ವಿಷ್ಣುವರ್ಧನ್ 12ನೇ ವರ್ಷದ ಪುಣ್ಯಸ್ಮರಣೆ: ಫ್ಯಾನ್ಸ್ ಮನದಲ್ಲಿ ವಿಷ್ಣುದಾದ ನೆನಪು ಅಮರ
Vishnuvardhan Death Anniversary: ವಿಷ್ಣುವರ್ಧನ್ ಅವರು ನಮ್ಮನ್ನೆಲ್ಲ ಅಗಲಿ 12 ವರ್ಷ ಕಳೆದಿದೆ. ಇಂದಿಗೂ ಅಭಿಮಾನಿಗಳು ಅವರನ್ನು ಸಖತ್ ಮಿಸ್ ಮಾಡಿಕೊಳ್ಳುತ್ತಾರೆ. ಪುಣ್ಯಸ್ಮರಣೆ ಅಂಗವಾಗಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ.
ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕಲಾವಿದರಲ್ಲಿ ವಿಷ್ಣುವರ್ಧನ್ (Vishnuvardhan) ಕೂಡ ಒಬ್ಬರು. 200 ಸಿನಿಮಾಗಳಲ್ಲಿ ನಟಿಸಿದ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದರು. ಒಟ್ಟಾರೆ ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ದೊಡ್ಡದು. ಎಷ್ಟೇ ಹೊಸ ಹೀರೋಗಳು ಬರಬಹುದು. ಆದರೆ ವಿಷ್ಣುದಾದ ರೀತಿಯ ಇನ್ನೊಬ್ಬ ನಟ ಕನ್ನಡ ಚಿತ್ರರಂಗಕ್ಕೆ ಸಿಗಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ವಿಶೇಷವಾಗಿತ್ತು ಅವರ ನಟನೆ ಮತ್ತು ವ್ಯಕ್ತಿತ್ವ. ‘ಸಾಹಸ ಸಿಂಹ’ ನಮ್ಮನ್ನೆಲ್ಲ ಅಗಲಿ 12 ವರ್ಷ ಕಳೆದಿದೆ. ಇಂದು (ಡಿ.30) ಅವರ 12ನೇ ವರ್ಷದ ಪುಣ್ಯಸ್ಮರಣೆಯನ್ನು (Vishnuvardhan Death Anniversary) ಆಚರಿಸಲಾಗುತ್ತಿದೆ. ವಿಷ್ಣುವರ್ಧನ್ ಅಭಿಮಾನಿಗಳು (Vishnuvardhan Fans) ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕುಟುಂಬದವರು ಕೂಡ ವಿಷ್ಣು ಸ್ಮಾರಕದ ಜಾಗಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಭಾರತಿ ವಿಷ್ಣುವರ್ಧನ್, ಅನಿರುದ್ಧ ಮುಂತಾದವರು ಭಾಗಿ ಆಗಲಿದ್ದಾರೆ.
2009ರ ಡಿ.30 ವಿಷ್ಣು ಅಭಿಮಾನಿಗಳ ಪಾಲಿಗೆ ನೋವಿನ ದಿನವಾಗಿತ್ತು. ಕೇವಲ 59ನೇ ವಯಸ್ಸಿಗೆ ವಿಷ್ಣುವರ್ಧನ್ ಅವರು ಇಹಲೋಕ ತ್ಯಜಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ. ‘ಸಾಹಸ ಸಿಂಹ’ ನಟಿಸಿದ ಕೊನೆಯ ಸಿನಿಮಾ ‘ಆಪ್ತ ರಕ್ಷಕ’. ಅದು ಅವರು 200ನೇ ಸಿನಿಮಾ ಕೂಡ ಹೌದು.
ವಿಷ್ಣು ನಮ್ಮನ್ನೆಲ್ಲ ಅಗಲಿ 12 ವರ್ಷ ಕಳೆದಿದೆ. ಇಂದಿಗೂ ಅಭಿಮಾನಿಗಳು ಅವರನ್ನು ಸಖತ್ ಮಿಸ್ ಮಾಡಿಕೊಳ್ಳುತ್ತಾರೆ. ಟಿವಿಯಲ್ಲಿ ಅವರ ಸಿನಿಮಾಗಳು ಪ್ರಸಾರವಾದರೆ ಫ್ಯಾನ್ಸ್ ಬಹಳ ಪ್ರೀತಿಯಿಂದ ಕಣ್ತುಂಬಿಕೊಳ್ಳುತ್ತಾರೆ. ಅವರ ಪ್ರತಿಮೆಗಳನ್ನು ಅನೇಕ ಕಡೆಗಳಲ್ಲಿ ನಿರ್ಮಿಸಲಾಗಿದೆ. ಇಂದು ಪುಣ್ಯ ಸ್ಮರಣೆ ಪ್ರಯುಕ್ತ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಲಾಗುತ್ತಿದೆ. ರಕ್ತದಾನ, ಉಚಿತ ಆರೋಗ್ಯ ತಪಾಸಣೆಯಂತಹ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತಿದೆ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ವಿಚಾರದಲ್ಲಿ ಎಲ್ಲರಿಗೂ ಅಸಮಾಧಾನ ಇದೆ. 12 ವರ್ಷ ಕಳೆದರೂ ಸ್ಮಾರಕ ನಿರ್ಮಾಣ ತಡವಾಗಿರುವುದು ಬೇಸರದ ಸಂಗತಿ. ಆದಷ್ಟು ಬೇಗ ಸ್ಮಾರಕ ನಿರ್ಮಾಣವಾಗಲಿ ಎಂದು ಕುಟುಂಬದವರು ಬಯಸುತ್ತಿದ್ದಾರೆ.
ಇದನ್ನೂ ಓದಿ:
ನಟಿ ಭಾರತಿ ವಿಷ್ಣುವರ್ಧನ್ ಕುರಿತ ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರದಿಂದ ದಾಖಲೆ ಬರೆದ ಅನಿರುದ್ಧ
‘ವಿಷ್ಣುವರ್ಧನ್ ಕೊನೆಯ ದಿನಗಳಲ್ಲಿ ಭಾರತಿ ಹೆಂಡತಿ ಆಗಿರಲಿಲ್ಲ, ತಾಯಿ ಆಗಿದ್ರು’