್ ಸ್ಪರ್ಧಿಸುತ್ತಿದ್ದರು. ಕೆಲ ದಿನಗಳಿಂದ ಪ್ರಬೀರ್ ಘೋಷಾಲ್ ಪಕ್ಷ ಮತ್ತು ಸರ್ಕಾರದ ನಿರ್ಧಾರಗಳನ್ನು ಟೀಕಿಸುತ್ತಲೇ ಇದ್ದರು. ಕೊನೆಗೆ ಬಿಜೆಪಿ ಸೇರಿಕೊಂಡರು. ಬಿಜೆಪಿಯು ಘೋಷಾಲ್ ಅವರಿಗೆ ಉತ್ತರಪಾಡಾ ಕ್ಷೇತ್ರದ ಟಿಕೆಟ್ ನೀಡಿದೆ. ಕಳೆದ ಚುನಾವಣೆಯಲ್ಲಿ ಘೋಷಾಲ್ ಇದೇ ಕ್ಷೇತ್ರದಲ್ಲಿ ಟಿಎಂಸಿ ಟಿಕೆಟ್ ಮೇಲೆ ಸ್ಪರ್ಧಿಸಿ 85 ಮತಗಳಿಸಿ, ಜಯದ ನಗೆ ಬೀರಿದ್ದರು. ಆಗ ಸಿಪಿಎಂ ಉಮೇದುವಾರರಿಗೆ 73 ಸಾವಿರ ಮತಗಳು ಬಿದ್ದಿದ್ದವು. ಬಿಜೆಪಿ ಅಭ್ಯರ್ಥಿ ಕೇವಲ 24 ಸಾವಿರ ಮತಗಳಿಸಿದ್ದರು.