
ರಾಜಮೌಳಿ ನಿರ್ದೇಶಿಸಿ, ಮಹೇಶ್ ಬಾಬು ನಟನೆ ಮಾಡಿರುವ ‘ವಾರಣಾಸಿ’ ಸಿನಿಮಾ ಭಾರತದ ಮಾತ್ರವಲ್ಲ ವಿಶ್ವದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಸಿನಿಮಾನಲ್ಲಿ ಮಹೇಶ್ ಬಾಬು ನಾಯಕ, ವಿಲನ್ ಆಗಿ ಪೃಥ್ವಿರಾಜ್ ಸುಕುಮಾರನ್ ನಟನೆ ಮಾಡಿದ್ದಾರೆ. ಸಿನಿಮಾದ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಭಾರತೀಯ ನಟಿಯಾದರೂ ಈಗ ಹೆಚ್ಚು ಸಕ್ರಿಯರಾಗಿರುವುದು ಹಾಲಿವುಡ್ನಲ್ಲಿ. ಅಂದಹಾಗೆ ಪ್ರಿಯಾಂಕಾ ಚೋಪ್ರಾ ಜೊತೆಗೆ ಮತ್ತೊಬ್ಬ ಹಾಲಿವುಡ್ ನಟಿಯೂ ಸಹ ಈ ಸಿನಿಮಾನಲ್ಲಿ ನಟಿಸಿದ್ದಾರಂತೆ.
ಬ್ರಿಟಿಷ್ ನಟಿ ಡೈಸಿ ಜೆಸ್ಸಿಕಾ ಎಡ್ಗರ್ ಜೋನ್ಸ್ ‘ವಾರಣಾಸಿ’ ಚಿತ್ರದ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎಂಬ ಮಾತು ಟಾಲಿವುಡ್ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಮಹೇಶ್ ಬಾಬು ಮತ್ತು ಡೈಸಿ ನಡುವೆ ಕೆಲವು ಪ್ರಣಯ ದೃಶ್ಯಗಳಿವೆ, ಇವರಿಬ್ಬರ ಕೆಮಿಸ್ಟ್ರಿ ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ.
ವಿಶ್ವಮಟ್ಟದಲ್ಲಿ ಯಶಸ್ವಿಯಾದ ‘ಆರ್‌ಆರ್‌ಆರ್’ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಎದುರಿನ ಬ್ರಿಟೀಷ್ ಯುವತಿ ಪಾತ್ರವಾದ ‘ಜೆನ್ನಿ’ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದವರು ಇದೇ ಡೈಸಿ. ಆದರೆ ವೈಯಕ್ತಿಕ ಕಾರಣಗಳು ಮತ್ತು ಡೇಟ್ಸ್ ಹೊಂದಾಣಿಕೆಯ ತೊಡಕಿನಿಂದ ಅವರು ಆ ಯೋಜನೆಯಿಂದ ಹೊರನಡೆದಿದ್ದರು. ಈಗ ರಾಜಮೌಳಿ ಮತ್ತೆ ಅವರನ್ನೇ ಕರೆತಂದಿದ್ದಾರೆ ಎಂಬ ಸುದ್ದಿ ನಿಜವಾದರೆ, ‘ವಾರಣಾಸಿ’ ಮೂಲಕ ಡೈಸಿ ಭಾರತೀಯ ಸಿನಿಮಾ ಪ್ರವೇಶಿಸಿದಂತಾಗುತ್ತದೆ.
ಈ ಚಿತ್ರ ಅಂಟಾರ್ಕ್ಟಿಕಾದಲ್ಲಿ ಚಿತ್ರೀಕರಣ ನಡೆಸಿದ ಮೊದಲ ಭಾರತೀಯ ಸಿನಿಮಾ ಎನಿಸಿಕೊಳ್ಳಲಿದೆ. ಅತಿ ಕಠಿಣ ಹವಾಮಾನ ಹಾಗೂ ಬಿಗಿಯಾದ ನಿಯಮಗಳ ಕಾರಣ ವಿಶ್ವದಲ್ಲೇ ಬೆರಳೆಣಿಕೆಯ ಚಿತ್ರತಂಡಗಳಷ್ಟೇ ಅಲ್ಲಿ ಚಿತ್ರೀಕರಣ ಮಾಡಲು ಸಾಧ್ಯವಾಗಿದೆ. ಭಾರತೀಯ ಚಿತ್ರರಂಗದ ಪಾಲಿಗೆ ಇದೊಂದು ಐತಿಹಾಸಿಕ ಮೈಲಿಗಲ್ಲು ಎನ್ನಬಹುದು.
ಅತ್ಯುನ್ನತ ತಂತ್ರಜ್ಞಾನ, ಅದ್ದೂರಿ ದೃಶ್ಯವೈಭವಕ್ಕೆ ಹೆಸರಾದ ರಾಜಮೌಳಿ ಈ ಚಿತ್ರವನ್ನು ಸುಮಾರು 1,300 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇದರೊಂದಿಗೆ ಭಾರತದ ಅತ್ಯಂತ ದುಬಾರಿ ಚಿತ್ರಗಳ ಸಾಲಿನಲ್ಲಿ ಇದಕ್ಕೆ ಎರಡನೇ ಸ್ಥಾನ ಸಿಗಲಿದೆ ಎನ್ನಲಾಗುತ್ತಿದೆ. ಮಹೇಶ್ ಬಾಬು ಅವರ ಎದುರು ಬಾಲಿವುಡ್‌ನ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸಿದ್ದರೆ, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:30 pm, Sun, 4 October 26