8 ವರ್ಷಕ್ಕೆ 100 ಸಿನಿಮಾ, 6 ತಿಂಗಳು ಗಂಜಿ ಊಟ; ಭಾರತಿ ವಿಷ್ಣುವರ್ಧನ್ ಏಳು-ಬೀಳಿನ ‘ಬಾಳೇ ಬಂಗಾರ’
ಭಾರತಿ ವಿಷ್ಣುವರ್ಧನ್ ಬದುಕಿನ ಬಗ್ಗೆ ಅಧ್ಯಯನ ನಡೆಸಿ, ಸಮಗ್ರ ಮಾಹಿತಿಯನ್ನು ಕಟ್ಟಿಕೊಡಲು ಅನಿರುದ್ಧ ಪ್ರಯತ್ನಿಸಿದ್ದಾರೆ. ಸ್ವತಃ ಭಾರತಿ ವಿಷ್ಣುವರ್ಧನ್ ಸಂದರ್ಶನ ಕೂಡ ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರದಲ್ಲಿ ಇದೆ.
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ನಟಿ ಭಾರತಿ ವಿಷ್ಣುವರ್ಧನ್ (Bharathi Vishnuvardhan) ಅವರ ಸಾಧನೆ ದೊಡ್ಡದು. 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರ ಕೊಡುಗೆ ಅಪಾರ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ಅವರು ನಟಿಸಿದರು. ಅವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಇಷ್ಟೆಲ್ಲ ಜನಪ್ರಿಯತೆ ಗಳಿಸಿದ ಅವರ ಬದುಕಿನಲ್ಲಿ ಹಲವು ಏಳು-ಬೀಳುಗಳಿವೆ. ಅವರ ಕುರಿತು ನಟ ಅನಿರುದ್ಧ (Anirudh Jatkar) ಒಂದು ಸಾಕ್ಷ್ಯಚಿತ್ರ ತಯಾರಿಸಿದ್ದಾರೆ. ಅದಕ್ಕೆ ‘ಬಾಳೇ ಬಂಗಾರ’ (Bale Bangara) ಎಂದು ಹೆಸರು ಇಡಲಾಗಿದೆ. ಆ.15ರಂದು ಭಾರತಿ ವಿಷ್ಣುವರ್ಧನ್ ಅವರ ಜನ್ಮದಿನ. ಆ ಪ್ರಯುಕ್ತ ‘ಬಾಳೇ ಬಂಗಾರ’ ಟ್ರೇಲರ್ ಬಿಡುಗಡೆ ಆಗಿದೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್ ಮುಂತಾದ ಸ್ಟಾರ್ ನಟರ ಜೊತೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿದ ಭಾರತಿ ವಿಷ್ಣುವರ್ಧನ್ ಅವರು ಆ ಕಾಲದ ಬಹುಬೇಡಿಕೆ ನಟಿ ಆಗಿದ್ದರು. ಹಾಗಂತ ಅವರ ಸಿನಿಮಾ ಪಯಣ ಬರೀ ಹೂವಿನ ಹಾದಿ ರೀತಿ ಸುಗಮ ಆಗಿರಲಿಲ್ಲ. ಅಲ್ಲಿ ಅನೇಕ ಕಷ್ಟಗಳು ಕೂಡ ಇದ್ದವು. ಕೇವಲ 8 ವರ್ಷದಲ್ಲಿ 100 ಸಿನಿಮಾಗಳನ್ನು ಮಾಡಿದ್ದು ಅವರ ಹೆಚ್ಚುಗಾರಿಕೆ. ಹಾಗೆಯೇ ಕಷ್ಟದ ದಿನಗಳಲ್ಲಿ 6 ತಿಂಗಳ ಕಾಲ ಅವರು ಬರೀ ಗಂಜಿ ತಿಂದು ಜೀವನ ಸಾಗಿಸಿದರು ಎಂಬುದರ ಬಗ್ಗೆ ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರದಲ್ಲಿ ಚರ್ಚೆ ಮಾಡಲಾಗಿದ್ದು, ಟ್ರೇಲರ್ನಲ್ಲಿ ಅದು ಹೈಲೈಟ್ ಆಗಿದೆ.
ಭಾರತಿ ವಿಷ್ಣುವರ್ಧನ್ ಅವರ ಬದುಕು, ಸಾಧನೆ, ವ್ಯಕ್ತಿತ್ವದ ಬಗ್ಗೆ ಚಿತ್ರರಂಗದ ಅನೇಕರು ಮಾತನಾಡಿದ್ದಾರೆ. ಅನಂತ್ ನಾಗ್, ಶಿವರಾಮ್, ಎಚ್ಆರ್ ಭಾರ್ಗವ, ಮೋಹನ್ ಲಾಲ್, ಶಿವರಾಜ್ಕುಮಾರ್, ಹೇಮಾ ಚೌಧರಿ ಸೇರಿದಂತೆ ಚಿತ್ರರಂಗದ ಅನೇಕ ಹಿರಿಯರ ಸಂದರ್ಶನ ಈ ಸಾಕ್ಷ್ಯಚಿತ್ರದಲ್ಲಿ ಇದೆ. ಈ ಎಲ್ಲ ಕಾರಣಗಳಿಗಾಗಿ ‘ಬಾಳೇ ಬಂಗಾರ’ ಡಾಕ್ಯುಮೆಂಟರಿ ಬಗ್ಗೆ ದೊಡ್ಡ ನಿರೀಕ್ಷೆ ಮೂಡಿದೆ.
ಈ ಸಾಕ್ಷ್ಯಚಿತ್ರಕ್ಕಾಗಿ ನಟ, ವಿಷ್ಣುವರ್ಧನ್ ಅಳಿಯ ಅನಿರುದ್ಧ ಅವರು ಹಲವು ವರ್ಷಗಳಿಂದ ಶ್ರಮಿಸಿದ್ದಾರೆ. ಭಾರತಿ ವಿಷ್ಣುವರ್ಧನ್ ಬದುಕಿನ ಬಗ್ಗೆ ಅಧ್ಯಯನ ನಡೆಸಿ, ಸಮಗ್ರ ಮಾಹಿತಿಯನ್ನು ಕಟ್ಟಿಕೊಡಲು ಅವರು ಪ್ರಯತ್ನಿಸಿದ್ದಾರೆ. ಸ್ವತಃ ಭಾರತಿ ವಿಷ್ಣುವರ್ಧನ್ ಅವರು ಸಂದರ್ಶನ ಕೂಡ ಇದರಲ್ಲಿ ಇದೆ. ಸಿನಿಮಾ ಜರ್ನಿ ಮಾತ್ರವಲ್ಲದೆ ವೈಯಕ್ತಿಕ ಜೀವನದ ಬಗ್ಗೆಯೂ ಭಾರತಿ ಮಾತನಾಡಿದ್ದಾರೆ. ವಿಷ್ಣುವರ್ಧನ್ ಜೊತೆಗಿನ ದಾಂಪತ್ಯದ ಬಗ್ಗೆ ಅವರು ಭಾವುಕವಾಗಿ ನುಡಿದಿದ್ದಾರೆ.
ಆದಷ್ಟು ಬೇಗ ಈ ಡಾಕ್ಯುಮೆಂಟರಿ ಬಿಡುಗಡೆ ಆಗಲಿ ಎಂದು ವಿಷ್ಣುವರ್ಧನ್, ಭಾರತಿ ಮತ್ತು ಅನಿರುದ್ಧ ಅಭಿಮಾನಿಗಳು ಕಾಯುತ್ತಿದ್ದಾರೆ. ಅನಿರುದ್ಧ ಹಂಚಿಕೊಂಡಿರುವ ಟ್ರೇಲರ್ಗೆ ನೂರಾರು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ಆ ಮೂಲಕ ತಮ್ಮ ಕಾತರವನ್ನು ತಿಳಿಸಿದ್ದಾರೆ.
ಇದನ್ನೂ ಓದಿ:
ಡಾ. ರಾಜ್, ಅಂಬರೀಷ್ಗೆ ಸಿಕ್ಕ ಸ್ಥಾನ ವಿಷ್ಣುವರ್ಧನ್ಗೆ ಯಾಕಿಲ್ಲ? ಸಾಕ್ಷಿ ಸಹಿತ ಪ್ರಶ್ನೆ ಕೇಳಿದ ಅನಿರುದ್ಧ್
ಸ್ವಾತಂತ್ರ್ಯೋತ್ಸವದ ದಿನವೇ ಈ ಸೆಲೆಬ್ರಿಟಿಗಳಿಗೆ ಬರ್ತ್ಡೇ ಸಂಭ್ರಮ; ಅಭಿಮಾನಿಗಳಿಂದ ಭರಪೂರ ವಿಶ್