ದೀಪಾವಳಿ ಹಬ್ಬದಲ್ಲಿ ಮಾಂಸಾಹಾರ ಸೇವನೆ: ಪ್ರಿಯಾಂಕಾ ಚೋಪ್ರಾ ವಿರುದ್ಧ ನೆಟ್ಟಿಗರ ತೀವ್ರ ಆಕ್ರೋಶ
ನಟಿ ಪ್ರಿಯಾಂಕಾ ಚೋಪ್ರಾ ಅವರು ಮದುವೆ ಬಳಿಕ ಅಮೆರಿಕದಲ್ಲೇ ಸೆಟ್ಲ್ ಆಗಿದ್ದಾರೆ. ವಿದೇಶದಲ್ಲಿ ನೆಲೆಸಿದ್ದರೂ ಕೂಡ ಅವರು ಭಾರತದ ಹಬ್ಬಗಳನ್ನು ತಪ್ಪದೇ ಆಚರಿಸುತ್ತಾರೆ. ಪ್ರತಿ ಬಾರಿ ಹಬ್ಬದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈ ವರ್ಷದ ದೀಪಾವಳಿ ಹಬ್ಬವನ್ನು ಕೂಡ ಅವರು ಸಡಗರದಿಂದ ಆಚರಿಸಿದ್ದಾರೆ. ಆದರೆ ಅವರನ್ನು ಟ್ರೋಲ್ ಮಾಡಲಾಗಿದೆ.

ಬಾಲಿವುಡ್ ಹಾಗೂ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಲಾಸ್ ಏಂಜಲೀಸ್ ಮನೆಯಲ್ಲಿ ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಪತಿ ನಿಕ್ ಜೋನಸ್ ಹಾಗೂ ಮಗಳು ಮಾಲ್ತಿ ಮೇರಿ ಜೊತೆ ಆಚರಿಸಿದ ಹಬ್ಬದ ಫೋಟೋಗಳನ್ನು ಪ್ರಿಯಾಂಕಾ ಚೋಪ್ರಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ಫೋಟೋ ನೋಡಿದ ಕೂಡಲೇ ಕೆಲವು ನೆಟ್ಟಿಗರು ನಟಿಯನ್ನು ತೀವ್ರವಾಗಿ ಟ್ರೋಲ್ ಮಾಡಿದ್ದಾರೆ.
ಹಬ್ಬದ ಅಲಂಕಾರ, ಪೂಜೆ ಹಾಗೂ ಖಾದ್ಯಗಳ ಹಲವು ಫೋಟೊಗಳನ್ನು ಪ್ರಿಯಾಂಕಾ ಅವರು ಪೋಸ್ಟ್ ಮಾಡಿದ್ದರು. ಆದರೆ ಅವುಗಳಲ್ಲಿ ಒಂದು ಫೋಟೋದಲ್ಲಿ ಪ್ರಿಯಾಂಕಾ ಸೀಗಡಿ ತಿನ್ನುತ್ತಿರುವಂತೆ ಕಾಣಿಸಿಕೊಂಡಿದ್ದಾರೆ. ದೀಪಾವಳಿಯಂತಹ ಪವಿತ್ರ ಹಬ್ಬದ ದಿನದಂದು ಮಾಂಸಾಹಾರ ಸೇವಿಸಿರುವುದನ್ನು ಕಂಡು ಸೋಷಿಯಲ್ ಮೀಡಿಯಾ ಬಳಕೆದಾರರು ಹಾಗೂ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
View this post on Instagram
ಪ್ರಿಯಾಂಕಾ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಹಲವರು, ‘ದೀಪಾವಳಿ ಹಬ್ಬದ ದಿನ ಮಾಂಸಾಹಾರವೇ? ಇದನ್ನು ನಂಬಲು ಸಾಧ್ಯವಿಲ್ಲ’, ‘ದೀಪಾವಳಿಯಲ್ಲಿ ಮಾಂಸಾಹಾರ ಸೇವಿಸುವುದು ಸರಿಯೇ?’, ‘ಹಬ್ಬಕ್ಕೆ ಹಣತೆ ಹಚ್ಚುವ ಬದಲು ಮೇಣದಬತ್ತಿ ಏಕೆ ಬಳಸಿದ್ದೀರಿ?’ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು, ‘ನನ್ನ ನೆಚ್ಚಿನ ನಟಿಗೆ ಈ ಬಾರಿ ಉಡುಪು, ಜ್ಯುವೆಲ್ಲರಿಯಿಂದ ಹಿಡಿದು ಯಾವುದೂ ಸರಿಹೊಂದಿಲ್ಲ’ ಎಂದು ಅಸಮಾಧಾನ ಹೊರಹಾಕಿದ್ದಾರೆ.
ವಿದೇಶದಲ್ಲಿ ನೆಲೆಸಿದ್ದರೂ ಪ್ರಿಯಾಂಕಾ ಚೋಪ್ರಾ ಭಾರತೀಯ ಸಂಪ್ರದಾಯ ಮತ್ತು ಹಬ್ಬಗಳನ್ನು ನಿಯಮಿತವಾಗಿ ಆಚರಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ದಸರಾ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ಹೋಮ-ಹವನ ಹಾಗೂ ಕನ್ಯಾ ಪೂಜೆ ನೆರವೇರಿಸಿದ್ದರು. ಆ ವೇಳೆ ಪತಿ ನಿಕ್ ಜೋನಸ್ ಮಗಳು ಮಾಲ್ತಿಯ ಕಾಲು ತೊಳೆಯುತ್ತಿರುವ ಮುದ್ದಾದ ಫೋಟೊಗಳು ಜಾಲತಾಣದಲ್ಲಿ ವೈರಲ್ ಆಗಿದ್ದವು.
ಇದನ್ನೂ ಓದಿ: ಸೆಲೆಬ್ರಿಟಿಗಳ ಮನೆಯಲ್ಲಿ ದೀಪಾವಳಿ ಸಡಗರ; ಫೋಟೋ ಮೂಲಕ ಹಬ್ಬದ ಶುಭಾಶಯ
ಸಿನಿಮಾಗಳ ವಿಷಯಕ್ಕೆ ಬಂದರೆ, ಪ್ರಿಯಾಂಕಾ ಚೋಪ್ರಾ ಶೀಘ್ರದಲ್ಲೇ ಭಾರತೀಯ ಚಿತ್ರರಂಗಕ್ಕೆ ಮರಳಲಿದ್ದಾರೆ. ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ನಿರ್ದೇಶನದ ‘ವಾರಾಣಸಿ’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಟೈಮ್ ಟ್ರಾವೆಲ್ ಕಥಾಹಂದರ ಹೊಂದಿರುವ ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಮಹೇಶ್ ಬಾಬು ನಾಯಕನಾಗಿ ನಟಿಸುತ್ತಿದ್ದು, 2027ರ ಏಪ್ರಿಲ್ 7ರಂದು ಸಿನಿಮಾ ತೆರೆಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




