
ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಜೊತೆ ಸಮಯ ಕಳೆಯುವುದನ್ನು ಎಂದಿಗೂ ಮರೆಯುವುದಿಲ್ಲ. ಶೂಟಿಂಗ್ ಸೆಟ್‌ಗಳಿಗೂ ಮಗಳನ್ನು ಕರೆದೊಯ್ಯುವ ಪ್ರಿಯಾಂಕಾ, ಇದೀಗ ಮಗಳ ಮುದ್ದಾದ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಮಾಲ್ತಿ ಮೇರಿ ತನ್ನ ಮುದ್ದಾದ ಧ್ವನಿಯಲ್ಲಿ ಗಾಯತ್ರಿ ಮಂತ್ರ ಪಠಿಸಿರುವ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮನಗೆದ್ದಿದೆ.
ಗುರುವಾರ (ನವೆಂಬರ್ 19) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಿಯಾಂಕಾ ಚೋಪ್ರಾ ಅವರು ರಜಾದಿನಗಳ ಹಾಗೂ ಶೂಟಿಂಗ್ ಸೆಟ್‌ನ ಸುಂದರ ಕ್ಷಣಗಳ ಫೋಟೋ ಹಾಗೂ ವಿಡಿಯೋ ಹಂಚಿಕೊಂಡಿದ್ದಾರೆ. ಕೆಲವು ಫೋಟೋಗಳಲ್ಲಿ ತಾಯಿ-ಮಗಳು ಬೀಚ್‌ನಲ್ಲಿ ಸಂತಸದಿಂದ ಸಮಯ ಕಳೆಯುತ್ತಿರುವುದು ಕಂಡುಬಂದಿದೆ. ಬಿಸಿಲಿಗೆ ಮೈಯೊಡ್ಡಿ ಪ್ರಿಯಾಂಕಾ ವಿಶ್ರಾಂತಿ ಪಡೆಯುತ್ತಿದ್ದರೆ, ಪುಟ್ಟ ಮಾಲ್ತಿ ಮರಳಿನಲ್ಲಿ ಚಿತ್ರ ಬಿಡಿಸುತ್ತಾ ಆಟವಾಡಿದ್ದಾಳೆ. ಮತ್ತೊಂದು ಫೋಟೋದಲ್ಲಿ ಕುಟುಂಬ ಸಮೇತ ಸಮುದ್ರದಲ್ಲಿ ಸರ್ಫಿಂಗ್ ಮಾಡುತ್ತಿರುವ ದೃಶ್ಯವಿದೆ.
ಪ್ರಿಯಾಂಕಾ ಹಂಚಿಕೊಂಡಿರುವ ಇನ್ನೆರಡು ಫೋಟೋಗಳು ಅಭಿಮಾನಿಗಳ ವಿಶೇಷ ಗಮನ ಸೆಳೆದಿವೆ. ಅಮ್ಮನ ಸಿನಿಮಾ ಶೂಟಿಂಗ್ ಸೆಟ್‌ಗೆ ಭೇಟಿ ನೀಡಿರುವ ಮಾಲ್ತಿ, ‘ಪ್ರೊಡ್ಯೂಸರ್’ ಎಂದು ಬರೆದಿರುವ ಹೆಡ್‌ಫೋನ್ ಧರಿಸಿರುವುದು ಮತ್ತು ಕೈಯಲ್ಲಿ ಸ್ಕ್ರಿಪ್ಟ್ ಹಿಡಿದು ಓದುತ್ತಿರುವಂತೆ ಪೋಸ್ ನೀಡಿರುವುದು ಸಖತ್ ಕ್ಯೂಟ್ ಆಗಿದೆ. ಈ ಎಲ್ಲಾ ಫೋಟೋಗಳಿಗಿಂತ ಹೆಚ್ಚಾಗಿ ನೆಟ್ಟಿಗರ ಹೃದಯ ಗೆದ್ದಿರುವುದು ಮಾಲ್ತಿ ಗಾಯತ್ರಿ ಮಂತ್ರ ಹೇಳುವ ವಿಡಿಯೋ.
ಮನೆಯಲ್ಲಿರುವ ಪುಟ್ಟ ದೇವರ ಕೋಣೆಯ ಮುಂದೆ ಪ್ರಿಯಾಂಕಾ ಅವರು ತಮ್ಮ ಮಗಳನ್ನು ಮಡಿಲಲ್ಲಿ ಕೂರಿಸಿಕೊಂಡಿದ್ದು, ಮಾಲ್ತಿ ತನ್ನ ಮುದ್ದಾದ ಬ್ರಿಟಿಷ್ ಶೈಲಿಯ ಧ್ವನಿಯಲ್ಲಿ ಗಾಯತ್ರಿ ಮಂತ್ರವನ್ನು ಪಠಿಸಿದ್ದಾಳೆ. ಮಗಳ ಸುಮಧುರ ಧ್ವನಿಯನ್ನು ಕೇಳಿ ಸ್ವತಃ ಪ್ರಿಯಾಂಕಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿರುವ ಪ್ರಿಯಾಂಕಾ, ‘ಇತ್ತೀಚಿನ ದಿನಗಳು… ಕೆಲಸದ ಒತ್ತಡದ ನಡುವೆಯೂ ಒಂದು ಸುಂದರ ತಾಣದಲ್ಲಿ’ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ದೀಪಾವಳಿ ಹಬ್ಬದಲ್ಲಿ ಮಾಂಸಾಹಾರ ಸೇವನೆ: ಪ್ರಿಯಾಂಕಾ ಚೋಪ್ರಾ ವಿರುದ್ಧ ನೆಟ್ಟಿಗರ ತೀವ್ರ ಆಕ್ರೋಶ
ಪ್ರಿಯಾಂಕಾ ಚೋಪ್ರಾ ತಮ್ಮ ಮಗಳನ್ನು ಶೂಟಿಂಗ್ ಸೆಟ್‌ಗೆ ಕರೆದೊಯ್ಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ‘ಹೆಡ್ಸ್ ಆಫ್ ಸ್ಟೇಟ್’ ಚಿತ್ರೀಕರಣದ ವೇಳೆ ಹಾಗೂ ‘ವಾರಣಾಸಿ’ ಚಿತ್ರದ ಶೂಟಿಂಗ್‌ಗಾಗಿ ಭಾರತಕ್ಕೆ ಬಂದಾಗಲೂ ಮಾಲ್ತಿಯನ್ನು ಜೊತೆಯಲ್ಲೇ ಕರೆತಂದಿದ್ದರು. ‘ಹೆಡ್ಸ್ ಆಫ್ ಸ್ಟೇಟ್’ ಚಿತ್ರೀಕರಣದ ಅನುಭವವನ್ನು ಈ ಹಿಂದೆ ಸಂದರ್ಶನದಲ್ಲಿ ಹಂಚಿಕೊಂಡಿದ್ದ ಪ್ರಿಯಾಂಕಾ, ‘ಇಡೀ ಸಿನಿಮಾದ ಚಿತ್ರೀಕರಣದ ವೇಳೆ ಅವಳು ನನ್ನೊಂದಿಗಿದ್ದಳು. ಆ ದಿನಗಳನ್ನು ಅವಳು ತುಂಬಾ ಎಂಜಾಯ್ ಮಾಡಿದ್ದಳು’ ಎಂದು ನೆನಪಿಸಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.