ಬೆಂಗಳೂರು, ಮಾರ್ಚ್ 2: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) 2023-24ನೆ ಸಾಲಿನ 384 ‘ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್’ (KAS -ಕೆಎಎಸ್) ಹುದ್ದೆಗಳ ನೇಮಕಾತಿಗಾಗಿ (KPSC Group A & B Recruitment 2024) ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 4ರಿಂದ ಏಪ್ರಿಲ್ 3ರವರೆಗೆ ಅವಕಾಶವನ್ನು ಕಲ್ಪಿಸಿದೆ. ಅರ್ಜಿ ಸಲ್ಲಿಸುವ ಶುಲ್ಕ ಸಾಮಾನ್ಯ ವರ್ಗದವರಿಗೆ 600 ರೂ., ಪ್ರ ವರ್ಗ 2ಎ, 2ಬಿ, 3ಎ, 3ಬಿ ಗಳಿಗೆ 300 ರೂ., ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಎಸ್ಸಿ, ಎಸ್ಟಿ, ಪ್ರವರ್ಗ-1, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಪದವಿ, ಸ್ನಾತಕೋತ್ತರ ಪದವಿ ಅಥವಾ ತತ್ಸಮಾನವಾದ ವಿದ್ಯಾರ್ಹತೆಯನ್ನು ಹೊಂದಿದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕನಿಷ್ಠ 21 ವರ್ಷ ವಯಸ್ಸು ಮೀರಿದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಸಾಮಾನ್ಯ ವರ್ಗದವರಿಗೆ ಗರಿಷ್ಠ ವಯೋಮಿತಿ 38, ಪ್ರವರ್ಗ 2ಎ, 2ಬಿ, 3ಎ, 3ಬಿಗಳಿಗೆ 41 ವರ್ಷ, ಎಸ್ಸಿ, ಎಸ್ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 43 ವರ್ಷ ಆಗಿರುತ್ತದೆ.
ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳೂ (ಹೈ-ಕ) ಸೇರಿದಂತೆ ಒಟ್ಟಾರೆ 384 ಹುದ್ದೆಗಳಲ್ಲಿ ‘ಗ್ರೂಪ್ ಎ’ 159, ‘ಗ್ರೂಪ್ -ಬಿ’ 225 ಹುದ್ದೆಗಳಿವೆ. ಪೂರ್ವಭಾವಿ ಪರೀಕ್ಷೆ (ಬಹುಆಯ್ಕೆ ಮಾದರಿಯ ಪ್ರಶ್ನೆಗಳು), ಮುಖ್ಯ ಪರೀಕ್ಷೆ (ವಿವರಣಾತ್ಮಕ) ಮತ್ತು ವ್ಯಕ್ತಿತ್ವ ಪರೀಕ್ಷೆ ಎಂಬ ಮೂರು ಹಂತಗಳಲ್ಲಿ ಈ ನೇಮಕಾತಿ ನಡೆಯಲಿದೆ. ಮೇ 5ರಂದು ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ kpsc.kar.nic.in ಆಯೋಗದ ವೆಬ್‍ಸೈಟ್‍ಗೆ ಭೇಟಿ ನೀಡಬಹುದು ಎಂದು ಕೆಪಿಎಸ್ಸಿ ಪ್ರಕಟಣೆ ಕೋರಿದೆ.
ಅರ್ಜಿಗಳನ್ನು ಆನ್‌ಲೈನ್ (Online) ಮೂಲಕವೇ ಭರ್ತಿ ಮಾಡಿ ಭಾವಚಿತ್ರ /ಸಹಿ /ವಯೋಮಿತಿ/ ವಿದ್ಯಾರ್ಹತೆ ಹಾಗೂ ಕೋರಿದ ಮೀಸಲಾತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ನಂತರ ಶುಲ್ಕವನ್ನು ನೆಟ್ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಯುಪಿಐ ಮೂಲಕ ಸಂದಾಯ ಮಾಡಬಹುದಾಗಿರುತ್ತದೆ. ಶುಲ್ಕವನ್ನು ಪಾವತಿಸದ ಹಾಗೂ ದಾಖಲೆಗಳನ್ನು/ ಭಾವಚಿತ್ರ/ ಸಹಿಯನ್ನು ಅಪ್ಲೋಡ್ ಮಾಡದೇ ಇರುವ/ಅಸ್ಪಷ್ಟ ದಾಖಲೆಗಳನ್ನು ಅಪ್ಲೋಡ್ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಕೆಪಿಎಸ್‌ಸಿ ಜಾಹಿರಾತು ತಿಳಿಸಿದೆ.
Also Read: ಶೀಘ್ರವೇ ಗ್ರಾಮ ಲೆಕ್ಕಿಗರ ನೇಮಕಾತಿ ನಡೆಯಲಿದೆ ಎಂದ ಕಂದಾಯ ಸಚಿವ, ಅರ್ಹತೆ ಮತ್ತು ಹುದ್ದೆಗಳ ವಿವರ ಇಲ್ಲಿದೆ