ಭಾರತೀಯ ಸೇನೆ ಫಿರಂಗಿ ದಳದಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಅದರ ನೇಮಕಾತಿಗೆ ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ನಾಶಿಕ್ನಲ್ಲಿರುವ ಇಂಡಿಯನ್ ಆರ್ಮಿ ಆರ್ಟಿಲರಿ ಕೇಂದ್ರ ಅಧಿಸೂಚನೆ ಹೊರಡಿಸಿದೆ. ಕೆಳ ವಿಭಾಗದ ಗುಮಾಸ್ತ, ಅಡುಗೆ ವಿಭಾಗ, ಅಗ್ನಿಶಾಮಕ ವಿಭಾಗ ಹಾಗೂ ಇನ್ನಿತರ ವಿಭಾಗ ಸೇರಿ ಒಟ್ಟು 107 ಹುದ್ದೆಗಳು ಖಾಲಿಯಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ನೊಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ಆಸಕ್ತರು ಭಾರತೀಯ ಸೇನೆಯ indianarmy.nic.in. ವೆಬ್ಸೈಟ್ಗೆ ಲಾಗಿನ್ ಆಗಿ ಹೆಚ್ಚಿನ ವಿವರ ಪಡೆಯಬಹುದು. ಅಂದಹಾಗೇ, ಅರ್ಜಿ ಸಲ್ಲಿಕೆಗೆ ಕೊನೇ ದಿನ 2022 ರ ಜನವರಿ 22.
ಈ ಹಿಂದೆ ನೀಡಲಾಗಿದ್ದ ಜಾಹೀರಾತು ಆಧರಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಈಗ ಪುರಸ್ಕರಿಸಲಾಗುವುದಿಲ್ಲ. ನಾವು ಹೊಸದಾಗಿ ನೀಡಿರುವ ಜಾಹೀರಾತುಗಳ ಆಧಾರದ ಮೇಲೆ, ಹೊಸದಾಗಿಯೇ ಅರ್ಜಿ ಸಲ್ಲಿಸಬೇಕು ಎಂದು ಭಾರತೀಯ ಸೇನೆ ಫಿರಂಗಿ ದಳದ ಕೇಂದ್ರ ಸ್ಪಷ್ಟಪಡಿಸಿದೆ. ಅಭ್ಯರ್ಥಿಗಳ ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ ಮತ್ತಿತರ ವಿವರಣೆಗಳನ್ನು ಪಡೆಯಲು, ಭಾರತೀಯ ಸೇನೆ ಆರ್ಟಿಲರಿ ನೇಮಕಾತಿ 2022ರ ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿಕೊಳ್ಳಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ22 ಕೊನೇ ದಿನವಾಗಿದ್ದು, ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸುವ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಸೇನೆ ಮಾಹಿತಿ ನೀಡಿದೆ.
ಯಾವ ವರ್ಗದವರಿಗೆ ಎಷ್ಟು ಹುದ್ದೆ ಮೀಸಲು?
ಹಾಗೇ, ವರ್ಗಾವಾರು ಹುದ್ದೆಯ ವಿಂಗಡಣೆಯನ್ನೂ ಮಾಡಲಾಗಿದ್ದು, ಈ ಬಗ್ಗೆ ಭಾರತೀಯ ಸೇನೆ ಫಿರಂಗಿ ದಳ ವಿವರವಾಗಿ ತಿಳಿಸಿದೆ. ಅದರಂತೆ, ಯುಆರ್ (ಕಾಯ್ದಿರಿಸಿದ ವರ್ಗ)-52, ಪರಿಶಿಷ್ಟ ಜಾತಿ (SC)-8, ಪರಿಶಿಷ್ಟ ಪಂಗಡ-7. ಇತರ ಹಿಂದುಳಿದ ವರ್ಗ (OBC)-24, ಆರ್ಥಿಕವಾಗಿ ದುರ್ಬಲ ವಿಭಾಗ(EWS)-16, ಪ್ರತಿಭಾನ್ವಿತ ಕ್ರೀಡಾ ವ್ಯಕ್ತಿ (MSP) -3, ಮಾಜಿ ಸೇವಾಧಿಕಾರಿ ವರ್ಗ (ಅಂದರೆ ಈಗಾಗಲೇ ಸೇವೆ ಸಲ್ಲಿಸಿ ನಿವೃತ್ತರಾದವರ ಮಕ್ಕಳಿಗೆ-ESM-18 ಮತ್ತು ಪಿಎಚ್ಪಿ ವರ್ಗಕ್ಕೆ 6 ಹುದ್ದೆ ಮೀಸಲಿಡಲಾಗಿದೆ.
ಅರ್ಜಿ ಸಲ್ಲಿಸುವವರಿಗೆ ಅರ್ಹತೆ ಏನಿರಬೇಕು?
ಖಾಲಿ ಇರುವ ಹುದ್ದೆಗಳಲ್ಲಿ ಯಾವುದೇ ವಿಭಾಗಕ್ಕೆ ಅರ್ಜಿ ಸಲ್ಲಿವವರಿಗೆ 18 ವರ್ಷ ಆಗಿರಬೇಕು. 10 ಮತ್ತು 12ನೇ ತರಗತಿ ಉತ್ತೀರ್ಣರಾಗಿರಬೇಕು. ಹೀಗೆ ಅರ್ಜಿ ಸಲ್ಲಿಸಿದವರಿಗೆ ಪರೀಕ್ಷೆ ಮಾಡಲಾಗುತ್ತದೆ. ಆ ಪರೀಕ್ಷೆಯಲ್ಲಿ ನಿಗದಿತ ಅಂಕ ಗಳಿಸಿದವರಿಗೆ ಮುಂದಿನ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ಈ ಬಗ್ಗೆ ಅಪ್ಡೇಟ್ ತಿಳಿಯಲು indianarmy.nic.in. ವೆಬ್ಸೈಟ್ ಚೆಕ್ ಮಾಡುತ್ತಿರಬೇಕು ಎಂದೂ ಭಾರತೀಯ ಸೇನೆ ತಿಳಿಸಿದೆ.
ಇದನ್ನೂ ಓದಿ: ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯತ್ವ ಪಡೆದು, ಮೇಕೆದಾಟು ಹೋರಾಟಕ್ಕೆ ಬೆಂಬಲ ಕೋರಿದ ಡಿಕೆ ಶಿವಕುಮಾರ್
Published On - 3:54 pm, Thu, 30 December 21