
ಮೇ 30 ರಂದು, ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಪುರುಷ ಕೆಡೆಟ್‌ಗಳ ಜೊತೆಗೆ ಮೊದಲ ಬಾರಿಗೆ 17 ಮಹಿಳಾ ಕೆಡೆಟ್‌ಗಳು ಪದವಿ ಪಡೆಯಲಿದ್ದಾರೆ. ಈ ಮೂಲಕ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಈ ಕಾರ್ಯಕ್ರಮವು ಭಾರತದ ಸಶಸ್ತ್ರ ಪಡೆಗಳಲ್ಲಿ ಲಿಂಗ ಏಕೀಕರಣದ ಕಡೆಗೆ ಮಹತ್ವದ ಹೆಜ್ಜೆಯನ್ನು ಸೂಚಿಸಲಿದೆ.
ಕೆಡೆಟ್ ಇಶಿತಾ ಶರ್ಮಾ ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಪರೇಡ್ ಮೈದಾನಕ್ಕೆ ಕೇವಲ ಪದವೀಧರರಾಗಿ ಮಾತ್ರವಲ್ಲದೆ ಇತಿಹಾಸದಲ್ಲಿ ದಾಖಲಾಗುವ ಕ್ಷಣದ ಭಾಗವಾಗಿ ಹೆಜ್ಜೆ ಹಾಕಲಿದ್ದಾರೆ. ದಶಕಗಳ ಕಾಲ, ಎನ್‌ಡಿಎ ಸಂಪೂರ್ಣವಾಗಿ ಪುರುಷರ ಭದ್ರಕೋಟೆಯಾಗಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಅದು ಬದಲಾಗಿದ್ದು, ಈಗ, ಮೂರು ವರ್ಷಗಳ ನಂತರ, ಆ ಬದಲಾವಣೆಯ ಫಲಿತಾಂಶ ಕಾಣಸಿಗಲಿದೆ. ಈ ಎಲ್ಲಾ ಮಹಿಳಾ ಕೆಡೆಟ್‌ಗಳು ಭಾರತೀಯ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗೆ ಸೇರಲಿದ್ದಾರೆ.
“ನಾನು ಮಿಲಿಟರಿ ಹಿನ್ನೆಲೆಯಿಂದ ಬಂದವಳಲ್ಲ. ನನ್ನ ಪೋಷಕರು ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುತ್ತಾರೆ ಮತ್ತು ನನ್ನ ಸಹೋದರ ಐಟಿ ವೃತ್ತಿಪರ. ಎನ್‌ಡಿಎ ಮಹಿಳೆಯರಿಗೆ ಪ್ರವೇಶವನ್ನು ಘೋಷಿಸಿದಾಗ ನಾನು ಅರ್ಥಶಾಸ್ತ್ರದಲ್ಲಿ ಪದವಿ ಪಡೆಯುತ್ತಿದ್ದೆ. ಅರ್ಜಿ ಸಲ್ಲಿಸುವ ಮೊದಲು ನಾನು ಯೋಚಿಸಲಿಲ್ಲ, ನೇರವಾಗಿ ಅರ್ಜಿ ಸಲ್ಲಿಸಿದೆ” ಎಂದು ಡಿವಿಷನ್ ಕೆಡೆಟ್ ಕ್ಯಾಪ್ಟನ್ (ಡಿಸಿಸಿ) ಗೌರವ ಬಿರುದನ್ನು ಹೊಂದಿರುವ ಇಶಿತಾ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಎನ್‌ಡಿಎ ಮತ್ತು ನೌಕಾ ಅಕಾಡೆಮಿ ಪ್ರವೇಶ ಪರೀಕ್ಷೆಗಳಲ್ಲಿ ಅರ್ಹ ಮಹಿಳೆಯರು ಹಾಜರಾಗಲು ಅವಕಾಶ ನೀಡುವಂತೆ ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಆಗಸ್ಟ್ 2021 ರಲ್ಲಿ ಐತಿಹಾಸಿಕ ತೀರ್ಪು ನೀಡಿತು. ಈ ಮೂಲಕ ಮಹಿಳೆಯರು NDA ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ UPSC ಗೆ ಆದೇಶಿಸಿತು.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:09 pm, Sun, 25 May 25