ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯತ್ವ ಪಡೆದು, ಮೇಕೆದಾಟು ಹೋರಾಟಕ್ಕೆ ಬೆಂಬಲ ಕೋರಿದ ಡಿಕೆ ಶಿವಕುಮಾರ್
DK Shivakumar: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸಲಿದೆ. ಅದಕ್ಕೆ ಹಲವು ಸಂಘಟನೆಗಳಿಗೆ ಆಹ್ವಾನ ನೀಡಲಾಗುತ್ತಿದೆ. ಈ ಸಲುವಾಗಿ ಡಿಕೆಶಿ ಇಂದು (ಡಿ.30) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳಿದ್ದರು.
ರಾಜಕಾರಣಿ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಚಿತ್ರರಂಗದ ಜೊತೆ ಇರುವ ನಂಟು ಇಂದು-ನಿನ್ನೆಯದಲ್ಲ. ವಿತರಕನಾಗಿ, ಪ್ರದರ್ಶಕನಾಗಿ ಅವರು ದಶಕಗಳ ಹಿಂದೆಯೇ ಕೆಲಸ ಮಾಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Karnataka Film Chamber of Commerce) ಸದಸ್ಯರೂ ಆಗಿದ್ದರು. ರಾಜಕಾರಣದಲ್ಲಿ ಸಕ್ರಿಯರಾದ ನಂತರ ಚಿತ್ರರಂಗದ (Kannada Film Industry) ಜೊತೆಗಿನ ಅವರ ಒಡನಾಟ ಸ್ವಲ್ಪ ಕಮ್ಮಿ ಆಗಿತ್ತು. ಆದರೆ ಈಗ ಅವರು ಮತ್ತೆ ಸಿನಿಮಾ ಕ್ಷೇತ್ರದ ನಂಟನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್ ಹೊಂದಿರುವ ಡಿ.ಕೆ. ಶಿವಕುಮಾರ್ ಅವರು ಪ್ರದರ್ಶಕನಾಗಿ ಮತ್ತೆ ಸಕ್ರಿಯರಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯತ್ವ ಪಡೆದುಕೊಂಡಿದ್ದಾರೆ. ಇದೇ ವೇಳೆ ಅವರು ಮೇಕೆದಾಟು (Mekedatu Padayatra) ಹೋರಾಟಕ್ಕೆ ಕನ್ನಡ ಚಿತ್ರರಂಗವನ್ನು ಆಹ್ವಾನಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಗುರುವಾರ (ಡಿ.30) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದರು. ಮಂಡಳಿಯ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿದ ಅವರು, ಸದಸ್ಯತ್ವ ಫಾರ್ಮ್ ಭರ್ತಿ ಮಾಡಿ ಕೊಟ್ಟರು. ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ ಉದ್ದೇಶವನ್ನೂ ಅವರು ವಿವರಿಸಿದರು.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸಲಿದೆ. ಅದಕ್ಕೆ ಹಲವು ಸಂಘಟನೆಗಳಿಗೆ ಆಹ್ವಾನ ನೀಡಲಾಗುತ್ತಿದೆ. ಈ ಸಲುವಾಗಿ ಡಿಕೆಶಿ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳಿದ್ದರು. ಮಂಡಳಿ ಅಧ್ಯಕ್ಷ ಜೈರಾಜ್, ಕಾರ್ಯದರ್ಶಿ ನಾಗಣ್ಣ, ಮಾಜಿ ಅಧ್ಯಕ್ಷ ಚಿನ್ನೇಗೌಡ, ಸಾ.ರಾ. ಗೋವಿಂದು ಮುಂತಾದವರು ಉಪಸ್ಥಿತರಿದ್ದರು.
‘ಚಿತ್ರೋದ್ಯಮಕ್ಕೆ ವಾಣಿಜ್ಯ ಮಂಡಳಿಯೇ ಬೇರು. ಕಲಾವಿದರು, ನಿರ್ಮಾಪಕರು, ಪ್ರದರ್ಶಕರು ಎಲ್ಲರೂ ಇಲ್ಲಿಯೇ ಬಂದು ನ್ಯಾಯ ಕೇಳಬೇಕು. ಸುದೀಪ್, ಶಿವರಾಜ್ಕುಮಾರ್, ಯಶ್, ದರ್ಶನ್ ಸೇರಿದಂತೆ ಎಲ್ಲ ನಟರಿಗೂ ವಾಣಿಜ್ಯ ಮಂಡಳಿ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಆದರೆ ಯಾರಿಗೂ ಬಲವಂತ ಮಾಡುವುದಿಲ್ಲ’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
‘ನಮ್ಮ ನೀರು ನಮ್ಮ ಹಕ್ಕು. ಪಾದಯಾತ್ರೆಯಲ್ಲಿ ಪ್ರತಿ ದಿನ ನಡೆಯಿರಿ ಅಂತ ನಾನು ಹೇಳಲ್ಲ. ಒಂದು ದಿನ ಅಥವಾ ಅರ್ಧ ದಿನ ಬೇಕಿದ್ದರೂ ನಡೆಯಬಹುದು. ಬಂದು ಈ ಹೋರಾಟಕ್ಕೆ ಬೆಂಬಲ ನೀಡಬೇಕಾದ್ದು ಅವರ ಧರ್ಮ. ಅವರೆಲ್ಲರ ಮೇಲೆ ನನಗೆ ವಿಶ್ವಾಸ ಇದೆ. ಯಾವಾಗಲೂ ಈ ನಾಡಿನ ಹಿತಕ್ಕಾಗಿ ಅವರು ಸಹಾಯ ಮಾಡಿಕೊಂಡು ಬಂದಿದ್ದಾರೆ. ಇದು ಪಕ್ಷಾತೀತ, ಜಾತ್ಯಾತೀತವಾಗಿ ಎಲ್ಲ ವರ್ಗಕ್ಕೂ ಸೇರಿದ ವಿಚಾರ. ವಾಣಿಜ್ಯ ಮಂಡಳಿ ಮೂಲಕ ಎಲ್ಲ ಕಲಾವಿದರಿಗೂ ಆಹ್ವಾನ ತಲುಪಿಸುತ್ತೇನೆ. ಖುದ್ದಾಗಿ ದೂರವಾಣಿ ಕರೆ ಮಾಡಿ ಕರೆಯುತ್ತೇನೆ. ಎಲ್ಲರಿಗೂ ಫೋನ್ ಕರೆ ಮಾಡಲು ಸಾಧ್ಯವಾಗದೇ ಇರಬಹುದು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:
ಜೋಡೆತ್ತುಗಳಲ್ಲಿ ಒಂದು ಈಗ ಮೇಕೆದಾಟು ಕಡೆ ಹೊಂಟೈತೆ ಎಂದು ಡಿಕೆ ಶಿವಕುಮಾರ್ಗೆ ಲೇವಡಿ ಮಾಡಿದ ರೇವಣ್ಣ
Published On - 3:41 pm, Thu, 30 December 21