ಅಕ್ಷಯ್ ಕುಮಾರ್ ಪುತ್ರ ಆರವ್ ಭಾಟಿಯಾ ತಿಂಗಳ ಸಂಬಳ ಕೇವಲ 4,500 ರೂಪಾಯಿ
ಸ್ಟಾರ್ ಕಲಾವಿದರ ಮಕ್ಕಳು ಚಿತ್ರರಂಗದಲ್ಲಿ ಮಿಂಚಲು ಪ್ರಯತ್ನಿಸುತ್ತಾರೆ. ಅದೇ ಅವರ ಮೊದಲ ಆದ್ಯತೆ ಆಗಿರುತ್ತದೆ. ಆದರೆ ಅಕ್ಷಯ್ ಕುಮಾರ್ ಅವರ ಮಗ ಆರವ್ ಭಾಟಿಯಾ ಆ ರೀತಿ ಇಲ್ಲ. ಸಿನಿಮಾ ಬಿಟ್ಟು ಅವರು ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆ ಬಗ್ಗೆ ಅಕ್ಷಯ್ ಕುಮಾರ್ ಮಾಹಿತಿ ನೀಡಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ದಶಕಗಳಿಂದ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ವರ್ಷಕ್ಕೆ ನಾಲ್ಕೈದು ಸಿನಿಮಾ ಮಾಡುವ ಅಕ್ಷಯ್ ಕುಮಾರ್ ಅವರ ಆಸ್ತಿ ಕೋಟ್ಯಂತರ ರೂಪಾಯಿ. ಆದರೆ, ಇವರ ಪುತ್ರ ಆರವ್ ಭಾಟಿಯಾ (Aarav Bhatia) ಮಾತ್ರ ತಂದೆಯ ಹಾದಿ ತುಳಿಯದೇ, ಸಂಪೂರ್ಣ ಭಿನ್ನವಾದ ಹಾದಿ ಆರಿಸಿಕೊಂಡಿದ್ದಾರೆ. ಅಚ್ಚರಿಯ ವಿಷಯವೆಂದರೆ, 23 ವರ್ಷದ ಆರವ್ ಈಗ ಕೇವಲ 4,500 ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಸ್ವತಃ ಅಕ್ಷಯ್ ಕುಮಾರ್ ಅವರು ಈ ವಿಷಯ ತಿಳಿಸಿದ್ದಾರೆ. ತಮ್ಮ ಮಗನಿಗೆ ಸಿನಿಮಾ ರಂಗಕ್ಕೆ ಬರುವ ಪ್ಲ್ಯಾನ್ ಇಲ್ಲ ಎಂದು ಕೂಡ ಅವರು ಹೇಳಿದ್ದಾರೆ.
ಸಾಮಾನ್ಯವಾಗಿ ಸ್ಟಾರ್ ನಟರ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಸಿನಿಮಾಗೆ ಬರುವುದು ವಾಡಿಕೆ. ಆದರೆ ಆರವ್ ಭಾಟಿಯಾಗೆ ನಟನೆಯಲ್ಲಿ ಆಸಕ್ತಿ ಇಲ್ಲವಂತೆ. ಇತ್ತೀಚೆಗೆ ಶುಭಂಕರ್ ಮಿಶ್ರಾ ಅವರೊಂದಿಗೆ ಮಾತನಾಡಿದ ಅಕ್ಷಯ್ ಕುಮಾರ್ ಅವರು ತಮ್ಮ ಮಗನ ಬಗ್ಗೆ ಹೆಮ್ಮೆಯ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ವಿಷಯ ಕೇಳಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ.
‘ಆರವ್‌ಗೆ ಸಿನಿಮಾಗೆ ಸೇರುವ ಯಾವುದೇ ಉದ್ದೇಶವಿಲ್ಲ. ಆತನಿಗೆ ಫ್ಯಾಷನ್ ರಂಗದಲ್ಲಿ ಸಾಧನೆ ಮಾಡುವ ಕನಸಿದೆ. ಅದಕ್ಕಾಗಿ ಆತ ಹಗಲಿರುಳು ಶ್ರಮಿಸುತ್ತಿದ್ದಾನೆ. ಈಗಲೂ ಆತ ಕೇವಲ 4,500 ರೂಪಾಯಿ ಸಂಬಳದ ಕೆಲಸ ಮಾಡುತ್ತಿದ್ದಾನೆ. ಇದು ಒಳ್ಳೆಯದೇ ತಾನೇ?’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಆರವ್ ಅವರು ಫ್ಯಾಷನ್ ಬಗ್ಗೆ ತಳಮಟ್ಟದಿಂದ ಕಲಿಯಲು ಇಷ್ಟಪಡುತ್ತಿದ್ದಾರೆ. ‘ಆತ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಾಂಪ್ರದಾಯಿಕ ಪ್ರಿಂಟ್‌ಗಳು ಮತ್ತು ವಿನ್ಯಾಸಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾನೆ. ನಾನು ಆತನಿಗೆ ಹೆಚ್ಚು ಉಪದೇಶ ಮಾಡುವುದಿಲ್ಲ, ಆದರೆ ಯಾರಿಗೂ ತೊಂದರೆ ಕೊಡಬೇಡ ಎಂದು ಮಾತ್ರ ಹೇಳಿದ್ದೇನೆ’ ಎಂದು ಅಕ್ಷಯ್ ಕುಮಾರ್ ತಮ್ಮ ಮಗನ ಶಿಸ್ತಿನ ಬಗ್ಗೆ ಹೇಳಿದ್ದಾರೆ.
ಇದನ್ನೂ ಓದಿ: ವಿದ್ಯಾ ಬಾಲನ್ ಕಂಡರೆ ಬೆಚ್ಚಿ ಬೀಳುತ್ತಿದ್ದ ಅಕ್ಷಯ್ ಕುಮಾರ್ ಮಗ; ಕಾರಣ ಏನು?
ಇದೇ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಒಂದು ತಮಾಷೆಯ ಕಥೆಯನ್ನು ನೆನಪಿಸಿಕೊಂಡಿದ್ದಾರೆ. ಆರವ್ ಚಿಕ್ಕವನಿದ್ದಾಗ ಸುಮಾರು 6 ವರ್ಷಗಳ ಕಾಲ ನಟಿ ವಿದ್ಯಾ ಬಾಲನ್ ಅವರನ್ನು ನೋಡಿ ಹೆದರುತ್ತಿದ್ದರಂತೆ. ‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ವಿದ್ಯಾ ಬಾಲನ್ ಅವರು ಮಂಜುಲಿಕಾ ಎಂಬ ಪಾತ್ರ ಮಾಡಿದ್ದನ್ನು ನೋಡಿ, ಅವರೇ ಅಸಲಿ ದೆವ್ವ ಎಂದು ಆರವ್ ನಂಬಿದ್ದರಂತೆ. ಪ್ರತಿ ಬಾರಿ ವಿದ್ಯಾ ಬಾಲನ್ ಭೇಟಿ ಆದಾಗ ಆರವ್ ಬೆಚ್ಚಿ ಬೀಳುತ್ತಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




