ಜೋಡೆತ್ತುಗಳಲ್ಲಿ ಒಂದು ಈಗ ಮೇಕೆದಾಟು ಕಡೆ ಹೊಂಟೈತೆ ಎಂದು ಡಿಕೆ ಶಿವಕುಮಾರ್​ಗೆ ಲೇವಡಿ ಮಾಡಿದ ರೇವಣ್ಣ

ಕರ್ನಾಟಕದಲ್ಲಿ ಹೆಚ್‌​.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಇವರೇ ನೀರಾವರಿ ಸಚಿವರಾಗಿದ್ದರು. ಆಗ ಯಾಕೆ ಮೇಕೆದಾಟು ಯೋಜನೆ ಮಾಡಿಸಲಿಲ್ಲ. ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಈ ಯೋಜನೆ ಜಾರಿ ಮಾಡಬಹುದು ಎಂದು ಆಗ ಏಕೆ ಇವರಿಗೆ ಅನ್ನಿಸಲಿಲ್ಲ -ಹೆಚ್‌.ಡಿ. ರೇವಣ್ಣ

TV9kannada Web Team

| Edited By: Ayesha Banu

Dec 28, 2021 | 9:42 AM

ಜೆಡಿಎಸ್‌ ನಾಯಕ ಹಾಗೂ ಹಾಸನಾಧಿಪತಿ ಹೆಚ್‌.ಡಿ. ರೇವಣ್ಣ ಈಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಮೇಲೆ ಗರಂ ಆಗಿದ್ದಾರೆ. ಡಿಕೆಶಿ ಮೇಕೆದಾಟು ಕುರಿತಂತೆ ಪಾದಯಾತ್ರೆಗೆ ತಯಾರಿ ನಡೆಸುತ್ತಿದ್ದಂತೆ ಜೆಡಿಎಸ್‌ ನಾಯಕರು ಗರಂ ಆಗಿದ್ದು, ಡಿಕೆಶಿ ಮೇಲೆ ಮುಗಿ ಬಿದ್ದಿದ್ದಾರೆ.

ಕರ್ನಾಟಕದಲ್ಲಿ ಹೆಚ್‌​.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಇವರೇ ನೀರಾವರಿ ಸಚಿವರಾಗಿದ್ದರು. ಆಗ ಯಾಕೆ ಮೇಕೆದಾಟು ಯೋಜನೆ ಮಾಡಿಸಲಿಲ್ಲ. ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಈ ಯೋಜನೆ ಜಾರಿ ಮಾಡಬಹುದು ಎಂದು ಆಗ ಏಕೆ ಇವರಿಗೆ ಅನ್ನಿಸಲಿಲ್ಲ. ಇವರಿಗೆ ಈಗ ಮೇಕದಾಟು ಬಗ್ಗೆ ಉತ್ಸಾಹ ಬಂದಿದೆ. ಜನ ಇವರಿಗೆ ಐವತ್ತು ಮೇಕೆ ತಂದು ಕೊಡೋದು ಒಳ್ಳೇದು. ಮುಂದಿನ ಚುನಾವಣೆ ಬರೋವರೆಗೆ ಮೇಕೆ‌ ಜೊತೆ ಇರಿ ಎಂದು ಹೇಳಬೇಕು ಎಂದು ಜೆಡಿಎಸ್ ಶಾಸಕ ಹೆಚ್‌.ಡಿ.ರೇವಣ್ಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಸರು ಹೇಳದೇ, ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ 19 ತಿಂಗಳು ಕುಮಾರಸ್ವಾಮಿ ಅಧಿಕಾರ ಮಾಡಿದ್ದರು. ಆಗ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಜೋಡಿಗೆ ಜೋಡೆತ್ತು ಎಂದು ಹೇಳುತ್ತಿದ್ದರು. ಈಗ ಇದರಲ್ಲಿ ಒಂದು ಎತ್ತು ಮೇಕೆದಾಟು ಕಡೆಗೆ ಹೋಗಿದೆ. ನಾವು ಏನು ಮಾಡೋಣ ಸ್ವಾಮಿ ಎಂದು ರೇವಣ್ಣ ಪ್ರಶ್ನಿಸಿದರು. ಕುಮಾರಸ್ವಾಮಿ ಎಲ್ಲರನ್ನು ನಂಬುತ್ತಾರೆ, ಪಾಪ ಹೃದಯವಂತರು ಅವರು. ನಮ್ಮ ಹತ್ತಿರ ಬಂದರೆ ಯಾವುದು ಒದೆಯುತ್ತವೆ ಗೊತ್ತಾಗುತ್ತದೆ. ಕುಮಾರಣ್ಣ ಏನ್ಮಾಡ್ತಾರೆ ಒದೆಯುವುದಕ್ಕೂ ಮೇವು ಹಾಕ್ತಾರೆ. ಆಮೇಲೆ ಅವು ಮೇವು ತಿಂದು ಒದಿತವೆ ಎಂದು ರೇವಣ್ಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರನ್ನು ಟೀಕಿಸಿದರು.

ಕೃಷ್ಣಾ ನದಿ ಕೊಳ್ಳದ ಕಾಮಗಾರಿಗಳಲ್ಲಿ ವ್ಯಾಪಾರ ಮುಗಿಸಿ ಈಗ ಮೇಕೆದಾಟಲ್ಲಿ ವ್ಯಾಪಾರ ಮಾಡೋಕೆ ಹೊರಟಿದ್ದಾರೆ. ರಾಜ್ಯದ ಜನರು ಇವರ ಉದ್ದೇಶಗಳ ಬಗ್ಗೆ ತಿಳಿಯಬೇಕು. ಈ ರಾಷ್ಟ್ರೀಯ ಪಕ್ಷಗಳು ಸುಳ್ಳು ಹೇಳುತ್ತಿವೆ. ಜನರು ಬೀದಿಪಾಲಾಗಿದ್ದಾರೆ, ಮಳೆಯಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿ ಇದ್ದಾರೆ. ಎಷ್ಟು ದಿನ ಸುಳ್ಳು ಹೇಳ್ತೀರಾ ಜನ ನೋಡ್ತಾರೆ, ತಿರುಗಿ ಬೀಳೋ ಕಾಲ ಬರುತ್ತೆ ಎಂದು ಎಚ್ಚರಿಕೆ ನೀಡಿದರು.

Follow us on

Click on your DTH Provider to Add TV9 Kannada