ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಶುಕ್ರವಾರ (ಡಿಸೆಂಬರ್ 13) ಬಂಧನ ಮಾಡಲಾಯಿತು. ಈ ಬಂಧನದಿಂದ ಇಡೀ ಟಾಲಿವುಡ್ನಲ್ಲಿ ಸಂಚಲನ ಸೃಷ್ಟಿ ಆಗಿದೆ. ಕೆಳ ಹಂತದ ಕೋರ್ಟ್ ಅವರಿಗೆ 14 ದಿನ ನ್ಯಾಯಂಗ ಬಂಧನ ವಿಧಿಸಿದರೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಆದರೆ, ಕೋರ್ಟ್ ಪ್ರತಿ ಜೈಲು ಸೇರದ ಹಿನ್ನೆಲೆಯಲ್ಲಿ ಅವರ ಬಿಡುಗಡೆ ತಡವಾಗಿದೆ. ಬನ್ನಿ ರಾತ್ರಿಯಿಡೀ ಜೈಲಿನಲ್ಲೇ ಕಳೆದಿದ್ದಾರೆ. ಮುಂಜಾನೆ ಅವರು ಬಿಡುಗಡೆ ಹೊಂದಿದ್ದಾರೆ.
ಸಂಧ್ಯಾ ಥಿಯೇಟರ್ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಆರೋಪಿ ಸ್ಥಾನದಲ್ಲಿ ಇರಿಸಿದ್ದಾರೆ. ‘ಪುಷ್ಪ 2’ ಚಿತ್ರದ ಪ್ರೀಮೀಯರ್ ಪ್ರದರ್ಶನದ ವೇಳೆ ಅಲ್ಲು ಅರ್ಜುನ್ ಸಂಧ್ಯಾ ಥಿಯೇಟರ್ಗೆ ಹೋಗಿದ್ದರು. ಅಲ್ಲು ಅರ್ಜುನ್ ಆಗಮನದಿಂದ ಅಭಿಮಾನಿಗಳು ಒಮ್ಮೆಲೇ ಮುಗಿಬಿದ್ದರು. ಈ ಕಾರಣಕ್ಕೆ ಕಾಲ್ತುಳಿತ ಉಂಟಾಯಿತು. ಈ ಕಾಲ್ತುಳಿತದಲ್ಲಿ ರೇವತಿ ಹೆಸರಿನ ಮಹಿಳೆ ಸಾವನ್ನಪ್ಪಿದ್ದರು. ಅವರ ಮಗನಿಗೆ ಗಾಯಗಳಾಗಿವೆ. ಈ ಘಟನೆಗೆ ಸಂಬಂಧಿಸಿ ರೇವತಿ ಪತಿ ದೂರು ಮಾಡಿದ್ದರು. ಈ ಬೆನ್ನಲ್ಲೇ ಎಫ್ಐಆರ್ ದಾಖಲಿಸಿರುವ ಪೊಲೀಸರು, ಅಲ್ಲು ಅರ್ಜುನ್ ಅವರನ್ನು ಎ11 ಆರೋಪಿ ಆಗಿ ಮಾಡಿದ್ದಾರೆ. ಜೊತೆಗೆ ಅವರನ್ನು ಬಂಧಿಸಲಾಗಿದೆ.
ಅಲ್ಲು ಅರ್ಜುನ್ ಟಾಲಿವುಡ್ನ ಬೇಡಿಕೆಯ ನಟ. ಅವರು ಪ್ರತಿಷ್ಠೆ ಕಾಯ್ದುಕೊಂಡು ಬಂದವರು. ಈವರೆಗೆ ಅವರು ಜೈಲಿಗೆ ಹೋದವರಲ್ಲ. ಆದರೆ, ಅವರು ಈಗ ಈ ಪ್ರಕರಣದಲ್ಲಿ ಜೈಲು ಹಾಗೂ ಕೋರ್ಟ್ಗೆ ಅಲೆದಾಡುವ ಪರಿಸ್ಥಿತಿ ಬಂದೊದಗಿದೆ.
ಇದನ್ನೂ ಓದಿ: ಅತ್ತ ದರ್ಶನ್, ಅಲ್ಲು ಅರ್ಜುನ್ಗೆ ಬೇಲ್, ಇತ್ತ ಡ್ರೋನ್ ಪ್ರತಾಪ್ ಪೊಲೀಸ್ ಕಸ್ಟಡಿಗೆ
ಈ ಘಟನೆ ಅವರ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ. ಈ ಘಟನೆಗೆ ಸಂಬಂಧಿಸಿ ಅವರ ಫ್ಯಾನ್ಸ್ ನಿರಂತರವಾಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ‘ಈ ಘಟನೆಯಲ್ಲಿ ಅಲ್ಲು ಅರ್ಜುನ್ ಎ11 ಆರೋಪಿ. ಉಳಿದರ ವಿರುದ್ಧ ಕ್ರಮ ಕೈಗೊಳ್ಳುವುದರ ಬದಲು ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದೇಕೆ’ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:56 am, Sat, 14 December 24