Indian Army Recruitment: ಭಾರತೀಯ ಸೇನೆಯಲ್ಲಿ ಅಗ್ನಿವೀರ್ ನೇಮಕಾತಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ
ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ 2026ರ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ. ದೇಶಸೇವೆಗೆ ಆಸಕ್ತ ಯುವಕರಿಗೆ ಇದೊಂದು ಸುವರ್ಣಾವಕಾಶ. ಆನ್‌ಲೈನ್ ಅರ್ಜಿ ಸಲ್ಲಿಕೆ ಫೆಬ್ರವರಿ 13ರಿಂದ ಏಪ್ರಿಲ್ 1ರವರೆಗೆ ನಡೆಯಲಿದೆ. ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಜೂನ್ 1ರಿಂದ 15ರ ನಡುವೆ ನಡೆಯಲಿದ್ದು, ಹುದ್ದೆವಾರು ಶೈಕ್ಷಣಿಕ ಅರ್ಹತೆ, ವಯೋಮಿತಿ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ.

ಭಾರತೀಯ ಸೇನೆಯು 2026ರ ಅಗ್ನಿವೀರ್ ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ದೇಶಸೇವೆಗೆ ತೊಡಗಿಸಿಕೊಳ್ಳಲು ಆಸಕ್ತ ಯುವಕರಿಗೆ ಇದು ಮಹತ್ವದ ಅವಕಾಶವಾಗಿದೆ. ಫೆಬ್ರವರಿ 13ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಏಪ್ರಿಲ್ 1ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ joinindianarmy.nic.in ಮೂಲಕ ಅರ್ಜಿ ಸಲ್ಲಿಸಬಹುದು. ಅಗ್ನಿವೀರ್ ನೇಮಕಾತಿ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಜೂನ್ 1ರಿಂದ ಜೂನ್ 15ರ ನಡುವೆ ನಡೆಯಲಿದೆ.
ಶೈಕ್ಷಣಿಕ ಅರ್ಹತೆ:
ಅಗ್ನಿವೀರ್ ಹುದ್ದೆಗಳ ಪ್ರಕಾರ ಶೈಕ್ಷಣಿಕ ಅರ್ಹತೆ ವಿಭಿನ್ನವಾಗಿರುತ್ತದೆ. ಅಗ್ನಿವೀರ್ ಜನರಲ್ ಡ್ಯೂಟಿ (GD) ಹುದ್ದೆಗೆ 10ನೇ ತರಗತಿಯಲ್ಲಿ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕಗಳೊಂದಿಗೆ ಒಟ್ಟು ಶೇ.45 ಅಂಕ ಅಗತ್ಯವಿದೆ. ಅಗ್ನಿವೀರ್ ತಾಂತ್ರಿಕ ಹುದ್ದೆಗೆ 12ನೇ ತರಗತಿಯಲ್ಲಿ ಭೌತಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ ಕನಿಷ್ಠ ಶೇ.50 ಅಂಕ ಇರಬೇಕು. ಕ್ಲರ್ಕ್/ಸ್ಟೋರ್‌ಕೀಪರ್ ಹುದ್ದೆಗೆ 12ನೇ ತರಗತಿಯಲ್ಲಿ ಒಟ್ಟು ಶೇ.60 ಅಂಕಗಳೊಂದಿಗೆ ಇಂಗ್ಲಿಷ್ ಮತ್ತು ಗಣಿತ ಅಥವಾ ಅಕೌಂಟ್ಸ್‌ನಲ್ಲಿ 50 ಅಂಕ ಅಗತ್ಯವಿದೆ. ಟ್ರೇಡ್ಸ್‌ಮನ್ ಹುದ್ದೆಗೆ 8ನೇ ಅಥವಾ 10ನೇ ತರಗತಿಯಲ್ಲಿ ಪ್ರತಿ ವಿಷಯದಲ್ಲಿ ಶೇ.33 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಮಹಿಳಾ ಮಿಲಿಟರಿ ಪೊಲೀಸ್ (GD) ಹುದ್ದೆಗೆ 10ನೇ ತರಗತಿಯಲ್ಲಿ ಶೇ.45 ಅಂಕ ಅಗತ್ಯವಿದೆ. ಸೋಲ್ಜರ್ ಟೆಕ್ನಿಕಲ್ ನರ್ಸಿಂಗ್ ಸಹಾಯಕ ಹುದ್ದೆಗೆ 12ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ ಕನಿಷ್ಠ ಶೇ.50 ಅಂಕ ಇರಬೇಕು. ಸಿಪಾಯಿ ಫಾರ್ಮಾ ಹುದ್ದೆಗೆ ಡಿ ಫಾರ್ಮಾ (ಶೇ.55) ಅಥವಾ ಬಿ ಫಾರ್ಮಾ (ಶೇ.50) ಹಾಗೂ ಫಾರ್ಮಸಿ ಕೌನ್ಸಿಲ್‌ನಲ್ಲಿ ನೋಂದಣಿ ಅಗತ್ಯ. ಜೆಸಿಒ ಧಾರ್ಮಿಕ ಶಿಕ್ಷಕ ಹುದ್ದೆಗೆ ಸಂಬಂಧಿತ ಧರ್ಮ ಹಾಗೂ ವಿಷಯದಲ್ಲಿ ಪದವಿ ಅಥವಾ ಡಿಪ್ಲೊಮಾ ಅಗತ್ಯವಿದೆ.
ವಯೋಮಿತಿ:
ಅಗ್ನಿವೀರ್ ಜಿಡಿ, ಟೆಕ್ನಿಕಲ್ ಮತ್ತು ಟ್ರೇಡ್ಸ್‌ಮನ್ ಹುದ್ದೆಗಳಿಗೆ 17.5 ರಿಂದ 22 ವರ್ಷ ವಯೋಮಿತಿ ನಿಗದಿಯಾಗಿದೆ. ಸೋಲ್ಜರ್ ಟೆಕ್ನಿಕಲ್ ಹುದ್ದೆಗಳಿಗೆ ಗರಿಷ್ಠ ವಯಸ್ಸು 23 ವರ್ಷಗಳು. ಸಿಪಾಯಿ ಫಾರ್ಮಾ ಹುದ್ದೆಗೆ 19ರಿಂದ 25 ವರ್ಷ, ಜೆಸಿಒ ಧಾರ್ಮಿಕ ಶಿಕ್ಷಕ ಹುದ್ದೆಗೆ 25ರಿಂದ 34 ವರ್ಷ ವಯಸ್ಸಿನ ಮಿತಿ ಇದೆ. ವಯಸ್ಸನ್ನು ಜುಲೈ 1, 2027ರಂತೆ ಲೆಕ್ಕ ಹಾಕಲಾಗುತ್ತದೆ.
ಇದನ್ನೂ ಓದಿ: ಕರ್ನಾಟಕದ ಹಾಲು ಒಕ್ಕೂಟದಲ್ಲಿ 194 ಹುದ್ದೆಗಳಿಗೆ ನೇಮಕಾತಿ; 10ರಿಂದ ಪದವೀಧರರವರೆಗೆ ಅರ್ಜಿ ಸಲ್ಲಿಸಲು ಅವಕಾಶ
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹಲವು ಹಂತಗಳನ್ನು ಒಳಗೊಂಡಿದೆ. ಮೊದಲು ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ನಡೆಯುತ್ತದೆ. ಬಳಿಕ ದೈಹಿಕ ಸದೃಢತಾ ಪರೀಕ್ಷೆ, ದೈಹಿಕ ಅಳತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮತ್ತು ಅಂತಿಮ ಮೆರಿಟ್ ಪಟ್ಟಿ ಪ್ರಕಟಿಸಲಾಗುತ್ತದೆ. ಸಾಮಾನ್ಯ ಹುದ್ದೆಗಳಿಗೆ ಕನಿಷ್ಠ ಎತ್ತರ 170 ಸೆಂ.ಮೀ ಅಗತ್ಯವಿದ್ದು, ಕ್ಲರ್ಕ್ ಹುದ್ದೆಗಳಿಗೆ 162 ಸೆಂ.ಮೀ ಎತ್ತರ ಬೇಕಾಗುತ್ತದೆ. ಎದೆಯ ಗಾತ್ರ 77 ಸೆಂ.ಮೀ ಮತ್ತು ಕನಿಷ್ಠ 5 ಸೆಂ.ಮೀ ವಿಸ್ತರಣೆ ಇರಬೇಕು.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ ಮತ್ತು ಮಾರ್ಗಸೂಚಿಗಳನ್ನು ಪರಿಶೀಲಿಸುವುದು ಅಗತ್ಯ. ದೇಶ ಸೇವೆ ಮಾಡುವ ಕನಸು ಹೊಂದಿರುವ ಯುವಕರಿಗೆ ಅಗ್ನಿವೀರ್ ನೇಮಕಾತಿ ಒಂದು ಮಹತ್ವದ ಅವಕಾಶವಾಗಿದೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
