
ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಚಿತ್ರದ ಯಶಸ್ಸಿನಲ್ಲಿದ್ದಾರೆ. ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಈ ಚಿತ್ರ ವಿಶ್ವದೆಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಮರ್ಶಕರಿಂದಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟಿಯಾಗಿ ಆಲಿಯಾ ಮತ್ತೆ ತಮ್ಮನ್ನು ಸಾಬೀತುಪಡಿಸಿಕೊಂಡಿದ್ದಾರೆ. ಈ ದೊಡ್ಡ ಯಶಸ್ಸಿನ ಬೆನ್ನಲ್ಲೇ ಆಲಿಯಾ ಕುರಿತು ಹೊಸ ವಿಚಾರವೊಂದು ಓಡಾಡುತ್ತಿದೆ. ಆಲಿಯಾ ಹಾಲಿವುಡ್ಗೆ ಪದಾರ್ಪಣೆ ಮಾಡಲಿದ್ದಾರೆ. ಈ ಕುರಿತು ಬಹಳ ಹಿಂದೆಯೇ ಸುದ್ದಿಗಳು ಹರಿದಾಡಿದ್ದವು. ಆದರೆ ಯಾವುದೂ ಖಚಿತವಾಗಿರಲಿಲ್ಲ. ಇದೀಗ ಆಲಿಯಾ ಕಡೆಯಿಂದ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲವಾದರೂ ಅವರು ಹಾಲಿವುಡ್ಗೆ ಪದಾರ್ಪಣೆ ಮಾಡುತ್ತಿರುವುದು ಖಚಿತ ಎಂದಿವೆ ವರದಿಗಳು. ಆಲಿಯಾ ತೆರೆ ಹಂಚಿಕೊಳ್ಳುತ್ತಿರುವುದು ಹಾಲಿವುಡ್ನ ಖ್ಯಾತ ನಟಿ ಗಾಲ್ ಗಡೋಟ್ ಅವರೊಂದಿಗೆ. ಸ್ಪೈ ಥ್ರಿಲ್ಲರ್ ಮಾದರಿಯ ಚಿತ್ರವಾದ ‘ಹಾರ್ಟ್ ಆಫ್ ಸ್ಟೋನ್’ನಲ್ಲಿ ಆಲಿಯಾ ಬಣ್ಣಹಚ್ಚಲಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಿಗೆ ಸಖತ್ ಸಂತಸ ತಂದಿದೆ.
‘ಹಾರ್ಟ್ ಆಫ್ ಸ್ಟೋನ್’ ಬಗ್ಗೆ ನೆಟ್ಫ್ಲಿಕ್ಸ್ ಪೋಸ್ಟ್:
‘ಹಾರ್ಟ್ ಆಫ್ ಸ್ಟೋನ್’ ಚಿತ್ರವನ್ನು ನಿರ್ದೇಶಿಸುತ್ತಿರುವವರು ಟಾಮ್ ಹಾರ್ಪರ್. ಇದು ನೆಟ್ಫ್ಲಿಕ್ಸ್ ಒರಿಜಿನಲ್ ಚಿತ್ರವಾಗಿದೆ. ಟ್ರೇಡ್ ಅನಲಿಸ್ಟ್ ಆಗಿರುವ ತರಣ್ ಆದರ್ಶ್ ಟ್ವಿಟರ್ನಲ್ಲಿ ಈ ಕುರಿತು ಬರೆದುಕೊಂಡಿದ್ದು, ‘ಆಲಿಯಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಯಾರಾಗುತ್ತಿರುವ ಸ್ಪೈ ಥ್ರಿಲ್ಲರ್ ಚಿತ್ರ ಹಾರ್ಟ್ ಆಫ್ ಸ್ಟೋನ್ ಮೂಲಕ ಹಾಲಿವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಈ ಕುರಿತ ಟ್ವೀಟ್ ಇಲ್ಲಿದೆ:
‘ಹಾರ್ಟ್ ಆಫ್ ಸ್ಟೋನ್’ ಚಿತ್ರದಲ್ಲಿ ಜೇಮಿ ಡೋರ್ನಾನ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಕುರಿತು ಇನ್ನೂ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
ಬಾಕ್ಸಾಫೀಸ್ನಲ್ಲಿ ಕಮಾಯಿ ಮಾಡುತ್ತಿರುವ ‘ಗಂಗೂಬಾಯಿ ಕಾಠಿಯಾವಾಡಿ’:
ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ ಬಾಕ್ಸಾಫೀಸ್ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಕಳೆದ ಕೆಲವು ದಿನದ ಹಿಂದೆ ಚಿತ್ರತಂಡ ಕಲೆಕ್ಷನ್ ಕುರಿತ ಮಾಹಿತಿ ಹಂಚಿಕೊಂಡಿತ್ತು. ಅದರಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ’ ವಿಶ್ವದಲ್ಲೆಡೆ ಸುಮಾರು 108.3 ಕೋಟಿ ರೂ ಬಾಚಿಕೊಂಡಿದೆ ಎಂದು ತಿಳಿಸಲಾಗಿತ್ತು. ಇದೀಗ ‘ಗಂಗೂಬಾಯಿ’ ಯಶಸ್ಸಿನ ಹಿಂದೆಯೇ ಆಲಿಯಾ ಹೊಸ ಚಿತ್ರದ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಆಲಿಯಾ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ. ಗೆಳೆಯ ರಣಬೀರ್ ಜತೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ‘ಬ್ರಹ್ಮಾಸ್ತ್ರ’ ಈ ವರ್ಷ ಸೆಪ್ಟೆಂಬರ್ 9ರಂದು ತೆರೆಕಾಣಲಿದೆ. ಅಮಿತಾಭ್ ಬಚ್ಚನ್, ನಾಗಾರ್ಜುನ ಅಕ್ಕಿನೇನಿ, ಮೌನಿ ರಾಯ್ ಮೊದಲಾದ ಖ್ಯಾತನಾಮರು ಈ ಚಿತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ.
ಇದನ್ನೂ ಓದಿ:
Radhika Pandit: ಕುಟುಂಬದೊಂದಿಗೆ ಜನ್ಮದಿನ ಆಚರಿಸಿದ ರಾಧಿಕಾ ಪಂಡಿತ್; ಇಲ್ಲಿವೆ ಮುದ್ದಾದ ಫೋಟೋಗಳು