ನಟಿ ಭಾರತಿ ವಿಷ್ಣುವರ್ಧನ್​ ಕುರಿತ ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರದಿಂದ ದಾಖಲೆ ಬರೆದ ಅನಿರುದ್ಧ

TV9 Digital Desk

| Edited By: ಮದನ್​ ಕುಮಾರ್​

Updated on: Dec 22, 2021 | 8:04 PM

Bale Bangara Documentary: ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರದಿಂದ ಹಲವು ದಾಖಲೆಗಳನ್ನು ಬರೆದು, ಅವುಗಳ ಪ್ರಮಾಣಪತ್ರಗಳನ್ನು ಹಿಡಿದು ಅನಿರುದ್ಧ ಅವರು ಖುಷಿಯಿಂದ ಪೋಸ್​ ನೀಡಿದ್ದಾರೆ. ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ನಟಿ ಭಾರತಿ ವಿಷ್ಣುವರ್ಧನ್​ ಕುರಿತ ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರದಿಂದ ದಾಖಲೆ ಬರೆದ ಅನಿರುದ್ಧ
ಭಾರತಿ ವಿಷ್ಣುವರ್ಧನ್, ಅನಿರುದ್ಧ


ನಟ ಅನಿರುದ್ಧ (Aniruddha) ಅವರದ್ದು ಬಹುಮುಖ ಪ್ರತಿಭೆ. ಸಿನಿಮಾ ಮತ್ತು ಧಾರಾವಾಹಿ ಲೋಕದಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ‘ಜೊತೆ ಜೊತೆಯಲಿ’ ಸೀರಿಯಲ್​ (Jothe Jotheyali Serial) ಮೂಲಕ ಅವರ ಖ್ಯಾತಿ ದುಪ್ಪಟ್ಟಾಯಿತು. ಹಾಡುಗಾರಿಕೆ, ನಿರ್ದೇಶನದಲ್ಲೂ ಅವರಿಗೆ ಆಸಕ್ತಿ ಇದೆ. ಹಿರಿಯ ನಟಿ ಭಾರತಿ ವಿಷ್ಣುವರ್ಧನ್​ (Bharathi Vishnuvardhan) ಅವರ ಜೀವನವನ್ನು ಆಧರಿಸಿ ಅನಿರುದ್ಧ ಅವರು ಸಾಕ್ಷ್ಯಚಿತ್ರ ತಯಾರಿಸಿರುವುದು ಗೊತ್ತೇ ಇದೆ. ‘ಬಾಳೇ ಬಂಗಾರ’ (Bale Bangara) ಶೀರ್ಷಿಕೆಯಲ್ಲಿ ಮೂಡಿಬಂದಿರುವ ಈ ಡಾಕ್ಯುಮೆಂಟರಿ ಈಗ ದಾಖಲೆ ಬರೆದಿದೆ. ಆ ಮೂಲಕ ಅನಿರುದ್ಧ ಅವರ ಕೆಲಸಕ್ಕೆ ಫಲ ಸಿಕ್ಕಂತಾಗಿದೆ. ಈ ಖುಷಿಯ ಸಮಾಚಾರವನ್ನು ಅವರು ಎಲ್ಲರ ಜೊತೆ ಹಂಚಿಕೊಂಡಿದ್ದಾರೆ.

ಡಾ. ಭಾರತಿ ವಿಷ್ಣುವರ್ಧನ್​ ಅವರ ವೈಯಕ್ತಿಕ ಜೀವನ ಮತ್ತು ಬಣ್ಣದ ಬದುಕಿನ ಬಗ್ಗೆ ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆ. ಈ ಸಾಕ್ಷ್ಯಚಿತ್ರದ ಅವಧಿ 141 ನಿಮಿಷಗಳು. ‘ಬದುಕಿರುವ ಭಾರತದ ಮೇರು ನಟಿಯ ಕುರಿತಾದ ಅತ್ಯಂತ ದೀರ್ಘ ಕಾಲಾವಧಿಯ ಸಾಕ್ಷ್ಯಚಿತ್ರ’ ಎಂಬ ದಾಖಲೆಯನ್ನು ಈ ಡಾಕ್ಯುಮೆಂಟರಿ ಬರೆದಿದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕಲಾಂ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​​ನಲ್ಲಿ ದಾಖಲೆ ನಿರ್ಮಿಸಿದೆ.

ಕೀರ್ತಿ ಇನ್ನೋವೇಷನ್ಸ್​ ಮೂಲಕ ನಿರ್ಮಾಣವಾದ ಈ ಸಾಕ್ಷ್ಯಚಿತ್ರಕ್ಕೆ ಅನಿರುದ್ಧ ಅವರು ನಿರ್ದೇಶನ ಮಾಡಿದ್ದಾರೆ. ಇದರ ಪರಿಕಲ್ಪನೆ, ಸಂಶೋಧನೆ, ಸ್ಕ್ರಿಪ್ಟ್​ ಮತ್ತು ನಿರೂಪಣೆ ಕೂಡ ಅನಿರುದ್ಧ ಅವರದ್ದೇ. ‘ಬಾಳೇ ಬಂಗಾರ’ ನಿರ್ದೇಶಿಸುವ ಸಲುವಾಗಿ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಭಾರತಿ ವಿಷ್ಣುವರ್ಧನ್​ ಅವರ ಕೊಡುಗೆ ಅಪಾರ. ಅವರ ಬದುಕಿನ ಎಲ್ಲ ವಿವರಗಳನ್ನು ಈ ಸಾಕ್ಷ್ಯಚಿತ್ರದ ಮೂಲಕ ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ. ಆದಷ್ಟು ಬೇಗ ‘ಬಾಳೇ ಬಂಗಾರ’ ರಿಲೀಸ್​ ಮಾಡುವುದಾಗಿ ಅನಿರುದ್ಧ ತಿಳಿಸಿದ್ದಾರೆ. ಈ ಡಾಕ್ಯುಮೆಂಟರಿಯಿಂದ ದಾಖಲೆಗಳನ್ನು ಬರೆದು, ಅವುಗಳ ಪ್ರಮಾಣ ಪತ್ರಗಳನ್ನು ಹಿಡಿದು ಅನಿರುದ್ಧ ಅವರು ಖುಷಿಯಿಂದ ಪೋಸ್​ ನೀಡಿದ್ದಾರೆ. ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

150ಕ್ಕೂ ಅಧಿಕ ಸಿನಿಮಾಗಳಲ್ಲಿ ಭಾರತಿ ವಿಷ್ಣುವರ್ಧನ್​ ಅವರು ನಟಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಈಗಾಗಲೇ ಗೌರವಿಸಿದೆ. ಇಷ್ಟೆಲ್ಲ ಜನಪ್ರಿಯತೆ ಗಳಿಸಿದ ಅವರ ಬದುಕಿನಲ್ಲಿ ಹಲವು ಏಳು-ಬೀಳುಗಳಿವೆ. ಆ ಎಲ್ಲ ವಿವರಗಳನ್ನು ‘ಬಾಳೇ ಬಂಗಾರ’ ಕಟ್ಟಿಕೊಡಲಿದೆ.

ಭಾರತಿ ವಿಷ್ಣುವರ್ಧನ್​ ಅವರ ಬದುಕು, ಸಾಧನೆ, ವ್ಯಕ್ತಿತ್ವದ ಬಗ್ಗೆ ಚಿತ್ರರಂಗದ ಅನೇಕರು ಮಾತನಾಡಿದ್ದಾರೆ. ಅನಂತ್​ ನಾಗ್​, ಶಿವರಾಮ್​, ಎಚ್​ಆರ್​ ಭಾರ್ಗವ, ಮೋಹನ್​ ಲಾಲ್​, ಶಿವರಾಜ್​ಕುಮಾರ್​, ಹೇಮಾ ಚೌಧರಿ ಸೇರಿದಂತೆ ಚಿತ್ರರಂಗದ ಅನೇಕ ಹಿರಿಯರ ಸಂದರ್ಶನ ಈ ಸಾಕ್ಷ್ಯಚಿತ್ರದಲ್ಲಿ ಇದೆ. ಈ ಎಲ್ಲ ಕಾರಣಗಳಿಗಾಗಿ ‘ಬಾಳೇ ಬಂಗಾರ’ ಡಾಕ್ಯುಮೆಂಟರಿ ಬಗ್ಗೆ ದೊಡ್ಡ ನಿರೀಕ್ಷೆ ಮೂಡಿದೆ.

ಇದನ್ನೂ ಓದಿ:

‘ವಿಷ್ಣುವರ್ಧನ್​ ಕೊನೆಯ ದಿನಗಳಲ್ಲಿ ಭಾರತಿ ಹೆಂಡತಿ ಆಗಿರಲಿಲ್ಲ, ತಾಯಿ ಆಗಿದ್ರು’

8 ವರ್ಷಕ್ಕೆ 100 ಸಿನಿಮಾ, 6 ತಿಂಗಳು ಗಂಜಿ ಊಟ; ಭಾರತಿ ವಿಷ್ಣುವರ್ಧನ್​ ಏಳು-ಬೀಳಿನ ‘ಬಾಳೇ ಬಂಗಾರ’

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada