
ಬಾಲಿವುಡ್‌ನ ಜನಪ್ರಿಯ ಜೋಡಿ ಆದಿತ್ಯ ಧರ್ ಮತ್ತು ಯಾಮಿ ಗೌತಮ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ನಡೆದ ಪ್ರಶಸ್ತಿ ಸಮಾರಂಭ ಒಂದರಲ್ಲಿ ಇವರಿಬ್ಬರು ಗೌರವಕ್ಕೆ ಪಾತ್ರರಾದರು. ಈ ವೇಳೆ ವೇದಿಕೆಯ ಮೇಲೆ ಪರಸ್ಪರರ ವೃತ್ತಿಜೀವನ ಮತ್ತು ಬದುಕಿನ ಪಯಣದ ಕುರಿತು ಮನಬಿಚ್ಚಿ ಮಾತನಾಡಿದರು. ಯಾಮಿ ನನ್ನ ಬದುಕಿನ ಅದೃಷ್ಟದ ದೇವತೆ ಎಂದು ಆದಿತ್ಯ ಹೊಗಳಿದರೆ, ಪತಿಯ ಪ್ರಾಮಾಣಿಕತೆ ಮತ್ತು ಶ್ರಮವನ್ನು ಯಾಮಿ ಕೊಂಡಾಡಿದರು.
ತಮ್ಮ ಸಿನಿಮಾ ಪಯಣದ ಬಗ್ಗೆ ಮಾತನಾಡಿದ ನಿರ್ದೇಶಕ ಆದಿತ್ಯ ಧರ್, ನಾನು ರಾತ್ರೋರಾತ್ರಿ ಸ್ಟಾರ್ ಆಗಲು ಬರೋಬ್ಬರಿ 20 ವರ್ಷಗಳು ಬೇಕಾಯಿತು ಎಂದರು. 2006ರಲ್ಲಿ ಕನಸುಗಳನ್ನು ಹೊತ್ತು ಮುಂಬೈಗೆ ಬಂದ ಇವರು, ಆರಂಭದಲ್ಲಿ ಸಹಾಯಕ ನಿರ್ದೇಶಕ ಹಾಗೂ ಗೀತರಚನೆಕಾರರಾಗಿ ದುಡಿದಿದ್ದರು. 2019ರ ‘ಉರಿ’ ಸಿನಿಮಾ ಇವರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟರೆ, ‘ಧುರಂಧರ್’ ಚಿತ್ರವು ಇವರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿತು. ಯಾಮಿ ನನ್ನ ಜೀವನಕ್ಕೆ ಕಾಲಿಟ್ಟ ಕ್ಷಣದಿಂದಲೇ ನನ್ನ ಅದೃಷ್ಟ ಬದಲಾಯಿತು ಎಂದು ಅವರು ಭಾವುಕರಾದರು.
ಯಾಮಿ ಗೌತಮ್ ಅವರ ನಟನಾ ಸಾಮರ್ಥ್ಯದ ಬಗ್ಗೆ ಆದಿತ್ಯ ಮೆಚ್ಚುಗೆಯ ಮಾತುಗಳನ್ನಾಡಿದರು. ‘ಯಾಮಿ ಬಳಿ ಚಿನ್ನದಂತಹ ಹೃದಯವಿದೆ. ಆಕೆಯ ನಿಜವಾದ ಪ್ರತಿಭೆಯಲ್ಲಿ ಶೇ. 50 ರಷ್ಟನ್ನು ಕೂಡ ಪ್ರೇಕ್ಷಕರು ಇನ್ನೂ ನೋಡಿಲ್ಲ. ‘ಆರ್ಟಿಕಲ್ 370’ ಮತ್ತು ‘ಹಕ್’ ಸಿನಿಮಾಗಳಲ್ಲಿ ಯಾಮಿ ಅದ್ಭುತವಾಗಿ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಆಕೆಯಿಂದ ಇನ್ನಷ್ಟು ಅತ್ಯುತ್ತಮ ಸಿನಿಮಾಗಳು ಬರಲಿವೆ’ ಎಂದು ಆದಿತ್ಯ ವಿಶ್ವಾಸ ವ್ಯಕ್ತಪಡಿಸಿದರು.
ಪತಿ ಆದಿತ್ಯ ಅವರ ವ್ಯಕ್ತಿತ್ವವನ್ನು ಯಾಮಿ ಗೌತಮ್ ಮುಕ್ತಕಂಠದಿಂದ ಶ್ಲಾಘಿಸಿದರು. ‘ಚಿತ್ರರಂಗದ ಕಹಿ ಅನುಭವಗಳು ಮನುಷ್ಯನನ್ನು ಬದಲಾಯಿಸುತ್ತವೆ. ಆದರೆ ಎಷ್ಟೇ ಕಷ್ಟಗಳು ಬಂದರೂ ಆದಿತ್ಯ ತಮ್ಮ ಒಳ್ಳೆಯತನವನ್ನು ಕಳೆದುಕೊಂಡಿಲ್ಲ. ಸಿನಿಮಾ ಸೆಟ್‌ನಲ್ಲಿ ನಿದ್ದೆಯಿಲ್ಲದೆ ಸತತ 70 ಗಂಟೆಗಳ ಕಾಲ ಕೆಲಸ ಮಾಡುವ ಅವರ ಬದ್ಧತೆ ನಿಜಕ್ಕೂ ಅದ್ಭುತ’ ಎಂದು ಯಾಮಿ ನೆನಪಿಸಿಕೊಂಡರು.
ಇದನ್ನೂ ಓದಿ: ‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ ಹೊಸ ಸಿನಿಮಾದಲ್ಲಿ ಯಶ್, ರಣವೀರ್ ಸಿಂಗ್ ನಟನೆ?
ವೈಯಕ್ತಿಕ ಬದುಕು ಮತ್ತು ವೃತ್ತಿಯನ್ನು ಹೇಗೆ ನಿಭಾಯಿಸುತ್ತೀರಿ ಎಂಬ ಪ್ರಶ್ನೆಗೆ ಆದಿತ್ಯ ಸ್ಪಷ್ಟ ಉತ್ತರ ನೀಡಿದರು. ‘ಮನೆಯಲ್ಲಿ ನಾವು ಗಂಡ-ಹೆಂಡತಿಯಾಗಿದ್ದರೂ, ಕೆಲಸದ ವಿಚಾರದಲ್ಲಿ ವೃತ್ತಿಪರತೆಯನ್ನು ಕಾಯ್ದುಕೊಳ್ಳುತ್ತೇವೆ. ಯಾವುದೇ ಹೊಸ ಸಿನಿಮಾದ ಆಫರ್ ನೀಡುವಾಗಲೂ ಮನೆಯಲ್ಲಿ ಚರ್ಚಿಸದೆ, ಅಧಿಕೃತ ಮಾರ್ಗದ ಮೂಲಕವೇ ಸಂಪರ್ಕಿಸುತ್ತೇನೆ’ ಎಂದು ಅವರು ತಿಳಿಸಿದರು. 2021ರಲ್ಲಿ ವಿವಾಹವಾದ ಈ ದಂಪತಿಗೆ 2024ರಲ್ಲಿ ‘ವೇದವಿದ್’ ಎಂಬ ಮಗ ಜನಿಸಿದ್ದಾನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.