
ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ (Akshay Kumar) ಅವರು ಮುಂಬೈನ ಬೊರಿವಲಿ ಪ್ರದೇಶದಲ್ಲಿರುವ ತಮ್ಮ ಎರಡು ಐಷಾರಾಮಿ ಫ್ಲಾಟ್‌ಗಳನ್ನು ಬರೋಬ್ಬರಿ 7.1 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಮುಂಬೈನ ಒಬೆರಾಯ್ ಸ್ಕೈ ಸಿಟಿ (Oberoi Sky City) ಅಪಾರ್ಟ್‌ಮೆಂಟ್‌ನಲ್ಲಿರುವ ಈ ಮನೆಗಳ ಮಾರಾಟದ ನೋಂದಣಿ ಪ್ರಕ್ರಿಯೆಯು ಜೂನ್ 2ರಂದು ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂಬುದು ಆಸ್ತಿ ನೋಂದಣಿ ದಾಖಲೆಗಳಿಂದ (CRE Matrix) ತಿಳಿದುಬಂದಿದೆ. ಸುವರ್ಣ ರೂಪೇಶ್‌ಕುಮಾರ್ ಸಕ್ಪಾಲ್ ಎಂಬುವವರು ಅಕ್ಷಯ್ ಕುಮಾರ್ ಅವರಿಂದ ಈ ಎರಡೂ ಆಸ್ತಿಗಳನ್ನು ಖರೀದಿಸಿದ್ದಾರೆ.
ಅಕ್ಷಯ್ ಕುಮಾರ್ ಅವರು ಈ ಎರಡು ಫ್ಲಾಟ್‌ಗಳನ್ನು 2017ರ ನವೆಂಬರ್ ತಿಂಗಳಲ್ಲಿ ಇನ್‌ಕ್ಲೈನ್ ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್‌ನಿಂದ ಖರೀದಿಸಿದ್ದರು. ಆಗ ಮೊದಲ ಫ್ಲಾಟ್‌ಗೆ 3 ಕೋಟಿ ರೂ. ಹಾಗೂ ಎರಡನೇ ಫ್ಲಾಟ್‌ಗೆ 67.55 ಲಕ್ಷ ರೂ. ಹೂಡಿಕೆ ಮಾಡಿದ್ದರು. ಕಳೆದ ಎಂಟು ವರ್ಷಗಳಲ್ಲಿ ಈ ಆಸ್ತಿಗಳ ಮೌಲ್ಯವು ಶೇಕಡಾ 92ಕ್ಕಿಂತಲೂ ಹೆಚ್ಚು ಹೆಚ್ಚಾಗಿದ್ದು, ನಟನಿಗೆ ಭರ್ಜರಿ ರಿಟರ್ನ್ಸ್ ತಂದುಕೊಟ್ಟಿದೆ.
ಮೊದಲ ಫ್ಲಾಟ್: ಅಪಾರ್ಟ್‌ಮೆಂಟ್‌ನ ಮೇಲಿನ ಮಹಡಿಯಲ್ಲಿರುವ 1,101 ಚದರ ಅಡಿ ಕಾರ್ಪೆಟ್ ಏರಿಯಾ ಹೊಂದಿರುವ ದೊಡ್ಡ ಫ್ಲಾಟ್ ಇದಾಗಿದೆ. ಇದನ್ನು 5.75 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದ್ದು, ಇದಕ್ಕೆ 28.75 ಲಕ್ಷ ರೂಪಾಯಿ ಮುದ್ರಾಂಕ ಶುಲ್ಕ (Stamp Duty) ಪಾವತಿಸಲಾಗಿದೆ. ಈ ಫ್ಲಾಟ್ ಜೊತೆಗೆ ಎರಡು ಕಾರ್ ಪಾರ್ಕಿಂಗ್ ಸ್ಥಳಗಳೂ ಸಿಗಲಿವೆ.
ಎರಡನೇ ಫ್ಲಾಟ್: ಅದೇ ಮಹಡಿಯಲ್ಲಿರುವ 252 ಚದರ ಅಡಿಯ ಮತ್ತೊಂದು ಸ್ಟುಡಿಯೋ ಅಪಾರ್ಟ್‌ಮೆಂಟ್ ಅನ್ನು 1.35 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಇದಕ್ಕೆ 6.75 ಲಕ್ಷ ರೂಪಾಯಿ ಮುದ್ರಾಂಕ ಶುಲ್ಕ ಪಾವತಿಸಲಾಗಿದ್ದು, ಒಂದು ಕಾರ್ ಪಾರ್ಕಿಂಗ್ ವ್ಯವಸ್ಥೆ ಇದರಲ್ಲಿದೆ. ಇತ್ತೀಚಿನ ದಿನಗಳಲ್ಲಿ ಅಕ್ಷಯ್ ಕುಮಾರ್ ಅವರು ರಿಯಲ್ ಎಸ್ಟೇಟ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ ಪುತ್ರ ಆರವ್ ಭಾಟಿಯಾ ತಿಂಗಳ ಸಂಬಳ ಕೇವಲ 4,500 ರೂಪಾಯಿ
ಅಕ್ಷಯ್ ಕುಮಾರ್ ಇತ್ತೀಚಿನ ದಿನಗಳಲ್ಲಿ ಮುಂಬೈನಲ್ಲಿರುವ ತಮ್ಮ ರಿಯಲ್ ಎಸ್ಟೇಟ್ ಹೂಡಿಕೆಗಳನ್ನು ಸಕ್ರಿಯವಾಗಿ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ, ಅಂದರೆ ಕಳೆದ 2025ರ ಜನವರಿಯಲ್ಲೂ ಸಹ ಅಕ್ಷಯ್ ಕುಮಾರ್ ಅವರು ಬೊರಿವಲಿ ಪ್ರದೇಶದಲ್ಲೇ ಇದ್ದ ತಮ್ಮ 1,073 ಚದರ ಅಡಿಯ ಮತ್ತೊಂದು ಫ್ಲಾಟ್ ಅನ್ನು 4.25 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು ಎಂಬುದು ಗಮನಾರ್ಹ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.