BJP Meeting in Hubballi: 12 ವರ್ಷಗಳ ಬಳಿಕ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ, ಇಡೀ ನಗರ ಕೇಸರಿಮಯ
ಒಂದು ಕಡೆ ನಾಯಕತ್ವ ಬದಲಾವಣೆಯ ಗುಸುಗುಸು, ಸಚಿವ ಸಂಪುಟ ವಿಸ್ತರಣೆ ಮತ್ತೊಂದು ಕಡೆ ವಿಧಾನ ಪರಿಷತ್ ಸೋಲು ನಡುವೆ ಈ ಕಾರ್ಯಕಾರಿಣಿ ಸಭೆ ನಡೆಯುತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಅಂದಹಾಗೆ ಬರೋಬ್ಬರಿ 12 ವರ್ಷಗಳ ನಂತರ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಹಮ್ಮಿಕೊಳ್ಳಲಾಗಿದೆ.
ಬೆಳಗಾವಿಯ ಚಳಿಗಾಲದ ಅಧಿವೇಶನ, ವಿಧಾನ ಪರಿಷತ್ ಚುನಾವಣೆ ಮುಗಿಯುತ್ತಿದ್ದಂತೆ, ಕೇಸರಿ ಪಾಳಯ ಮತ್ತೆ ಅಲಟ್೯ ಆಗಿದೆ. ರಾಜ್ಯ ವಿಧಾನಸಭೆ ಚುನಾವಣೆಗೆ ಈಗಲೇ ತಾಲೀಮು ನಡೆಸೋಕೆ ಶುರು ಮಾಡಿದೆ. ಹಾಗಾಗಿ ಹುಬ್ಬಳ್ಳಿಯಲ್ಲಿ ರಾಜ್ಯ ಕಾರ್ಯಕರಣಿ ಸಭೆ ಹಮ್ಮಿಕೊಂಡಿದ್ದು ಇಡೀ ನಗರ ಕೇಸರಿಮಯವಾಗಿದೆ.
ನಾಯಕತ್ವ ಬದಲಾವಣೆ ಮಧ್ಯೆ ಕುತೂಹಲ ಕೆರಳಿಸಿದ ಮೀಟಿಂಗ್
ಒಂದು ಕಡೆ ನಾಯಕತ್ವ ಬದಲಾವಣೆಯ ಗುಸುಗುಸು, ಸಚಿವ ಸಂಪುಟ ವಿಸ್ತರಣೆ ಮತ್ತೊಂದು ಕಡೆ ವಿಧಾನ ಪರಿಷತ್ ಸೋಲು ನಡುವೆ ಈ ಕಾರ್ಯಕಾರಿಣಿ ಸಭೆ ನಡೆಯುತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಅಂದಹಾಗೆ ಬರೋಬ್ಬರಿ 12 ವರ್ಷಗಳ ನಂತರ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಹಮ್ಮಿಕೊಳ್ಳಲಾಗಿದೆ. ಇಂದು ಮತ್ತು ನಾಳೆ ಹುಬ್ಬಳ್ಳಿ ಗೋಕುಲ್ ರಸ್ತೆಯಲ್ಲಿರೋ ಖಾಸಗಿ ಹೋಟೆಲ್‌ನಲ್ಲಿ ಸಭೆ ಆಯೋಜಿಸಲಾಗಿದ್ದು ಮುಂಬರುವ ವಿಧಾನಸಭಾ ಚುನಾವಣೆ, ಪಕ್ಷದ ಸಂಘಟನೆ ಹಾಗೂ ಇತ್ತೀಚೆಗೆ ಪರಿಷತ್ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದ ಅಭ್ಯರ್ಥಿಯ ಸೋಲು ಕುರಿತಂತೆ ಮಹತ್ವದ ವಿಷಯಗಳು ಚರ್ಚೆಯಾಗುವ ಸಾಧ್ಯತೆಯಿದೆ.
ಸಿಎಂ ಬೊಮ್ಮಾಯಿಗೆ ಬಹುಪರಾಕ್ ಎಂದ ಅರುಣ್ ಸಿಂಗ್
ಹೌದು, ಸಿಎಂ ಬದಲಾಗ್ತಾರೆ ಅನ್ನೋ ಗುಸುಗುಸುಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತೆರೆ ಎಳೆದಿದ್ದಾರೆ. ಸಿಎಂ ಬೊಮ್ಮಾಯಿ ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ಮಾಡ್ತಿದ್ದಾರೆ. ಅವರ ಮೇಲೆ ಒಂದೇ ಒಂದು ರೂಪಾಯಿ ಭ್ರಷ್ಟಾಚಾರ ಆರೋಪವಿಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ, ಮುಂದಿನ ಚುನಾವಣೆ ಅವರ ನೇತೃತ್ವದಲ್ಲಿಯೇ ನಡೆಯಲಿದೆ ಅನ್ನೋ ಮೂಲಕ ನಾಯಕತ್ವ ಬದಲಾವಣೆ ವದಂತಿಗೆ ತೆರೆ ಎಳೆದಿದ್ದಾರೆ.
ಇನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಸಹ ಸಿಎಂ ಬದಲಾವಣೆಗೆ ಚರ್ಚೆಗೆ ಇತಿ ಶ್ರೀ ಹಾಡಿದ್ದಾರೆ. ಸಿಎಂ ಬದಲಾಗುತ್ತಾರೆ ಎಂಬುವುದು ಕೇವಲ ಊಹಾಪೋಹ ಅಷ್ಟೇ. ಮುಂದಿನ ಚುನಾವಣೆವರೆಗೂ ಬೊಮ್ಮಾಯಿಯವರೇ ಸಿಎಂ ಎಂದಿದ್ದಾರೆ.
ಇನ್ನು ಇಂದು ಮತ್ತು ನಾಳೆ ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ ಪ್ರಮುಖವಾಗಿ ಬೆಳಗಾವಿ ಎಂಎಲ್‌ಸಿ ಚುನಾವಣೆ ಸೋಲಿನ ವಿಚಾರ ಚರ್ಚೆಗೆ ಬರುವ ಸಾಧ್ಯತೆಯಿದೆ. ಅದಕ್ಕು ಮುನ್ನವೇ ಈ ಕುರಿತಂತೆ ಮಾತನಾಡಿದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೋಲಿಗೆ ಕಾರಣ ಹುಡುಕಲು ಸಮಿತಿ ರಚಿಸುತ್ತೇವೆ. ಅದಕ್ಕೆ ಪೂರಕವಾಗಿ ಸ್ಥಳೀಯರ ಅಭಿಪ್ರಾಯ ಸಹ ಸಂಗ್ರಹಿಸಲಾಗುವುದು ಎಂದು ಹೇಳಿದ್ದಾರೆ. ಒಟ್ನಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ಕಾರ್ಯಕಾರಿಣಿಯಲ್ಲಿ ಮಹತ್ವದ ವಿಚಾರಗಳು ಚರ್ಚೆಗೆ ಬರಲಿದ್ದು ಜೊತೆಗೆ ಕೆಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.