15ನೇ ಶತಮಾನದ ಕಾಶಿ ವೈಭವ ಮರುಸೃಷ್ಟಿ; ತೆರೆಮೇಲೆ ಬರಲಿದೆ ಕಬೀರರ ಜೀವನ
ಸಂತ ಕಬೀರರ ಜೀವನ ಮತ್ತು ತತ್ವಗಳನ್ನು ಆಧರಿಸಿ ‘ಕಬೀರಾ’ ಎಂಬ ಬೃಹತ್ ಮ್ಯೂಸಿಕಲ್ ಸಿನಿಮಾ ಘೋಷಣೆಯಾಗಿದೆ. ಮಹಾವೀರ್ ಜೈನ್ ನಿರ್ಮಾಣದ ಈ ಚಿತ್ರವನ್ನು ಅಭಿಷೇಕ್ ಶರ್ಮಾ ನಿರ್ದೇಶಿಸುತ್ತಿದ್ದು, ತನಿಷ್ಕ್ ಬಾಗ್ಚಿ ಸಂಗೀತ ನೀಡಲಿದ್ದಾರೆ. 15ನೇ ಶತಮಾನದ ಕಾಶಿಯ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರ 2027ರಲ್ಲಿ ಸೆಟ್ಟೇರಲಿದೆ.

ಮುಖ್ಯಾಂಶಗಳು
- 15ನೇ ಶತಮಾನದ ಕಾಶಿಯ ವೈಭವ ಮರುಸೃಷ್ಟಿ
- ನಿರ್ದೇಶಕ ಅಭಿಷೇಕ್ ಶರ್ಮಾ ಸಾಹಸ
- ಜಾನಪದ ಸಂಗೀತದ ಸ್ಪರ್ಶ ನೀಡಲಿದ್ದಾರೆ ತನಿಷ್ಕ್ ಬಾಗ್ಚಿ
ಭಾರತದ ಶ್ರೇಷ್ಠ ಸಂತ, ಕವಿ ಹಾಗೂ ಸಮಾಜ ಸುಧಾರಕ ಕಬೀರರ ಜೀವನ ಆಧರಿಸಿ ಬೃಹತ್ ಮ್ಯೂಸಿಕಲ್ ಡ್ರಾಮಾ ಸಿನಿಮಾ ಸಿದ್ಧವಾಗುತ್ತಿದೆ. ಮಹಾವೀರ್ ಜೈನ್ ಫಿಲ್ಮ್ಸ್ ಈ ಮಹತ್ವಾಕಾಂಕ್ಷೆಯ ಚಿತ್ರವನ್ನು ಘೋಷಿಸಿದ್ದು, ಇದಕ್ಕೆ ‘ಕಬೀರಾ‘ ಎಂದು ಹೆಸರಿಡಲಾಗಿದೆ. 15ನೇ ಶತಮಾನದ ಕಾಶಿಯ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯು ಕಬೀರರ ತತ್ವಗಳು ಮತ್ತು ಮಾನವೀಯ ಮೌಲ್ಯಗಳನ್ನು ತೆರೆಯ ಮೇಲೆ ತರಲಿದೆ. ಧಾರ್ಮಿಕ ಕಂದಾಚಾರ ಮತ್ತು ಜಾತಿ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ ಇವರ ಪಯಣವನ್ನು ಈ ಚಿತ್ರ ಕಟ್ಟಿಕೊಡಲಿದೆ.
ಹಿಂದೂ ತಾಯಿಗೆ ಜನಿಸಿ ಮುಸ್ಲಿಂ ನೇಕಾರ ಕುಟುಂಬದಲ್ಲಿ ಬೆಳೆದ ಕಬೀರರ ಬದುಕು ಅತ್ಯಂತ ವಿಶಿಷ್ಟವಾದುದು. ಅಂದಿನ ಕಾಲದ ಸಂಪ್ರದಾಯಗಳನ್ನು ಮೀರಿ ಬೆಳೆದ ಅವರ ಜೀವನ ಮತ್ತು ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಸಮುದಾಯಗಳ ನಡುವಿನ ಗೋಡೆಗಳನ್ನು ಕೆಡವಿ ಏಕತೆಯನ್ನು ಸಾರಿದ ಕಬೀರರ ತತ್ವಗಳನ್ನು ಈ ಸಿನಿಮಾ ಪರಿಣಾಮಕಾರಿಯಾಗಿ ತೋರಿಸಲಿದೆ.
ಈ ಚಿತ್ರಕ್ಕೆ ‘ಪರಮಾಣು’ ಮತ್ತು ‘ತೇರೆ ಬಿನ್ ಲಾಡೆನ್’ ಖ್ಯಾತಿಯ ಅಭಿಷೇಕ್ ಶರ್ಮಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಥೆಯಲ್ಲಿ ಕಾಶಿ ನಗರಕ್ಕೆ ಪ್ರಮುಖ ಸ್ಥಾನವಿದೆ. ಹೀಗಾಗಿ 15ನೇ ಶತಮಾನದ ಕಾಶಿಯ ಘಾಟ್‌ಗಳು ಮತ್ತು ಅಂದಿನ ಸಾಂಸ್ಕೃತಿಕ ವಾತಾವರಣವನ್ನು ಬೆಳ್ಳಿತೆರೆಯ ಮೇಲೆ ಮರುಸೃಷ್ಟಿಸಲು ನಿರ್ದೇಶಕರು ಸಜ್ಜಾಗಿದ್ದಾರೆ.
‘ಕಬೀರಾ’ ಚಿತ್ರಕ್ಕೆ ಸಂಗೀತವೇ ಪ್ರಮುಖ ಜೀವಾಳವಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ ತನಿಷ್ಕ್ ಬಾಗ್ಚಿ ಸಂಗೀತ ಸಂಯೋಜಿಸುತ್ತಿದ್ದಾರೆ. ಕಬೀರರ ಜನಪ್ರಿಯ ದೋಹಾಗಳು (ಪದ್ಯಗಳು) ಮತ್ತು ಆಧ್ಯಾತ್ಮಿಕ ಸಂದೇಶಗಳಿಗೆ ಜಾನಪದ, ಸೂಫಿ ಹಾಗೂ ಶಾಸ್ತ್ರೀಯ ಸಂಗೀತದ ಸ್ಪರ್ಶ ನೀಡಲಾಗುತ್ತಿದೆ. ಪ್ರೇಕ್ಷಕರಿಗೆ ಇದೊಂದು ಅದ್ಭುತ ಸಂಗೀತಮಯ ಅನುಭವ ನೀಡಲಿದೆ ಎಂದು ಚಿತ್ರತಂಡ ಭರವಸೆ ನೀಡಿದೆ.
ಇದನ್ನೂ ಓದಿ: ಎಂಜಿಆರ್ ಬಯೋಪಿಕ್: ಮಾಜಿ ಸಿಎಂ ಜಯಲಲಿತಾ ಪಾತ್ರದಲ್ಲಿ ತ್ರಿಷಾ? ಹೆಚ್ಚಿದೆ ಕುತೂಹಲ
ಮಹಾವೀರ್ ಜೈನ್ ಮತ್ತು ಅಮಿತ್ ಉಪಾಧ್ಯಾಯ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಮಹಾವೀರ್ ಜೈನ್ ಫಿಲ್ಮ್ಸ್, ಸರಳ್ ವಲ್ಲಭ್ ಬನ್ಸಾಲಿ ಮತ್ತು ಶ್ರದ್ಧಾ ಸಿಂಗ್ ಜಂಟಿಯಾಗಿ ಬಂಡವಾಳ ಹೂಡುತ್ತಿದ್ದಾರೆ. ಚಿತ್ರದ ಮುಖ್ಯ ತಾರಾಗಣದ ಬಗ್ಗೆ ಇನ್ನೂ ಮಾಹಿತಿ ಬಹಿರಂಗವಾಗಿಲ್ಲ. 2027ರ ಆರಂಭದಲ್ಲಿ ಈ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




