
ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅಭಿನಯದ ಹೊಸ ಸಿನಿಮಾ ‘ಸರ್ಫಿರಾ’ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಟ್ರೇಲರ್ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅಂದಹಾಗೆ, ಇದು ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ (Captain GR Gopinath) ಅವರ ಜೀವನದ ವಿವರಗಳನ್ನು ಆಧಾರವಾಗಿ ಇಟ್ಟುಕೊಂಡು ತಯಾರಾದ ಸಿನಿಮಾ. ಟ್ರೇಲರ್ ಬಿಡುಗಡೆ ಬಳಿಕ ಕ್ಯಾಪ್ಟನ್ ಗೋಪಿನಾಥ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ ಕುರಿತು ಬರೆದುಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಅಕ್ಷಯ್ ಕುಮಾರ್ ಅವರು ಕ್ಯಾಪ್ಟನ್ ಗೋಪಿನಾಥ್ಗೆ ಧನ್ಯವಾದ ತಿಳಿಸಿದ್ದಾರೆ. ‘ಸರ್ಫಿರಾ’ ಸಿನಿಮಾ (Sarfira Movie) ಜುಲೈ 12ರಂದು ಬಿಡುಗಡೆ ಆಗಲಿದೆ.
‘ಸರ್ಫಿರಾ ಸಿನಿಮಾದ ಟ್ರೇಲರ್ಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ. 1 ರೂಪಾಯಿಗೆ ವಿಮಾನದ ಟಿಕೆಟ್ ನೀಡಿ ನಾವು ಏರ್ ಡೆಕ್ಕನ್ ಲಾಂಚ್ ಮಾಡಿದಾಗ ವೆಬ್ಸೈಟ್ ಕ್ರ್ಯಾಶ್ ಆಗಿತ್ತು. ಈಗ ಟ್ರೇಲರ್ಗೆ ಸಿಕ್ಕ ಜನಸ್ಪಂದನೆ ನೋಡಿ ನನಗೆ ಅದೆಲ್ಲ ನೆನಪಾಯಿತು. ನಾನು ಹುಚ್ಚ ಎಂದು ಜನರು ಭಾವಿಸಿದ್ದರು. ಹೌದು, ನಾನು ಹುಚ್ಚನಾಗಿದ್ದೆ’ ಎಂದು ಕ್ಯಾಪ್ಟನ್ ಗೋಪಿನಾಥ್ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರದ ವೇಳೆ ಪರಸ್ಪರ ತಬ್ಬಿಕೊಂಡ ಅಕ್ಷಯ್, ಶಾರುಖ್
ನಟ ಅಕ್ಷಯ್ ಕುಮಾರ್ ಅವರು ಗೋಪಿನಾಥ್ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಖಂಡಿತಾ ಹೌದು ಸರ್.. ಏನಾದರೂ ಅಸಾಧಾರಣವಾದದ್ದು ಮಾಡಬೇಕಾದರೆ ಸ್ವಲ್ಪ ಹುಚ್ಚತನ ಅತ್ಯವಶ್ಯಕ. ಇಂಥ ಸ್ಫೂರ್ತಿದಾಯಕ ಕಥೆಯನ್ನು ನಮಗೆ ನೀಡಿದ್ದಕ್ಕಾಗಿ ಧನ್ಯವಾದಗಳು’ ಎಂದು ಅಕ್ಷಯ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ. ಈ ಸಿನಿಮಾಗೆ ಸುಧಾ ಕೊಂಗರಾ ನಿರ್ದೇಶನ ಮಾಡಿದ್ದಾರೆ.
ಕಡಿಮೆ ದರದಲ್ಲಿ ಬಡವರೂ ವಿಮಾನದಲ್ಲಿ ಪ್ರಯಾಣ ಮಾಡುವಂತೆ ಆಗಬೇಕು ಎಂಬ ಕನಸು ಇಟ್ಟುಕೊಂಡು, ಅದನ್ನು ಸಾಧ್ಯವಾಗಿಸಿದ ಕನ್ನಡಿಗ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರ ಜೀವನ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಆ ವಿವರಗಳನ್ನು ಇಟ್ಟುಕೊಂಡು ತಮಿಳಿನಲ್ಲಿ ‘ಸೂರರೈ ಪೋಟ್ರು’ ಸಿನಿಮಾ ಮಾಡಲಾಗಿತ್ತು. ಒಟಿಟಿಯಲ್ಲಿ ತೆರೆಕಂಡ ಆ ಸಿನಿಮಾದಲ್ಲಿ ಸೂರ್ಯ ಮುಖ್ಯ ಪಾತ್ರ ಮಾಡಿದ್ದರು. ಆ ಸಿನಿಮಾ ‘ಸರ್ಫಿರಾ’ ಶೀರ್ಷಿಕೆಯಲ್ಲಿ ಈಗ ಹಿಂದಿಗೆ ರಿಮೇಕ್ ಆಗಿದೆ. ಇದರಲ್ಲಿ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರ ಪಾತ್ರಕ್ಕೆ ಅಕ್ಷಯ್ ಕುಮಾರ್ ಬಣ್ಣ ಹಚ್ಚಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.