‘ಅಸಹ್ಯಕರವಾಗಿ ನಟಿಯರ ಫೋಟೋ ತೆಗೆಯುವವರಿಗೆ ಬಾರಿಸಿ’: ಖಾರವಾಗಿ ಹೇಳಿದ ಸಲ್ಮಾನ್ ಖಾನ್

ಅನುಚಿತವಾಗಿ ತಮ್ಮ ಫೋಟೋ ತೆಗೆಯುವವರ ವಿರುದ್ಧ ಇತ್ತೀಚೆಗೆ ಅನೇಕ ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದರು. ಈಗ ಸಲ್ಮಾನ್ ಖಾನ್ ಕೂಡ ಈ ಬಗ್ಗೆ ಕಿಡಿಕಾರಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

‘ಅಸಹ್ಯಕರವಾಗಿ ನಟಿಯರ ಫೋಟೋ ತೆಗೆಯುವವರಿಗೆ ಬಾರಿಸಿ’: ಖಾರವಾಗಿ ಹೇಳಿದ ಸಲ್ಮಾನ್ ಖಾನ್
Salman Khan
Image Credit source: colorstv

Updated on: Sep 20, 2026 | 1:34 PM

ಬಿಗ್ ಬಾಸ್ ಸೀಸನ್ 20ರ ‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಸಿಕ್ಕಾಪಟ್ಟೆ ಗರಂ ಆಗಿ ಮಾತನಾಡಿದ್ದಾರೆ. ಮೊದಲು ಸೋಷಿಯಲ್ ಮೀಡಿಯಾ ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ್ದ ಅವರು ನಂತರ ಪಾಪರಾಜಿಗಳ ವರ್ತನೆಯನ್ನು ಕೂಡ ಕಟುವಾಗಿ ಖಂಡಿಸಿದ್ದಾರೆ. ಅಸಹ್ಯಕರ ರೀತಿಯಲ್ಲಿ ನಟಿಯರ ಫೋಟೋ ಮತ್ತು ವೀಡಿಯೋ ಚಿತ್ರೀಕರಿಸುವ ಪ್ಯಾಪರಾಜಿಗಳಿಗೆ ಸಲ್ಮಾನ್ ಖಾನ್ ಚಳಿ ಬಿಡಿಸಿದ್ದಾರೆ. ಇಂತಹ ಕೃತ್ಯಗಳನ್ನು ಸಹಿಸದೆ, ಅಸಹ್ಯ ಎನಿಸಿದರೆ ಸ್ಥಳದಲ್ಲೇ ತಿರುಗಿ ಕಪಾಳಮೋಕ್ಷ ಮಾಡುವಂತೆ ಅವರು ಎಲ್ಲಾ ನಟಿಯರು ಹಾಗೂ ಹೆಣ್ಣುಮಕ್ಕಳಿಗೆ ಕರೆ ನೀಡಿದ್ದಾರೆ.

ಇದೇ ಸಂಚಿಕೆಯಲ್ಲಿ ಈ ಕುರಿತು ವಿಸ್ತೃತವಾಗಿ ಮಾತನಾಡಿದ ಸಲ್ಮಾನ್ ಖಾನ್ ಅವರು ಪ್ಯಾಪರಾಜಿಗಳು ಅನುಸರಿಸುತ್ತಿರುವ ವಿಕೃತ ಶೈಲಿಯನ್ನು ತೀವ್ರವಾಗಿ ಖಂಡಿಸಿದರು. ‘ಕಾರಿನಿಂದ ಇಳಿಯುವಾಗ ಅಥವಾ ಕಾರು ಹತ್ತುವಾಗ ಅಸಹ್ಯಕರ ಕೋನದಲ್ಲಿ, ಹಿಂಭಾಗದಿಂದ ಫೋಟೋಗಳನ್ನು ಕ್ಲಿಕ್ಕಿಸುತ್ತಾರೆ. ಇದನ್ನು ಯಾವ ನಟಿಯರೂ ಇಷ್ಟಪಡುವುದಿಲ್ಲ. ಕೆಲವರು ಸಮ್ಮತಿಸಬಹುದು, ಆದರೆ ಇಷ್ಟವಿಲ್ಲದವರ ಪರಿಸ್ಥಿತಿ ಏನು?’ ಎಂದು ಸಲ್ಲು ಪ್ರಶ್ನಿಸಿದ್ದಾರೆ.

‘ಇತ್ತೀಚೆಗೆ ನಟಿ ಸಾಯಿ ಮಂಜ್ರೇಕರ್ ಇಂತಹ ಸನ್ನಿವೇಶದಿಂದ ಅತ್ಯಂತ ಮುಜುಗರಕ್ಕೊಳಗಾಗಿದ್ದನ್ನು ನೋಡಿದೆ. ನೇಹಾ ಧೂಪಿಯಾ ಇದರ ವಿರುದ್ಧ ಧ್ವನಿ ಎತ್ತಿದ್ದರು. ನಮ್ಮ ಕುಟುಂಬದ ಹೆಣ್ಮಗಳು ನಡೆದುಕೊಂಡು ಹೋಗುವಾಗಲೂ ಹಿಂದಿನಿಂದ ಫೋಟೋ ತೆಗೆದು ಇವರು ಯಾರು ಅಂತ ಗುರುತಿಸಿ ಎಂದು ಕ್ಯಾಪ್ಷನ್ ಹಾಕುತ್ತಾರೆ. ಇವರಿಗೆ ಈ ರೀತಿ ಮಾಡಲು ಅಧಿಕಾರ ಕೊಟ್ಟವರು ಯಾರು?’ ಎಂದು ಸಲ್ಮಾನ್ ಖಾನ್ ಗುಡುಗಿದರು.

ಇಂತಹ ಘಟನೆಗಳು ನಡೆದಾಗ ಸುಮ್ಮನಿರದೆ ಪ್ರತಿಭಟಿಸುವಂತೆ ಸಲ್ಮಾನ್ ಖಾನ್ ಅವರು ಮಹಿಳೆಯರಿಗೆ ಧೈರ್ಯ ತುಂಬಿದರು. ‘ಇದು ಅತ್ಯಂತ ಅಸಹ್ಯಕರ ಮನಸ್ಥಿತಿ. ನಿಮಗೂ ಅಥವಾ ಯಾವುದೇ ಹೆಣ್ಣುಮಕ್ಕಳಿಗೆ ಇಂತಹ ಅನುಭವವಾದರೆ, ತಕ್ಷಣವೇ ತಿರುಗಿ ಒಂದೇ ಕಪಾಳಮೋಕ್ಷ ಮಾಡಿ. ‘ನಿಮ್ಮ ತಾಯಿ-ತಂಗಿಯರ ಇಂಥ ಫೋಟೋಗಳನ್ನು ತೆಗೆದು ನಮಗೆ ತೋರಿಸಿ’ ಅಂತ ಅವರ ಬಳಿ ಕೇಳಿ. ಪ್ರತಿಯೊಂದು ಸಮಾರಂಭದಲ್ಲೂ ಇವರು ಇದನ್ನೇ ಮಾಡುತ್ತಿದ್ದಾರೆ. ನನಗೆ ತಿಳಿದಿರುವ ಶೇ. 90ರಷ್ಟು ನಟಿಯರಿಗೆ ಇದು ಸಂಪೂರ್ಣವಾಗಿ ಇಷ್ಟವಿಲ್ಲ. ಇಂತಹ ಫೋಟೋಗಳನ್ನು ತೆಗೆಯುವವರು ಯಾರು ಎಂಬುದು ನನಗೆ ತಿಳಿದರೆ ಖಂಡಿತ ಬಿಡುವುದಿಲ್ಲ’ ಎಂದು ಸಲ್ಮಾನ್ ವಾರ್ನಿಂಗ್ ನೀಡಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್‌ ವೇದಿಕೆಯಲ್ಲಿ ಶರ್ಟ್‌ ಬಿಚ್ಚಿ ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ ಸಲ್ಮಾನ್‌ ಖಾನ್‌

ಸಾರ್ವಜನಿಕವಾಗಿ ತಮ್ಮನ್ನು ಅಸಹ್ಯಕರ ಕೋನಗಳಿಂದ ಫೋಟೋ ತೆಗೆಯದಂತೆ ಜಾನ್ವಿ ಕಪೂರ್, ನೇಹಾ ಧೂಪಿಯಾ, ಆಯೆಷಾ ಖಾನ್ ಅವರು ಕ್ಯಾಮೆರಾಮನ್‌ಗಳಿಗೆ ನೇರವಾಗಿಯೇ ಎಚ್ಚರಿಸಿದ್ದರು. ಸೋನಾಕ್ಷಿ ಸಿನ್ಹಾ, ಕರೀಷ್ಮಾ ಕಪೂರ್, ಪಲಕ್ ತಿವಾರಿ, ಜರೀನ್ ಖಾನ್ ಮತ್ತು ಮಾನುಷಿ ಚಿಲ್ಲರ್ ಕೂಡ ಪಾಪರಾಜಿಗಳ ಇಂಥ ವರ್ತನೆಯನ್ನು ವಿರೋಧಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us