‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ ಹೊಸ ಸಿನಿಮಾದಲ್ಲಿ ಯಶ್, ರಣವೀರ್ ಸಿಂಗ್ ನಟನೆ?
ಚಂದ್ರಗುಪ್ತ ಮೌರ್ಯನ ಕುರಿತಾದ ಸಿನಿಮಾ ಆರಂಭಿಕ ಹಂತದಲ್ಲಿದ್ದು, ಚಿತ್ರಕಥೆಯ ಕೆಲಸಗಳು ನಡೆಯುತ್ತಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, 2027ರ ಮಾರ್ಚ್ ತಿಂಗಳಿನಲ್ಲಿ ಈ ಸಿನಿಮಾದ ಚಿತ್ರೀಕರಣವನ್ನು ಆರಂಭಿಸಲು ನಿರ್ದೇಶಕ ಆದಿತ್ಯ ಧರ್ ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಯಶ್ ಮತ್ತು ರಣವೀರ್ ಸಿಂಗ್ ಅವರ ಹೆಸರುಗಳು ಕೇಳಿಬರುತ್ತಿವೆ.

ಬಾಲಿವುಡ್‌ನ ಖ್ಯಾತ ನಿರ್ದೇಶಕ ಆದಿತ್ಯ ಧರ್ ಅವರು ‘ಧುರಂಧರ್’ ಫ್ರಾಂಚೈಸಿ ಮೂಲಕ ಬ್ಯಾಕ್-ಟು-ಬ್ಯಾಕ್ ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ನೀಡಿದ ಬೆನ್ನಲ್ಲೇ, ಈಗ ಭಾರತೀಯ ಚಿತ್ರರಂಗದ ಮತ್ತೊಂದು ಬೃಹತ್ ಐತಿಹಾಸಿಕ ಕಥೆಯನ್ನು ತೆರೆಯ ಮೇಲೆ ತರಲು ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿ ಬಿ-ಟೌನ್ ಅಂಗಳದಲ್ಲಿ ಭಾರಿ ಸಂಚಲನ ಮೂಡಿಸಿದೆ. ವರದಿಗಳ ಪ್ರಕಾರ, ಮೌರ್ಯ ಸಾಮ್ರಾಜ್ಯದ ಸ್ಥಾಪಕ ಚಂದ್ರಗುಪ್ತ ಮೌರ್ಯನ ಜೀವನ ಚರಿತ್ರೆಯನ್ನು ಆಧರಿಸಿದ ಬಿಗ್ ಬಜೆಟ್ ಸಿನಿಮಾವನ್ನು ಆದಿತ್ಯ ಧರ್ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಈ ಚಿತ್ರದ ಅತ್ಯಂತ ಕುತೂಹಲಕಾರಿ ಅಂಶವೆಂದರೆ, ಇದರಲ್ಲಿ ‘ರಾಕಿಂಗ್ ಸ್ಟಾರ್’ ಯಶ್ ಮತ್ತು ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಪ್ರಮುಖ ಪಾತ್ರಗಳಲ್ಲಿ ಒಟ್ಟಿಗೆ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ನಿರ್ದೇಶಕರಾಗಲಿ ಅಥವಾ ನಟರಾಗಲಿ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ಖಚಿತಪಡಿಸಿಲ್ಲ.
ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಚಿತ್ರವು ವಿಶ್ವಾದ್ಯಂತ ಸುಮಾರು 1,354 ಕೋಟಿ ರೂಪಾಯಿ ಗಳಿಸುವ ಮೂಲಕ ಐತಿಹಾಸಿಕ ದಾಖಲೆ ಬರೆದಿತ್ತು. ಇದರ ಸೀಕ್ವೆಲ್ ಕೂಡ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡಿದೆ. ಈ ಅಭೂತಪೂರ್ವ ಯಶಸ್ಸಿನ ನಂತರ ಆದಿತ್ಯ ಧರ್ ಅವರ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಅವರು ಚಂದ್ರಗುಪ್ತ ಮೌರ್ಯನ ಏಳು-ಬೀಳುಗಳು, ಮೌರ್ಯ ಸಾಮ್ರಾಜ್ಯದ ಉದಯ ಮತ್ತು ಅಖಂಡ ಭಾರತದ ಕನಸನ್ನು ನನಸು ಮಾಡಿದ ಐತಿಹಾಸಿಕ ಕಥಾಹಂದರವನ್ನು ಸಿನಿಮಾ ಮಾಡಲು ಯೋಜನೆ ರೂಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಕಥೆಯಲ್ಲಿ ಚಂದ್ರಗುಪ್ತನನ್ನು ಸಾಮ್ರಾಟನನ್ನಾಗಿ ರೂಪಿಸಿದ ಮಹಾನ್ ರಾಜನೀತಿಜ್ಞ, ತಂತ್ರಜ್ಞ ಹಾಗೂ ಗುರು ಚಾಣಕ್ಯನ ಪಾತ್ರಕ್ಕೂ ಅಷ್ಟೇ ಪ್ರಾಮುಖ್ಯತೆ ಇರಲಿದೆ.
ಸದ್ಯ ಹರಿದಾಡುತ್ತಿರುವ ವರದಿಗಳ ಪ್ರಕಾರ, ಚಕ್ರವರ್ತಿ ಚಂದ್ರಗುಪ್ತ ಮೌರ್ಯನ ಪಾತ್ರಕ್ಕಾಗಿ ಯಶ್ ಅವರನ್ನು ಪರಿಗಣಿಸಲಾಗುತ್ತಿದ್ದು, ಚಾಣಕ್ಯನ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಒಂದು ವೇಳೆ ಯಶ್ ಹಾಗೂ ರಣವೀರ್ ಸಿಂಗ್ ಅವರು ಒಟ್ಟಿಗೆ ತೆರೆ ಹಂಚಿಕೊಳ್ಳುವುದು ಖಚಿತವಾದರೆ, ಸಿನಿಮಾದ ಮೈಲೇಜ್ ಹೆಚ್ಚಲಿದೆ.
ಕಾಲಿವುಡ್‌ನ ಖ್ಯಾತ ನಟ ವಿಜಯ್ ಸೇತುಪತಿ ಮತ್ತು ಬಾಲಿವುಡ್ ನಟ ಅಕ್ಷಯ್ ಖನ್ನಾ ಕೂಡ ಈ ಚಿತ್ರದ ಪ್ರಮುಖ ಪಾತ್ರಗಳಿಗೆ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ಪೋಸ್ಟ್‌ಗಳ ಪ್ರಕಾರ, ಟಾಲಿವುಡ್ ಸ್ಟಾರ್ ಜೂನಿಯರ್ ಎನ್‌ಟಿಆರ್, ಮಲಯಾಳಂ ನಟರಾದ ಫಹಾದ್ ಫಾಸಿಲ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಕೂಡ ಈ ಬೃಹತ್ ಸಿನಿಮಾದ ಭಾಗವಾಗಲಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿವೆ. ಆದರೆ, ಈ ಯಾವ ಪಾತ್ರವರ್ಗದ ಬಗ್ಗೆಯೂ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇದನ್ನೂ ಓದಿ: ‘ಟಾಕ್ಸಿಕ್’ ವೀಕ್ಷಿಸಿ ಯಶ್ ತಾಕತ್ತು ಮೆಚ್ಚಿಕೊಂಡ ‘ಧುರಂಧರ್’ ನಿರ್ದೇಶಕ ಆದಿತ್ಯ ಧರ್
‘ವೆರೈಟಿ ಇಂಡಿಯಾ’ ಈ ಹಿಂದೆ ಪ್ರಕಟಿಸಿದ್ದ ವರದಿಯ ಪ್ರಕಾರ, ಆದಿತ್ಯ ಧರ್ ಅವರು ಚಂದ್ರಗುಪ್ತ ಮೌರ್ಯನ ಆಳ್ವಿಕೆಯ ಕುರಿತಾದ ಐತಿಹಾಸಿಕ ಸಿನಿಮಾ ಮಾಡುವ ಬಗ್ಗೆ ರಣವೀರ್ ಸಿಂಗ್ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಆದಿತ್ಯ ಧರ್ ಅವರ ಬತ್ತಳಿಕೆಯಲ್ಲಿ ‘ದಿ ಇಮ್ಮಾರ್ಟಲ್ ಅಶ್ವತ್ಥಾಮ’ ಮತ್ತು ಒಂದು ಕ್ರೀಡಾ ಆಧಾರಿತ ಸಿನಿಮಾ ಕೂಡ ಇದೆ ಎಂದು ವರದಿಯಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




